ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀನೇಜ್ ಪ್ಯಾಕೇಜ್

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

ರಾಜ್ಯದ ಒಂಬತ್ತು ಸ್ಥಳಗಳಲ್ಲಿ ನಲವತ್ತು ಸಾವಿರ ಮಕ್ಕಳ ನೃತ್ಯ. ಐನೂರು ಮಕ್ಕಳ ಗಾಯನ! ಗಿನ್ನೆಸ್ ದಾಖಲೆಗಾಗಿ, ಚಿತ್ರದ ಪ್ರಚಾರಕ್ಕಾಗಿ ಫ್ಯಾಮಿಲಿ ಪ್ಯಾಕೇಜ್‌ನಡಿ ತಯಾರಾಗಲಿದೆ ವಿಶೇಷ ಚಿತ್ರಗೀತೆ. ಇಷ್ಟೊಂದು ಪ್ರಮಾಣದಲ್ಲಿ ಶಾಲಾ ಮಕ್ಕಳನ್ನು ಗುಡ್ಡೆ ಹಾಕಿಕೊಂಡು ಚಿತ್ರೀಕರಿಸುವ ಈ ಹಾಡಿಗೆ ನಿರ್ದೇಶಕ ಪ್ರೇಮ್ ಸಾಹಿತ್ಯವಿದೆ.
 
‘ಕೇರ್ ಆಫ್ ಫುಟ್‌ಪಾತ್’ನ ಮೂಲಕ ಗಿನ್ನೆಸ್ ದಾಖಲೆ ಮಾಡಿದ ಕಿರಿಯ ವಯಸ್ಸಿನ ನಿರ್ದೇಶಕ ಮಾಸ್ಟರ್ ಕಿಶನ್ ಅಭಿನಯವಿದೆ. ‘ಸ್ಲಂ ಡಾಗ್ ಮಿಲೇನಿಯರ್’ನ ಬೇಬಿ ತನ್ವಿ ಮತ್ತು ಶಿವಾನಿಯರ ಸಾಥ್ ಕೂಡ ಇದೆ.

ಕಿಶನ್ ಅಂಡ್ ಫ್ಯಾಮಿಲಿ ‘ಟೀನೇಜ್’ ಚಿತ್ರದ ಮೂಲಕ ಮತ್ತೊಂದು ಗಿನ್ನೆಸ್ ದಾಖಲೆ ನಿರ್ಮಿಸಲು ಭರ್ಜರಿ ತಯಾರಿ ನಡೆಸಿದೆ. ‘ಈಗಾಗ್ಲೇ ಕಿಶನ್ ದಾಖಲೆ ಮಾಡಿಯಾಗಿದೆ. ಈ ಚಿತ್ರದ ನಾಯಕ ಕಿಶನ್ ಆದರೂ ಈ ಹಾಡಿನಲ್ಲಿ ಕಿಶನ್ ಲೀಡ್ ತೆಗೆದುಕೊಳ್ಳುತ್ತಿಲ್ಲ.

ಎಲ್ಲ ಮಕ್ಕಳಂತೆ ಕಿಶನ್ ಕೂಡ ಒಬ್ಬ ಸಹಕಲಾವಿದ. ಈ ಗೀತೆಯ ಮೂಲಕ ರಾಜ್ಯದ ಮಕ್ಕಳು, ತಂತ್ರಜ್ಞರು ಗಿನ್ನೆಸ್ ದಾಖಲೆ ಮಾಡಬೇಕು ಎನ್ನುವುದು ಹಿರಿಯಾಸೆ. ಈಗಾಗಲೇ ಗಿನ್ನೆಸ್ ಸಂಸ್ಥೆಯವರು ಅಧಿಕೃತ ಒಪ್ಪಿಗೆ ನೀಡಿದ್ದು, ಈ ಹಾಡಿನ ಚಿತ್ರೀಕರಣ ಮತ್ತು ಪ್ರದರ್ಶನ ವೀಕ್ಷಿಸಲು ಲಂಡನ್‌ನಿಂದ ತೀರ್ಪುಗಾರರೊಬ್ಬರು ಆಗಮಿಸಲಿದ್ದಾರೆ’ ಎಂದು ನಿರ್ದೇಶಕ ಶ್ರೀಕಾಂತ್ ಮಾತು ಆರಂಭಿಸಿದರು.

‘ನಾಲ್ಕು ನಿಮಿಷದ ಈ ಗೀತೆಯಲ್ಲಿ ಭಾಗವಹಿಸಲು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಚಿತ್ರದುರ್ಗ, ಹಾಸನ, ಬಳ್ಳಾರಿ, ಶಿವಮೊಗ್ಗ, ಮಂಗಳೂರು ಮತ್ತು ಗುಲ್ಬರ್ಗಾ ಭಾಗದ ಶಾಲಾ ಮಕ್ಕಳನ್ನು ಆಯ್ಕೆ ಮಾಡಲಾಗಿದೆ.

ಈ ನಗರಗಳಲ್ಲೇ ಚಿತ್ರೀಕರಣ ನಡೆಯಲಿದ್ದು, ನೃತ್ಯ ತರಬೇತಿಯ ವಿ.ಸಿ.ಡಿಯನ್ನು ಆಯಾ ಭಾಗಗಳಿಗೆ ಕಳಿಸಲಾಗುವುದು. ಆಯಾ ಪ್ರದೇಶದ ಸಾಂಪ್ರದಾಯಿಕ ಉಡುಗೆ-ತೊಡುಗೆಗಳಲ್ಲೇ ಮಕ್ಕಳು ಕಾಣಿಸಿಕೊಳ್ಳುವರು. ಮಾಸ್ ಅಪೀಲ್ ಇರಲಿ ಎಂಬ ಕಾರಣಕ್ಕೆ ಪ್ರೇಮ್ ಅವರಿಂದ ಗೀತೆ ಬರೆಸಲಾಗುತ್ತಿದೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸುಮಾರು ನೂರೈತ್ತರ ಗುಂಪು ರಚಿಸಿ ಹಾಡನ್ನು ರೆಕಾರ್ಡ್ ಮಾಡಲಾಗುವುದು’ ಎಂದು ವಿವರಿಸಿದರು.

‘ಜನವರಿ ಕೊನೆಯ ವಾರದಲ್ಲಿ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದ್ದು, ಈ ಹಾಡಿನ ಚಿತ್ರೀಕರಣ/ದಾಖಲೆಗಾಗಿ ಪ್ರದರ್ಶನ ಮಾರ್ಚ್ ಮೊದಲನೇ ವಾರದಲ್ಲಿ ನಡೆಯಲಿದೆ. ಈ ಒಂದು ಹಾಡಿನ ಬಜೆಟ್ 40ರಿಂದ 45 ಲಕ್ಷ ರೂಪಾಯಿ’ ಎಂದು ಶ್ರೀಕಾಂತ್ ಮಾತು ಮುಗಿಸುವ ಹೊತ್ತಿಗೆ ಪತ್ರಕರ್ತರು ಚಿತ್ರದ ಟೈಟಲ್ ಬಗ್ಗೆ ಸ್ವಲ್ಪ ತಕರಾರೆತ್ತಿದರು. ‘ಟೀನೇಜ್‌ಗೆ ಸಮಾನಾರ್ಥಕ ಶಬ್ದ ಕನ್ನಡದಲ್ಲಿ ಇಲ್ಲ ಎನ್ನಿಸಿತು. ಟೀನೇಜ್‌ಗೆ ಹರೆಯ, ಹದಿಹರೆಯ ಎಂದು ಹೇಳುತ್ತೇವಾದರೂ ಈ ಚಿತ್ರದ ಕಾನ್ಸೆಪ್ಟ್‌ಗೆ ಅದು ಸರಿಹೊಂದುವುದಿಲ್ಲ ಅನಿಸಿತು’ ಎಂದು ಸಮಜಾಯಿಷಿ ಕೊಟ್ಟರು.

ನಿರ್ದೇಶಕರು ಹೇಳುವುದನ್ನೆಲ್ಲ ಹೇಳಿ ಮುಗಿಸಿದ್ದಾರೆ, ನಾನೇನು ಹೇಳುವುದು ಎಂದು ಅಪ್ಪನ ಕಡೆಗೊಮ್ಮೆ ಪ್ರೊಫೆಶನಲ್ ಟಚ್ ಅಂಡ್ ಲುಕ್ ಕೊಟ್ಟ ಹದಿನೈದರ ಪೋರ ಕಿಶನ್- ‘ಈ ವಯಸ್ಸೇ ಒಂಥರಾ...’ ಚಿತ್ರದ ಟ್ಯಾಗ್‌ಲೈನ್. ನೀವೂ ಕೂಡ ಈ ವಯಸ್ಸು ದಾಟಿ ಬಂದಿದ್ದೀರಿ. ಈ ಚಿತ್ರ ನೋಡಿದ ನಿಮಗೆ ನಿಮ್ಮ ಟೀನೇಜ್‌ನ ಕ್ರಷ್ ನೆನಪಾಗಬಹುದು’ ಎಂದು ತುಂಟತನ ಮಿಶ್ರಿತ ಮೆಚ್ಯೂರ್ಡ್ ಸ್ಮೈಲ್ ಹರಡಿದ.

ಕಿಶನ್ ತಾಯಿ ಮತ್ತು ಚಿತ್ರದ ನಿರ್ಮಾಪಕಿ ಶೈಲಜಾ. ‘ಸಾಲ್ಟ್ ಅಂಡ್ ಪೆಪ್ಪರ್ ಎಂಟರ್ಟೈನ್‌ಮೆಂಟ್’ ಮೂಲಕ ಈ ಚಿತ್ರ ನಿರ್ಮಾಣವಾಗಲಿದೆ. ಇಷ್ಟು ದಿನ ಮನೆಮಟ್ಟಿಗೆ ಚಿತ್ರ, ದಾಖಲೆ ಮಾಡಿದ್ದಾಯಿತು. ಇನ್ನು ಸ್ವಲ್ಪ ದುಡ್ಡು ಮಾಡಿಕೊಳ್ಳಬೇಕು. ಅದಕ್ಕಾಗಿ ಈ ಹೊಸ ಸಂಸ್ಥೆ ಹುಟ್ಟುಹಾಕಲಾಗಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಕಮರ್ಷಿಯಲ್ ಚಿತ್ರಗಳನ್ನು ನಿರ್ಮಿಸುವ ಆಲೋಚನೆ ಇದೆ’ ಎಂದು ‘ಸಿನಿಮಾ ರಂಜನೆ’ಗೆ ‘ರೊಕ್ಕ’ದ ವಿಚಾರವನ್ನು ಬಿಚ್ಚಿಟ್ಟರು.

ಸಂಗೀತ ನಿರ್ದೇಶಕ ಸಿದ್ಧಾರ್ಥ್ ವಿಪಿನ್ ನಗುವನ್ನೇ ಮಾತಾಗಿಸಿದರು. ಸಹಾಯಕ ನಿರ್ದೇಶಕಿಯಾಗಿ ಫೀಲ್ಡಿಗಿಳಿಯಲಿರುವ ಕಿಶನ್ ತಂಗಿ ಕಿರಣ್ ತುಂಟ ನಗೆ ಚೆಲ್ಲುತ್ತ ಎಲ್ಲರ ಮಾತು ಕೇಳಿಸಿಕೊಳ್ಳುತ್ತಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT