ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಂಪಾಸ್ ರಸಕ್ಷಣಗಳು!

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬಾಲು ಮತ್ತು ರಾಣಿ ಅವರ ಬರಹಗಳ ಯುಗಳ ‘ಟೈಮ್ ಪಾಸ್ ಮಾಡಿ’ ಬ್ಲಾಗು (nakkunali.blogspot.in). ‘ಮಾಡೋಕೆ ಏನು ಕೆಲಸ ಇಲ್ಲದೇ ಇದ್ದಾಗ, ಬೋರ್ ಆಗ್ತಾ ಇದೆ ಅಂದಾಗ, ಮ್ಯಾನೇಜರ್ ತಲೆ ಮೇಲೆ ಕೂತು ತಲೆ ಕೆಡಿಸಿದಾಗ... ತುಟಿಗಳ ಮೇಲೆ ಕಿರು ನಗೆಗೆ... ಈ ಬ್ಲಾಗ್’ ಎನ್ನುವುದು ಬ್ಲಾಗಿಗರ ಒಕ್ಕಣೆ. ಈ ಒಕ್ಕಣೆ ನೋಡಿ ಬಾಲು ಮತ್ತು ರಾಣಿ ಅವರಿಗೆ ಮಾಡಲಿಕ್ಕೆ ಕೆಲಸವಿಲ್ಲ ಎಂದು ಭಾವಿಸಿದರೆ ತಪ್ಪು. ತಮ್ಮ ವೃತ್ತಿಯ ಬಗ್ಗೆ ಬಾಲು ಅವರು ಬಾಯಿ ಬಿಟ್ಟಿಲ್ಲವಾದರೂ ಅವರ ಪ್ರವೃತ್ತಿಗಳ ಪಟ್ಟಿಯೇ ಸಾಕಷ್ಟು ಉದ್ದವಾಗಿದೆ. ರಾಣಿ ಅವರು ‘ಕೆಎಂಎಸ್’ನಲ್ಲಿ (ಕಸ ಮುಸುರೆ ಸರ್ವೀಸ್) ಬಿಡುವು ಕಳೆದುಕೊಂಡವರು.

‘ಉತ್ತಮ ಪತಿ ಎಂದೆನಿಸಿಕೊಳ್ಳಲು...’, ‘ಪರಿಪೂರ್ಣ ಕಾಫಿಗೆ 9 ಸೂತ್ರಗಳು’– ಇಂಥ ಸಾಕಷ್ಟು ಬರಹಗಳು ಬ್ಲಾಗಿನಲ್ಲಿವೆ. ಈ ಬರಹಗಳನ್ನು ಟೈಂಪಾಸ್ ಬರಹಗಳೆಂದು ನಕ್ಕು ಸುಮ್ಮನಾಗುವಂತಿಲ್ಲ. ಇಂಥ ಟೈಂಪಾಸ್ ಕ್ಷಣಗಳ ಜೊತೆಗೇ ನಮ್ಮ ದೈನಿಕದ ಅನೇಕ ರಸಕ್ಷಣಗಳು ತಳುಕು ಹಾಕಿಕೊಂಡಿರುತ್ತವೆ.

ಬಾಲು ಅವರ ಬರಹಕ್ಕೊಂದು ನವಿರುತನವಿದೆ. ‘ಕಾಮೆಂಟರಿ’ ಎನ್ನುವ ಬರಹವನ್ನು ನೋಡಿ. ‘ನನ್ನ ಅಖಂಡ ಪ್ರೇಮಕ್ಕೆ ಈಗ 15 ವರ್ಷ ಮೇಲಾಯಿತು’ ಎಂದು ಕಾಮೆಂಟರಿ ಆರಂಭಿಸುವ ಅವರು– ‘‘ಅಂದು ಬಾಂಬೆಯಲ್ಲಿ ಭಾರತ ಮತ್ತೆ ಆಸ್ಟ್ರೇಲಿಯಾ ವರ್ಲ್ಡ್ ಕಪ್ ಮ್ಯಾಚ್ ನಡೀತಾ ಇತ್ತು. ಅಂದು ಸಂಜೆ ನಾನು ಸಂಧ್ಯಾವಂದನೆ ಅದೆಷ್ಟು ವೇಗವಾಗಿ ಮಾಡಿದೆನೋ? ಮುಗಿಸಿ, ದೇವರ ಕೋಣೆಯಿಂದ ಹೊರಬರುವಾಗ ಕಂಡಿದ್ದು ಸಚಿನ್ ಸಿಕ್ಸ್ ಎತ್ತಿದಾಗ ಕುಣಿಯುತ್ತಿದ್ದ ನಿನ್ನ ಮುಂಗುರುಳು! ಅಂದು ಮನೆಯಲ್ಲಿ ಎಲ್ಲರಿಗೂ ಇಂಡಿಯಾ ಸೋತಿತಲ್ಲ ಅಂತ ನಿದ್ದೆ ಬಾರದೆ ಇದ್ರೆ, ನನಗೆ ಬೇರಾವುದೋ ಕಾರಣದಿಂದ ನಿದ್ರೆ ಬರಲಿಲ್ಲ!

ಅಂದಿನಿಂದ ಪ್ರತಿ ಮ್ಯಾಚ್ ನೋಡಲು ನೀನು ನಮ್ಮ ಮನೆಗೆ ಬರತೊಡಗಿದೆ. ನಂತರ ಪಾಕಿಸ್ತಾನದ ಮೇಲೆ ಬೆಂಗಳೂರಿನಲ್ಲಿ ಪಂದ್ಯ. ಅಂದು ಜಡೇಜ ಹೊಡೆದ ಎರಡು ಸಿಕ್ಸರಿಗೆ ನಾವಿಬ್ಬರೂ ಕೈ ಕೈ ತಟ್ಟಿ ಚಪ್ಪಾಳೆ ಹೊಡೆದಿದ್ದವು. ಅದೇ ನಿನ್ನ ಮೊದಲ ಸ್ಪರ್ಶ. ನಂತರ ಸೆಮೀನಲ್ಲಿ ಶ್ರೀಲಂಕಾ ಮೇಲೆ ಇಂಡಿಯಾ ಸೋತಿತು, ಆದರೆ ನಂಗೆ ನಿನ್ನ ಮೇಲೆ ಆಕರ್ಷಣೆ ಜಾಸ್ತಿ ಆಗಿತ್ತು’’– ಹೀಗೆ, ಕಾಮೆಂಟರಿ ಮುಂದುವರಿಯುತ್ತದೆ. ಪ್ರೇಮದಾಟದ ಪೂರ್ಣ ವಿವರಗಳನ್ನು ಬಿಡುವು ಮಾಡಿಕೊಂಡು ಬ್ಲಾಗಿನಲ್ಲೇ ಗಮನಿಸಬಹುದು.

‘ಪ್ರೇಮಂ ಮಧುರಂ’ ಎನ್ನುವುದು ಮತ್ತೊಂದು ನವಿರು ಬರಹ. ಕಾಲೇಜು ದಿನಗಳ ಹರಿಹರಯದ ಮನಸ್ಸುಗಳ ಕಣ್ಣಾಮುಚ್ಚಾಲೆಯನ್ನು ಪರಿಣಾಮಕಾರಿಯಾಗಿ ಕಾಣಿಸುವ ಬರಹವಿದು. ಇದರ ಒಂದು ಭಾಗ ನೋಡಿ:

‘ಸತ್ತಳು ಈಕೆ :
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಅರರೆ... ಬೀರುವಿನಲ್ಲಿ ಏನೋ ಹುಡುಕುತ್ತಿದ್ದಾಗ ಅಕಸ್ಮಾತ್ ಕೈಗೆ ಸಿಕ್ಕ ಕಾಗದದ ಚೂರು ‘ಅವ್ವ’– ವಿಶ್ವನ ಮನಸ್ಸು ದಶಕಗಳಷ್ಟು ಹಿಂದಕ್ಕೆ ಹೋಯಿತು.

ಅಂದು ಕಾಲೇಜಿನ ಬೇಲಿ ಹಾರುವಾಗ ವಿಶ್ವ ಮತ್ತೆ ಪಾರಿಯ ಪ್ಯಾಂಟು ಸ್ವಲ್ಪ ಹರಿಯಿತು! ಆದರೇನಂತೆ. ಆಗಲೂ ಹುಡುಗರ ಶೀಲಕ್ಕೆ ಅಷ್ಟು ಬೆಲೆ ಏನೂ ಇರಲಿಲ್ಲವಾದ್ದರಿಂದ ಹಂಗೇ ಕ್ಲಾಸಿಗೆ ಸೈನ್ಯ ನುಗ್ಗಿತು. ಬೆಳ್ಳಂ ಬೆಳಗ್ಗೆ ಕನ್ನಡ! ಪಾಪ ದೇವರಾಜ್ ‘ಅವ್’ ಶುರು ಮಾಡಿದರು. ಆದ್ರೆ ಸ್ವಲ್ಪ ಹೊತ್ತಿನಲ್ಲೇ ಪಾರಿ, ನೀವು ಪದ್ಯದ ಆಶಯ ಹಾಳು ಮಾಡುತ್ತಿದ್ದೀರಿ ಅಂತ ವರಾತ ತೆಗೆದ. ಇದ್ದಕ್ಕಿದ್ದಂತೆ ಹುಡುಗಿಯರ ಗುಂಪಿನಿಂದ  ಅಂಬಿಕೆ ನಿನ್ನ ಆಲೋಚನೆ ಸರಿಯಿಲ್ಲ ಅಂತ ಎದ್ದು ನಿಂತಳು. (ಭಾಗಶಃ, ಪೂರ ಹೆಸರು ಅಂಬಿಕ, ಅಂಬಾಲಿಕ ಅಂತ ಏನೋ ಇದ್ದಿರಬಹುದು. ಹುಡುಗರಿಗೆ ಅಂಬಿ, ಅಂಬಿಕೆ ಆಗಿದ್ದಳು.) ಪಾರಿ ಅರ್ಥಾತ್ ಪಾರ್ಥಸಾರಥಿ ಹಂಗೆಲ್ಲ ಸೋಲು ಒಪ್ಪಿಕೊಳ್ಳುವವನೇ ಅಲ್ಲ. ಮಾತು ಮುಂದುವರಿಯಿತು, ಗೃಹಭಂಗದಿಂದ ಶುರು ಆಗಿ, ಮ್ಯಾಕ್ಸಿಂ ಗಾರ್ಕಿಯ ಮದರ್ ತನಕ ಹೋಯಿತು.

ನೋಟ್ಸ್ ಮಾಡಿಕೊಳ್ಳುವ ನೆಪದಲ್ಲಿ ಚುಕ್ಕಿ ಆಡುತ್ತಿದ್ದ ಹುಡುಗಿಯರೆಲ್ಲ ಕತ್ತು ಎತ್ತಿ ನೋಡಲಾರಂಬಿಸಿದರು. ಮಿಕ್ಕ 8 ಜನ ಹುಡುಗರು ಪಾರಿ ಮಾತಿಗೆ ಡಿಟಿಎಸ್ ಎಫೆಕ್ಟ್ ಮೂಲಕ ಬೆಂಬಲ ಸೂಚಿಸಿದರು (ಕ್ಲಾಸಿನಲ್ಲಿ ಇದ್ದಿದ್ದೆ 9 ಜನ ಹುಡುಗ್ರು). ಗಲಾಟೆ ಜಾಸ್ತಿ ಆಗಿ ಪಕ್ಕದ ಕ್ಲಾಸಿಗು ಕೇಳಿಸಿತು, ಪ್ರಿನ್ಸಿಪಾಲ್ ರಮೇಶ್ ಕಿವಿಗೂ ಬಡಿಯಿತು. ಯಾವಾಗಲೂ ಹೊಡೆದಾಟ ಬಡಿದಾಟಗಳಿಗೆ ಪ್ರಸಿದ್ಧವಾದ ಭದ್ರಾವತಿಯಲ್ಲಿ, ಹುಡುಗರು ಪಾಠದ ಬಗ್ಗೆ ಚರ್ಚಿಸುವುದು ಕಂಡು ಖುಷಿಪಟ್ಟರು! ಆದ್ರೆ ದೇವರಾಜ್ ಮಾತ್ರ ಏನೂ ಮಾಡಲು ತೋಚದೆ ಗರ ಬಡಿದವರಂತೆ ನಿಂತಿದ್ದರು. ಕೊನೆಗೆ ಕವನ ಏನಾಯಿತೋ, ಪಾರಿ –ಅಂಬಿ ಮಾತ್ರ ಒಳ್ಳೆ ದುಶ್ಮನ್ ಆದರು!

ಆದ್ರೆ ನಮ್ಮೂರಿನ ಲಕ್ಷ್ಮೀನರಸಿಂಹನ ದಯಯೋ ಏನೋ, ಇದ್ದಕಿದ್ದಂತೆ ಒಂದು ದಿನ ಜನಪ್ರಿಯ ಶಾಸಕರು ನಾಪತ್ತೆ ಆಗಿದ್ದಾರೆ, ಕಿಡ್ನಾಪ್ ಆಗಿದ್ದಾರೆ ಅಂತೆಲ್ಲಾ ಗುಲ್ಲೆದ್ದಿತು. ಕೂಡಲೇ ಶಾಲೆ – ಕಾಲೇಜು ಮುಚ್ಚಲು ಆದೇಶ ಬಂತು. ನವಗ್ರಹಗಳೆಂದು ಹೆಸರುವಾಸಿಯಾಗಿದ್ದ ಹುಡುಗರಿಗೆ ಹುಡುಗಿಯರನ್ನು ಸುರಕ್ಷಿತವಾಗಿ ಮನೆ ತಲುಪಿಸಲು ಪ್ರಿನ್ಸಿಪಾಲ್ ಹೇಳಿದರು. ಬಸ್ಸು, ಆಟೋ ಏನೂ ಇಲ್ಲದ್ದರಿಂದ ನಡೆದೇ ಹೋಗಬೇಕಾಯಿತು. ದುರಂತಕ್ಕೆ ಪಾರಿಗೆ ಅಂಬಿಕಾಳನ್ನು ಮನೆಗೆ ತಲುಪಿಸುವ ಜವಾಬ್ದಾರಿ ನೀಡಲಾಯಿತು. (ಅವರಿಬ್ಬರಿಗೂ ಇಷ್ಟವಿರಲಿಲ್ಲ )

ಪ್ರಪಂಚ ಎಷ್ಟು ಬೇಗ ಬದಲಾಗುತ್ತೆ ಅಂತ ಕಾಲೇಜಿಗೆ ಪ್ರಾತ್ಯಕ್ಷಿಕವಾಗಿ ಗೊತ್ತಾಗಿದ್ದು, ಮಾರನೇ ದಿನ ಪಾರಿ – ಆಂಬೀನ ಒಟ್ಟಿಗೆ ನೋಡಿದಾಗ. ಅವನಂಥ ಬ್ರಹ್ಮಚಾರಿ ಜೊತೆ ಒಂದು ಸುಂದರ ಹುಡುಗಿ ನೋಡಿದಾಗ, ವಿಜ್ಞಾನಿಗಳು ಹೇಳಿದ್ದಕ್ಕಿಂತ ಜೋರಾಗಿ ಕಾಲಡಿಯ ಭೂಮಿ ತಿರುಗ್ತಾ ಇದೆ ಅಂತ ಎಲ್ಲರಿಗೂ ಭಾಸ ಆಯಿತು’’.

‘ಪರಿಪೂರ್ಣ ಕಾಫಿಗೆ 9 ಸೂತ್ರಗಳು’ ಎನ್ನುವ ಇನ್ನೊಂದು ಬರಹ ಗಮನಿಸಿ. ಕಲಗಚ್ಚು ಕಾಫಿ ಕುಡಿಯುವ ಅನಿವಾರ್ಯತೆ ಬಗ್ಗೆ ಅನುಕಂಪ ಸೂಚಿಸುತ್ತಲೇ, ಒಳ್ಳೆಯ ಕಾಫಿ ತಯಾರಿಸಲು ಅಗತ್ಯವಾದ ಒಂಬತ್ತು ಸೂತ್ರಗಳನ್ನು ಬ್ಲಾಗಿಗರು ಪಟ್ಟಿ ಮಾಡುತ್ತಾರೆ.

ಕೊನೆಗೆ, ಬಾಲಂಗೋಚಿ ರೂಪದಲ್ಲಿ– ‘ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತು ಅಂದ್ರೆ, ಮದುವೆಯೇ ಆಗುವುದಿಲ್ಲ ಎನ್ನುವ ನನ್ನ ಶಪಥ ಸಡಿಲು ಆಗುವುದಕ್ಕೆ ಹುಡುಗಿ ನೋಡಲು ಹೋದಾಗ ಸಿಕ್ಕ ರುಚಿಕರ ಕಾಫಿಯೇ ಕಾರಣ ಎಂದು ಅನ್ನಿಸಲು ಶುರು ಆಗಿದ್ದರಿಂದ’. ಕಾಫಿ ಡೇಗಳಲ್ಲಿ ಪ್ರೇಮ ಚಿಗುರುವುದನ್ನು, ಕೆಲವೊಮ್ಮೆ ಪ್ರೇಮದ ಚಿಗುರು ಕಮರುವುದನ್ನು ಕೇಳಿದ್ದೇವೆ, ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ, ಕಾಫಿ ರುಚಿ ನೋಡಿ ಹುಡುಗಿಯನ್ನು ಮೆಚ್ಚಿಕೊಂಡವರು ಬಾಲು ಒಬ್ಬರೇ ಇರಬೇಕು.

ಹೀಗೆ, ಹಲವು ರುಚಿಕರ ಬರಹಗಳ ಕಾರಣದಿಂದಾಗಿ  ‘ಟೈಮ್ ಪಾಸ್ ಮಾಡಿ’ ಓದು ಅರ್ಥಪೂರ್ಣ ಟೈಂಪಾಸ್ ಎನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT