ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್ ಕೌಶಲ್ಯದ ನಿಕ್ಷೇಪ...!

Last Updated 21 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಆ ಹುಡುಗನ ವಯಸ್ಸು 13 ವರ್ಷ. ವರ್ಷದಿಂದ ವರ್ಷಕ್ಕೆ ಆತ ಜಯಿಸುವ ಪ್ರಶಸ್ತಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗೆಯೇ ಸಾಧ ನೆಯೂ ಕೂಡಾ. ಆದರೆ ಬೆಳೆಯುವ ಆಶಯಕ್ಕೆ ಮಾತ್ರ ಬೆಂಬಲ ಸಿಗುತ್ತಿಲ್ಲ. ಒಮ್ಮೆಯಾದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸ ಬೇಕು ಎನ್ನುವ ಹಂಬಲಕ್ಕೆ ಯಾವ ಬಲವೂ ಸಿಗುತ್ತಿಲ್ಲ. ಛೇ ಇದೆಂತಾ ದುರಂತ...!

ಆತನ ಹೆಸರು ಬಿ.ಆರ್. ನಿಕ್ಷೇಪ್. ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ರ‌್ಯಾಂಕಿಂಗ್ ಪಟ್ಟಿಯಲ್ಲಿ ಬಾಲಕರ 14 ವರ್ಷದೊಳಗಿನವರ ವಿಭಾಗದಲ್ಲಿ ಆರನೇ ಸ್ಥಾನದಲ್ಲಿದ್ದಾನೆ. ನಿಕ್ಷೇಪ್‌ನನ್ನು ಹೊರತು ಪಡಿಸಿದರೆ ಮತ್ತೆ ಈ ರ‌್ಯಾಂಕಿಂಗ್ ಪಟ್ಟಿಯಲ್ಲಿ ಕರ್ನಾಟಕಕ್ಕೆ ಸಿಗುವುದು 14ನೇ ಸ್ಥಾನ.

ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಸಾಧನೆ ಮಾಡಿರುವ ನಿಕ್ಷೇಪ್‌ಗೆ ತನ್ನ ಸಾಧನೆಯನ್ನು ಇನ್ನೂ ವಿಸ್ತರಿಸಿಕೊಳ್ಳುವ ಹಂಬಲ. ಡೇವಿಸ್ ಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕು ಎನ್ನುವ ಅದಮ್ಯ ಆಸೆ. ಅದಕ್ಕಾಗಿ ದಿನಕ್ಕೆ 5ರಿಂದ 6 ಗಂಟೆ ಅಭ್ಯಾಸ. ಎರಡು ಗಂಟೆ ಫಿಟ್‌ನೆಸ್‌ಗಾಗಿ ಕಸರತ್ತು.

ನಿಕ್ಷೇಪ್‌ನ ಟೆನಿಸ್ ಪ್ರೀತಿ ಆರಂಭವಾಗಲೂ ಒಂದು ಹಿನ್ನಲೆಯಿದೆ. ಅದು 2004ರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಫೈನಲ್ ಪಂದ್ಯ. ನಿಕ್ಷೇಪ್‌ಗೆ ಇನ್ನೂ ಆಸು ಪಾಸು 6 ವರ್ಷ. ಅರ್ಜೆಂಟೀನಾದ ಗಸ್ಟನ್ ಗಾಡಿಯೊ ತಮ್ಮ ದೇಶದವರೇ ಆದ ಗುಲಿರ್ಮೊ ಕೊರಿಯಾ ನಡುವಿನ ಫೈನಲ್ ಪಂದ್ಯ.

ಈ ಪಂದ್ಯದಲ್ಲಿ ಗಾಡಿಯೋ ತೋರಿದ ಪ್ರದರ್ಶನವೇ ನಿಕ್ಷೇಪ್‌ಗೆ ಟೆನಿಸ್ ಬಗ್ಗೆ ಆಸಕ್ತಿ ಹುಟ್ಟಲು ಕಾರಣ. ಇವರ ಆಟದಿಂದ ಪ್ರೇರಿತಗೊಂಡು ಟೆನಿಸ್‌ನಲ್ಲಿ ವಿಭಿನ್ಯ ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡರು. ಟೆನಿಸ್ ಆಟದ ಬಗ್ಗೆ ಕಿಂಚಿತ್ತೂ ಗೊತ್ತಿರದ ಆ ಬಾಲಕ ಸ್ವ ಆಸಕ್ತಿಯಿಂದ ತಿಳಿದುಕೊಂಡ.

ಬೇರೆ ಬೇರೆ ರಾಜ್ಯಗಳಿಗೆ ಆಡಲು ಹೋದಾಗ ಆಕಸ್ಮಿಕವಾಗಿ  ಡಬಲ್ಸ್‌ನಲ್ಲಿ 9ನೇ ರ‌್ಯಾಂಕ್ ಹೊಂದಿರುವ ರೋಹನ್ ಬೋಪಣ್ಣ ಅವರನ್ನು ಭೇಟಿಯಾದ. ಅಲ್ಲಿಯೂ ಅವರ ಸಲಹೆ ಪಡೆದ. ಇದರಿಂದ ಟೆನಿಸ್‌ನಲ್ಲಿ ಬೆಳೆಯಬೇಕು ಎನ್ನುವ ಆಶಯಕ್ಕೆ ಬಲ ಬಂದಂತಾಯಿತು.

ಪ್ರಾಯೋಜಕರ ಕೊರತೆ: ಚಿಕ್ಕ ವಯಸ್ಸಿನಲ್ಲಿ ಮಗ ಸಾಕಷ್ಟು ಸಾಧನೆ ಮಾಡಿದ್ದಾನೆ ಎನ್ನುವ ಹೆಮ್ಮೆ ತಂದೆ ಬಿ.ಕೆ. ರವಿ ಕುಮಾರ್ ತಾಯಿ ಬಿ.ಜಿ. ಶೋಭಾ ಇಬ್ಬರಿಗೂ ಇದೆ.

ರಾಜ್ಯ, ಅಂತರರಾಜ್ಯ ಟೂರ್ನಿಗಳಿಗೆ ಮಗನನ್ನು ಕರೆದುಕೊಂಡು ಹೋಗ ಬಹುದು. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಬೇಕು ಎನ್ನುವ ಆಸೆಗೆ ನೀರೆರೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಾಕಷ್ಟು ಆರ್ಥಿಕ ಸೌಲಭ್ಯವೂ ಬೇಕು ಎನ್ನುವುದು ಅವರ ಕೊರಗು.

2009ರಿಂದ 11ರ ವರೆಗೆ ಎಐಟಿಎ ಆಶ್ರಯದಲ್ಲಿ ನಡೆದ ಟೆನಿಸ್ ಟೂರ್ನಿಯ ವಿವಿಧ ವಿಭಾಗಗಳಲ್ಲಿ ನಿಕ್ಷೇಪ್ 20ಕ್ಕೂ ಹೆಚ್ಚು ಪ್ರಶಸ್ತಿ ಜಯಿಸಿದ್ದಾರೆ. ಕೆಎಸ್‌ಎಲ್‌ಟಿಎ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಟೂರ್ನಿಗಳಲ್ಲಿಯೂ ಸಾಕಷ್ಟು ಪ್ರಶಸ್ತಿಗಳು ನಿಕ್ಷೇಪ್ ಮಡಿಲು ಸೇರಿವೆ.

ತಮಿಳುನಾಡಿನಲ್ಲಿ ಎಐಟಿಎ ರ‌್ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನ ಪಡೆದಿದ್ದರೆ, ತರಬೇತಿಗಾಗಿ ಅವರನ್ನು ವಿದೇಶಕ್ಕೆ ಕಳುಹಿಸಲಾಗುತ್ತದೆ. ಅದಕ್ಕೆ ತಮಿಳುನಾಡು ಟೆನಿಸ್ ಸಂಸ್ಥೆ (ಟಿಎನ್‌ಟಿಎ) ನೆರವು ನೀಡುತ್ತದೆ.

ಇಲ್ಲವೇ ವಿದೇಶಿ ಕೋಚ್‌ನಿಂದ ಭಾರತದಲ್ಲಿಯೇ ತರಬೇತಿ ನೀಡುವ ಕೆಲಸವನ್ನು ಆ ಸಂಸ್ಥೆ ಮಾಡುತ್ತದೆ. ನಮ್ಮ ರಾಜ್ಯದ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು.

ನಮ್ಮ ರಾಜ್ಯದ ಕೀರ್ತಿ ಹೆಚ್ಚಿಸಬೇಕು ಎನ್ನುವುದು ಅಲ್ಲಿಯ ಸಂಸ್ಥೆಯ ಉದ್ದೇಶ. ಆದೇ ರೀತಿ ರಾಜ್ಯದಲ್ಲಿ ಸೌಲಭ್ಯ ಕಲ್ಪಿಸಿದರೆ ಬೆಳೆಯುವ ಕನಸಿಗೆ ಹಾದಿ ತೋರಿದಂತಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.

ಕರ್ನಾಟಕ ಲಾನ್ ಟೆನಿಸ್ ಸಂಸ್ಥೆ ಕೆಲ ಸಲ ನೆರವು ನೀಡಿದೆ. ಆದರೆ ಅದು ವಿದೇಶಿ ಕೋಚ್‌ನಿಂದ ತರಬೇತಿ ಪಡೆಯಲು ಕಷ್ಟವಾಗುತ್ತದೆ ಎಂದು ನಿಕ್ಷೇಪ್ ಹೇಳುತ್ತಾರೆ.
ಆರಂಭದಲ್ಲಿ ಜೋಸೆಫ್ ದಾಸ್ ಹಾಗೂ ಸುಭಾಷ್ ದಾಸ್ ಅವರ ಬಳಿ ತರಬೇತಿ ಪಡೆಯುತ್ತಿದ್ದರು. ಈಗ ಅರ್ಜುನ್ ಗೌತಮ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

`ಗುರಿ ಮುಟ್ಟಲು ಕೇವಲ ಶ್ರಮ ಮಾತ್ರ ಸಾಲದು. ಅದಕ್ಕೆ ಅಗತ್ಯವಾದ ತರಬೇತಿ, ಆಪ್ತ ಸಲಹೆ ಸಹ ಅಗತ್ಯ. ಆ ಕಾರ್ಯವನ್ನು ಕೋಚ್ ಅರ್ಜುನ್ ಗೌತಮ್ ಮಾಡುತ್ತಿದ್ದಾರೆ. ಇದರಿಂದ ನನ್ನ ಕನಸನ್ನು ಖಂಡಿತವಾಗಿಯೂ ನನಸು ಮಾಡಿಕೊಳ್ಳುತ್ತೇನೆ~ ಎಂದು ನಿಕ್ಷೇಪ್ ವಿಶ್ವಾಸದಿಂದ ಹೇಳುತ್ತಾರೆ.

ಯಾವ ಟೆನಿಸ್ ಟೂರ್ನಿಯಿಂದ (ಫ್ರೆಂಚ್ ಓಪನ್ ಟೆನಿಸ್) ಪ್ರಭಾವಿತನಾದೆನೋ ಅದೇ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬೇಕು. ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಜಯಿಸಬೇಕು. ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆಲ್ಲಬೇಕು ಎನ್ನುವ ಕನಸು ನಿಕ್ಷೇಪ್‌ನದು. ಆದರೆ, 13 ವರ್ಷದ ಹುಡುಗನ ಈ ಎಲ್ಲಾ ಕನಸು ನನಸಾಗಲು ನೆರವು ಅಗತ್ಯವಿದೆ.

ಚಿತ್ರ: ಕಿಶೋರ್ ಕುಮಾರ್ ಬೋಳಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT