ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ರಸ್ತೆಗೆ ಸುರಿದು ಪ್ರತಿಭಟನೆ

Last Updated 28 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಹಿರಿಯೂರು:‘ಹೊಲದಲ್ಲಿ ಬೆಳೆದು ನಿಂತಿರುವ ಟೊಮೆಟೊ ಹಣ್ಣನ್ನು ಕಿತ್ತರೂ ನಷ್ಟ, ಕೀಳದಿದ್ದರೂ ನಷ್ಟ. ರೈತರ ಗೋಳನ್ನು ಕೇಳುವವರೇ ಇಲ್ಲ. ಇಡೀ ವ್ಯವಸ್ಥೆ ರೈತರ ಬೆನ್ನು ಮುರಿಯಲು ಹೊರಟಂತಿದೆ’.ಸೋಮವಾರ ಬೆಳಿಗ್ಗೆ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಟೊಮೆಟೊ ರಸ್ತೆಗೆ ಸುರಿದ ತಾಲ್ಲೂಕಿನ ರೈತನ ಆಕ್ರೋಶದ ಮಾತುಗಳಿವು.ಹಾಲುಮಾದೇನಹಳ್ಳಿ, ಅರಿಶಿಣಗುಂಡಿ, ಗೋಕುಲನಗರ ಗ್ರಾಮಗಳಿಂದ ಟೊಮೆಟೊ ಮಾರಾಟಕ್ಕೆ ಬಂದಿದ್ದ ರಂಗಸ್ವಾಮಿ, ರಾಜಪ್ಪ, ಚರಣ್‌ರಾಜ್, ಕೃಷ್ಣಪ್ಪ, ರಂಗಪ್ಪ, ಮೂಡ್ಲಪ್ಪ,ಮಂಜುನಾಥ ಮುಂತಾದ ರೈತರ ಮುಖದಲ್ಲಿ ಅಸಹನೆ ಮನೆ ಮಾಡಿತ್ತು.

ಹಣ್ಣು ಕೀಳುವ ಮಹಿಳಾ ಕೂಲಿಕಾರರಿಗೆ ದಿನಕ್ಕೆ ಕನಿಷ್ಠ 70 ರೂ. ಕೊಡಬೇಕು. ಹಣ್ಣನ್ನು ತುಂಬಲು ಬುಟ್ಟಿ ಅಥವಾ ಚೀಲ, ಬಸ್ ಅಥವಾ ಟೆಂಪೋ ಬಾಡಿಗೆ, ನಗರಕ್ಕೆ ಬಂದರೆ ಪುರಸಭೆಯವರು ಯಾವ ಸೌಲಭ್ಯ ಕಲ್ಪಿಸದಿದ್ದರೂ ಚೀಲವೊಂದಕ್ಕೆ ಜಕಾತಿ ಹೆಸರಲ್ಲಿ ಕೀಳುವ 2ರಿಂದ 5 ರೂಪಾಯಿ. ಸಸಿ ಕೊಳ್ಳಲು, ನಾಟಿ ಮಾಡಲು, ಔಷಧಿ ಹೊಡೆಯಲು ಇತ್ಯಾದಿ ಖರ್ಚುಗಳನ್ನು ಲೆಕ್ಕ ಹಾಕಿದರೆ, ಕನಿಷ್ಠ ಪ್ರತಿ ಎಕರೆಗೆ 40 ಸಾವಿರ ರೂ ಆಗುತ್ತದೆ ಎಂದು ರೈತರು ತಮ್ಮ ನೋವನ್ನು ಸುದ್ದಿಗಾರರ ಜೊತೆ ಹೇಳಿಕೊಂಡರು.

15ರಿಂದ 20 ಕೆಜಿ ತೂಕದ ಚೀಲ ಅಥವಾ ಬುಟ್ಟಿಯನ್ನು ಇಂದು 10 ರೂಪಾಯಿಗೆ ಕೇಳಿದರು. ಈ ದರಕ್ಕೆ ಹಣ್ಣು ಮಾರಿದರೆ, ಹಣ್ಣು ಕೀಳುವ ಕೂಲಿಯೂ ಗಿಟ್ಟುವುದಿಲ್ಲ. ಇದರ ನಡುವೆ ಮಧ್ಯವರ್ತಿಗಳ, ಪುರಸಭೆಯವರ ಹಾವಳಿ ಸಹಿಸಲು ಅಸಾಧ್ಯ. ಹೀಗಾಗಿ ಬೇಸರಗೊಂಡು ಹಣ್ಣನ್ನು ರಸ್ತೆಗೆ ಸುರಿಯುವ ತೀರ್ಮಾನಕ್ಕೆ ಬಂದೆವು ಎಂದು ರೈತರು ತಿಳಿಸಿದರು.

ಒಂದು ಬುಟ್ಟಿಗೆ ಕನಿಷ್ಠ 50 ರೂಪಾಯಿ ದರವಾದರೂ ಸಿಕ್ಕರೆ ರೈತ ಸ್ವಲ್ಪಮಟ್ಟಿಗೆ ಉಸಿರಾಡಬಹುದು. ಇಲ್ಲವಾದರೆ ಹಾಕಿದ ಬಂಡವಾಳ ಮೈಮೇಲೆ ಬರುತ್ತದೆ. ಸರ್ಕಾರ ಟೊಮೆಟೋ ಹಣ್ಣಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಹಣ್ಣನ್ನು ಕೆಡದಂತೆ ಸಂಗ್ರಹಿಸಲು ಶೈತ್ಯಾಗಾರ ಸ್ಥಾಪಿಸಬೇಕು. ಪುರಸಭೆಯವರು ತೆರಿಗೆ ವಸೂಲಿ ಮಾಡಿದ ಮೇಲೆ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT