ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಪಿಗಳು ಸಾರ್ ಟೋಪಿಗಳು

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

`ಅಂದು ನ್ಯಾಯಕ್ಕೆ ನೀತಿಗೆ ಸ್ವಾತಂತ್ರ್ಯಕ್ಕೆ
ಸತ್ಯಾಗ್ರಹ ನಡೆಸಿದರು ಗಾಂಧಿ
ಇಂದು ಸತ್ಯಾಗ್ರಹದ ಹೆಸರಲ್ಲಿ
ದೇಶಕ್ಕೇ ಟೋಪಿ ಹಾಕ್ತಿದ್ದಾರೆ ಮಂದಿ!~

`ಹೇ ರಾಮ್~ ಅಂದ ತೆಪರೇಸಿ. `ಯಾಕಪ್ಪಾ ಗಾಂಧಿ ಸಾಯೋವಾಗ ಹೇಳಿದ್ದನ್ನ ಈಗ ನೆನಪಿಸಿಕೊಳ್ತಾ ಇದೀಯ?~ ಮಿಸ್ಸಮ್ಮ ನಗುತ್ತ ಕೇಳಿದಳು.

`ಏನಿಲ್ಲ, ಇವತ್ತು ಗಾಂಧಿ ಜಯಂತಿ ಅಲ್ವಾ? ಗಾಂಧಿ ಪ್ರತಿಮೆಗೆ ಹಾರ ಹಾಕಿ ಪೋಸು ಕೊಡೋ ದಿನ. ಮಜ ಅಂದ್ರೆ ಭ್ರಷ್ಟರು, ಅನಾಚಾರಿಗಳು, ಅಸತ್ಯವಂತರೆಲ್ಲ  `ಗಾಂಧಿ ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ನಡೀಬೇಕು~ ಅಂತ ಕರೆ ಕೊಡ್ತಾರಲ್ಲ, ಅದ್ಕೇ ಅಂಗಂದೆ...~ ಎಂದ ತೆಪರೇಸಿ.

`ಲೇ ತೆಪರಾ, ಗಾಂಧಿ ಬಗ್ಗೆ ಮಾತಾಡ್ತಿದೀಯ, ಬಟ್ಟೆ ಬಿಚ್ಚಿ ಮಾತಾಡು. ಅಣ್ಣಾ ಹಜಾರೆ ಬಗ್ಗೆ ಮಾತಾಡ್ತೀಯ? ಟೋಪಿ ಹಾಕ್ಕಂಡು ಮಾತಾಡು. ಸ್ವಲ್ಪ ಅವರ ಆದರ್ಶಗಳನ್ನ ಫಾಲೋ ಮಾಡ್ಬೇಕು ಮಗಾ...~ಗುಡ್ಡೆ ಕೀಟಲೆ ಮಾಡಿದ.

`ಓ ಹಂಗಾ? ಹಾಗಾದ್ರೆ ಬಾಬಾ ರಾಮದೇವ್ ಬಗ್ಗೆ ಮಾತಾಡಬೇಕು ಅಂದ್ರೆ ಚೂಡಿದಾರ್ ಹಾಕಿರಬೇಕಾ? 2-ಜಿ, 3-ಜಿ ಮಹಾನುಭಾವರ ಬಗ್ಗೆ ಮಾತಾಡಬೇಕು ಅಂದ್ರೆ ಜೈಲು ಯೂನಿಫಾರಂ ಹಾಕಿರಬೇಕಾ?~ ತೆಪರೇಸಿ ತಿರುಗೇಟು ನೀಡಿದ.

`ಈ 2-ಜಿ ಏನೋ ಗೊತ್ತು, ಇದ್ಯಾವುದಿದು 3-ಜಿ?~ ಪರಮೇಶಿ ಪ್ರಶ್ನಿಸಿದಾಗ `ಅದೇ ಕಣಲೆ ಬಳ್ಳಾರಿಯ ಮೂರು `ಗಾಲಿ~ಗಳಿಗೆ 3-ಜಿ ಅಂತ ಶಾರ್ಟಾಗಿ ಹೆಸರಿಟ್ಟಿದೀನಿ...~ ತೆಪರೇಸಿ ನಕ್ಕ.

`ಭಾರೀ ಬುದ್ಧಿವಂತ ನೀನು. ಅದಿರ‌್ಲಿ, ಈಗೇನಪಾ ದೇಶದ ತುಂಬ ಸತ್ಯಾಗ್ರಹಗಳ ಸುಗ್ಗಿ ಶುರುವಾಗೇತಲ್ಲೋ, ಫ್ರೀಡಂ ಪಾರ್ಕ್ ಆತು, ಗಾಂಧಿ ಪ್ರತಿಮೆ ಕೆಳಗೆ ಆತು, ಎ.ಸಿ.ರೂಮಿನಾಗೆ ಆತು, ಬಳ್ಳಾರಿ ದೂಳಿನಾಗೂ ಆಗಿ ಹೋತಪ. ಅಲ್ಯಾರೋ ದೇಶಕ್ಕಾಗಿ ಹೋರಾಡೋ ಸೈನಿಕನೊಬ್ಬ ತನ್ನ ಲವ್ವರ್‌ಗಾಗಿ ಆಕಿ ಮನಿ ಮುಂದ ಸತ್ಯಾಗ್ರಹ ಕುಂತಿದ್ನಂತೆ. ಗಾಂಧಿ ಸತ್ಯಾಗ್ರಹ ಅನ್ನೋದು ಎಲ್ಲಿಗೆ ಬಂತು ನೋಡು...~ ಪರಮೇಶಿ ವಿಷಾದ ವ್ಯಕ್ತಪಡಿಸಿದ.

`ನೋಡೋ ಪರಮ್ಯೋ, ಸತ್ಯಾಗ್ರಹ ಅಂದ್ರೆ ಸತ್ಯಕ್ಕೆ ಆಗ್ರಹ ಮಾಡೋದು ಅಂತ. ಅದನ್ನ ಎಲ್ಲಿ ಕುಂತು ಮಾಡಿದ್ರೆ ಏನು? ಅದರಾಗೂ ಒಂದು ಏಳೆಂಟು ನಮೂನಿ ಸತ್ಯಾಗ್ರಹ ಅದಾವಪ. ಅದರಲ್ಲೂ ಈ ರಾಜಕಾರಣಿಗಳು ಸತ್ಯಾಗ್ರಹ ಮಾಡ್ತದಾರೆ ಅಂದ್ರೆ ಅದು ಜನಕ್ಕೆ ಟೋಪಿ ಹಾಕೋ ಸತ್ಯಾಗ್ರಹ ಅಂತಾನೇ ಅರ್ಥ. ಮೊನ್ನಿ ದೆಹಲಿಯಲ್ಲಿ ಪ್ರಧಾನಿ ಸೀಟ್ ಮೇಲೆ ಕಣ್ಣಿಟ್ಟಿರೋರೊಬ್ರು ಉಣ್ಣದೆ ಉಪವಾಸ ಕುಂತುದ್ದಕ್ಕೆ ಐವತ್ತು ಲಕ್ಷ ಖರ್ಚಾತಂತೆ. ಇನ್ನು ಉಂಡು ಕುಂತುದ್ರೆ ಎಷ್ಟು ಕೋಟಿ ಖರ್ಚಾಗ್ತಿದ್ವೋ ಏನೋ...~ ಗುಡ್ಡೆ ಲೆಕ್ಕಾಚಾರದ ಮಾತಾಡಿದ.

`ಇದನ್ನೆಲ್ಲ ಇಟ್ಕೊಂಡು `ಟೋಪಿಗಳು ಸಾರ್ ಟೋಪಿಗಳು~ ಅಂತ ಒಂದು ಸಿನಿಮಾ ಯಾಕೆ ತೆಗೀಬಾರ್ದು? ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್‌ನ ಹೀರೋ ಆಗಿ ಹಾಕ್ಕಂಡ್ರೆ ಸಿನಿಮಾ ಹಿಟ್ ಆಗೋದು ಗ್ಯಾರಂಟಿ...~ ಮಿಸ್ಸಮ್ಮ ಹೇಳಿದಾಗ `ಇಲ್ಲ ಇಲ್ಲ, ಅವರ ಮುಂದಿನ ಸಿನಿಮಾ `ನೈನ್ಟಿ ಕುಡಿ, ಹೆಂಡ್ತಿ ಹೊಡಿ~ ಅಂತೆ. ಬೇಲ್ ಸಿಕ್ಕಮೇಲೆ ಸೆಟ್ಟೇರುತ್ತಂತೆ~ ಗುಡ್ಡೆ ಕಿಚಾಯಿಸಿದ.

`ಏನೇ ಆಗ್ಲಿ, ದರ್ಶನ್ ಹೆಂಡ್ತಿ ಕುರುಣಾಮಯಿನಪ್ಪ. ಪಾಪ ಅಷ್ಟೆಲ್ಲ ಕಷ್ಟಕೊಟ್ರು ಗಂಡನನ್ನ ಮಾತ್ರ ಬಿಟ್ಟುಕೊಡ್ಲಿಲ್ಲ ನೋಡು. ನಮ್ಮ ಹೆಣ್ಣುಮಕ್ಕಳೇ ಹಿಂಗೆ ಅಲ್ವಾ?~ ಮಿಸ್ಸಮ್ಮ ಕನಿಕರ ವ್ಯಕ್ತಪಡಿಸಿದಳು.

`ಅದೇ ನಿಮ್ಮ ವೀಕ್‌ನೆಸ್ಸು. ಈಗ ಇದರ ಮೇಲೆ ಒಂದು ಚುಟುಕ ಹೇಳ್ಲಾ?~ ಕೇಳಿದ ಗುಡ್ಡೆ. `ಇವನೊಬ್ಬ, ಯಾವಾಗ್ಲೂ ಏನಾದ್ರು ಒಂದು ಹೊಸೀತಾನೆ ಇರ‌್ತಾನೆ. ಅದೇನ್ ಹೇಳಿ ಸಾಯಿ~ ಸಿಡುಕಿದಳು ಮಿಸ್ಸಮ್ಮ.

`ಹೆಣ್ಣು ಜಗವಂದ್ಯಳು
ಪಾಪ ವಿನಾಶಕಳು
ಕ್ಷಮೆಯಾಧರಿತ್ರಳು
ಗಂಡನ ಕೈಲಿ ಬಡಿಸಿಕೊಂಡೂ
ಬಚ್ಚಲಲ್ಲಿ ಬಿದ್ದೆ ಎಂದಳು!~

`ಹೆಂಗೆ?~ ಎಂದ ಗುಡ್ಡೆ. `ಆಹಾ ಎಲ್ಲಿದೆಲ್ಲಿಗೆ ಜೋಡಿಸಿದ್ಯೋ ಮಗಾ, ಒಳ್ಳೆ ಲಿಂಕ್ ಮಾಸ್ಟರ‌್ರು...~ ಪರಮೇಶಿ ಮೆಚ್ಚುಗೆ ವ್ಯಕ್ತಪಡಿಸಿದ.

ಆಗ ತೆಪರೇಸಿ `ದರ್ಶನ್ ಕತೆ ನಾನೂ ಒಂದು ಹೇಳ್ಲಾ?~ ಎಂದ. `ಓಕೆ ಡನ್~ ಎಂದ ಯಬಡೇಶಿ.

ತೆಪರೇಸಿ ಶುರು ಮಾಡಿದ `ಏನಿಲ್ಲ, ಜೈಲಲ್ಲಿ ದರ್ಶನ್ ಜೊತೆ ಒಂದೇ ಸೆಲ್‌ನಲ್ಲಿ ಸಿನಿಮಾ ಬ್ಲಾಕ್ ಟಿಕೆಟ್ ಮಾರೋನೊಬ್ಬ ಮಲಗಿದ್ನಂತೆ. ಅವನಿಗೆ ದರ್ಶನ್ ಕಂಡು ಭಾರೀ ಖುಷಿ.

`ಸಾ, ನಾನು ನಿಮ್ ಫ್ಯಾನು ಸಾ, ಹೋದ ವರ್ಷ ನಿಮ್ಮ ಹುಟ್ಟುಹಬ್ಬಕ್ಕೆ ವಿಶ್ ಮಾಡೋಕೆ ಅಂತ ನಿಮ್ ಮನೆ ಗೇಟು ಹಾರಿ ಪೋಲೀಸರತ್ರ ಒದೆ ತಿಂದಿದ್ದೆ. ಗಾಡ್ ಈಸ್ ಗ್ರೇಟು ಸಾ. ಈ ವರ್ಷ ನಿಮ್ಮನ್ನೇ ನಾನಿರೋ ಜಾಗಕ್ಕೆ ಕಳಿಸಿದಾನಲ್ಲ ಸಾ. ನಾವಿಬ್ರು ಕ್ಲಾಸ್‌ಮೇಟ್ ಅಂತೂ ಆಗ್ಲಿಲ್ಲ, ಆದ್ರೆ ಜೈಲ್‌ಮೇಟ್‌ಗಳಾಗೋದ್ವಲ್ಲ ಸಾ, ಭಾಗ್ಯ ಅಂದ್ರೆ ಇದೇ ಅಲ್ವ ಸಾ...~ ಅಂತ ಆನಂದ ಭಾಷ್ಪ ಸುರಿಸಿದ್ನಂತೆ...~ ತೆಪರೇಸಿ ಜೋಕಿಗೆ ಎಲ್ಲರೂ ನಕ್ಕರು.
`ಹೌದೂ ನಮ್ಮ ದುಬ್ಬೀರ ಎಲ್ಲಿ ಕಾಣ್ತಿಲ್ಲ?~ ಪರಮೇಶಿ ಪ್ರಶ್ನಿಸಿದ. `ಅದಾ, ಪಾಪ ಅವನ ಮಗನಿಗೆ ಹೆಣ್ಣು ಗೊತ್ತಾಗಿತ್ತಲ್ಲ, ಕ್ಯಾನ್ಸಲ್ ಆತಂತೆ. ಅದ್ಕೇ ಇವತ್ತು ಬಂದಿಲ್ಲ~ ಎಂದಳು ಮಿಸ್ಸಮ್ಮ.

`ಹೆಣ್ಣು ಗೊತ್ತಾಗಿದ್ದು ಕ್ಯಾನ್ಸಲ್ ಆಯ್ತಂತಾ? ಯಾಕಂತೆ?~
`ಗಂಡು ದಿನಗೂಲಿ ನೌಕರ ಅಂತ ಗೊತ್ತಾಗಿ ಹೆಣ್ಣು ಕೊಡಾಕಿಲ್ಲ ಅಂದ್ರಂತೆ...~
`ಇದೊಳ್ಳೆ ಚೆನ್ನಾಯ್ತು. ಅಲ್ಲ ಮಿಸ್ಸಮ್ಮ, ದಿನಗೂಲಿ ಅಂತ ಒಪ್ಕಂಡಿರೋ ಮುಖ್ಯಮಂತ್ರಿ ಕೈಲಿ ಇಡೀ ರಾಜ್ಯನೇ ಕೊಟ್ಟಿದೀವಂತೆ. ಅಂಥದ್ರಲ್ಲಿ ದಿನಗೂಲಿ ನೌಕರನಿಗೊಂದು ಹೆಣ್ಣು ಕೊಡಲ್ವಂತಾ? ಘೋರ ಅನ್ಯಾಯ. ಇದರ ವಿರುದ್ಧನೂ ಒಂದು ಸತ್ಯಾಗ್ರಹ ಮಾಡಬೇಕು~ ಎಂದ ಪರಮೇಶಿ. ಅಷ್ಟರಲ್ಲಿ ಕರೆಂಟ್ ಹೋಯಿತು.

`ಥತ್ತೇರಿ, ಈ ಕರೆಂಟ್ ಕಾಲದಲ್ಲಿ ಸಾಕಾಯ್ತು ಮಾರಾಯ. ದಿನಕ್ಕೆ ಎಷ್ಟು ಸಲ ತೆಗೆಯೋದು ಇವರು? ಡ್ಯಾಂ ಎಲ್ಲ ತುಂಬಿ ತುಳುಕ್ತದಾವೆ. ಈಗ್ಲೇ ಕರೆಂಟಿಲ್ಲ ಅಂದ್ರೆ ಬೇಸಗೇಲಿ ಇನ್ನೆಂಗೆ? ಇದೂ ಒಂದು ಸರ್ಕಾರ...~ ತೆಪರೇಸಿ ಸಿಡಿಮಿಡಿಗೊಂಡ.

ಆಗ ಗುಡ್ಡೆ `ಈ ಕರೆಂಟ್ ಕೊಡದಿರೋ ಸರ್ಕಾರಾನೇ ಇನ್ನೂ ಹತ್ತು ವರ್ಷ ಇರ‌್ಲಿ ಅಂತ ಕೆಲವರು ದೇವರಿಗೆ ಕೈ ಮುಗಿದು ಪ್ರಾರ್ಥನೆ ಮಾಡ್ತದಾರಂತೆ, ನಿನಗೆ ಅದು ಗೊತ್ತಾ?~ ಎಂದ.

`ಏನು? ಕರೆಂಟ್ ಕೊಡದಿದ್ರೂ ಇದೇ ಸರ್ಕಾರ ಇರ‌್ಲಿ ಅಂತ ಪ್ರಾರ್ಥನೆ ಮಾಡ್ತಿದಾರಾ? ಯಾರಪ್ಪ ಅವರು...?~

`ಇನ್ಯಾರು, ಬ್ಯಾಟರಿ ಅಂಗಡಿಯೋರು, ಯುಪಿಎಸ್ ನೋರು, ಜನರೇಟರ್‌ನೋರು, ಮೇಣದ ಬತ್ತಿ ಮಾರೋರು...!~ ಗುಡ್ಡೆ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT