ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್, ಸ್ಕೇಟಿಂಗ್‌ಗೆ ಸುಸಜ್ಜಿತ ಮೈದಾನ

Last Updated 2 ಜನವರಿ 2012, 8:15 IST
ಅಕ್ಷರ ಗಾತ್ರ

ಹಾವೇರಿ: ಯುವಕರನ್ನು ಕ್ರೀಡೆಯತ್ತ ಹೆಚ್ಚು ಆಕರ್ಷಿಸಲು ಜಿಲ್ಲಾ ಕೇಂದ್ರವಾದ ಹಾವೇರಿ ನಗರದಲ್ಲಿ ಜಿಲ್ಲಾ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಈಜುಗೊಳ, ಮಲ್ಟಿಜಿಮ್‌ನಂತಹ ವ್ಯವಸ್ಥೆಗಳಿದ್ದವು. ಇವುಗಳ ಸಾಲಿಗೆ ಸುಸಜ್ಜಿತ ಟೆನಿಸ್ ಮೈದಾನ, ರೋಲರ್ ಸ್ಕೇಟಿಂಗ್ ಮೈದಾನ, ಒಳಾಂಗಣ ಕ್ರೀಡೆಗಳಾದ ಟೇಬಲ್ ಟೆನ್ನಿಸ್ ಹಾಗೂ ಸ್ನೂಕರ್ ಟೇಬಲ್ ಶೀಘ್ರದಲ್ಲಿಯೇ ಸೇರ್ಪಡೆಯಾಗಲಿವೆ.

ಹೌದು, ನಗರಸಭೆ ನೀಡಿದ 80 ಲಕ್ಷ ರೂ.ಗಳ ಅನುದಾನದಲ್ಲಿ ಉಪ ವಿಭಾಗಾಧಿಕಾರಿ ರಾಜೇಂದ್ರ ಚೋಳಿನ್ ಅವರ ವಿಶೇಷ ಆಸಕ್ತಿಯ ಫಲವಾಗಿ ಈ ಎಲ್ಲ ಕ್ರೀಡೆಗಳಿಗೆ ಬೇಕಾದ ಮೈದಾನಗಳು ಸಿದ್ಧಗೊಂಡಿರುವುದು ಜಿಲ್ಲೆಯ ಕ್ರೀಡಾಸಕ್ತರಲ್ಲಿ ಸಂತಸ ಮೂಡಿಸಿದೆ.

ನಗರದ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿಯೇ ಮುನ್ಸಿಪಲ್ ಹೈಸ್ಕೂಲ್‌ಗೆ ಹೊಂದಿಕೊಂಡ ಬಯಲು ಜಾಗದಲ್ಲಿ ಈ ಎರಡು ಮೈದಾನಗಳು ನಿರ್ಮಾಣಗೊಂಡಿವೆ. ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಟೇಬಲ್ ಟನ್ನಿಸ್ ಹಾಗೂ ಸ್ನೂಕರ್ ಟೇಬಲ್ ಇಡಲಾಗಿದೆ.

ಒಂದಾದ ಎರಡು ಮೈದಾನ: ಟೆನಿಸ್ ಹಾಗೂ ರೋಲರ್ ಸ್ಕೇಟಿಂಗ್ ಮೈದಾನ ಗಳ ಜಾಗೆಯಲ್ಲಿ ಎರಡು ಟೆನಿಸ್ ಮೈದಾನಗಳನ್ನು ನಿರ್ಮಿಸಲು ಯೋಚಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ರಾಷ್ಟ್ರಮಟ್ಟದ ಗುಣಮಟ್ಟ ಹೊಂದಿರುವ ಎರಡು ಟೆನಿಸ್ ಕ್ರೀಡಾಂಗಣಗಳು ಸಿದ್ಧವಾಗುತ್ತಿದ್ದವು. ಆದರೆ, ಜಿಲ್ಲೆಯ ಕೆಲ ಕ್ರೀಡಾಸಕ್ತರು ಹಾಗೂ ಕ್ರೀಡಾ ಸಂಸ್ಥೆಗಳು ಒಂದೇ ಕ್ರೀಡೆಗೆ ಎರಡು ಮೈದಾನ ನಿರ್ಮಿಸುವುದು ಸರಿಯಲ್ಲ. ಅದೇ ಜಾಗ ಹಾಗೂ ಅನುದಾನದಲ್ಲಿ ಬೇರೆ ಬೇರೆ ಕ್ರೀಡೆಗಳಿಗೆ ಅನುಕೂಲವಾಗುವಂತೆ ಎರಡು ಕ್ರೀಡಾಂಗಣ ನಿರ್ಮಿಸುವಂತೆ ಒತ್ತಾಯಿಸಿದರು.

ಆಗ ಉಪ ವಿಭಾಗಾಧಿಕಾರಿ ರಾಜೇಂದ್ರ ಚೋಳನ್ ಅವರು ಎರಡು ಟೆನಿಸ್ ಮೈದಾನದ ಬದಲು. ಒಂದು ಟೆನಿಸ್ ಹಾಗೂ ಒಂದು ರೂಲರ್ ಸ್ಕೇಟಿಂಗ್ ಮೈದಾನ ತಯಾರಿಸಲು ನಿರ್ಧರಿಸಿದ ಪರಿಣಾಮ ಎರಡು ಪ್ರತ್ಯೇಕ ಸುಸಜ್ಜಿತ ಮೈದಾನಗಳು ಸಿದ್ಧಗೊಂಡಿವೆ. 

  ಕೇವಲ ಮೈದಾನಗಳಷ್ಟೇ ಅಲ್ಲದೇ ಮೈದಾನದ ಇಕ್ಕೆಲ ಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಅಲ್ಲದೇ ಕ್ರೀಡಾಂಗಣದ ಒಳಗಡೆ ನುಗ್ಗದಂತೆ ಸುವ್ಯವಸ್ಥಿತ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಕನಸು ನನಸು: ಬಹುದಿನಗಳಿಂದ ಜಿಲ್ಲೆಯಲ್ಲಿ ಟೆನಿಸ್ ಮೈದಾನ ನಿರ್ಮಿಸಬೇಕೆಂಬ ಕನಸು ಇತ್ತು. ಆದರೆ, ಅದು ಸಾಕಾರವಾಗಿರಲಿಲ್ಲ. ಈಗ ಟೆನಿಸ್ ಮತ್ತು ರೋಲರ್ ಸ್ಕೇಟಿಂಗ್ ಮೈದಾನ ನಿರ್ಮಾಣಗೊಂಡಿದ್ದು, ಟೆನಿಸ್ ಹಾಗೂ ಸ್ಕೇಟಿಂಗ್ ಪ್ರಿಯರ ಬಹುದಿನಗಳ ಕನಸು ನನಸಾದಂತಾಗಿದೆ ಎಂದು ಹ್ಯಾಂಡ್‌ಬಾಲ್ ಅಸೋಶಿಯಶನ್ ಕಾರ್ಯದರ್ಶಿ ಪ್ರಭು ಹಿಟ್ನಳ್ಳಿ ಹೇಳುತ್ತಾರೆ.

ಒಂದು ವಾರದಲ್ಲಿ ಉದ್ಘಾಟನೆ: ಕಳೆದ ಮೂರು ತಿಂಗಳಿನಿಂದ ನಡೆದ ಮೈದಾನ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಒಂದು ವಾರದಲ್ಲಿ ಉದ್ಘಾಟನೆ ಮಾಡುವ ಚಿಂತನೆ ನಡೆದಿದೆ ಎಂದು ಉಪವಿಭಾಗಾಧಿಕಾರಿ ರಾಜೇಂದ್ರ ಚೋಳನ್ ತಿಳಿಸುತ್ತಾರೆ.

ಯುವ ಜನಾಂಗ ಹಾಗೂ ಮಕ್ಕಳು ಕ್ರೀಡೆಯತ್ತ ಆಕರ್ಷಣೆಗೊಳ್ಳಬೇಕೆಂಬ ಸದುದ್ದೇಶದಿಂದ ಈ ಮೈದಾನಗಳನ್ನು ನಿರ್ಮಿಸಲಾಗಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಲು ಶ್ರಮಿಸಬೇಕೆಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT