ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಸಾಕಾರವಾಗದ ಕನಸುಗಳು

Last Updated 6 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್ ಆದ ಆಸ್ಟ್ರೇಲಿಯಾ ಓಪನ್ ಟೆನಿಸ್ ಚಾಂಪಿಯನ್ ಷಿಪ್‌ನಲ್ಲಿ ಮತ್ತಷ್ಟು ಕನಸುಗಳು ನುಚ್ಚು ನೂರಾಗಿವೆ. ಪ್ರಶಸ್ತಿಯ ಕಡೆ ಆಸೆಯಿಂದ ನೋಡುತ್ತ ಹೆಣೆದುಕೊಂಡಿದ್ದ ಕನಸುಗಳು ಸಾಕಾರವಾಗದೆ ಹಲವರ ದುಃಖ ಉಮ್ಮಳಿಸಿದೆ.ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ಗಳೆರಡರಲ್ಲಷ್ಟೇ ಅಲ್ಲ ಪುರುಷರ ಡಬಲ್ಸ್‌ನಲ್ಲೂ ಆಕಾಂಕ್ಷಿಗಳ ಕನಸುಗಳು ನನಸಾಗಲಿಲ್ಲ. ಟೆನಿಸ್ ಪಂಡಿತರ ಲೆಕ್ಕಾಚಾರಗಳು ಬುಡ ಮೇಲಾದವು.

ಮೊದಲಿಗೆ ಪುರುಷರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದ ದಿಗ್ಗಜ ಸ್ಪೇನ್‌ನ ರಫೆಲ್ ನಡಾಲ್‌ಗೆ ಸತತವಾಗಿ ಎಲ್ಲಾ ನಾಲ್ಕು ಗ್ರ್ಯಾಂಡ್‌ಸ್ಲಾಮ್‌ಗಳನ್ನು ಗೆಲ್ಲುವ 42 ವರ್ಷಗಳ ಹಿಂದಿನ ಸಾಧನೆಯನ್ನು ಸರಿಗಟ್ಟುವ ಕನಸು ಕನಸಾಗಿಯೇ ಉಳಿಯಿತು. ಆಸ್ಟ್ರೇಲಿಯಾ ಓಪನ್‌ಗೂ ಮತ್ತು ನಡಾಲ್ ಗಾಯಕ್ಕೂ ಬಿಡಿಸಲಾಗದ ನಂಟಿರುವಂತಿದೆ. ಚಾಂಪಿಯನ್‌ಷಿಪ್‌ನಲ್ಲಿ ಗಾಯದ ಕಾರಣ ಕಳೆದ ವರ್ಷದಂತೆ ಈ ವರ್ಷವೂ ನಡಾಲ್ ಮುನ್ನಡೆಯಲು ಸಾಧ್ಯವಾಗಲಿಲ್ಲ.

ನಡಾಲ್ ನಿರ್ಗಮನದ ನಂತರ ಎರಡನೇ ಶ್ರೇಯಾಂಕದ ಮತ್ತು ಕಳೆದ ಬಾರಿಯ ಚಾಂಪಿಯನ್ ಸ್ವಿಟ್ಜರ್ಲೆಂಡಿನ ರೋಜರ್ ಫೆಡರರ್‌ರತ್ತ ಎಲ್ಲರ ಗಮನ ಹೋಯಿತು. ಆದರೆ ಆಗಿದ್ದೇ ಬೇರೆ. ಫೈನಲ್ ಕೂಡಾ ತಲುಪದೆ ಫೆಡರರ್ ಸೆಮಿಫೈನಲ್‌ನಲ್ಲೇ ಚಾಂಪಿಯನ್‌ಷಿಪ್‌ನಿಂದ ಹೊರಬಿದ್ದರು.

ಮೂರು ವರ್ಷಗಳ ಹಿಂದೆ ಆಸ್ಟ್ರೇಲಿಯಾ ಓಪನ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದಿದ್ದ ಸರ್ಬಿಯಾದ ನೊವಾಕ್ ಜೊಕೊವಿಕ್ ಮತ್ತು ಕಳೆದ ಬಾರಿ ರನ್ನರ್ ಅಪ್ ಆಗಿದ್ದ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಫೈನಲ್ ತಲುಪಿದಾಗ ಎಲ್ಲರ ಗಮನ ಮರ್ರೆ ಅವರತ್ತ ಹೊರಳಿತು.

ಏಕೆಂದರೆ ಇಂಗ್ಲೆಂಡ್ ದೇಶದ ಆಟಗಾರರು 75 ವರ್ಷಗಳಿಂದ ಈ ಪ್ರಶಸ್ತಿಯನ್ನು ಜಯಿಸಿರಲಿಲ್ಲ. ಸುದೀರ್ಘ ಕಾಲದ ನಂತರ ಮರ್ರೆ ತಮ್ಮ ದೇಶಕ್ಕೆ ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿಯನ್ನು ತಂದುಕೊಡುವುದರ ಜತೆಗೆ ಚೊಚ್ಚಲ ಗ್ರ್ಯಾಂಡ್‌ಸ್ಲಾಮ್ ಪಾರಿತೋಷಕ ಹಿಡಿದು ಕುಣಿದು ಕುಪ್ಪಳಿಸುವರೆಂದು ಎಣಿಸಲಾಗಿತ್ತು. ಆದರೆ ಮರ್ರೆ ಅವರ ಈ ಆಕಾಂಕ್ಷೆ ಈಡೇರಲಿಲ್ಲ.

2007ರಿಂದಲೂ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗಾಗಿ ದಿಗ್ಗಜರಾದ ಫೆಡರರ್ ಮತ್ತು ನಡಾಲ್ ವಿರುದ್ಧ ಸೆಣಸಾಡುತ್ತಿರುವ ಜೊಕೊವಿಕ್ ಹರ್ಷದಿಂದ ಎರಡನೇ ಬಾರಿ ಗ್ರ್ಯಾಂಡ್‌ಸ್ಲಾಮ್ ಪಾರಿತೋಷಕವನ್ನು ಸಂಭ್ರಮದಿಂದ ಎತ್ತಿ  ಹಿಡಿದರು. ‘ಈ ವರ್ಷ ಆಸ್ಟ್ರೇಲಿಯಾ ಓಪನ್  ಪ್ರಶಸ್ತಿಗಷ್ಟೇ ತೃಪ್ತಿಪಡುವುದಿಲ್ಲ. ಉಳಿದ ಮೂರೂ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗಾಗಿ ಹೋರಾಟ ನಡೆಸುವುದಾಗಿ’ ಜೊಕೊವಿಕ್ ಹೇಳಿದ್ದಾರೆ. 2007 ರಿಂದ ಅವರ ಸಾಧನೆ ನೋಡಿದರೆ ಅವರ ಮಾತು ಅತಿಶಯೋಕ್ತಿ ಎನಿಸುವುದಿಲ್ಲ.

2007ರಲ್ಲಿ ಜೊಕೊವಿಕ್ ಯುಎಸ್ ಓಪನ್   ಫೈನಲ್ ತಲುಪಿದಷ್ಟಕ್ಕೆ ತೃಪ್ತರಾಗಬೇಕಾಯಿತು. ಅದೇ ವರ್ಷ ಅವರು ಫ್ರೆಂಚ್ ಮತ್ತು ವಿಂಬಲ್ಡನ್‌ನಲ್ಲಿ ಸೆಮಿಫೈನಲ್ ತಲುಪಿದ್ದರು. ಮರು ವರ್ಷ ಅಂದರೆ 2008ರಲ್ಲಿ ಜೊಕೊವಿಕ್ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್‌ನಲ್ಲಿ ಫೆಡರರ್ ಅವರನ್ನು ಸೆಮಿಫೈನಲ್‌ನಲ್ಲೇ ಮಣಿಸಿ ನಂತರ ಫೈನಲ್‌ನಲ್ಲಿ ಶ್ರೇಯಾಂಕವಿಲ್ಲದೆ ಫೈನಲ್ ತಲುಪಿದ್ದ ಫ್ರಾನ್ಸ್‌ನ ಜೋ ವಿಲ್‌ಫ್ರೆಡ್ ಟೋಂಗಾ ವಿರುದ್ಧ ವಿಜಯ ಸಾಧಿಸಿ ಚೊಚ್ಚಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗಳಿಸಿದ್ದರು. ಆ ವರ್ಷ ಫ್ರೆಂಚ್ ಓಪನ್ ಸೆಮಿಫೈನಲ್ ತಲುಪಿದ್ದು ಉಳಿದ ಗ್ರ್ಯಾಂಡ್‌ಸ್ಲಾಮ್‌ಗಳಲ್ಲಿ    ಗಮನಾರ್ಹ ಸಾಧನೆ ತೋರಲಿಲ್ಲ.

2009ರಲ್ಲಿ ಮಂಕಾದ ಜೊಕೊವಿಕ್ 2010 ರಲ್ಲಿ ಪುಟಿದೆದ್ದು ಬಂದರು. ಯುಎಸ್ ಓಪನ್‌ನಲ್ಲಿ ರನ್ನರ್ ಅಪ್ ಆದ ಅವರು ವಿಂಬಲ್ಡನ್‌ನಲ್ಲಿ ಸೆಮಿಫೈನಲ್ ಹಂತಕ್ಕೆ ತಲುಪಿದ್ದರು. ಈ ವರ್ಷ ಅವರು ಶುಭಾರಂಭವನ್ನು ಮಾಡಿದ್ದು ಅದನ್ನು ವರ್ಷ   ಪೂರ್ತಿ ಮುಂದುವರೆಸುವರೇ ಎಂಬುದನ್ನು ಕಾದು ನೋಡಬೇಕಾದ ವಿಷಯ.

ಮಹಿಳೆಯರ ಸಿಂಗಲ್ಸ್‌ನಲ್ಲೂ ಲೆಕ್ಕಾಚಾರ ತಪ್ಪಿತು. ಡೆನ್ಮಾರ್ಕ್‌ನ ಕರೊಲಿನ್ ವೊಜ್ನಿಕಿಗೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕ ದೊರಕಿತ್ತು. ಕರೊಲಿನ್ ಇನ್ನೂ ಗ್ರ್ಯಾಂಡ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗಳಿಸಬೇಕಿದೆ. ಎರಡು ವರ್ಷಗಳ ಹಿಂದೆ ಯುಎಸ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದು ಇದುವರೆಗಿನ ಗರಿಷ್ಠ ಸಾಧನೆಯಾಗಿತ್ತು. ಆದರೆ ಅವರೂ ಫೈನಲ್ ಹಂತವನ್ನೂ ಪ್ರವೇಶಿಸಲಿಲ್ಲ.

ಆಸಕ್ತ ವಿಷಯವೆಂದರೆ ಈ ಬಾರಿ ಮಹಿಳೆಯರ ಸಿಂಗಲ್ಸ್ ಫೈನಲ್ ತಲುಪಿದ್ದ ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ ಮತ್ತು ಚೀನಾದ ಲೀ ನಾ ಇಬ್ಬರೂ ಕೂಡಾ ತಾಯಂದಿರಾಗಿರುವುದು ವಿಶೇಷ. 2008ರಲ್ಲಿ ತವರಿನಲ್ಲೇ (ಬೀಜಿಂಗ್) ನಡೆದ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಚಿನ್ನದ ಪದಕಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದ ಚೀನಾದ ಲೀ ನಾ ಗ್ರ್ಯಾಂಡ್‌ಸ್ಲಾಮ್‌ಗಳಲ್ಲಿ ಫೈನಲ್ ತಲುಪಿದ ಏಷ್ಯಾದ ಮೊದಲ ಮಹಿಳೆಯಾಗಿದ್ದಾರೆ. ಆದರೆ ಚೊಚ್ಚಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗಳಿಸುವ ಲೀ ನಾ ಅವರ ಮಹದಾಸೆ ಮಾತ್ರ ಈಡೇರಲಿಲ್ಲ.

ಕಿಮ್ ಕ್ಲೈಸ್ಟರ್ಸ್ ಮೊದಲ ಸಲ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಪಡೆದ ಹೆಗ್ಗಳಿಕೆ ಸಂಪಾದಿಸಿದರು. ಒಟ್ಟಾರೆ ಅವರು ನಾಲ್ಕನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಪಡೆದಂತಾಯಿತು. ಇನ್ನೊಂದು ಗಮನಾರ್ಹ ವಿಷಯವೆಂದರೆ 2005ರಲ್ಲಿ ಯುಎಸ್ ಓಪನ್‌ನಲ್ಲಿ ಮೊದಲ ಗ್ರ್ಯಾಂಡ್‌ಸ್ಲಾಮ್ ಪಡೆದ ಅವರು ನಂತರ 2007ರಲ್ಲಿ ತಮ್ಮ ನಿವೃತ್ತಿಯನ್ನು ಘೋಷಿಸಿದರು. ಮಗುವಿನ ತಾಯಿಯಾದ ನಂತರ ಎರಡು ವರ್ಷಗಳ ಬಳಿಕ 2009ರಲ್ಲಿ ಟೆನಿಸ್ ರಂಗಕ್ಕೆ ಪುನರಾಗಮವನ್ನು ಪ್ರಕಟಿಸಿದರಲ್ಲದೇ ಶ್ರೇಯಾಂಕವಿಲ್ಲದೆ ಯುಎಸ್ ಓಪನ್ ಪ್ರಶಸ್ತಿ ಗೆದ್ದು ಅಚ್ಚರಿ ಮೂಡಿಸಿದರು. ಅಷ್ಟೇ ಅಲ್ಲ ಮರು ವರ್ಷವು ಈ ಪ್ರಶಸ್ತಿಯನ್ನು ಉಳಿಸಿಕೊಂಡರು.

ಈ ವರ್ಷ ಅದನ್ನು ಉಳಿಸಿಕೊಂಡರೆ ಹ್ಯಾಟ್ರಿಕ್ ಸಾಧನೆ ಮಾಡಿದಂತಾಗುತ್ತದೆ. ಅಷ್ಟೇ ಅಲ್ಲ ತಾಯಿಯಾದ ನಂತರ ಅತ್ಯಂತ ಹೆಚ್ಚಿನ ಗ್ರ್ಯಾಂಡ್ ಸ್ಲಾಮ್ ಪಡೆದವರಾಗುತ್ತಾರೆ. ಈಗ ಅವರು ಮಾರ್ಗರೇಟ್ ಕೋರ್ಟ್ ಅವರಂತೆ ತಾಯಿ ಯಾದ ಬಳಿಕ ಮೂರನೇ ಗ್ರ್ಯಾಂಡ್‌ಸ್ಲಾಮ್ ಪಡೆದ ದಾಖಲೆ ಹೊಂದಿದ್ದಾರೆ.

ಸಿಗದ ಪ್ರಶಸ್ತಿ: ರಾಗ ದ್ವೇಷಗಳನ್ನು ಬೆಳೆಸಿಕೊಂಡಿರುವ ಭಾರತದ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಪುರುಷರ ಡಬಲ್ಸ್‌ನಲ್ಲಿ ಅಪ್ರತಿಮ ಆಟಗಾರರಾಗಿದ್ದಾರೆ. ಆದರೆ ಅವರು ಕೆಲ ಸಮಯ ಜತೆ ಇರುತ್ತಾರೆ ಮತ್ತೆ ಕೆಲವು ಸಲ ಬೇರ್ಪಡುತ್ತಾರೆ. ಇದು ಪ್ರತಿಕೂಲ ಪರಿಣಾಮವನ್ನುಂಟು ಮಾಡಿದೆ ಎಂದೇ ಹೇಳಬೇಕು.

ಇವರಿಬ್ಬರು ಒಂಬತ್ತು ವರ್ಷಗಳ ನಂತರ ಮತ್ತೆ ಜತೆಯಾಗಿದ್ದಾರೆ. ಈ ಜೋಡಿ ಗ್ರ್ಯಾಂಡ್‌ಸ್ಲಾಮ್‌ಗಳ ಪೈಕಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಮಾತ್ರ ಪ್ರಶಸ್ತಿ ಸಂಪಾದಿಸಿಲ್ಲ. ಈ ಬಾರಿ ಆ ಪ್ರಶಸ್ತಿಯನ್ನು ಜಂಟಿಯಾಗಿ ಪಡೆಯಬಹುದೆಂಬ ಆಸೆ ಮಾತ್ರ ಈಡೇರಲಿಲ್ಲ. ಜತೆಗೂಡಿದಕ್ಕೆ ರನ್ನರ್ ಅಪ್ ಆಗಿದಷ್ಟೇ ಲಾಭವಾಯಿತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT