ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಮ್ ಇಂಡಿಯಾಕ್ಕೆ ಕರ್ಸ್ಟನ್ ಗುಡ್‌ಬೈ

Last Updated 5 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ/ ಐಎಎನ್‌ಎಸ್): ಭಾರತ ಕ್ರಿಕೆಟ್ ತಂಡವನ್ನು ಹೊಸ ಎತ್ತರಕ್ಕೇರಿಸಿದ ಶ್ರೇಯದೊಂದಿಗೆ ಗ್ಯಾರಿ ಕರ್ಸ್ಟನ್ ಅವರು ಮಂಗಳವಾರ ಕೋಚ್ ಹುದ್ದೆಗೆ ಭಾವಪೂರ್ಣ ವಿದಾಯ ಹೇಳಿದರು. ನನ್ನ ಜೀವನದ ಅತ್ಯಂತ ‘ಕಠಿಣ ವಿದಾಯ’ ಎಂದು ಕರ್ಸ್ಟನ್ ನುಡಿದರು. ಭಾರತ ತಂಡಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಕೋಚ್ ಎಂಬ ಹೆಮ್ಮೆಯನ್ನು ತಮ್ಮದಾಗಿಸಿಕೊಂಡ ಅವರು ಮಂಗಳವಾರ ರಾತ್ರಿ ಕುಟುಂಬ ಸಮೇತ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದರು.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೊತೆಗಿನ ಮೂರು ವರ್ಷಗಳ ಒಪ್ಪಂದದ ಅವಧಿ ಕೊನೆಗೊಂಡ ಕಾರಣ ಕರ್ಸ್ಟನ್ ಟೀಮ್ ಇಂಡಿಯಾ ಜೊತೆಗಿನ ಸಂಬಂಧಕ್ಕೆ ತೆರೆ ಎಳೆದಿದ್ದಾರೆ. ಬೇರೆ ಬದ್ಧತೆಗಳಿರುವುದರಿಂದ ಅವರು ಬಿಸಿಸಿಐ ಜೊತೆಗಿನ ಒಪ್ಪಂದ ಮುಂದುವರಿಸುವ ಆಸಕ್ತಿ ತೋರಿಲ್ಲ.

ಮಂಗಳವಾರ ವಾಂಖೇಡೆ ಕ್ರೀಡಾಂಗಣದ ಕ್ರಿಕೆಟ್ ಸೆಂಟರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ಸ್ಟನ್, ‘ಭಾರತ ತಂಡವನ್ನು ಅತ್ಯುತ್ತಮ ಸ್ಥಿತಿಯಲ್ಲಿ ಬಿಟ್ಟುಹೋಗುತ್ತಿರುವುದು ಸಂತಸದ ವಿಚಾರ. ಆದರೆ ಈಗ ನಾನು ಹೇಳುತ್ತಿರುವುದು ಜೀವನದ ಅತ್ಯಂತ ಕಠಿಣ ವಿದಾಯ’ ಎಂದರು. ಟೀಮ್ ಇಂಡಿಯಾ ಕೋಚ್ ಆಗಲು ಅವಕಾಶ ನೀಡಿದ ಎಲ್ಲರಿಗೆ, ಭಾರತ ತಂಡದ ಸದಸ್ಯರಿಗೆ ಹಾಗೂ ಸಹಾಯಕ ಸಿಬ್ಬಂದಿಗೆ ಕರ್ಸ್ಟನ್ ಕೃತಜ್ಞತೆ ಸಲ್ಲಿಸಿದರು.

ಕರ್ಸ್ಟನ್ ಅವರ ಮೂರು ವರ್ಷಗಳ ಅಧಿಕಾರದ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡ ಸಾಕಷ್ಟು ಚೇತರಿಕೆ ಕಂಡಿದೆ. ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದು ಮಾತ್ರವಲ್ಲದೆ, ಐಸಿಸಿ ಏಕದಿನ ವಿಶ್ವಕಪ್ ಜಯಿಸಿದ್ದು ಅಮೋಘ ಸಾಧನೆ ಎನಿಸಿದೆ. ‘ಹಲವು ಸುಮಧುರ ನೆನಪುಗಳನ್ನು ಕಟ್ಟಿಕೊಂಡು ನಾನು ಈ ದೇಶವನ್ನು ಬಿಡುತ್ತಿದ್ದೇನೆ. ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವುದು ಮತ್ತು ವಿಶ್ವಕಪ್ ಗೆಲ್ಲುವುದು ನಮ್ಮ ಗುರಿಯಾಗಿತ್ತು. ಈ ಎರಡೂ ಗುರಿಗಳು ಈಡೇರಿವೆ. ಭಾರತ ತಂಡದ ಭಾಗವಾಗುವ ಅವಕಾಶ ಲಭಿಸಿದ್ದು ಹೆಮ್ಮೆಯ ವಿಚಾರ’ ಎಂದು ತಿಳಿಸಿದರು.

ವಿಶ್ವಕಪ್ ಗೆದ್ದ ಭಾರತ ತಂಡ ಬಗ್ಗೆ ಪ್ರಶಂಸೆಯ ಮಳೆಗೆರೆದ ಕರ್ಸ್ಟನ್ ಪ್ರತಿಯೊಬ್ಬ ಆಟಗಾರ ಹೊಂದಿರುವ ಸಾಮರ್ಥ್ಯದ ಬಗ್ಗೆ ವಿವರಗಳನ್ನು ನೀಡಿದೆ. ಸಚಿನ್ ತೆಂಡೂಲ್ಕರ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ ಅವರು, ‘ನಾನು ಭೇಟಿಯಾದ ಅತ್ಯಂತ ಶ್ರೇಷ್ಠ ರೋಲ್ ಮಾಡೆಲ್ ಸಚಿನ್’ ಎಂದರು. ‘ನನ್ನ ಜೊತೆಗೆ ಒಬ್ಬ ಗೆಳೆಯನ ರೀತಿಯಲ್ಲಿ ಕಾಲ ಕಳೆದದ್ದಕ್ಕೆ ಸಚಿನ್‌ಗೆ ಥ್ಯಾಂಕ್ಸ್ ಹೇಳುವೆ’ ಎಂದು ನುಡಿದರು.

‘ಮಹೇಂದ್ರ ಸಿಂಗ್ ದೋನಿ ಅವರು ಪ್ರಸಕ್ತ ವಿಶ್ವದ ಅತ್ಯುತ್ತಮ ನಾಯಕ ಎನಿಸಿದ್ದಾರೆ. ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ದೋನಿ ತಾಳ್ಮೆ ಕಳೆದುಕೊಂಡದ್ದನ್ನು ನಾನು ಒಮ್ಮೆಯೂ ಕಂಡಿಲ್ಲ’ ಎಂದರು. ‘ಜಹೀರ್ ಖಾನ್ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು. ಒತ್ತಡದ ಸಂದರ್ಭಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡುವರು. ಮುನಾಫ್ ಪಟೇಲ್ ಮತ್ತು ಆಶೀಶ್ ನೆಹ್ರಾ ಅವರ ಪ್ರದರ್ಶನವೂ ನನಗೆ ಸಂತಸ ನೀಡಿದೆ’ ಎಂದು ತಿಳಿಸಿದರು.

ವರದಿಗಾರರ ಪ್ರಶ್ನೆಗಳನ್ನು ಎದುರಿಸುವ ಮುನ್ನ ಕರ್ಸ್ಟನ್ ಮೊದಲೇ ಸಿದ್ಧಪಡಿಸಿದ್ದ ಲಿಖಿತ ಹೇಳಿಕೆಯನ್ನು ಓದಿದರು. ‘ಭಾರತ ದೇಶ ಹಾಗೂ ಇಲ್ಲಿನ ಜನರನ್ನು ನಾನು ಪ್ರೀತಿಸುವೆ. ನನ್ನನ್ನು ಹಾಗೂ ಕುಟುಂಬದ ಸದಸ್ಯರನ್ನು ಎಲ್ಲರೂ ಗೌರವದಿಂದ ಕಂಡಿದ್ದಾರೆ. ಈ ಕಾರಣ ಭಾರತಕ್ಕೆ ವಿದಾಯ ಹೇಳುವುದು ನೋವಿನ ವಿಚಾರ’ ಎಂದರು.

ಕರ್ಸ್ಟನ್ ಉತ್ತರಾಧಿಕಾರಿ ಯಾರು?: ಭಾರತ ತಂಡದ ಮುಂದಿನ ಕೋಚ್ ಯಾರು ಎಂಬ ಎಂಬ ಪ್ರಶ್ನೆ ಎದ್ದಿದೆ. ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಅವರು ಕೋಚ್ ಆಗುವರು ಎಂಬ ಊಹಾಪೋಹ ಕೇಳಿಬರುತ್ತಿದೆ.  ಆದರೆ ‘ಕರ್ಸ್ಟನ್ ಅವರ ಸ್ಥಾನ ತುಂಬುವುದು ಕಷ್ಟ’ ಎಂದು ವಾರ್ನ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT