ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀ ಅಂಗಡಿಗೆ ಬೆಂಕಿ: ವಸ್ತುಗಳು ಭಸ್ಮ

Last Updated 17 ಫೆಬ್ರುವರಿ 2012, 19:45 IST
ಅಕ್ಷರ ಗಾತ್ರ

ಬೆಂಗಳೂರು: ಶಾರ್ಟ್ ಸರ್ಕಿಟ್‌ನಿಂದ ಟೀ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ವಸ್ತುಗಳು ಸುಟ್ಟು ಹೋಗಿರುವ ಘಟನೆ ವಿಲ್ಸನ್‌ಗಾರ್ಡನ್‌ನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.  ಶ್ರೀಧರ್ ಎಂಬುವರು ಹತ್ತನೇ ತಿರುವಿನಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದಾರೆ. ಬೆಳಗಿನ ಜಾವ ಅಂಗಡಿಗೆ ಬೆಂಕಿ ಹೊತ್ತಿಕೊಂಡಿತ್ತು.

ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ನಷ್ಟದ ಪ್ರಮಾಣ ಎಷ್ಟೆಂದು ಶ್ರೀಧರ್ ತಿಳಿಸಿಲ್ಲ ಎಂದು ವಿಲ್ಸನ್‌ಗಾರ್ಡನ್ ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಕೀಲನ ಸುಳಿವು ನೀಡಿ:
ಮೈಸೂರು ನಿವಾಸಿ ಇಂದಿರಾ ಆಮ್ಲ ಎಂಬುವರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದ ಆರೋಪಿ ವಕೀಲ ಬಿ.ಎಲ್. ಶಿವರಾಂ ಎಂಬಾತನ ಬಗ್ಗೆ ಸುಳಿವು ನೀಡಿ ಎಂದು ಸಿಐಡಿ ಪೊಲೀಸರು ಮನವಿ ಮಾಡಿದ್ದಾರೆ.

ವೈದ್ಯರಾಗಿದ್ದ ಇಂದಿರಾ ಅವರನ್ನು ಸರ್ಕಾರ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆದರೆ ಆ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿತ್ತು.

ತಮ್ಮ ಪರವಾಗಿ ವಾದ ಮಂಡಿಸಲು ಹಣ ಪಡೆದಿದ್ದ ವಕೀಲ ಬಾಬು ಎಂಬುವರ ವಿರುದ್ಧ ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡಲು ಅವರು ನಿರ್ಧರಿಸಿದ್ದರು.

ದಾವೆ ಹೂಡಿರುವುದಾಗಿ ಶಿವರಾಂ ಹಣ ಪಡೆದಿದ್ದರು. ನ್ಯಾಯಾಲಯ 49 ಲಕ್ಷ ರೂ. ಪರಿಹಾರ ಘೋಷಿಸಿದೆ. ಅದನ್ನು ಪಡೆಯಲು 14 ಲಕ್ಷ ರೂ. ಕೊಡಬೇಕು ಎಂದು ಸುಳ್ಳು ಹೇಳಿದ್ದ ಆರೋಪಿ ಹಣ ಪಡೆದು ತಲೆಮರೆಸಿಕೊಂಡಿದ್ದಾನೆ. ಈತನ ಬಗ್ಗೆ ಮಾಹಿತಿ ಇದ್ದರೆ ಸಿಐಡಿ ಆರ್ಥಿಕ ಅಪರಾಧ ವಿಭಾಗದ ದೂರವಾಣಿ ಸಂಖ್ಯೆ 080 2209 4424 ಅಥವಾ ಇನ್‌ಸ್ಪೆಕ್ಟರ್ ರಾಮು ಅವರ ಮೊಬೈಲ್ ಫೋನ್ ಸಂಖ್ಯೆ 94482 23330ಕ್ಕೆ ಕರೆ ಮಾಡಿ ಎಂದು ಸಿಐಡಿ ಪೊಲೀಸರು ಕೋರಿದ್ದಾರೆ.

ಕೊರಿಯರ್ ನೀಡುವ ನೆಪದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯೊಡತಿಯನ್ನು ಬೆದರಿಸಿ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಬನಶಂಕರಿಯಲ್ಲಿ ಶುಕ್ರವಾರ ಹಾಡಹಗಲೇ ನಡೆದಿದೆ.

ಬನಶಂಕರಿ ಎರಡನೇ ಹಂತದ 28ನೇ ಮುಖ್ಯ ರಸ್ತೆ ನಿವಾಸಿ ತೃಪ್ತಿ ಘೋರ್ಪಡೆ ದರೋಡೆಗೊಳಗಾದವರು. ತೃಪ್ತಿ ಅವರ ಪತಿ ಅಭಿಷೇಕ್ ಘೋರ್ಪಡೆ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಹನ್ನೆರಡು  ಗಂಟೆ ಸುಮಾರಿಗೆ ಬಂದ ಇಬ್ಬರು ದುಷ್ಕರ್ಮಿಗಳು `ಪೋಸ್ಟ್~ ಎಂದು ಕೂಗಿದ್ದಾರೆ. ಕೊರಿಯರ್ ಸಿಬ್ಬಂದಿ ಇರಬೇಕು ಎಂದುಕೊಂಡ ತೃಪ್ತಿ ಅವರು ಬಾಗಿಲು ತೆರೆದಾಗ ಏಕಾಏಕಿ ಒಳಗೆ ನುಗ್ಗಿದ ದುಷ್ಕರ್ಮಿಗಳು ದುಪಟ್ಟದಿಂದ ಅವರ ಮುಖವನ್ನು ಸುತ್ತಿದ್ದಾರೆ. ಇದರಿಂದ ಆತಂಕಗೊಂಡ ತೃಪ್ತಿ ಧರಿಸಿದ್ದ ಎರಡು ಬಳೆ, ಸರ, ಮಾಂಗಲ್ಯ ಸರ, ಓಲೆ ಬಿಚ್ಚಿಕೊಟ್ಟಿದ್ದಾರೆ. ಎಲ್ಲ ಆಭರಣಗಳನ್ನು ಪಡೆದ ಅವರು ಪರಾರಿಯಾಗಿದ್ದಾರೆ. ದರೋಡೆಯಾದ ಆಭರಣದ ಮೌಲ್ಯ ಎರಡು ಲಕ್ಷ ರೂಪಾಯಿ ಎಂದು ಬನಶಂಕರಿ ಠಾಣೆ ಪೊಲೀಸರು ತಿಳಿಸಿದ್ದಾರೆ.ಕೇವಲ ಐದು ನಿಮಿಷದಲ್ಲಿ ಅವರು ಈ ಕೃತ್ಯ ಎಸಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್, ಎಸ್‌ಐ ಧರ್ಮೇಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರತ್ಯೇಕ ಅಪಘಾತ: 2 ಸಾವು
ನಗರದ ಮಡಿವಾಳದಲ್ಲಿ ನಡೆದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಐಬಿಎಂ ಉದ್ಯೋಗಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ರೂಪೇನಗ್ರಹಾರದ ಬಸ್ ನಿಲ್ದಾಣದ ಸಮೀಪ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ಐಬಿಎಂ ಕಂಪೆನಿಯಲ್ಲಿ ಹಿರಿಯ ಸಹಾಯಕರಾಗಿದ್ದ ಕೃಷ್ಣವೇಣಿ (32) ಮೃತಪಟ್ಟವರು. ತಮಿಳುನಾಡಿನ ಮೂಲದ ಅವರು ಎಂಜಿಆರ್ ಲೇಔಟ್‌ನಲ್ಲಿ  ವಾಸವಿದ್ದರು. ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಅವರು ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಕೃಷ್ಣವೇಣಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯವ ಮಾರ್ಗ ಮಧ್ಯೆ ಸಾವನ್ನಪ್ಪಿದರು. ಕಾರು ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದು ಪ್ರಕರಣ: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಮಡಿವಾಳದ ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಹೊಂಗಸಂದ್ರ ನಿವಾಸಿಯಾಗಿದ್ದ ಶಶಿಕುಮಾರ್   (24) ಮೃತಪಟ್ಟವರು. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಶಿಕುಮಾರ್, ಬೆಳಿಗ್ಗೆ ದಿನ ಪತ್ರಿಕೆ ಹಂಚುವ ಕೆಲಸವನ್ನೂ ಮಾಡುತ್ತಿದ್ದರು. ಗೆಳೆಯ ಅಶ್ವತ್ಥ್ ಅವರ ದ್ವಿಚಕ್ರ ವಾಹನದಲ್ಲಿ ಶಶಿಕುಮಾರ್ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಪತ್ರಿಕೆ ವಿತರಿಸಲು ಹೋಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಪೆಟ್ಟಾದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಶ್ವತ್ಥ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಲಾರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಡಿವಾಳ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ. ಎರಡೂ ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT