ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈರ್‌ಗೆ ಬೆಂಕಿ: ಪರಿಸರ, ರಸ್ತೆ ಹಾಳು..

Last Updated 8 ಅಕ್ಟೋಬರ್ 2012, 7:45 IST
ಅಕ್ಷರ ಗಾತ್ರ

ಮಂಡ್ಯ: ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಪ್ರತಿಭಟನೆಗಳು ಹೆಚ್ಚುತ್ತಲೇ ಇವೆ. ಆದರೆ, ಕೆಲ ಪ್ರತಿಭಟನಾಕಾರರು ರಸ್ತೆಗಳಲ್ಲಿ ಟೈರ್ ಸುಡುವ ಮೂಲಕ ಪರಿಸರ ಹಾಗೂ ರಸ್ತೆ ಹಾಳು ಮಾಡುತ್ತಿರುವುದಕ್ಕೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಅ.6 ರಂದು ನಗರದ ಪ್ರತಿ ಬಡಾವ ಣೆಗಳಲ್ಲಿಯೂ ಟೈರ್‌ಗಳನ್ನು ರಸ್ತೆಯ ಮೇಲೆ ಹಾಕಿ ಬೆಂಕಿ ಹಚ್ಚಲಾಗಿತ್ತು. ನೂರಡಿ ರಸ್ತೆ, ಬೆಂಗಳೂರು- ಹೆದ್ದಾರಿ, ವಿ.ವಿ. ರಸ್ತೆಗಳಲ್ಲಿ ಅಡಿಗೆ ಒಂದರಂತೆ ಬೆಂಕಿ ಹಾಕಲಾಗಿತ್ತು.

ಕೆಟ್ಟ ವಾಸನೆ ಹಾಗೂ ದಟ್ಟವಾದ ಹೊಗೆ ಉಗುಳುತ್ತಾ ಟೈರ್‌ಗಳು ಹೊತ್ತಿ ಉರಿಯುತ್ತಿದ್ದವು. ಯುವ ಸಮೂಹವೇ ಹೆಚ್ಚಿನ ಪ್ರಮಾಣದಲ್ಲಿ ಈ ಕೃತ್ಯದಲ್ಲಿ ತೊಡಗಿರುವುದು ಕಂಡು ಬಂದಿತು.

ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ವೃತ್ತ ಪ್ರತಿಭಟನೆಯ ಕೇಂದ್ರ ಬಿಂದುವಾಗಿದೆ. 23 ದಿನಗಳಿಂದ ಆ ವೃತ್ತದಲ್ಲಿ ಒಂದಲ್ಲ, ಒಂದು ಸಂಘಟನೆಗಳು ಪ್ರತಿಕೃತಿ ದಹನ, ಕಟ್ಟಿಗೆ ಹಾಕಿ ಬೆಂಕಿ ಹಚ್ಚುವಂತಹ ಕೆಲಸವನ್ನು ಮಾಡುತ್ತಲೇ ಇವೆ. ನಗರದ ಬಹುತೇಕ ರಸ್ತೆಗಳಲ್ಲಿ ಈ ಕಾರ್ಯ ನಡದೇ ಇದೆ. ತಾಲ್ಲೂಕು ಕೇಂದ್ರಗಳೂ ಇದಕ್ಕೆ ಹೊರತಾಗಿಲ್ಲ. ಡಾಂಬರು ರಸ್ತೆಗಳ ಮೇಲೆ ಬೆಂಕಿ ಹಚ್ಚುವುದರಿಂದ ರಸ್ತೆ ಹಾಳಾಗಲಿದೆ. ಈ ಕುರಿತು ಬಹುತೇಕ ಸಂಘಟನೆಗಳು ಚಿಂತನೆ ಮಾಡುತ್ತಿಲ್ಲ.

ಟಯರ್‌ಗಳು ಗಂಟೆಗಟ್ಟಲೇ ಉರಿಯುತ್ತವೆ. ಕಾರ್ಬನ್ ಡೈ ಆಕ್ಸೈಡ್ ಉಗುಳುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಜತೆಗೆ ಆ ರಸ್ತೆಯಲ್ಲಿ ಸಂಚರಿಸುವವರಿಗೆ ಯಮ ಹಿಂಸೆಯಾಗುತ್ತದೆ. ಅಸ್ತಮಾ ತೊಂದರೆಯಿಂದ ಬಳಲುತ್ತಿರುವವರ ಪರಿಸ್ಥಿತಿಯಂತೂ ಕೇಳುವುದೇ ಬೇಡ ಎನ್ನುವಂತಾಗಿದೆ. ಟೈರ್ ಸುಟ್ಟು ಉಂಟಾಗಿರುವ ಕಪ್ಪು ಬೂದಿ ರಸ್ತೆಗಳಲೆಲ್ಲ ಹರಡಿಕೊಂಡಿದೆ. ಮುಂದೆ ಒಂದು ವಾಹನ ಹೋಗುತ್ತಿದ್ದಂತೆಯೇ ಮೇಲೇಳುವ ಬೂದಿಯು ಹಿಂದಿನ ವಾಹನ ಸವಾರರ ಮೈಗೆಲ್ಲಾ ಮೆತ್ತಿಕೊಳ್ಳುತ್ತಿದೆ. ಕಣ್ಣಿಗೂ ಬೀಳುತ್ತಿದೆ.

ಟೈರ್‌ಗಳಿಗೆ ಬೆಂಕಿ ಹಚ್ಚಿರುವ ರಸ್ತೆಯಲ್ಲಿ ಹೋದರೆ ಉಸಿರಾಡುವುದೇ ಕಷ್ಟವಾಗುತ್ತಿದೆ. ಒಂದು ಕ್ಷಣ ಉಸಿರುಕಟ್ಟಿದ ಅನುಭವವಾಗುತ್ತದೆ. ಹೋರಾಟಕ್ಕೆ ಬೆಂಬಲ ನೀಡಲಿ. ಆದರೆ, ಟಯರ್ ಸುಡುವ ಮೂಲಕ ಬೇಡ ಎನ್ನುತ್ತಾರೆ ಮಂಡ್ಯ ನಗರ ನಿವಾಸಿ ಮಂಜುನಾಥ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT