ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಸುಲ್ತಾನ್ ವಿಚಾರ ಸಂಕಿರಣ: ಟಿಪ್ಪು ಬಗ್ಗೆ ಇನ್ನಷ್ಟು ಸಂಶೋಧನೆ ಅಗತ್ಯ

Last Updated 8 ಅಕ್ಟೋಬರ್ 2011, 10:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: `ಶತಮಾನಗಳೇ ಕಳೆದರೂ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕುರಿತು ಹಲವು ವಿಷಯಗಳು ಇನ್ನೂ ಅಸ್ಪಷ್ಟತೆಯಿಂದ ಕೂಡಿದ್ದು, ಅವುಗಳ ಬಗ್ಗೆ ಸಮಗ್ರ ಅಧ್ಯಯನ ಮತ್ತು ಸಂಶೋಧನೆ ನಡೆಯಬೇಕಿದೆ. ಟಿಪ್ಪು ಸುಲ್ತಾನ್ ಕುರಿತು ಸತ್ಯ ಸಂಗತಿಗಳು ಬೆಳಕಿಗೆ ಬರಬೇಕಿದೆ ಎಂದು ಮಾಜಿ ಸಚಿವ ಪ್ರೊ. ಮುಮ್ತಾಜ್ ಅಲಿ ಖಾನ್ ತಿಳಿಸಿದರು.

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಟಿಪ್ಪು ಸುಲ್ತಾನ್ ಸ್ಮರಣಾರ್ಥ ವಿಶೇಷ ಉಪನ್ಯಾಸ ಮಾಲಿಕೆ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, `ಟಿಪ್ಪು ಸುಲ್ತಾನ್ ತನ್ನ ಆಡಳಿತದ ಅವಧಿಯಲ್ಲಿ ಕೈಗೊಂಡ ಮಹತ್ವದ ಕಾರ್ಯಗಳ ಬಗ್ಗೆ ಸಂಶೋಧನೆ ಮಾಡಬೇಕಿದೆ~ ಎಂದರು.

`ಧೀರ ಯೋಧನಾಗಿದ್ದ ಟಿಪ್ಪು ಸುಲ್ತಾನ್ ಯುದ್ಧಭೂಮಿಯಲ್ಲೇ ವೀರಮರಣವನ್ನಪ್ಪಿದ. ಆದರೆ ಇತ್ತೀಚಿನ ದಿನಗಳಲ್ಲಿ ಟಿಪ್ಪುಗೆ ವಲಿ (ಅಲ್ಲಾಹ್‌ಗೆ ಸಮೀಪ ಇರುವ ಸಂತ) ಎಂದು ಕರೆಯಲಾಗುತ್ತಿದೆ. ವೀರಯೋಧ ಟಿಪ್ಪುಗೆ ಸಂತ ಎಂದು ವ್ಯಾಖ್ಯಾನಿಸುವುದು ಸರಿಯೇ ಎಂಬುದರ ಬಗ್ಗೆ ಚರ್ಚೆ ನಡೆಯಬೇಕಿದೆ. ವೀರಮರಣವನ್ನಪ್ಪಿದ ಯೋಧ ಎಂದು ಪರಿಗಣಿಸಿದ ಮೇಲೆ ಸಂತ ಎಂದು ಸಂಬೋಧಿಸುವುದು ಎಷ್ಟು ಸೂಕ್ತ ಎಂಬುದರ ಬಗ್ಗೆ ಚಿಂತನೆ ಮಾಡಬೇಕಿದೆ~ ಎಂದು ಅವರು ತಿಳಿಸಿದರು.

ಸೌಹಾರ್ದ ಮತ್ತು ಜಾತ್ಯತೀತ ಮನೋಭಾವ ಹೊಂದಿದ್ದ ಟಿಪ್ಪು ಯುದ್ಧದಲ್ಲಿ ಗೆಲುವು ಸಾಧಿಸಿದಾಗಲೆಲ್ಲ ದೇವರ ಕೃಪೆ, ಶೃಂಗೇರಿಸ್ವಾಮೀಜಿ ಕೃಪೆ ಮತ್ತು ಸಿಪಾಯಿಗಳ ಕೃಪೆ ಎಂದು ಹೇಳುತ್ತಿದ್ದ. ಎಲ್ಲರನ್ನೂ ಸಮಾನರನ್ನಾಗಿ ಕಾಣಲು ಬಯಸುತ್ತಿದ್ದ. ಮಸೀದಿಗಳ ಜೊತೆ ದೇಗುಲಗಳನ್ನು ನಿರ್ಮಿಸುತ್ತಿದ್ದ. ಹೀಗಿದ್ದರೂ ಟಿಪ್ಪು ಯುದ್ಧ ಕೈದಿಗಳನ್ನು ಮತ್ತು ಜನರನ್ನು ಮತಾಂತರಗೊಳಿಸುತ್ತಿದ್ದ ಎಂಬ ಆರೋಪವಿದೆ. ಯುದ್ಧಕೈದಿಗಳನ್ನು ಒಮ್ಮೆ ಆತ ಮತಾಂತರಗೊಳಿಸಿದ್ದ ಎಂದು ಇತಿಹಾಸದ ಪುಟಗಳು ಹೇಳುತ್ತವೆ~ ಎಂದು ಅವರು ತಿಳಿಸಿದರು.

`ಟಿಪ್ಪು ತನ್ನ ಆಡಳಿತಾವಧಿಯಲ್ಲಿ ಮದ್ಯಪಾನ ನಿಷೇಧಿಸಿದ್ದ. ಹೆಣ್ಣುಮಕ್ಕಳನ್ನು ಮನೆಗೆಲಸಕ್ಕೆ ನೇಮಿಸಿಕೊಳ್ಳಲು ಅವಕಾಶ ನೀಡಿರಲಿಲ್ಲ. ಅಷ್ಟೇ ಅಲ್ಲ, ಬಹುಪತ್ನಿತ್ವಕ್ಕೂ ಅವಕಾಶ ನೀಡಿರಲಿಲ್ಲ. ಟಿಪ್ಪು ಧರ್ಮದ ಪರಿಪಾಲಕನಾಗಿದ್ದ. ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಿದ್ದ ಟಿಪ್ಪು ಜಾತಿ-ಧರ್ಮದ ವಿಷಯದಲ್ಲಿ ಎಂದಿಗೂ ತಾರತಮ್ಯ ತೋರಲಿಲ್ಲ. ಎಲ್ಲರನ್ನೂ ಸಮಾನಾಗಿ ಕಾಣುವುದರಲ್ಲೇ ಆತ ಸಂತೃಪ್ತಿಪಡುತ್ತಿದ್ದ~ ಎಂದು ಅವರು ಹೇಳಿದರು.

`ಸ್ವದೇಶಿ ಮತ್ತು ವಿದೇಶಿ ಇತಿಹಾಸಕಾರರು, ಬಲಪಂಥೀಯ ಮತ್ತು ಎಡಪಂಥೀಯ ಚಿಂತಕರು ಎಂಬ ವಿಂಗಡಣೆಗಳು ಆಗಿರುವುದರಿಂದ ಚರಿತ್ರೆಯು ಬೇರೆ ಬೇರೆ ಸ್ವರೂಪಗಳಲ್ಲಿ ಕಾಣಸಿಗುತ್ತದೆ.

ಆರು ಮಂದಿ ಇತಿಹಾಸಕಾರರನ್ನು ಏಕಕಾಲಕ್ಕೆ ಸಂದರ್ಶಿಸಿದರೆ, ಒಂದೇ ವಿಷಯದ ಕುರಿತು ಅವರು ಆರು ರೀತಿಯ ಉತ್ತರಗಳನ್ನು ನೀಡುತ್ತಾರೆ. ಸ್ಪಷ್ಟ ಮತ್ತು ಸತ್ಯಾಂಶಗಳಿಂದ ಕೂಡಿದ ವಿಷಯಗಳನ್ನು ಗ್ರಹಿಸುವುದು ಕಷ್ಟ~ ಎಂದು ಪ್ರೊ. ಮುಮ್ತಾಜ್ ಅಲಿ ಖಾನ್ ಹೇಳಿದರು.

ವಿಧಾನ ಪರಿಷತ್ತಿನ ಮಾಜಿ ಉಪಸಭಾಪತಿ ಡೇವಿಡ್ ಸಿಮೆಯೊನ್, `ಟಿಪ್ಪು ಸುಲ್ತಾನ್ ಕುರಿತು ಆಳವಾಗಿ ಅಧ್ಯಯನ ಮಾಡಲು ಯುವಪೀಳಿಗೆ ಮುಂದಾಗಬೇಕು.

 ಅಂದಿನ ಆಳ್ವಿಕೆ, ಸಂಸ್ಕೃತಿ ಮತ್ತು ಪ್ರಸ್ತುತ ಸನ್ನಿವೇಶಗಳ ಬಗ್ಗೆ ಚೆನ್ನಾಗಿ ಅಧ್ಯಯನ ಮಾಡಬೇಕು.
ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಮತ್ತು ದೇಶದ ಚರಿತ್ರೆಯನ್ನು ಸಮಗ್ರವಾಗಿ ತಿಳಿದುಕೊಳ್ಳುವಲ್ಲಿ ಈ ಎಲ್ಲ ಸಂಗತಿಗಳು ತುಂಬ ಮುಖ್ಯ~ ಎಂದರು. ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, `ಟಿಪ್ಪು ಸುಲ್ತಾನ್ ಕುರಿತು ಇನ್ನಷ್ಟು ಸಂಶೋಧನೆ ಮತ್ತು ಅಧ್ಯಯನ ನಡೆಯಬೇಕಿದೆ~ ಎಂದರು.

ಪ್ರಾಧ್ಯಾಪಕರಾದ ಪ್ರೊ. ಎನ್.ವಿ. ನರಸಿಂಹಯ್ಯ, ಡಾ. ಎಂ.ವಿ.ಉಷಾದೇವಿ, ಡಾ. ಎನ್.ಷೇಕ್ ಮಸ್ತಾನ್, ಡಾ. ಚೂಡಾಮಣಿ ನಂದಗೋಪಾಲ, ಡಾ. ಜಮುನಾ, ಕಾಲೇಜು ಪ್ರಾಂಶುಪಾಲ ಪ್ರೊ. ಬಿ.ವಿ.ಕೃಷ್ಣಪ್ಪ, ಉಪಪ್ರಾಂಶುಪಾಲ  ಹಫೀಜುಲ್ಲಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT