ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಡರ್ ರದ್ದತಿಗೆ ಶಾಸಕರ ಆಗ್ರಹ

Last Updated 4 ಫೆಬ್ರುವರಿ 2011, 8:20 IST
ಅಕ್ಷರ ಗಾತ್ರ

ಹಾಸನ: ಮೂಲ ಸೌಲಭ್ಯಗಳನ್ನೇ ನೀಡದೆ ನಗರದ ಬಸ್ ನಿಲ್ದಾಣವನ್ನು ಸ್ಥಳಾಂತರಿಸಿದ್ದಕ್ಕೆ ಮತ್ತು ಹೈಟೆಕ್ ಬಸ್ ನಿಲ್ದಾಣದಲ್ಲಿ ಸಾಲು ಸಾಲು ಮಳಿಗೆಗಳನ್ನು ನಿರ್ಮಿಸಿರುವ ಬಗ್ಗೆ ಗುರುವಾರ ಜಿ.ಪಂ.ನಲ್ಲಿ ನಡೆದ ನಾಗರಿಕರ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಶಾಸಕ ಎಚ್.ಎಸ್. ಪ್ರಕಾಶ್ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ಏರ್ಪಡಿಸಲಾಗಿತ್ತು. ಈಗಾಗಲೇ ಬೇರೆ ಬೇರೆ ವೇದಿಕೆಗಳಲ್ಲಿ ಮುಖಂಡರು, ಸಾರ್ವಜನಿಕರು ಹೇಳಿದ ದೂರುಗಳು, ಮತ್ತು ಆಕ್ಷೇಪಗಳೇ ಪುನಃ ಇಲ್ಲಿ ವ್ಯಕ್ತವಾದವು. ಆದರೆ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದೆಡೆ ಸೇರಿ, ಪಕ್ಷಾತೀತವಾಗಿ ಈ ಸಮಸ್ಯೆಯ ಬಗ್ಗೆ ಚರ್ಚಿಸಿದ್ದು ಇದೇ ಮೊದಲು.

ಸಭೆಯ ಆರಂಭದಲ್ಲೇ ಮಾತನಾಡಿದ ಪ್ರಕಾಶ್ ‘ಯಾವುದೇ ವ್ಯಕ್ತಿಯ ಅಥವಾ ಪಕ್ಷದ ಹೆಸರನ್ನಾಗಲಿ ಉಲ್ಲೇಖಿಸದೆ, ಒಟ್ಟಾರೆ ನಗರದ ಜನರ ಸಮಸ್ಯೆಯ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು’ ಎಂದು ಸೂಚನೆ ನೀಡಿದ್ದರಿಂದ ಒಂದಿಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಸಮಸ್ಯೆಯ ಬಗೆಗೇ ಮಾತನಾಡಿದರು.

‘ಎಲ್ಲ ಸವಲತ್ತುಗಳನ್ನು ನೀಡಿದ ಬಳಿಕವೇ ಬಸ್ ನಿಲ್ದಾಣವನ್ನು ಸ್ಥಳಾಂತರಿಸಬೇಕಾಗಿತ್ತು. ಆದರೆ ಅಧಿಕಾರಿಗಳು ಯಾವುದೋ ಒಬ್ಬ ವ್ಯಕ್ತಿಯ ಲಾಭಕ್ಕಾಗಿ ಏಕಾಯೇಕಿ ಸ್ಥಳಾಂತರ ಮಾಡಿದ್ದಾರೆ. ಸಾರಿಗೆ ಸಂಸ್ಥೆ ಹಲವರ ಸೊತ್ತು. ಕೆಲವರಿಗಾಗಿ ಕೆಲಸ ಮಾಡಬಾರದು. ಅದರಲ್ಲೂ ಒಬ್ಬ ವ್ಯಕ್ತಿಗೆ ಇಡೀ ಬಸ್ ನಿಲ್ದಾಣದ ನಿರ್ವಹಣೆ, ಮಳಿಗೆಗಳ ಗುತ್ತಿಗೆ ನೀಡಿರುವುದು ದೊಡ್ಡ ಅನ್ಯಾಯ’ ಎಂದು ಬಳಕೆದಾರರ ವೇದಿಕೆಯ ಕಾರ್ಯಾಧ್ಯಕ್ಷ ಸಿದ್ದಯ್ಯ ನುಡಿದರು.

ನಗರಸಭೆ ಸದಸ್ಯ ಬಂಗಾರಿ ಮಂಜು, ಗುರುಪ್ರಸಾದ್, ಶ್ರೀನಿವಾಸ ಗೌಡ, ಪತ್ರಕರ್ತ ವೆಂಕಟೇಶಮೂರ್ತಿ ಮುಂತಾದವರು ಹೊಸ ಬಸ್‌ನಿಲ್ದಾಣದಲ್ಲಿ ಸೌಲಭ್ಯ ಇಲ್ಲದೆ ಜನರು ಅನುಭವಿಸುತ್ತಿರುವ ಕಷ್ಟಗಳನ್ನು ವಿವರಿಸಿದರು. ಮಳಿಗೆಗಳನ್ನು ಒಬ್ಬರಿಗೇ ಗುತ್ತಿಗೆ ನೀಡುವ ಮೂಲಕ ರಾಜ್ಯದ ಅತ್ಯುತ್ತಮ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಮುಂದಾದಂತೆ ಭಾಸವಾಗುತ್ತಿದ್ದು, ಇದನ್ನು ವಿರೋಧಿಸಬೇಕಾಗಿದೆ. ಗುತ್ತಿಗೆಯನ್ನು ರದ್ದು ಮಾಡದಿದ್ದರೆ ಸಾರ್ವಜನಿಕರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದರು.
ಎರಡು ದಿನದ ಗಡುವು

ಸಭೆಯ ಬಳಿಕ ಪತ್ರಕರ್ತರೊಡನೆ ಮಾತನಾಡಿದ ಶಾಸಕ ಎಚ್.ಎಸ್. ಪ್ರಕಾಶ್ ‘ಇನ್ನೆರಡು ದಿನಗಳಲ್ಲಿ ಎಲ್ಲ ಬಸ್ಸುಗಳೂ ಹಳೆಯ ಬಸ್ ನಿಲ್ದಾಣಕ್ಕೆ ಬರುವಂತೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಆರಂಭಿಸಲಾಗುವುದು’ ಎಂದು ತಿಳಿಸಿದರು.ಈ ವರೆಗೆ ಖಾಸಗಿ ವ್ಯಕ್ತಿಗೆ ಗುತ್ತಿಗೆ ನೀಡಿರುವ ಬಗ್ಗೆ ಆಕ್ಷೇಪ ಮಾತ್ರ ವ್ಯಕ್ತಪಡಿಸಿದ್ದ ಶಾಸಕರು, ಸಭೆಯಲ್ಲಿ ಬಸ್ ನಿಲ್ದಾಣ ನಿರ್ವಹಣೆಗೆ ನೀಡಿದ್ದ ಜಾಗತಿಕ ಟೆಂಡರನ್ನು ರದ್ದು ಮಾಡಲೇಬೇಕು ಎಂದು ಆಗ್ರಹಿಸಿದ್ದು ವಿಶೇಷವಾಗಿತ್ತು.

‘ಜನರ ಸಮಸ್ಯೆ ಪರಿಹಾರವಾಗಬೇಕು ಎಂಬುದು ನಮ್ಮ ಬೇಡಿಕೆ ಆದ್ದರಿಂದ ನಾವು ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ ಶಾಂತಿಯುತವಾಗಿಯೇ ಪ್ರತಿಭಟನೆ ಮಾಡುತ್ತೇವೆ. ಆದರೆ ಬಸ್ ನಿಲ್ದಾಣದ ಮೂಲ ನಕ್ಷೆಯನ್ನೇ ಬದಲಿಸಿ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಮಳಿಗಗಳನ್ನು ರದ್ದು ಮಾಡಲೇಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಇಲ್ಲಿ 19 ಮಳಿಗೆಗಳಿವೆ. ಇಷ್ಟೇ ಸಾಕು. ಸರ್ಕಾರ ಜಾಗತಿಕ ಟೆಂಡರ್ ಕರೆದು ಒಟ್ಟಾರೆ ನಾಲ್ಕು ಎಕರೆ ಬಸ್ ನಿಲ್ದಾಣದಲ್ಲಿ ಒಂದೂವರೆ ಎಕರೆಯಲ್ಲಿ ಮಳಿಗೆ ನಿರ್ಮಿಸಲು ಮುಂದಾಗಿದೆ. ಈಗಿನ ನಿಯಮದ ಪ್ರಕಾರ ಇಲ್ಲಿ ಇನ್ನೂ 70 ಮಳಿಗೆಗಳು ಬರಲಿವೆ. ಅಂದರೆ ಜನರಿಗೆ ಓಡಾಡಲು, ಕುಳಿತುಕೊಳ್ಳಲು ಜಾಗವಿಲ್ಲದಂತಾಗುತ್ತದೆ. ಬಸ್ ನಿಲ್ದಾಣದ ಮೂಲ ಉದ್ದೇಶವೇ ಹಾಳಾಗುತ್ತದೆ. ಈ ಗುತ್ತಿಗೆಯನ್ನು ರದ್ದು ಮಾಡಿ ಸಾರಿಗೆ ಸಂಸ್ಥೆಯವರೇ ಪ್ರತ್ಯೇಕ ಹರಾಜು ಹಾಕುವ ಮೂಲಕ ಮಳಿಗೆಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
ಬಸ್ ನಿಲ್ದಾಣ ಸ್ಥಳಾಂತರಿಸದೆ ಇಲಾಖೆಗೆ ಪ್ರತಿನಿತ್ಯ ನಾಲ್ಕೂವರೆ ಲಕ್ಷ ರೂಪಾಯಿ ನಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಜನರು ಹೊಣೆಯಲ್ಲ.
 
ಉಸ್ತುವಾರಿ ಸಚಿವರಿಗೂ ಮಾಹಿತಿ ನೀಡದೆ, ಸ್ಥಳೀಯ ಶಾಸಕರ ಮಾತನ್ನೂ ಕೇಳದೆ ಅಧಿಕಾರಿಗಳು ಬಸ್ ನಿಲ್ದಾಣವನ್ನು ಸ್ಥಳಾಂತರಿಸಿದ್ದು ಮೊದಲ ತಪ್ಪು. ಇದನ್ನು ಕೂಡಲೇ ಸರಿಪಡಿಸಬೇಕು’ ಎಂದು ಪ್ರಕಾಶ್ ನುಡಿದರು.ಬುಧವಾರ ಹಾಸನಕ್ಕೆ ಭೇಟಿ ನೀಡಿದ್ದ ಸಚಿವರಾದ ರಾಮದಾಸ್, ವಿಜಯಶಂಕರ್  ಹಾಗೂ ಸುರೇಶ್  ಕುಮಾರ್ ಅವರು ಸ್ಥಳೀಯ ಶಾಸಕರ ಜತೆಗೆ ಚರ್ಚಿಸದೇ ಕೆಲವು ನಿರ್ಧಾರಗಳನ್ನು ಪ್ರಕಟಿಸಿರುವ ಬಗೆಗೂ ಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದರು.

23 ಎಕರೆ ಜಾಗ; 88 ಬಸ್ ನಿಲ್ಲಲು ಅವಕಾಶ
ಹಾಸನದಲ್ಲಿ ಒಟ್ಟಾರೆ 23 ಎಕರೆ ಜಾಗದಲ್ಲಿ ಹೊಸ ಬಸ್ ನಿಲ್ದಾಣದ ನಿರ್ಮಾಣವಾಗಿದೆ. ಇದರಲ್ಲಿ ನಾಲ್ಕು ಎಕರೆಯಲ್ಲಿ ಬಸ್ ನಿಲ್ದಾಣ (ಕಟ್ಟಡ) ಹಾಗೂ ಸುತ್ತ ನಾಲ್ಕು ಎಕರೆ ಜಾಗದಲ್ಲಿ ಬಸ್ ನಿಲುಗಡೆ, ಓಡಾಟ ನಡೆಯುತ್ತಿದೆ. 36 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ನಿಲ್ದಾಣದಲ್ಲಿ ಏಕಕಾಲಕ್ಕೆ 88  ಬಸ್‌ಗಳನ್ನು ನಿಲ್ಲಿಸಬಹುದು.

2009ರ ಡಿಸೆಂಬರ್‌ನಲ್ಲಿ ಜಾಗತಿಕ ಟೆಂಡರ್  ಕರೆದು ಬಸ್ ನಿಲ್ದಾಣದ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ಸಾರಿಗೆ ಸಂಸ್ಥೆಯದ್ದೇ 19 ಮಳಿಗೆಗಳಿವೆ. ಇದಲ್ಲದೆ ನಿರ್ವಹಣೆಯ ಗುತ್ತಿಗೆ ಪಡೆದವರು ಇಲ್ಲಿ 70 ಮಳಿಗೆಗಳನ್ನು ನಿರ್ಮಿಸಲಿದ್ದಾರೆ. ಟೆಂಡರ್ ಪಡೆದ ಸಂಸ್ಥೆಯವರು ಸಾರಿಗೆ ಸಂಸ್ಥೆ ಗುರುತಿಸಿದ 60,600 ಚದರ ಅಡಿಯಲ್ಲಿ ಮಳಿಗೆಗಳನ್ನು ನಿರ್ಮಿಸಬಹುದು. ಈ ಸಂಸ್ಥೆಯವರು ವಾರ್ಷಿಕ 95 ಲಕ್ಷ ರೂಪಾಯಿಯನ್ನು ಸಾರಿಗೆ ಸಂಸ್ಥೆಗೆ ನೀಡಬೇಕು. 12 ವರ್ಷಗಳ ಕಾಲ ಈ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಇಲ್ಲಿಯ ಸೌಲಭ್ಯಗಳ ನಿರ್ವಹಣೆಯನ್ನು ಈ ಸಂಸ್ಥೆಯವರೇ ಮಾಡಬೇಕಾಗುತ್ತದೆ. ಈಗಾಗಲೇ ಸಂಸ್ಥೆಯವರು ಆರು ತಿಂಗಳ ಬಾಡಿಗೆ ರೂ. 45 ಲಕ್ಷವನ್ನು ಸಂಸ್ಥೆಗೆ ತುಂಬಿದ್ದಾರೆ. ಮಾತ್ರವಲ್ಲದೆ ರೂ. 75 ಲಕ್ಷವನ್ನು ಠೇವಣಿ ರೂಪದಲ್ಲಿ ಸಲ್ಲಿಸಿದ್ದಾರೆ.ಇವಿಷ್ಟು ಮಾಹಿತಿಯನ್ನು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಭೆಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT