ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಬೆಟನ್ನರಿಗೆ ನ್ಯಾಯ ಸನ್ನಿಹಿತ

ಗುರು ದಲೈಲಾಮ ವಿಶ್ವಾಸ
Last Updated 5 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಚೀನಾದಲ್ಲಿ ರಾಜಕೀಯ ವ್ಯವಸ್ಥೆ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಅತಿ ಶೀಘ್ರದಲ್ಲೇ ಟಿಬೆಟನ್ನರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ ಎಂದು ಟಿಬೆಟ್ ಧರ್ಮಗುರು ದಲೈಲಾಮಾ ಅವರು ಅಭಿಪ್ರಾಯಪಟ್ಟರು. 

ಶುಕ್ರವಾರ ನಗರದ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ಟಿಬೆಟ್‌ನಲ್ಲಿ ಜನರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಇನ್ನೂ 6 ತಿಂಗಳು ಅಥವಾ ಒಂದು ವರ್ಷದೊಳಗಾಗಿ ಪರಿಹಾರ ದೊರೆಯುವ ಭರವಸೆ ಇದೆ ಎಂದರು.

ಭಾರತ ಬಹಳ ಪುರಾತನ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ದೇಶ. ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದ ಅಭಿವೃದ್ಧಿಗೆ ಆಧುನಿಕತೆ ಅನಿವಾರ್ಯವಾಗಿದೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ದೇಶದ ಸಂಸ್ಕೃತಿ ಹಾಗೂ ಇತಿಹಾಸವನ್ನು ಮರೆಯಬಾರದು ಎಂದು ಹೇಳಿದರು.

ಟಿಬೆಟ್ ಪ್ರಧಾನಿ ಲೋಬ್‌ಸ್ಯಾಂಗ್ ಸ್ಯಾಂಗಯ್ ಮಾತನಾಡಿ, `ನಮಗೆ ಚೀನಾ ಸರ್ಕಾರ ನೀಡುತ್ತಿರುವ ಕಿರುಕುಳ ನಿಜಕ್ಕೂ ಟಿಬೆಟ್‌ನ ಇತಿಹಾಸದಲ್ಲೇ ಒಂದು ಕರಾಳ ಅಧ್ಯಾಯ. ನಾವು ಇದ್ದ ಪರಿಸ್ಥಿತಿಯಲ್ಲಿ ಭಾರತ ನಮ್ಮ ಕೈ ಬಿಡಲಿಲ್ಲ. ನಾವು ಭಾರತದಲ್ಲಿ ಅತಿಥಿಗಳಾಗಿದ್ದರೂ ನಮಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಸಹಾಯ ಹಾಗೂ ರಕ್ಷಣೆ ನೀಡಿವೆ.

ಭಾರತದಂತೆ ನಾವೂ ಗಾಂಧಿ ಅವರ ಅಹಿಂಸೆಯ ತತ್ವವನ್ನೇ ಪಾಲಿಸುತ್ತಿದ್ದೇವೆ. ಇದರಿಂದಲೇ ನಮಗೆ ಸ್ವಾತಂತ್ರ್ಯ ದೊರೆಯಲಿದೆ' ಎಂದು ಆಶಯ ವ್ಯಕ್ತಪಡಿಸಿದರು.

ಸಂಸದ ರಾಜೀವ್ ಚಂದ್ರಶೇಖರ್ ಮಾತನಾಡಿ, `ಸಂಸತ್‌ನಲ್ಲಿ ದಲೈ ಲಾಮಾ ಅವರು ಭಾಷಣ ಮಾಡಲು ಅನುಮತಿ ನೀಡುವಂತೆ ಕೋರಿ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ಅಜ್ಞಾತವಾಸದಲ್ಲಿರುವ ಟಿಬೆಟನ್ನರ ಸಹಾಯಕ್ಕೆ ಸದಾ ಸಿದ್ಧ' ಎಂದು ಹೇಳಿದರು.

`ಭಾರತವೇ ನನ್ನ ಮೊದಲ ಗುರು'
`ಭಾರತವೇ ನನ್ನ ಮೊದಲ ಗುರು, ನಾವು ಅದರ ಶಿಷ್ಯವೃಂದ. ಇಲ್ಲೇ ಹುಟ್ಟಿ ಬೆಳೆದ ನಾನು ಮಾನಸಿಕ ಹಾಗೂ ದೈಹಿಕವಾಗಿ ಸಂಪೂರ್ಣ ಭಾರತೀಯನಾಗಿದ್ದೇನೆ. ಬಿಹಾರದ ನಳಂದ ವಿಶ್ವವಿದ್ಯಾಲಯದಲ್ಲೇ ನನ್ನ ವಿದ್ಯಾಭ್ಯಾಸ ಮುಗಿದಿದ್ದು, ಭಾರತದ ಮೂಲ ಮಂತ್ರವಾದ ಅಹಿಂಸೆಯನ್ನೇ ಪಾಲಿಸುತ್ತಿದ್ದೇನೆ. ನನ್ನ ಪ್ರತಿಯೊಂದು ಆಲೋಚನೆ ಹಾಗೂ ಮಾಡುವ ಕಾರ್ಯಗಳಲ್ಲಿ ಕೇವಲ ನಳಂದಲ್ಲಿ ಕಲಿತ ವಿಚಾರಗಳೇ ತುಂಬಿವೆ. ಈ ಚಿಂತನೆಗಳೇ ನನ್ನ ಬೆಳವಣಿಗೆಗೆ ಕಾರಣ'.
-ದಲೈಲಾಮಾ,  ಟಿಬೆಟ್ ಧರ್ಮಗುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT