ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್ ಅಂಕಣಕ್ಕೆ ಹೈಟೆಕ್ ಸ್ಪರ್ಶ

Last Updated 10 ಆಗಸ್ಟ್ 2011, 6:10 IST
ಅಕ್ಷರ ಗಾತ್ರ

ಬೀದರ್: ಕೋರ್ಟ್, ರ‌್ಯಾಕೆಟ್, ಗೇಮ್, ಸೆಟ್, ಸರ್ವೀಸ್, ಏಸ್, ವಾಲಿ, ಡಬಲ್ ಫಾಲ್ಟ್, ಮ್ಯಾಚ್ ಪಾಯಿಂಟ್ .....

ಅರೆರೆ ಇದೇನಿದು? ಟೆನಿಸ್ ಆಟಕ್ಕೆ ಸಂಬಂಧಿಸಿದ ಪದಗಳು ಕೇಳಿ ಬರುತ್ತಿವೆಯಲ್ಲ! ಎಂದು ಅನ್ನಿಸಿದರೆ ನಿಮ್ಮ ಊಹೆ ಸರಿ. ವಿಂಬಲ್ಡನ್, ಯು.ಎಸ್. ಓಪನ್, ಆಸ್ಟ್ರೇಲಿಯನ್ ಓಪನ್ ಸ್ಪರ್ಧೆಗಳ ಸಂದರ್ಭದಲ್ಲಿ ಕೇಳಿಸುವ ಶಬ್ದಗಳಿವು ಎನ್ನುವುದರಲ್ಲಿ ಎರಡು ಮಾತಿಲ್ಲ.

ಕರ್ನಾಟಕದ ತುತ್ತ ತುದಿಯಲ್ಲಿ ಇರುವ ಹಾಗೂ ಅತ್ಯಂತ ಹಿಂದುಳಿದ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಬೀದರ್‌ನಲ್ಲಿ ಮೂರು ದಿನಗಳ ಟೆನಿಸ್ ಟೂರ್ನಿ ನಡೆಯಿತು. ಡಬಲ್ಸ್‌ನಲ್ಲಿ ಈಶಾನ್ಯ ವಲಯದ ಪೊಲೀಸ್ ಮಹಾನಿರ್ದೇಶಕ ಗಗನ್‌ದೀಪ್ ನೇತೃತ್ವದ ತಂಡ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅದಕ್ಕಿಂತ ಸರಿಯಾಗಿ ಮೂರು ದಿನ ಮುಂಚೆ ಬೀದರ್‌ನ ಜನ ಮಾತ್ರವಲ್ಲದೆ, ಇಡೀ ಉತ್ತರ ಕರ್ನಾಟಕದ ಜನತೆ ತಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಬೆರಗಾಗಿ ನೋಡುವ ಟೆನಿಸ್ ಕೋರ್ಟ್ ಆಟಕ್ಕೆ ತೆರೆದುಕೊಂಡಿತು.

ಶುಕ್ರವಾರ (ಆಗಸ್ಟ್ 5) ಸಂಜೆ 7ಗಂಟೆಗೆ ಗಗನ್‌ದೀಪ್ ಅವರು ಕೈಯಲ್ಲಿ ರ‌್ಯಾಕೆಟ್ ಹಿಡಿದು ಬಾಲ್‌ನ್ನು ಎದುರಾಳಿಯತ್ತ ಹೊಡೆದಾಗ ಮತ್ತೊಂದು ತುದಿಯಲ್ಲಿದ್ದ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಮರಳಿಸಿದರು. `ಟೆನಿಸ್ ಕೋರ್ಟ್ ಇಸ್ ಇನಾಗುರೇಟೆಡ್~ ಎಂದು ಅಧಿಕೃತವಾಗಿ ಘೋಷಿಸಿದರು. ಇದರೊಂದಿಗೆ ಬೀದರ್‌ನ ಕ್ರೀಡಾಪುಟದಲ್ಲಿ ಟೆನಿಸ್‌ನ ಹೊಸ ಅಧ್ಯಾಯವೊಂದು ಪ್ರಾರಂಭವಾಯಿತು. ಫುಟ್‌ಬಾಲ್, ಹಾಕಿ ಕ್ರೀಡೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ನಡೆಸಿದ್ದು ಗತ ಇತಿಹಾಸ. ರಾಷ್ಟ್ರೀಯ ಮಾತ್ರವಲ್ಲದೆ ಅಂತರರಾಷ್ಟ್ರೀಯ ಗುಣಮಟ್ಟದ ಟೆನಿಸ್ ಕ್ರೀಡಾಂಗಣ ಆಟಗಾರರಿಗೆ ಲಭ್ಯವಾದದ್ದು ಒಂದು ವಿನೂತನ ಮೈಲಿಗಲ್ಲು ಎಂದೇ ಹೇಳಬೇಕು.

ಅಂತರರಾಷ್ಟ್ರೀಯ ಗುಣಮಟ್ಟದ ಎರಡು ಟೆನಿಸ್ ಕೋರ್ಟ್‌ಗಳ ನಿರ್ಮಾಣದ ಮೂಲಕ `ಬೀದರ್ ಪೊಲೀಸ್ ಟೆನಿಸ್ ಅಕಾಡೆಮಿ~ (ಬಿಪಿಟಿಎ)ಯು ಜಿಲ್ಲೆಯಲ್ಲಿ ಟೆನಿಸ್‌ನ ವಾತಾವರಣ ಹುಟ್ಟು ಹಾಕುವುದು ಮತ್ತು ಬೆಳೆಸುವುದಕ್ಕೆ ಕಾರಣವಾಗಿದೆ. ಈ ಎರಡು ಕೋರ್ಟ್‌ಗಳ ನಿರ್ಮಾಣದ ಹಿಂದೆ ನಿಂತು ಕೆಲಸ ಮಾಡಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಸತೀಶ್‌ಕುಮಾರ್. ಅವರಿಗೆ ಬೆಂಗಾವಲಾಗಿ ನಿಂತು ನಿರ್ಮಾಣ ಹಂತದಲ್ಲಿ ಪ್ರೇರಣೆ ಒದಗಿಸಿದ್ದು ಟೆನಿಸ್‌ನಲ್ಲಿ ಆಸಕ್ತಿ ಇರುವ ಕೆಲವು ಹವ್ಯಾಸಿಗಳ ಪಡೆ.

ಎಸ್‌ಪಿ ಕಚೇರಿ ಆವರಣದಲ್ಲಿ ಇದ್ದ ಕ್ಲೇ ಕೋರ್ಟ್ (ಮಣ್ಣಿನ ಅಂಗಣ)ನಲ್ಲಿ ನಿತ್ಯ ಬೆಳಗಿನ ಜಾವ ಟೆನಿಸ್ ಪ್ರ್ಯಾಕ್ಟಿಸ್ ಮಾಡುತ್ತಿದ್ದ ಸರಿ ಸುಮಾರು 20 ಜನರಿಗೆ ನಮ್ಮೂರಿನಲ್ಲಿ ಒಂದು ಒಳ್ಳೆಯ ಗುಣಮಟ್ಟದ ಕೋರ್ಟ್ ಇದ್ದರೆ ಎಷ್ಟೊಂದು ಚೆನ್ನಾಗಿರುತ್ತದೆ ಅನ್ನಿಸಿತು. ಹಾಗೆ ಅನ್ನಿಸಿದ್ದು ಅದೇ ಮೊದಲ ಬಾರಿ ಏನಾಗಿರಲಿಲ್ಲ. ಎಲ್ಲ ಕನಸುಗಳು ಸಾಕಾರಗೊಳ್ಳುತ್ತವೆ ಎಂದೇನು ಇಲ್ಲ. ಆದರೆ, ಕನಸು ಕಾಣುವುದರಲ್ಲಿ ತಪ್ಪೇನು ಇಲ್ಲ. ಹಾಗೆ ಕಾಣುವ ಕನಸು ಸಣ್ಣದಾಗಿರಬಾರದು. ದೊಡ್ಡ ಕನಸಿನ ಸಾಕಾರಕ್ಕೆ ಹೆಚ್ಚಿನ ಶ್ರಮ ಬೇಕಾಗಬಹುದು. ಆದರೆ, ಜಾರಿಗೆ ಬಂದಾಗ ಅಷ್ಟೇ ದೊಡ್ಡ ತೃಪ್ತಿ, ಧನ್ಯತಾಭಾವವೂ ಇರುತ್ತದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಹಬಶಿಕೋಟೆ ಪ್ರವಾಸಿ ಮಂದಿರದ ಕಡೆಗೆ ಸಾಗುವ ದಾರಿಯಲ್ಲಿ ಅಂದರೆ ಮೆಥೋಡಿಸ್ಟ್ ಚರ್ಚಿನ ಹಿಂಭಾಗದಲ್ಲಿ ಪೊಲೀಸ್ ಅತಿಥಿ ಗೃಹ ನಿರ್ಮಾಣ ಆಗಿ ಉದ್ಘಾಟನೆಯ ಭಾಗ್ಯ ಕಂಡಿರಲಿಲ್ಲ. ಭೂಸೇನಾ ನಿಗಮದವರು ನಿರ್ಮಿಸಿ ಪೂರ್ಣಗೊಳಿಸಿದ ಅತಿಥಿ ಗೃಹ ಹಸ್ತಾಂತರ ಆಗದೇ, ಬಳಸದ್ದರಿಂದ ಭೂತ ಬಂಗಲೆಯಂತೆ ಗೋಚರವಾಗುತ್ತಿತ್ತು. ಹೀಗೆ ಕಡತದಲ್ಲಿ ಮಾತ್ರ ಅಸ್ತಿತ್ವದಲ್ಲಿ ಇದ್ದ ಗೆಸ್ಟ್‌ಹೌಸ್‌ನ್ನು ನವೀಕರಿಸಿ ಬಳಸಲು ನಿರ್ಧರಿಸಲಾಯಿತು. ಅದರ ಆವರಣದಲ್ಲಿಯೇ ಹೊಸದಾಗಿ ಕೋರ್ಟ್ ನಿರ್ಮಿಸುವ ಯೋಚನೆಯೂ ಬಂತು. ಎಸ್‌ಪಿ ಸಾಹೇಬರು ಕಾರ್ಯೋನ್ಮುಖರಾದರು. ತಮ್ಮ ಸಿಬ್ಬಂದಿಯಿಂದ ಶ್ರಮದಾನ, ಎಂಜಿನಿಯರ್ ಸ್ನೇಹಿತರುಗಳಿಂದ ಪ್ಲಾನ್, ಜಿಲ್ಲಾಡಳಿತ, ಉದ್ಯಮಿಗಳ ನೆರವು- ಸಹಾಯ-ಸಹಕಾರದಿಂದ ಅದು ಟೆನಿಸ್ ಕ್ರೀಡಾಂಗಣದ ಕಾರ್ಯ ಪೂರ್ಣಗೊಂಡಿತು.

ಸಿಂಧನೂರಿನ ಖಾಸಗಿ ಉದ್ಯಮಿಯೊಬ್ಬರು ಸಿಂಥೆಟಿಕ್ ಟೆನಿಸ್ ಕೋರ್ಟ್ ನಿರ್ಮಿಸಿದ್ದಾರೆ. ಅದನ್ನು ಬಿಟ್ಟರೆ ಉತ್ತರ ಕರ್ನಾಟಕದಲ್ಲಿ ಸಾರ್ವಜನಿಕರಿಗಾಗಿ ನಿರ್ಮಾಣ ಆಗಿರುವ ಮೊದಲ ಸಿಂಥೆಟಿಕ್ ಕೋರ್ಟ್ ಬೀದರ್‌ನಲ್ಲಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಮೈದಾನ ಸಿದ್ಧವಾಗಿದೆ. ಅದೇ ದರ್ಜೆಯ ಆಟಗಾರರು ಇಲ್ಲದಿದ್ದರೆ ಹೇಗೆ? ಟೆನಿಸ್ ಆಟ ಬೆಳೆಸುವುದಕ್ಕೆ ಅವಕಾಶ ಕಲ್ಪಿಸುವುದಕ್ಕಾಗಿ ಕೋಚ್ ನೇಮಿಸಲಾಗಿದೆ.

ಮುಂಬರುವ ನಾಲ್ಕಾರು ವರ್ಷಗಳಲ್ಲಿ ಭಾರತದ ಟೆನಿಸ್ ಭೂಪಟದಲ್ಲಿ ಬೀದರಿನ ಹೆಸರು ದಾಖಲಿಸುವ ಕ್ರೀಡಾಪಟುಗಳನ್ನು ರೂಪಿಸುವ ಬಯಕೆ ಸತೀಶ್‌ಕುಮಾರ್ ಅವರದ್ದು. ಅವರ ಬೆನ್ನಹಿಂದೆ ಆಸಕ್ತ ಟೆನಿಸಿಗರ ಪಡೆಯೇ ಇರುವುದರಿಂದ ನನಸಾಗುವ ದಿನ ದೂರವಿಲ್ಲ.


ಹಸಿರು ಕಣಿವೆ, ಬೆಟ್ಟಗಳ ಸೊಬಗಿನ ನಡುವೆ ಟೆನಿಸ್
ಬೀದರ್:ಕಡಿದಾದ ಕಣಿವೆ. ದೂರದಲ್ಲಿ ಕಾಣಿಸುವ ಹಸಿರು ಬೆಟ್ಟಗಳ ಸಾಲು. ನೊರೆ ಹಾಲು ತುಂಬಿದಂತೆ ಗೋಚರಿಸುವ ಕೆರೆ. ಅನತಿ ದೂರದಲ್ಲಿ ಗೋಚರವಾಗುವ ಚೌಖಂಡಿ. ಹೀಗೆ ಕಣ್ಮನ ತಣಿಸುವ ಪ್ರದೇಶದಲ್ಲಿ ಟೆನಿಸ್ ಅಂಗಣ ನಿರ್ಮಾಣವಾಗಿದೆ.

ಪೊಲೀಸ್ ಅತಿಥಿ ಗೃಹದ ಪಕ್ಕದಲ್ಲಿ ಇಳಿಜಾರು ಕಣಿವೆಯ ಅರ್ಧದಷ್ಟು ಪ್ರದೇಶವನ್ನು ಗೋಡೆ ಕಟ್ಟಿ ಅದರಲ್ಲಿ ಕಲ್ಲು ಮಣ್ಣು ತುಂಬಿ ಸಮತಟ್ಟಾಗಿಸುವಲ್ಲಿ ದುಡಿದ ಶ್ರಮ ಅರಿವಿಗೆ ಬರದೇ ಇರದು. ಆದರೆ, ಮುದ ನೀಡುವ ಟೆನಿಸ್ ಮೈದಾನ ಅದರ ನಿರ್ಮಾಣದ ಹಿಂದೆ ಶ್ರಮಿಸಿದವರಿಗೆ ಧನ್ಯತಾಭಾವ ಮೂಡುವಂತೆ ಸೊಗಸಾಗಿದೆ.

ಗೆಸ್ಟ್‌ಹೌಸ್‌ನ ಬಾಲ್ಕನಿಯಲ್ಲಿ ಕುಳಿತು ಟೆನಿಸ್ ಆಟದ ಜೊತೆಗೆ ಕಣಿವೆಯ ಹಸಿರುವನರಾಶಿಯ ಸೊಬಗನ್ನು ಸವಿಯುವುದೇ ಸೊಬಗು. ವ್ಯಾಲಿ ವ್ಯೆನ ಜೊತೆಗೆ ಟೆನಿಸ್ ಆಟದ ಸೊಬಗೂ ದೊರೆಯುವಂತೆ ಇರುವ ಏಕೈಕ ಕ್ರೀಡಾಂಗಣ ಇದು ಎಂಬುದು ದೇಶದ ಹತ್ತಾರು ಟೆನಿಸ್ ಕೋರ್ಟ್‌ಗಳಲ್ಲಿ ಆಡಿದ ಅನುಭವ ಇರುವ ಗದಗನ ಹಿರಿಯ ಟೆನಿಸ್ ಪಟು ಅಭಿಪ್ರಾಯಪಟ್ಟರು. ಕರ್ನಾಟಕದ `ಟೆನಿಸ್ ಕಾಶಿ~ ಎಂದರೆ ತಪ್ಪೇನಿಲ್ಲ ಎಂಬ ಅನಿಸಿಕೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT