ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀವಿಯಲ್ಲಿ ಕೋಮಲ್ ಕಾಮಿಡಿ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕೇವಲ ಹಾಸ್ಯ ಪಾತ್ರಗಳನ್ನಷ್ಟೇ ಮಾಡಿಕೊಂಡಿದ್ದ ಕೋಮಲ್ ಏಕತಾನತೆಯನ್ನು ಪದೇಪದೇ ಮೀರಿದ ನಟ. ಜೀವನವಿಡೀ ಯಾಕೆ ಪೋಷಕ ಪಾತ್ರಗಳನ್ನಷ್ಟೇ ಮಾಡಿಕೊಂಡಿರಬೇಕು ಎಂದು ದಿಢೀರನೆ ಹೀರೊ ಆದವರು. ಸಹಜವಾಗಿಯೇ ಹಾಸ್ಯಪ್ರಜ್ಞೆ ಇರುವ ಅವರದ್ದು ಸಂಕೋಚದ ಸ್ವಭಾವ. ಅದಕ್ಕೇ ಸಾರ್ವಜನಿಕ ಕಾರ್ಯಕ್ರಮಗಳಿಂದ ಅವರು ದೀರ್ಘ ಕಾಲ ದೂರವಿದ್ದರು. ಎಫ್‌ಎಂ ರೇಡಿಯೊ ಭರಾಟೆ ಅಂಥ ಸಂಕೋಚ ಸ್ವಭಾವದ ನಟನನ್ನೂ ತೆಕ್ಕೆಗೆ ತೆಗೆದುಕೊಂಡು ಕಾರ್ಯಕ್ರಮ ಮಾಡಿಸಿ, ಕಚಗುಳಿ ಇಟ್ಟದ್ದು ಹಳೆ ವಿಷಯ. ಈಗ ಕೋಮಲ್ ಟೀವಿಯಲ್ಲಿ ರಿಯಾಲಿಟಿ ಶೋ ತೀರ್ಪುಗಾರರ ಸೀಟ್‌ನಲ್ಲಿ ಕೂರಲಿದ್ದಾರೆ.

ಗುರುವಾರದಿಂದ ವಾರಕ್ಕೆರಡು ಬಾರಿ ಕೋಮಲ್ ಕಚಗುಳಿ `ಝೀ ಟೀವಿಯಲ್ಲಿ~. ಸ್ಪರ್ಧಿಗಳು ಸಿನಿಮಾಗಳಲ್ಲಿ ಇರುವಂಥವೇ ಹಾಸ್ಯ ಪ್ರಸಂಗಗಳನ್ನು ಹೊಸೆದುಕೊಂಡು ಬಂದು ಪೋಷಾಕುಗಳ ಸಹಿತ ಪ್ರದರ್ಶಿಸಬೇಕು. ಕೋಮಲ್ ಸಾಕಷ್ಟು ತಲೆಕೆಡಿಸಿಕೊಂಡು ಈ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸಿದ್ದಾರಂತೆ.

`ಕರೋಡ್‌ಪತಿ~ ಚಿತ್ರೀಕರಣದಲ್ಲಿ ತೊಡಗಿರುವ ಕೋಮಲ್ `ಗೋವಿಂದಾಯ ನಮಃ~, `ರಾಧಿಕನ್ ಗಂಡ~ ಚಿತ್ರಗಳನ್ನು ಮುಗಿಸಿದ್ದಾರೆ. `ಗೋವಿಂದಾಯ ನಮಃ~ ಚಿತ್ರದ `ಪ್ಯಾರ್ ಗೇ ಆಗ್ಬಿಟ್ಟೈತೆ~ ಹಾಡು ಈಗ ಸಾಕಷ್ಟು ಜನಪ್ರಿಯವಾಗಿದೆ. ಅದರ ಗುಂಗಿನಲ್ಲಿರುವ ಕೋಮಲ್‌ಗೆ ಟೀವಿ ಹಾಸ್ಯ ಹೊಸತು.

`ಆಡು ಮುಟ್ಟದ ಸೊಪ್ಪಿಲ್ಲ ಅಂತಾರೆ. ಹಾಗೆಯೇ ನಾನೂ ಎಲ್ಲಾ ಸೊಪ್ಪನ್ನೂ ಮುಟ್ಟೋಣ ಎಂದುಕೊಂಡು ಟೀವಿ ಕಾರ್ಯಕ್ರಮಕ್ಕೆ ಒಪ್ಪಿಕೊಂಡೆ. ಇದು ವಾರಕ್ಕೆರಡೇ ದಿನ- ಗುರುವಾರ, ಶುಕ್ರವಾರ. ಹಾಗಾಗಿ ಹೆಚ್ಚು ತಲೆನೋವಿಲ್ಲ. ನಾವು ಮಾಡಲು ಹೊರಟಿರುವುದು ಕೂಡ ಬರೀ 30 ಕಂತುಗಳನ್ನು. ಜನ ನಗುವಿನ ಅಲೆಯಲ್ಲಿ ತೇಲುತ್ತಿರುವಾಗಲೇ ಕಾರ್ಯಕ್ರಮ ಮುಗಿಸಬೇಕೆಂಬುದು ಉದ್ದೇಶ~ ಎಂದು ಕೋಮಲ್ `ಕರೋಡ್‌ಪತಿ~ಯ ಇನ್ನೊಂದು ಶಾಟ್‌ಗೆ ಅಣಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT