ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕನ್ ರಕ್ಷಣೆಯಲ್ಲಿ ಸಾರಿಗೆ ಇಲಾಖೆ ಸೋರಿಕೆ

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ, ರಾಜ್ಯ ಸರ್ಕಾರಗಳ ಕಾನೂನುಗಳು, ಸುಪ್ರೀಂಕೋರ್ಟ್ ತೀರ್ಪು ಯಾವುದಕ್ಕೂ ರಾಜ್ಯದೊಳಗೆ ಸರಕು ಸಾಗಣೆ ವಾಹನಗಳಲ್ಲಿ ಅತಿಯಾದ ಭಾರ ಸಾಗಣೆ ತಡೆಯುವ ಶಕ್ತಿ ಇಲ್ಲ! ಕಾರಣ, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿತ್ಯವೂ ಕೋಟ್ಯಂತರ ರೂಪಾಯಿ `ಆದಾಯ~ ತರುತ್ತಿರುವ ಈ ದಂದೆ `ಮುಂಬೈ ಲಕ್ಷ್ಮಿ~ ಲಾಟರಿ ಟಿಕೆಟ್ ತುಣುಕಿನ ಮೇಲೆ ನಿಂತಿದೆ.

ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರು ತಾವೇ ನಕಲಿ ಪರವಾನಗಿ ಮುದ್ರಿಸಿ ಅದಿರು ಸಾಗಿಸುತ್ತಿದ್ದುದು ಎಲ್ಲರಿಗೂ ಗೊತ್ತು. ಅದೇ ಮಾದರಿಯಲ್ಲಿ ಲಾಟರಿ ಟಿಕೆಟ್‌ನ ತುಣುಕು ಮತ್ತು ರಹಸ್ಯ ಸಂಕೇತವುಳ್ಳ ನೋಟಿನ ಮೂಲಕ ಅತಿಯಾದ ಭಾರ ಸಾಗಣೆಗೆ ಅಘೋಷಿತ ಪರವಾನಗಿ ನೀಡುವ ಜಾಲ ಸಾರಿಗೆ ಇಲಾಖೆಯಲ್ಲಿ ಸಕ್ರಿಯವಾಗಿದೆ. ಸಾರಿಗೆ ಇಲಾಖೆ ತನಿಖಾ ಠಾಣೆಗಳಲ್ಲಿರುವ ಮೋಟಾರು ವಾಹನ ನಿರೀಕ್ಷಕರೇ (ಎಂವಿಐ) ಈ ಜಾಲದ ಸೂತ್ರದಾರರು.

ಸಾರಿಗೆ ಇಲಾಖೆಯ ನಿಯಮಗಳ ಪ್ರಕಾರ ಆರು ಚಕ್ರದ ಲಾರಿಯಲ್ಲಿ ಗರಿಷ್ಠ ಹತ್ತು ಟನ್ ಸರಕು ಸಾಗಿಸಬಹುದು. 10 ಚಕ್ರದ ಲಾರಿಯಲ್ಲಿ 16 ಟನ್, 12 ಚಕ್ರಗಳ ಲಾರಿಯಲ್ಲಿ 21 ಟನ್ ಸಾಗಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಅನುಕ್ರಮವಾಗಿ 20, 40, 50 ಟನ್ ಸರಕು ಹೊತ್ತು ಲಾರಿಗಳು ರಾಜ್ಯದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಡತಡೆ ಇಲ್ಲದೆ ಸಾಗುತ್ತಲೇ ಇವೆ. ಇದು ಸಾರಿಗೆ ಅಧಿಕಾರಿಗಳ `ಟೋಕನ್~ ಕೃಪೆ.

ಕಾನೂನು ಹೇಳುವುದೇನು?: ಸರಕು ಸಾಗಣೆ ವಾಹನಗಳಲ್ಲಿ ಮಿತಿಮೀರಿದ ಭಾರ ಸಾಗಣೆ ತಡೆಯಲೆಂದೇ `ಮೋಟಾರು ವಾಹನ ಕಾಯ್ದೆ-1988~ರ ಕಲಂ 113 ಮತ್ತು 114 ಇವೆ. ಈ ಕಲಂಗಳ ಪ್ರಕಾರ ಯಾವುದೇ ವಾಹನದಲ್ಲಿ ಮಿತಿಗಿಂತ ಅಧಿಕ ಭಾರ ಸಾಗಣೆ ಮಾಡುವ ತಪ್ಪಿಗೆ 2,000 ರೂಪಾಯಿ ದಂಡ ವಿಧಿಸಬೇಕು. ಮಿತಿಗಿಂತ ನಂತರದ ಪ್ರತಿ ಟನ್ ಭಾರಕ್ಕೆ ರೂ 1,000 ದಂಡ. ಮಿತಿಗಿಂತ ಹೆಚ್ಚಿನ ಭಾರವನ್ನು ತಪಾಸಣಾ ಸ್ಥಳದಲ್ಲೇ ಖಾಲಿ ಮಾಡಬೇಕು.

ಕಲಂ 194ರ ಪ್ರಕಾರ ಅತಿಯಾದ ಭಾರ ಸಾಗಣೆ ಪ್ರಕರಣದಲ್ಲಿ ಸರಕನ್ನು ಮಾರುವವರು ಮತ್ತು ಕೊಳ್ಳುವವರ ವಿರುದ್ಧವೂ ಕ್ರಮ ಜರುಗಿಸಬೇಕು. ಇಬ್ಬರಿಗೂ ದಂಡ ವಿಧಿಸಬೇಕು. ನೋಟಿಸ್ ಜಾರಿ ಮಾಡಿ ಮತ್ತೆ ಅತಿಯಾದ ಭಾರ ಸಾಗಣೆಗೆ ಪ್ರೇರಣೆ ನೀಡದಂತೆ ಎಚ್ಚರಿಕೆಯನ್ನೂ ನೀಡಬೇಕು.

ಅತಿಯಾದ ಭಾರ ಸಾಗಣೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿ 2005ರಲ್ಲಿ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ಮೋಟಾರು ವಾಹನ ಕಾಯ್ದೆಯಲ್ಲಿನ ಅಂಶಗಳನ್ನು ಎತ್ತಿ ಹಿಡಿದಿದೆ. ಈ ಕಾಯ್ದೆಯ ಪ್ರಕಾರವೇ ಸರಕು ಸಾಗಣೆ ಮಿತಿ ನಿರ್ಬಂಧಿಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ.

ನಿಜವಾಗಿ ನಡೆಯುವುದೇನು?:ಮಿತಿಗಿಂತ ಹೆಚ್ಚು ಭಾರ ಸಾಗಿಸುವ ವಾಹನಗಳ ವಿರುದ್ಧ ಕ್ರಮ ಜರುಗಿಸಬೇಕಾದ ಎಂವಿಐಗಳು, ಕಾನೂನು ಉಲ್ಲಂಘನೆಯನ್ನು ಸಕ್ರಮಗೊಳಿಸುವ `ಪರವಾನಗಿ~ ಪದ್ಧತಿಯನ್ನೇ ಜಾರಿಗೊಳಿಸಿದ್ದಾರೆ.  

ಅದರಂತೆ ನಿಗದಿತ ಮೊತ್ತ ಪಾವತಿಸಿದರೆ `ಮುಂಬೈ ಲಕ್ಷ್ಮಿ~ ಲಾಟರಿ ಟಿಕೆಟ್ ತುಣುಕು ಲಾರಿ ಮಾಲೀಕರ ಕೈಸೇರುತ್ತದೆ. ಈ `ಟೋಕನ್~ ಹೊಂದಿರುವ ಯಾವ ಲಾರಿಯೂ ತನಿಖಾ ಠಾಣೆಗಳಲ್ಲಿ ತಪಾಸಣೆಗೆ ಒಳಪಡುವುದಿಲ್ಲ.

ಒಂದೇ ಮಾರ್ಗದಲ್ಲಿ ನಿರಂತರವಾಗಿ ಸರಕು ಸಾಗಿಸುವ ಲಾರಿಗಳಲ್ಲಿ ಈ ಪದ್ಧತಿ ಹೆಚ್ಚಾಗಿ ಜಾರಿಯಲ್ಲಿದೆ. ಬೆಂಗಳೂರಿನಿಂದ ಹುಬ್ಬಳ್ಳಿ ತಲುಪುವ ಮಾರ್ಗದಲ್ಲಿ ಸಾರಿಗೆ ಇಲಾಖೆಯ ಏಳು ತನಿಖಾ ಠಾಣೆಗಳಿದ್ದು, ಎಲ್ಲ ಕಡೆಗಳಲ್ಲೂ ಒಂದೇ ಮಾದರಿಯ `ಟೋಕನ್~ ಚಾಲ್ತಿಯಲ್ಲಿದೆ. ಲಾಟರಿ ಟಿಕೆಟ್‌ನ ತುಣುಕಿನಲ್ಲಿ ಸಂಬಂಧಿಸಿದ ಲಾರಿಯ ನಂಬರ್ ಬರೆದು, ತನಿಖಾ ಠಾಣೆಯ ಸಂಕೇತವನ್ನು ನಮೂದಿಸಲಾಗುತ್ತದೆ.
 
ದಿನಾಂಕದ ಮೊಹರು ಹಾಕಲಾಗುತ್ತದೆ. ಹತ್ತು ರೂಪಾಯಿ ಮೌಲ್ಯದ ನೋಟುಗಳೂ `ಟೋಕನ್~ಗಳಾಗಿ ಬಳಕೆಯಾಗುತ್ತವೆ. ಒಮ್ಮೆ ಈ ಚೀಟಿ ಕೈ ಸೇರಿದರೆ ತಿಂಗಳು ಪೂರ್ತಿ ಅಧಿಕ ಭಾರ ಸಾಗಣೆಗೆ ಯಾವುದೇ ಕಡಿವಾಣ ಇಲ್ಲ. ಜುಲೈ ತಿಂಗಳಿನಲ್ಲಿ ನೆಲಮಂಗಲ ತನಿಖಾ ಠಾಣೆಯಲ್ಲಿ ವಿತರಿಸಿದ್ದ ಕೆಲ `ಟೋಕನ್~ಗಳು `ಪ್ರಜಾವಾಣಿ~ಗೆ ಲಭ್ಯವಾಗಿವೆ.

ಲಾರಿಯ ಸರಕು ಸಾಗಣೆ ಸಾಮರ್ಥ್ಯ, ಅದರಲ್ಲಿ ನಿರಂತರವಾಗಿ ಸಾಗಿಸುವ ಸರಕಿನ ಮೌಲ್ಯ, ಸರಕು ತಲುಪುವ ದೂರ ಮತ್ತಿತರ ಅಂಶಗಳನ್ನು ಆಧರಿಸಿ ಮೋಟಾರು ವಾಹನ ನಿರೀಕ್ಷಕರು ಮಾಸಿಕ `ಮಾಮೂಲಿ~ ನಿಗದಿ ಮಾಡುತ್ತಾರೆ. ಪ್ರತಿ ಲಾರಿಗೆ ಪ್ರತಿಯೊಂದು ತನಿಖಾ ಠಾಣೆಯಲ್ಲೂ ಪ್ರತ್ಯೇಕ ಮೊತ್ತ ನೀಡಿ `ಟೋಕನ್~ ಪಡೆಯಬೇಕು. 2,500 ರೂಪಾಯಿಯಿಂದ ಆರಂಭವಾಗುವ ಈ ಮೊತ್ತ 20,000ದವರೆಗೂ ಇದೆ ಎನ್ನುತ್ತವೆ ಸರಕು ಸಾಗಣೆ ಉದ್ಯಮದ ಮೂಲಗಳು.

`ಟೋಕನ್~ ಪದ್ಧತಿಯಿಂದ ನಿತ್ಯವೂ ಕೋಟ್ಯಂತರ ರೂಪಾಯಿ ಎಂವಿಐಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಜೇಬು ಸೇರುತ್ತಿದೆ. ಇನ್ನೊಂದು ಕಡೆ ಹತ್ತಾರು ಕೋಟಿ ರೂಪಾಯಿ ತೆರಿಗೆ ವಂಚನೆ ಸದ್ದಿಲ್ಲದೇ ನಡೆಯುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಲೋಕೋಪಯೋಗಿ ಇಲಾಖೆ ಪ್ರತಿವರ್ಷವೂ ರಸ್ತೆ ನಿರ್ಮಾಣಕ್ಕೆ ವೆಚ್ಚ ಮಾಡುವ ಸಾವಿರಾರು ಕೋಟಿ ರೂಪಾಯಿಗೆ ಪ್ರತಿಫಲವೇ ಇಲ್ಲವಾಗಿದೆ. ಮಿತಿಮೀರಿದ ಭಾರ ಹೊತ್ತ ಲಾರಿಗಳ ನಿರಂತರ ಸಂಚಾರದಿಂದ ರಸ್ತೆಗಳು ಕೆಲವೇ ದಿನಗಳಲ್ಲಿ ಹಳೆಯ ಸ್ಥಿತಿಗೆ ಮರಳುತ್ತಿವೆ.

ಎಲ್ಲರೂ ಪಾಲುದಾರರು:
`ಟೋಕನ್ ಮಾಫಿಯಾ~ದಲ್ಲಿ ಕೇವಲ ಎಂವಿಐಗಳಷ್ಟೇ ಇಲ್ಲ. ಲಾರಿ ಮಾಲೀಕರ ವಲಯದ ಪ್ರಭಾವಿ ವ್ಯಕ್ತಿಗಳು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಸರಕು ಪೂರೈಸುವ ಉದ್ಯಮಿಗಳು, ಸರಕು ಸಾಗಣೆ ಉದ್ಯಮದ ದಲ್ಲಾಳಿಗಳೂ ಸೇರಿಕೊಂಡಿದ್ದಾರೆ.

ಸರಕು ಸಾಗಿಸುವ ವಾಹನಗಳು ಹೊರಡುವ ಮುನ್ನ ವಾಣಿಜ್ಯ ತೆರಿಗೆ ಇಲಾಖೆಯಿಂದ `ಇ-ಸುಗಮ~ ಪರವಾನಗಿ ಪಡೆಯಬೇಕು. ಆಗ ಅದರಲ್ಲಿನ ಸರಕಿನ ತೂಕವನ್ನು ನಮೂದಿಸಲಾಗುತ್ತದೆ. `ಇ-ಸುಗಮ~ ಪರವಾನಗಿಯ ಕಡತಗಳೇ ಸಾರಿಗೆ ಇಲಾಖೆಯಲ್ಲಿ ಅವ್ಯಾಹತವಾಗಿ ನಡೆಯತ್ತಿರುವ `ಟೋಕನ್ ಮಾಫಿಯಾ~ ಬಗ್ಗೆ ಪ್ರಬಲ ಸಾಕ್ಷ್ಯ ಒದಗಿಸುತ್ತವೆ. ಆದರೆ ಎಲ್ಲ ಇಲಾಖೆಗಳೂ ಈ ಜಾಲಕ್ಕೆ ಮಣಿದಿರುವುದರಿಂದ `ಮುಂಬೈ ಲಕ್ಷ್ಮಿ~ ಲಾಟರಿ ಟಿಕೆಟ್ ತುಣುಕಿನ ಕುಣಿತ ಮುಂದುವರಿಯುತ್ತಲೇ ಇದೆ.

`ನಿಯಂತ್ರಣ ಸುಲಭವಲ್ಲ~

`ಈ `ಟೋಕನ್ ಮಾಫಿಯಾ~ ಸಾರಿಗೆ ಇಲಾಖೆಯಲ್ಲಿ ಪ್ರಬಲವಾಗಿ ಬೆಳೆದು ನಿಂತಿದೆ. ಇಲ್ಲಿ ಸಾರಿಗೆ ಅಧಿಕಾರಿಗಳ ಜೊತೆ ಖಾಸಗಿ ವ್ಯಕ್ತಿಗಳೂ ಶಾಮೀಲಾಗಿದ್ದಾರೆ. ಈ ಜಾಲವನ್ನು ನಿಯಂತ್ರಿಸುವುದು ಸುಲಭದ ಕೆಲಸವಲ್ಲ~

- ಇದು ಸಾರಿಗೆ ಆಯುಕ್ತ ಟಿ.ಶ್ಯಾಂ ಭಟ್ ಅವರ ಪ್ರತಿಕ್ರಿಯೆ. `ಟೋಕನ್ ಮಾಫಿಯಾ~ ಬಲವಾಗಿ ಬೇರೂರಿರುವ ಬಗ್ಗೆ `ಪ್ರಜಾವಾಣಿ~ ಅವರನ್ನು ಪ್ರಶ್ನಿಸಿದಾಗ, `ಅತಿಯಾದ ಭಾರ ಸಾಗಣೆಗೆ `ಟೋಕನ್~ ಬಳಕೆಯಾಗುತ್ತಿರುವ ಬಗ್ಗೆ ದೂರುಗಳಿವೆ. ಆದರೆ, ತಕ್ಷಣವೇ ಅದನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ~ ಎಂದರು. ಅತಿಯಾದ ಭಾರ ಸಾಗಣೆ ನಿಯಂತ್ರಣದ ವಿಷಯದಲ್ಲಿ ಸಾರಿಗೆ ಇಲಾಖೆ ಗಂಭೀರ ಪ್ರಯತ್ನ ಮಾಡುತ್ತಿದೆ.
 
ಎಲ್ಲ ಪ್ರಮುಖ ಹೆದ್ದಾರಿಗಳಲ್ಲೂ ಲಾರಿಗಳು ಹಾದುಹೋಗುವ ಸಮಯದಲ್ಲೇ ತೂಕ ದಾಖಲಿಸಬಲ್ಲ ಕಂಪ್ಯೂಟರೀಕೃತ ತನಿಖಾ ಠಾಣೆಗಳನ್ನು ಸ್ಥಾಪಿಸಲು ಇಲಾಖೆ ಚಿಂತನೆ ನಡೆಸಿದೆ. ಅದು ಜಾರಿಯಾದರೆ `ಟೋಕನ್ ಮಾಫಿಯಾ~ವನ್ನು ಮಟ್ಟ ಹಾಕುವ ಕೆಲಸ ಸುಲಭವಾಗಬಹುದು ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT