ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಕೆಯ ಕುಲುಮೆಯಲ್ಲಿ

ಥಳುಕು ಬಳುಕು
Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಐದು ವರ್ಷದ ಹಿಂದೆ ಸಿನಿಮಾ ನಿಯತಕಾಲಿಕೆ ಒಂದರ ಅಂಕಣ ಬರಹದ ಕೆಲವು ಸಾಲುಗಳನ್ನು ದೀಪಿಕಾ ಪಡುಕೋಣೆ ಅವರಮ್ಮ ಕಿತ್ತಳೆ ಬಣ್ಣದ ಸ್ಕೆಚ್‌ಪೆನ್‌ನಿಂದ ವೃತ್ತಾಕಾರದಲ್ಲಿ ಮಾರ್ಕ್ ಮಾಡಿದ್ದರು.

ಆಗ ಮುಂಬೈನಲ್ಲಿ ಒಂದು ಕಾಲು, ಬೆಂಗಳೂರಿನಲ್ಲಿ ಇನ್ನೊಂದು ಕಾಲು ಇಟ್ಟಿದ್ದ ದೀಪಿಕಾ ಕೆಲವು ದಿನಗಳ ನಂತರ ಅಮ್ಮನನ್ನು ಭೇಟಿಯಾದದ್ದು. ಬೆಂಗಳೂರಿನ ತಂಪು ಹವೆಯನ್ನು ಮೆಚ್ಚಿಕೊಳ್ಳುತ್ತಾ ಅಮ್ಮನನ್ನು ಅಪ್ಪಿ, ತಮ್ಮಿಷ್ಟದ ಅಡುಗೆ ಮಾಡುವಂತೆ ಸೂಚಿಸಿ, ಸೋಫಾ ಮೇಲೆ ಆರಾಮಾಗಿ ಕುಳಿತರು. ಅಮ್ಮ ಒಂದೂ ಮಾತನಾಡಲಿಲ್ಲ. ಆ ನಿಯತಕಾಲಿಕೆಯ ಮಾರ್ಕ್ ಮಾಡಿದ ಪುಟವನ್ನು ಮಡಿಚಿ ಮಗಳ ಕೈಗಿಟ್ಟರು.

ಅದನ್ನು ಓದುವಾಗ ದೀಪಿಕಾ ಕಣ್ಣು ಅಗಲವಾಗಿತ್ತು. ಓದಿದ ಮೇಲೆ ಸಣ್ಣಗಾಯಿತು. ನೀರೂ ತುಂಬಿಕೊಂಡಿತು. ಆ ಪುಟವನ್ನು ಹರಿದು ತಮ್ಮ ಕೋಣೆಯ ಕನ್ನಡಿಗೆ ಅಂಟಿಸಿದರು. ಕನ್ನಡಿ ಎದುರು ನಿಂತು ಅದರಲ್ಲಿ ಬರೆದಿದ್ದ ಸಾಲುಗಳನ್ನು ಒಮ್ಮೆ ಓದಿ, ಮತ್ತೆ ತಮ್ಮ ಪ್ರತಿಬಿಂಬವನ್ನು ತಾವೇ ನೋಡಿಕೊಂಡು ಬರೆದಿದ್ದ ಸಾಲುಗಳು ನಿಜವೇ ಎಂದು ಯೋಚಿಸತೊಡಗಿದರು. ‘ದೀಪಿಕಾ ಸುಂದರಿಯಲ್ಲ, ನಟಿಸಲೂ ಬರುವುದಿಲ್ಲ’ ಎಂಬರ್ಥದ ವಾಕ್ಯಗಳು ಆ ಬರಹದಲ್ಲಿದ್ದವು. ಅವರ ಅಮ್ಮ ಅವನ್ನೇ ಮಾರ್ಕ್ ಮಾಡಿದ್ದು.

ಸುಮಾರು ಎರಡು ತಾಸು ಕನ್ನಡಿಯ ಜೊತೆ ಸಂವಾದ ನಡೆಸುವಂತೆ ನಿಂತಿದ್ದ ದೀಪಿಕಾ ಆಮೇಲೆ ಕಣ್ಣೊರೆಸಿಕೊಂಡು ಬಂದು ಅಮ್ಮನನ್ನು ಮತ್ತೆ ಅಪ್ಪಿಕೊಂಡರು. ಕಣ್ಣಲ್ಲಿ ಕಣ್ಣಿಟ್ಟು, ‘ನಾನು ಸುಂದರಿ ಅಲ್ಲವಾ’ ಎಂದು ಕೇಳಿದರು. ಅಮ್ಮ ಹೌದು ಎಂದು ತಲೆಯಾಡಿಸುತ್ತಾ ಹಣೆಗೆ ಮುತ್ತು ಕೊಟ್ಟರು.

ಈಗಲೂ ದೀಪಿಕಾ ಆ ಅಂಕಣ ಬರಹದ ಮಾರ್ಕ್ ಮಾಡಿದ ಸಾಲುಗಳನ್ನು ಜೋಪಾನವಾಗಿ ಇಟ್ಟುಕೊಂಡಿದ್ದಾರೆ. ಬಿ-ಟೌನ್ ಈಗೀಗ ಅವರನ್ನು ಭವಿಷ್ಯದ ನಂಬರ್ ಒನ್ ನಾಯಕಿ ಎಂದು ಬಣ್ಣಿಸುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ನಗರದ ಈ ನಟಿ ಮುಟ್ಟಿದ್ದೆಲ್ಲಾ ಚಿನ್ನ. ‘ಕಾಕ್‌ಟೇಲ್’, `ರೇಸ್ 2’, ‘ಯೇ ಜವಾನಿ ಹೈ ದೀವಾನಿ’, ‘ಚೆನ್ನೈ ಎಕ್ಸ್‌ಪ್ರೆಸ್’ ಒಂದಾದ ಮೇಲೆ ಒಂದು ಹಿಟ್. ಅದರಲ್ಲೂ ‘ಯೇ ಜವಾನಿ ಹೈ ದೀವಾನಿ’, ‘ಚೆನ್ನೈ ಎಕ್ಸ್‌ಪ್ರೆಸ್’ ಚಿತ್ರಗಳು ಸಾಕಷ್ಟು ಹಣ ಮಾಡಿದವು. ಒಂದು ಮೂಲದ ಪ್ರಕಾರ ಈ ಎರಡೂ ಚಿತ್ರಗಳು ಕನಿಷ್ಠ 400 ಕೋಟಿ ರೂಪಾಯಿ ಆದಾಯ ತಂದಿವೆ.

‘ಓಂ ಶಾಂತಿ ಓಂ’ ಸಿನಿಮಾ ಬಿಡುಗಡೆಯಾಗಿ ಚೆನ್ನಾಗಿ ಓಡಿದ ಮೇಲೆ ಪ್ರಕಟವಾಗಿದ್ದ ಆ ಅಂಕಣವನ್ನು ದೀಪಿಕಾ ಮರೆತಿಲ್ಲ. ಮರೆಯಲು ಸಾಧ್ಯವೇ ಇಲ್ಲ ಎಂದು ಅವರು ಪದೇಪದೇ ಹೇಳಿಕೊಂಡಿದ್ದಾರೆ. ಫರ್‍ಹಾ ಖಾನ್ ಹಾಗೂ ಶಾರುಖ್ ಖಾನ್ ಸ್ಕ್ರೀನ್ ಟೆಸ್ಟ್ ಕೂಡ ಮಾಡದೆ ‘ಓಂ ಶಾಂತಿ ಓಂ’ ಚಿತ್ರದ ನಾಯಕಿಯಾಗಿ ಅವರನ್ನು ಆರಿಸಿದ್ದರು. ಅದಾದ ಮೇಲೆ ಬಂದ ಟೀಕೆಗಳು ಹಲವು. ಅಪ್ಪ-ಅಮ್ಮನ ಮನಸ್ಸು ಸೂಕ್ಷ್ಮ. ಪ್ರಕಾಶ್ ಪಡುಕೋಣೆ ಆಗ ತಾವು ಬ್ಯಾಡ್ಮಿಂಟನ್ ಆಡುವಾಗ ಕಷ್ಟಗಳನ್ನು ಮೆಟ್ಟಿದ ಅನುಭವವನ್ನು ಮತ್ತೆ ಮಗಳಿಗೆ ಹೇಳಿ ಧೈರ್ಯ ತುಂಬಿದರು. ಹೇಳಿ ಕೇಳಿ ದೀಪಿಕಾ ಕೂಡ ಕ್ರೀಡಾಪಟು. ಹಾಗಾಗಿ ‘ನಿಂದಕರಿರಬೇಕು’ ಎಂಬ ದಾಸವಾಣಿಯನ್ನು ಒಪ್ಪಿಕೊಂಡ ಭಾವದಲ್ಲಿ ಕಷ್ಟಗಳನ್ನು ಎದುರಿಸಿದರು.

ಈಗ ಅವರಿಗೆ ಸಿನಿಮಾ ಅವಕಾಶದ ಹರಿವು. ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ರಾಮ್‌ಲೀಲಾ’ ಈ ವರ್ಷದ ಕೊನೆಗೆ ತೆರೆಕಾಣಲಿದೆ. ಫರ್‍ಹಾ ಖಾನ್ ನಿರ್ದೇಶನದ ‘ಹ್ಯಾಪಿ ನ್ಯೂ ಇಯರ್’ ಚಿತ್ರದಲ್ಲಿ ಶಾರುಖ್‌ಗೆ ದೀಪಿಕಾ ಮತ್ತೆ ಜೋಡಿಯಾಗಲಿದ್ದಾರೆ. ಹೋಮಿ ಅದಾಜಾನಿಯಾ ತಯಾರಿಸಲಿರುವ ‘ಫೈಂಡಿಂಗ್ ಫನ್ನಿ’ ಎಂಬ ಚಿತ್ರವನ್ನೂ ಒಪ್ಪಿಕೊಂಡಾಗಿದೆ. ಇವೆಲ್ಲ ಚಿತ್ರಗಳು ಮಾರುಕಟ್ಟೆಯಲ್ಲಿ ಈಗಾಗಲೇ ಸದ್ದು ಮಾಡುತ್ತಿದ್ದು, ಮುಂದಿನ ವರ್ಷ ದೀಪಿಕಾ ನಂಬರ್ ಒನ್ ನಟಿಯಾಗಲಿದ್ದಾರೆ ಎಂದು ಸಿನಿಮಾ ನಿಯತಕಾಲಿಕೆಗಳು ಬರೆಯತೊಡಗಿವೆ.

ತಮ್ಮ ಬಗೆಗೆ ಬಂದಿರುವ ಹೊಗಳಿಕೆಯ ಬರಹಗಳನ್ನು ಎತ್ತಿಟ್ಟುಕೊಳ್ಳದ ದೀಪಿಕಾ, ಟೀಕೆಗಳಿದ್ದರೆ ತಪ್ಪದೆ ಫೈಲ್ ಮಾಡಿಕೊಳ್ಳುತ್ತಾರೆ. ಆಗಾಗ ಅವನ್ನು ಓದುತ್ತಾರೆ. ಸಿನಿಮಾ ವಿಮರ್ಶೆಗಳಲ್ಲಿ ತಿದ್ದಿಕೊಳ್ಳಬಹುದಾದ ಅಂಶವಿದ್ದರೆ ಅದನ್ನೂ ಗಂಭೀರವಾಗಿ ಪರಿಗಣಿಸುತ್ತಾರೆ. ಮುಂದಿನ ಚಿತ್ರಕ್ಕೆ ಅವರು ಹೋಂವರ್ಕ್ ಮಾಡಿಕೊಳ್ಳುವ ರೀತಿ ಅದು.

‘ಮೊದಲು ನಾನು ಜನರನ್ನು ಸಲೀಸಾಗಿ ನಂಬುತ್ತಿದ್ದೆ. ಬಾಲಿವುಡ್‌ನಲ್ಲಿ ಯಾವ ಪಾರ್ಟಿಗೆ ಹೋದರೂ ಅಲ್ಲೆಲ್ಲಾ ಸಿನಿಮಾಗಳದ್ದೇ ಮಾತು. ನಾನು ಚಿತ್ರರಂಗದ ಹಿನ್ನೆಲೆಯಿಂದ ಬಂದವಳಲ್ಲ. ಹೆಚ್ಚು ಚಿತ್ರಗಳನ್ನೂ ನೋಡಿರಲಿಲ್ಲ. ಮಾಡೆಲಿಂಗ್‌ನಲ್ಲಿ ಅನುಭವ ಪಡೆದ ಮೇಲೆ ನಟಿಯಾಗಲು ನಿರ್ಧರಿಸಿದೆ. ಹಾಗಾಗಿ ಪ್ರತಿ ಚಿತ್ರಕ್ಕೆ ನನ್ನನ್ನು ಮನಸಾ ಒಪ್ಪಿಸಿಕೊಳ್ಳಬೇಕೆಂಬ ಸಂಕಲ್ಪ ಮಾಡಿದೆ. ನಿರ್ದೇಶಕರು ನನ್ನಿಂದ ಈಗ ಹೇಗೆ ಬೇಕಾದರೂ ಅಭಿನಯ ತೆಗೆಸಬಹುದು. ನಾನು ನೋಡಲು ಚೆನ್ನಾಗಿಲ್ಲ ಎಂದವರು ಈಗ ಚೆನ್ನಾಗಿ ಆಗಿದ್ದೀಯ ಎಂದು ಅಭಿಪ್ರಾಯ ಬದಲಿಸಿಕೊಂಡ ಉದಾಹರಣೆಗಳಿವೆ. ನಟನೆಯ ಗಂಧ-ಗಾಳಿ ಗೊತ್ತಿಲ್ಲ ಎಂದು ಟೀಕಿಸಿದ್ದವರೇ ನನ್ನ ಬಗೆಗೆ ಈಗ ಒಳ್ಳೆಯ ಮಾತನ್ನು ಆಡುತ್ತಿದ್ದಾರೆ. ಇದು ಯಶಸ್ಸೋ ಏರು-ಪೇರೋ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ನನ್ನ ಅಭಿನಯ ಹೆಚ್ಚು ಜನರಿಗೆ ಇಷ್ಟವಾದರೆ ಒಂಥರಾ ಖುಷಿಯಾಗುತ್ತದೆ’ ಎನ್ನುವ ದೀಪಿಕಾ ಮತ್ತೆ ಆ ಅಂಕಣ ಬರಹದ ಸಾಲುಗಳನ್ನು ಸ್ಮರಿಸುತ್ತಾರೆ.

ಈಗಲೂ ದಿನವಿಡೀ ಬರೀ ಹೊಗಳಿಕೆಗಳೇ ಕಿವಿಮೇಲೆ ಬಿದ್ದರೆ ಅವರು ಆ ಟೀಕೆಯ ಸಾಲುಗಳನ್ನು ಕನ್ನಡಿಗೆ ಅಂಟಿಸಿಕೊಂಡು ಮತ್ತೆ ಆತ್ಮಸಂವಾದಕ್ಕೆ ತೊಡಗುತ್ತಾರಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT