ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ವಿ.ಗಳಿಗಿದು ಕಷ್ಟಕಾಲ!

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಲ್ಲೇಶ್ವರದಲ್ಲಿ ಬಾಂಬ್ ಸ್ಫೋಟಗೊಂಡ ಕ್ಷಣ ಕ್ಷಣದ ಮಾಹಿತಿ, ಚುನಾವಣೆಯ ಕದನ, ಕುತೂಹಲ ಹೆಚ್ಚಿಸುತ್ತಿರುವ `ಕನ್ನಡದ ಕೋಟ್ಯಾಧಿಪತಿ' ಹಾಗೂ `ಬಿಗ್‌ಬಾಸ್' ರಿಯಾಲಿಟಿ ಶೋಗಳು, ಗೇಲ್ ಸಿಡಿಸಿದ ಸಿಕ್ಸರ್ ಬಾಂಬುಗಳು ಹೀಗೆ ರಜೆಯ ಮಜಾದಲ್ಲಿ ನೋಡಬೇಕಾದ ಬಹುತೇಕ ಕಾರ್ಯಕ್ರಮಗಳನ್ನು ಡಿಜಿಟಲೀಕರಣದಿಂದಾಗಿ ಈ ಬಾರಿ ಅನೇಕರು ಮಿಸ್ ಮಾಡಿಕೊಂಡಿದ್ದಾರೆ. ಏಪ್ರಿಲ್ ಒಂದರಿಂದ ಬೆಂಗಳೂರು ಮಹಾನಗರದಲ್ಲಿ ಜಾರಿಗೆ ಬಂದಿರುವ ಡಿಜಿಟಲೀಕೃತ ಕೇಬಲ್ ಜಾಲದಿಂದಾಗಿ ಇನ್ನೂ ಶೇ 40ರಷ್ಟು ಟೀವಿಗಳು ಸೆಟ್ ಟಾಪ್‌ಬಾಕ್ಸ್ ಕಾಣದೆ ಚುಕ್ಕಿಗಳನ್ನು ತುಂಬಿಕೊಂಡಿವೆ.

ಮಾರ್ಚ್ 31ರಂದೇ ಕೊನೆಯಾದ `ಅನಲಾಗ್ ಕೇಬಲ್ ಸೇವೆ'ಯನ್ನು ಮುಂದುವರಿಸಲು ಕೇಬಲ್ ಆಪರೇಟರ್‌ಗಳ ಸಂಘವು ಮಾಡಿಕೊಂಡ ಮನವಿಯನ್ನು ಹೈಕೋರ್ಟ್ ತಳ್ಳಿಹಾಕಿತು. ಇದೀಗ ಸೆಟ್ ಟಾಪ್ ಬಾಕ್ಸ್ ಕಡ್ಡಾಯ. ಆದರೆ ಬೆಂಗಳೂರಿನಲ್ಲಿರುವ ಸುಮಾರು 25 ಲಕ್ಷ ಟಿ.ವಿ.ಗಳಲ್ಲಿ ಇನ್ನೂ 8ರಿಂದ 9ಲಕ್ಷ ಟಿ.ವಿ.ಗಳು ಡಿ.ಟಿ.ಎಚ್. ಕಾಣದೆ ಮಂಕಾಗಿವೆ. ಸೆಟ್‌ಟಾಪ್ ಬಾಕ್ಸ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಇದಕ್ಕೆ ಒಂದು ಕಾರಣ. ಇನ್ನೊಂದು ಕಡೆ ಸೆಟ್‌ಟಾಪ್ ಬಾಕ್ಸ್ ಬೆಲೆ ದುಬಾರಿಯಾದ್ದರಿಂದ ಅದನ್ನು ತೆರಲು ಹಣವಿಲ್ಲದವರೂ ಇದ್ದಾರೆ. ಬಾಡಿಗೆ ಮನೆ ಬದಲಿಸುವವರದ್ದು ಸೆಟ್‌ಟಾಪ್ ಬಾಕ್ಸ್ ಕೊಂಡರೂ ಮನೆ ಬದಲಿಸಿ, ಬೇರೆ ಬಡಾವಣೆಗೆ ಹೋದರೆ ತೆಗೆದುಕೊಂಡು ಹೋಗಲು ಆಗುವುದಿಲ್ಲವಲ್ಲ ಎಂಬ ಸಮಸ್ಯೆ.

ಎಲೆಕ್ಟ್ರಾನಿಕ್ ಉಪಕರಣಗಳು ಮಾರುಕಟ್ಟೆ ಪ್ರವೇಶಿಸಿದ ನಂತರ ಕ್ರಮೇಣ ಅವುಗಳ ಬೆಲೆ ಇಳಿಮುಖವಾಗುವುದು ಸಾಮಾನ್ಯ. ಆದರೆ ಸೆಟ್‌ಟಾಪ್ ಬಾಕ್ಸ್‌ಗಳಿಗೆ ನಾಲ್ಕೈದು ವರ್ಷಗಳ ನಂತರ ಶುಕ್ರದೆಸೆ. ಇವುಗಳ ಬೆಲೆ ಈಗ ಯದ್ವಾತದ್ವಾ ಹೆಚ್ಚಿದೆ. 2007-08ರಲ್ಲಿ ಹ್ಯಾತ್‌ವೇ, ಕೈಜೆನ್, ಡಿಜಿಟಲಿ ಇತ್ಯಾದಿ ಸೆಟ್‌ಟಾಪ್ ಬಾಕ್ಸ್‌ಗಳು ಕೇವಲ ಐನೂರರಿಂದ ಆರುನೂರು ರೂಪಾಯಿಗೆ ಸಿಗುತ್ತಿದ್ದವು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅದೇ ಸೆಟ್‌ಟಾಪ್ ಬಾಕ್ಸ್‌ಗಳ ಬೆಲೆ ರೂ1050ರಿಂದ 1200 ಆಗಿದೆ. ಆದರೂ ಮಾರುಕಟ್ಟೆಯಲ್ಲಿ ಕೇಳಿದ ಸಮಯಕ್ಕೆ ಸಿಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಹಲವರು ರೂ600ರಿಂದ 800ವರೆಗೂ ಹೆಚ್ಚಿನ ಬೆಲೆಗೆ ಮಾರುತ್ತ ಹಗಲು ದರೋಡೆ ನಡೆಸುತ್ತಿರುವ ಉದಹಾರಣೆಗಳೂ ಇವೆ.

ಕೇಬಲ್ ಆಪರೇಟರ್‌ಗಳ ಜತೆಯಲ್ಲೇ ಖಾಸಗಿ ಡಿ.ಟಿ.ಎಚ್. ಸೇವಾ ಕಂಪೆನಿಗಳು ಸಾಕಷ್ಟು ರಿಯಾಯಿತಿಯೊಂದಿಗೆ ತೀವ್ರ ಪೈಪೋಟಿ ನಡೆಸಿವೆ. ಇರುವ ಏಕೈಕ ಸದಾವಕಾಶದಲ್ಲಿ ಹೆಚ್ಚು ಹೆಚ್ಚು ಗ್ರಾಹಕರನ್ನು ಸೆಳೆಯುವ ಉದ್ದೇಶ ಇವರೆಲ್ಲರದ್ದು. ಆದರೆ ಬೇಡಿಕೆ ಇರುವಷ್ಟು ಸೆಟ್‌ಟಾಪ್‌ಬಾಕ್ಸ್‌ಗಳು ಪೂರೈಕೆ ಆಗದಿರುವುದು ಕೇಬಲ್ ಆಪರೇಟರ್‌ಗಳಿಗೆ ಕೊಂಚ ಹಿನ್ನಡೆಯಾಗಿದೆ. ನಗರದ ಹೊರವಲಯದ ಕೆಲವು ಕೇಬಲ್ ಆಪರೇಟರ್‌ಗಳು ಯಾವುದೇ ರೀತಿಯ ತಡೆ ಇಲ್ಲದೆ ಅನಲಾಗ್ ಸೇವೆಯನ್ನು ಮುಂದುವರಿಸಿದ್ದಾರೆ. ಅಲ್ಲಿನ ನಿವಾಸಿಗಳು 50ರಿಂದ 80 ಚಾನೆಲ್‌ಗಳನ್ನು ವೀಕ್ಷಿಸುತ್ತಿದ್ದಾರೆ. ಆದರೆ ನಗರದ ಒಳಭಾಗದಲ್ಲಿ ಕೆಲವು ಬಡಾವಣೆಗಳಲ್ಲಿ ಟೀವಿಗಳು ಸಂಪೂರ್ಣ ಸ್ಥಗಿತಗೊಂಡಿದ್ದರೆ, ಇನ್ನೂ ಕೆಲವು ಬಡಾವಣೆಗಳಲ್ಲಿ 10ರಿಂದ 15 ಚಾನೆಲ್‌ಗಳು ಮಾತ್ರ ನೋಡಲು ಸಿಗುತ್ತಿವೆ. ಇವುಗಳಲ್ಲಿ ಹೆಚ್ಚಿನವು ಸುದ್ದಿಗೆ ಸಂಬಂಧಪಟ್ಟವು ಎನ್ನುವುದು ವಿಶೇಷ.

ಓಟಿಗಾಗಿ ಸೆಟ್‌ಟಾಪ್ ಬಾಕ್ಸು
ಚುನಾವಣೆ ಸಮಯದಲ್ಲೇ ಸೆಟ್‌ಟಾಪ್ ಬಾಕ್ಸ್ ಕಡ್ಡಾಯ ನೀತಿ ಜಾರಿಗೆ ಬಂದಿರುವುದರಿಂದ ಈ ಬಾರಿ ಹಣ, ಹೆಂಡ, ಸೀರೆ, ಅಕ್ಕಿ, ಬಣ್ಣದ ಟೀವಿಗಿಂತ ಹೆಚ್ಚಾಗಿ ಕೆಲವು ಬಡಾವಣೆಗಳಲ್ಲಿ ಸೆಟ್‌ಟಾಪ್ ಬಾಕ್ಸ್‌ಳು ಕೂಡಾ ಪುಕ್ಕಟೆಯಾಗಿ ವಿತರಣೆಯಾಗುತ್ತಿವೆ. `ಟಿ.ವಿ. ಕೆಟ್ಟುಹೋದರೆ ರಿಪೇರಿ ಮಾಡಿಸಲು ದುಡ್ಡಿಲ್ಲದೆ ಇರುವವರು ಸಾವಿರಾರು ರೂಪಾಯಿಗಳ ಸೆಟ್‌ಟಾಪ್‌ಬಾಕ್ಸ್ ಹಾಕಿಸ್ತಾರಾ?' ಎಂದು ಕೇಬಲ್ ಆಪರೇಟರ್ ರಾಮಕೃಷ್ಣ ಕೇಳಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ರಾಜಕೀಯ ಧುರೀಣರು ಸೆಟ್‌ಟಾಪ್ ಬಾಕ್ಸ್‌ಗಳ ಮೇಲೆ ಲಕ್ಷಗಟ್ಟಲೆ ಹಣ ವಿನಿಯೋಗಿಸುತ್ತಿದ್ದಾರೆ. ಆದರೆ ಇವರು ಯಾರು ಎಂಬುದನ್ನು ಪತ್ತೆ ಮಾಡುವುದು ಕಷ್ಟದ ಕೆಲಸವಾಗಿದೆ ಎಂದು ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೆಚ್ಚು ಟಿ.ವಿ. ಇರುವವರ ಗೋಳು
ಮನೆಯ ಪ್ರಾಂಗಣ, ಶಯನ ಕೋಣೆ ಇತ್ಯಾದಿ ಕಡೆಗಳಲ್ಲೆಲ್ಲಾ ಎಲ್‌ಇಡಿ/ ಎಲ್‌ಸಿಡಿಗಳು ನೇತಾಡುತ್ತಿರುವ ಕಾಲ ಇದು. ಡಿಜಿಟಲೀಕರಣ ಜಾರಿಗೆ ಬಂದ ನಂತರ ಒಂದು ಟಿ.ವಿ.ಗೆ ಒಂದೇ ಸೆಟ್‌ಟಾಪ್ ಬಾಕ್ಸ್ ಕಡ್ಡಾಯ ಎಂದಾಗಿದೆ. ಹೆಚ್ಚು ಟಿ.ವಿ. ಇರುವವರು ಚಾನೆಲ್‌ಗಳ ವೀಕ್ಷಣೆಗೆ ಸಾವಿರಾರು ರೂಪಾಯಿ ವ್ಯಯಿಸಬೇಕಿದೆ. ಪೇಯಿಂಗ್ ಗೆಸ್ಟ್, ಹೋಟೆಲ್, ಕ್ಲಬ್ ಮೊದಲಾದವುಗಳಿಗೂ ಇದರ ಬಿಸಿ ತಟ್ಟಿದೆ.

ಮನೆ ಬದಲಾವಣೆ ಇನ್ನು ದುಬಾರಿ
ಕೇಬಲ್ ಜಾಲದವರಿಂದ ಸೆಟ್‌ಟಾಪ್ ಬಾಕ್ಸ್ ಖರೀದಿಸಿದಲ್ಲಿ ಮತ್ತೊಂದು ರೀತಿಯ ಸಮಸ್ಯೆಯನ್ನೂ ಈಗ ಹಲವರು ಎದುರಿಸುತ್ತಿದ್ದಾರೆ. ಬಡಾವಣೆಗಳು ಬದಲಾದಲ್ಲಿ ಸೆಟ್‌ಟಾಪ್ ಬಾಕ್ಸ್ ಕೂಡ ಬದಲಿಸಬೇಕು. ಸಂಜಯ್‌ನಗರದಲ್ಲಿರುವ ಪ್ರಶಾಂತ್ `ಆ್ಯಕ್ಟ್ ಟಿ.ವಿ.'ಯ ಸಂಪರ್ಕ ಪಡೆದಿದ್ದಾರೆ. ಆದರೆ ಅವರು ಮುಂದಿನ ಕೆಲವು ದಿನಗಳಲ್ಲಿ ತುಮಕೂರು ರಸ್ತೆಯಲ್ಲಿ ನಿರ್ಮಿಸುತ್ತಿರುವ ಸ್ವಂತ ಮನೆಗೆ ಹೋಗಬೇಕೆಂದುಕೊಂಡರೆ ಅಲ್ಲಿ `ಆ್ಯಕ್ಟ್ ಸೇವೆ' ಲಭ್ಯವಿಲ್ಲವಾದ್ದರಿಂದ ಈಗ ಕೊಳ್ಳುವ ಸೆಟ್‌ಟಾಪ್ ಬಾಕ್ಸ್ ಉಪಯೋಗಕ್ಕೆ ಬರುವುದಿಲ್ಲ.

`ಕೆಲವೇ ದಿನಗಳಲ್ಲಿ ಮನೆ ಬದಲಿಸಬೇಕಿದೆ. ಆದರೆ ಇವರ ಸೇವೆ ಅಲ್ಲಿಲ್ಲದಿರುವುದರಿಂದ ಆ ಬಡಾವಣೆಯಲ್ಲಿರುವ ಕೇಬಲ್ ಆಪರೇಟರ್‌ಗಳಿಂದ ಅವರದ್ದೇ ಆದ ಸೆಟ್‌ಟಾಪ್ ಬಾಕ್ಸ್ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಸೆಟ್‌ಟಾಪ್ ಬಾಕ್ಸ್ ಮಾಡಿರುವ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತೆ ಅಲ್ಲವೇ?' ಎಂದು ಅವರು ಬೇಸರ ವ್ಯಕ್ತಪಡಿಸಿದರು. 

`ಇದು ವೃಥಾ ಹೇರಿಕೆ'
`2ಜಿ ಹಗರಣ ದಿನನಿತ್ಯ ಟಿವಿಗಳಲ್ಲಿ ಪ್ರಸಾರವಾಗಿ ತಪ್ಪಿತಸ್ಥರಿಗೆ ಜೈಲಾಯಿತು. ಸೆಟ್‌ಟಾಪ್ ಬಾಕ್ಸ್ ಸಾಧನ ಅಳವಡಿಕೆಯ ಪ್ರಹಸನವೇ ದೊಡ್ಡ ಹಗರಣ. ಆದರೆ ಈ ಕಾಯ್ದೆಯ ಮೂಲಕವೇ ಲಾಭ ಕಂಡುಕೊಳ್ಳಲು ಹವಣಿಸುತ್ತಿರುವ ಸುದ್ದಿ ಚಾನೆಲ್‌ಗಳು ನಮ್ಮ ಮೊರೆಯನ್ನು ಕೇಳುತ್ತಲೇ ಇಲ್ಲ' ಎಂಬುದು ಕೇಬಲ್ ಆಪರೇಟರ್ ಸಂಘದ ಅಧ್ಯಕ್ಷ ವಿ.ಎಸ್.ಪ್ಯಾಟ್ರಿಕ್ ರಾಜು ಮಾಡುವ ಆರೋಪ.

`ಟಿ.ವಿ. ಚಾನೆಲ್‌ಗಳು, ಮಲ್ಟಿ ಸರ್ವೀಸ್ ಆಪರೇಟರ್‌ಗಳ ಲಾಬಿಯಲ್ಲಿ ಮುಳುಗಿರುವ ಸರ್ಕಾರ ಗ್ರಾಹಕರಿಗೆ ಯಾವುದೇ ರೀತಿಯ ಮಾಹಿತಿಯನ್ನೂ ನೀಡದೆ, ಸಾಧಕ ಬಾಧಕಗಳನ್ನು ಪರಿಗಣಿಸದೆ ಏಕಾಏಕಿ ಸೆಟ್‌ಟಾಪ್ ಬಾಕ್ಸ್ ಕಡ್ಡಾಯವಾಗಿ ಅಳವಡಿಸಿಲು ಆದೇಶಿಸಿತು. `ಟ್ರಾಯ್' ಬದಲಿಸಿರುವ ಷರತ್ತಿನ ಅನ್ವಯ ಸೆಟ್‌ಟಾಪ್ ಬಾಕ್ಸ್‌ಗಳನ್ನು ಸ್ವಂತಕ್ಕೆ, ಭೋಗ್ಯಕ್ಕೆ ಅಥವಾ ಬಾಡಿಗೆಗೆ ನೀಡಬಹುದೆಂಬ ಷರತ್ತು ಇದೆ. ಆದರೆ ಇದು ಯಾವುದನ್ನೂ ಹೊರಜಗತ್ತಿಗೆ ತಿಳಿಸದ `ಮಲ್ಟಿ ಸರ್ವೀಸ್ ಆಪರೇಟರ್'ಗಳು (ಎಂಎಸ್‌ಒ) ಏಕಾಏಕಿ ಬಡವರ ಮೇಲೂ ಸೆಟ್‌ಟಾಪ್ ಬಾಕ್ಸ್ ಹೊರೆಯನ್ನು ಹೊರಿಸುತ್ತಿವೆ' ಎನ್ನುವ ಅವರ ಪ್ರಕಾರ ಈಗ ನಗರದಲ್ಲಿ ಶೇ 70ರಷ್ಟು ಟಿ.ವಿ.ಗಳಿಗೆ ಸೆಟ್‌ಟಾಪ್‌ಬಾಕ್ಸ್ ಅಳವಡಿಸಲಾಗಿದೆ. ಇನ್ನೂ ಉಳಿದವುಗಳಿಗೆ ನೀಡಲು ಪೂರೈಕೆಯಲ್ಲಿ ಕೊರತೆ ಇದೆ. ಜತೆಗೆ ಈಗಿರುವ ಒಂಬತ್ತು ಸೆಟ್‌ಟಾಪ್‌ಬಾಕ್ಸ್‌ಗಳು ಸರ್ಕಾರದ ನೀತಿಯ ಅನ್ವಯ ಎನ್‌ಕ್ರಿಪ್ಟ್ ಆಗಿರುವುದರಿಂದ ಹಾಗೂ ಪಾಸ್‌ವರ್ಡ್ ನೀಡಿರುವುದರಿಂದ ಇದು ಬಡಾವಣೆಯಿಂದ ಬಡಾವಣೆಗೆ ಬದಲಿಸುವುದು ದೊಡ್ಡ ಸಮಸ್ಯೆ. ಸೆಟ್‌ಟಾಪ್ ಬಾಕ್ಸ್‌ಗಳನ್ನು ಸ್ವಂತ, ಭೋಗ್ಯ ಹಾಗೂ ಬಾಡಿಗೆಗೆ ನೀಡುವುದು ಜಾರಿಗೆ ಬಂದರೆ ಈ ಸಮಸ್ಯೆ ನೀಗಬಹುದು. ದೂರನ್ನು ಸುಪ್ರೀಂಕೋರ್ಟ್‌ಗೆ ತೆಗೆದುಕೊಂಡು ಹೋಗುವ ಉದ್ದೇಶವೂ ಅವರಿಗೆ ಇದೆ.

`ಸಂಪೂರ್ಣ ಡಿಜಿಟಲೀಕರಣಕ್ಕೆ ಒತ್ತಾಯಿಸುತ್ತಿರುವುದರ ಹಿಂದೆ ಚಾನಲ್‌ಗಳ ಹಿತ ಕಾಪಾಡುವ ಉದ್ದೇಶವಿದೆ. ಇದು ಜಾರಿಗೆ ಬಂದಲ್ಲಿ ತಿಂಗಳಿಗೆ 150-200 ಚಾನೆಲ್‌ಗಳಿಗೆ 200 ರೂಪಾಯಿ ನೀಡುತ್ತಿದ್ದ ಗ್ರಾಹಕರು 450-500 ರೂಪಾಯಿ ನೀಡಬೇಕಾಗುವ ಅನಿವಾರ್ಯತೆ ಇದೆ. ಉದಾಹರಣೆಗೆ ಬೇಸಿಕ್ ಪ್ಯಾಕೇಜ್ ಎಂದು 100 ರೂಪಾಯಿ ನೀಡಬೇಕು. ಉಳಿದಂತೆ ಸನ್ ನೆಟ್‌ವರ್ಕ್, ಸೋನಿ, ಸ್ಟಾರ್, ಜೀ ಸೇರಿದಂತೆ ವಿದೇಶಗಳ ಚಾನೆಲ್‌ಗಳು ಬೇಕೆಂದರೆ ಅವರವರ ಒಂದೊಂದು ಪ್ಯಾಕೇಜ್‌ಗಳನ್ನು 80ರಿಂದ 85 ರೂಪಾಯಿಗಳನ್ನು ನೀಡಿ ಪಡೆಯಬೇಕು. ಕೆಲವು ಚಾನೆಲ್‌ಗಳ ಪ್ಯಾಕೇಜ್‌ಗಳಿಗೆ ನೂರಕ್ಕೂ ಹೆಚ್ಚು ರೂಪಾಯಿ ತೆರಬೇಕು. ಇವೆಲ್ಲವನ್ನು ಸರ್ಕಾರ ಜನಸಾಮಾನ್ಯರಿಗೆ ತಿಳಿಸದಿರುವುದು ದೊಡ್ಡ ತಪ್ಪು' ಎಂದು ಪ್ಯಾಟ್ರಿಕ್ ಖಾರವಾಗಿ ನುಡಿದರು.

ಸಂಪೂರ್ಣ ಡಿಜಿಟಲೀಕರಣದ ಯೋಜನೆಯಿಂದ ಆಗುತ್ತಿರುವ ಪರಿಣಾಮಗಳು ಭಿನ್ನವಾಗಿವೆ. ಕೇಬಲ್ ಮೂಲಕ ಸಂಪರ್ಕ ಪಡೆದು ಚಾನೆಲ್‌ಗಳನ್ನು ನೋಡುತ್ತಿರುವ ನಿಮಗೂ ಭಿನ್ನ ಅನುಭವ ಆಗಿರಬಹುದು. ಸೆಟ್‌ಟಾಪ್ ಬಾಕ್ಸ್ ದರದ ಬಿಸಿ ತಟ್ಟಿರಬಹುದು. ಅದಕ್ಕೆ ಪರಿಹಾರೋಪಾಯವೂ ಹೊಳೆದಿರಬಹುದು. ಅವನ್ನು ಸಂಕ್ಷಿಪ್ತವಾಗಿ ಬರೆದು `ಮೆಟ್ರೊ'ಗೆ ಕಳುಹಿಸಿ. ಆಯ್ದ ಪ್ರತಿಕ್ರಿಯೆಗಳನ್ನು ಪ್ರಕಟಿಸುತ್ತೇವೆ. ನುಡಿ ಅಥವಾ ಬರಹ ತಂತ್ರಾಂಶದ ಮೂಲಕ metropv@prajavani.co.in  ಇ-ಮೇಲ್‌ಗೆ ಪ್ರತಿಕ್ರಿಯೆಗಳನ್ನು ಕಳುಹಿಸಬಹುದು. ಅಂಚೆ ವಿಳಾಸ: `ಸೆಟ್‌ಟಾಪ್ ಬಾಕ್ಸ್ ಪ್ರಹಸನ' ವಿಭಾಗ, `ಮೆಟ್ರೊ', ಪ್ರಜಾವಾಣಿ,  ಎಂ.ಜಿ.ರಸ್ತೆ, ಬೆಂಗಳೂರು- 560  001.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT