ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಲ್ ದರ ಹೆಚ್ಚಳ: ಕರವೇ ಪ್ರತಿಭಟನೆ

Last Updated 9 ಮೇ 2011, 9:05 IST
ಅಕ್ಷರ ಗಾತ್ರ

ಬೆಳಗಾವಿ: ಹಿರೇಬಾಗೇವಾಡಿಯ ಟೋಲ್ನಾಕಾದಲ್ಲಿ ಏಕಾಏಕಿ ಶೇ 100 ರಷ್ಟು ಟೋಲ್ ದರವನ್ನು ಹೆಚ್ಚಿಸಿದ ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶನಿವಾರ ಟೋಲ್ ಕೇಂದ್ರದ ಬಳಿ ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನ ಹಿರೇಬಾಗೇವಾಡಿ ಟೋಲ್ ನಾಕಾಕ್ಕೆ ತೆರಳಿದ ಬೆಳಗಾವಿ ಹಾಗೂ ಬೈಲಹೊಂಗಲ ಭಾಗದ ಕರವೇ ಕಾರ್ಯಕರ್ತರು ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಟೋಲ್ ಸಂಗ್ರಹ ಕೈಬಿಡಬೇಕು ಎಂದು ಆಗ್ರಹಿಸಿದರು. ಆ ಸಂದರ್ಭದಲ್ಲಿ ಕೆಲ ವಾಹನಗಳು ಟೋಲ್ ನೀಡದೇ ಸಂಚರಿಸಿದವು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರಾಜೀವ ಟೋಪಣ್ಣವರ, ಬೆಳಗಾವಿಯಿಂದ ಹುಬ್ಬಳ್ಳಿಯವರೆಗಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಗಳು ಹಾಳಾಗಿವೆ. ಅದಲ್ಲದೆ ಈ ರಸ್ತೆಯನ್ನು ಸರಿಯಾಗಿ ನಿರ್ವಹಣೆ ಮಾಡದ ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಟೋಲ್ ಸಂಗ್ರಹ ಮಾಡುತ್ತಿರುವುದು ಸರಿಯಾದ ಕ್ರಮ ಅಲ್ಲ.

ಈ ಹೆದ್ದಾರಿಯಲ್ಲಿ ಕೇಂದ್ರ ಸರ್ಕಾರ ಕರಾರಿನಂತೆ ಯಾವುದೇ ರೀತಿಯ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸಲಾಗಿಲ್ಲ. ಆದರೂ ಕೂಡ ಎಲ್ಲ ವಾಹನಗಳಿಗೆ ಶೇ 100 ರಷ್ಟು ಟೋಲ್ ದರ ಹೆಚ್ಚಿಸಿರುವುದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮೊಂಡುತನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಡುವು: ವಾರದೊಳಗಾಗಿ ಟೋಲ್ ದರ ಹೆಚ್ಚಳದ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ಬೆಳಗಾವಿ, ಕೊಲ್ಲಾಪುರ ಹೆದ್ದಾರಿ ಮಾರ್ಗದಲ್ಲಿ ಇರುವ ಸೌಲಭ್ಯಗಳಂತೆ ಬೆಳಗಾವಿಯಿಂದ ಹುಬ್ಬಳ್ಳಿಯವರೆಗೂ ಎಲ್ಲ ರೀತಿಯ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸಬೇಕು.
 
ಈ ಮಾರ್ಗದಲ್ಲಿ ಶೌಚಾಲಯ, ಸ್ನಾನಗೃಹ, ಆ್ಯಂಬ್ಯುಲೆನ್ಸ್ ಹಾಗೂ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಬೇಕು. ಹೆದ್ದಾರಿ ಪಕ್ಕದಲ್ಲಿ ನೆಟ್ಟಿರುವ ಗಿಡಗಳಿಗೆ ನಿರಂತರವಾಗಿ ನೀರು ಹಾಕಬೇಕು. ಜೊತೆಗೆ ಹೆದ್ದಾರಿಯನ್ನು ಸ್ವಚ್ಛವಾಗಿಡಬೇಕು ಹಾಗೂ ಟೋಲ್ ಸಂಗ್ರಹ ಕೇಂದ್ರಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಬೇಕು ಎಂದು ರಾಜೀವ ಟೋಪಣ್ಣವರ ಒತ್ತಾಯಿಸಿದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ರಾಮಾನುಜಂ ಮನವಿ ಸ್ವೀಕರಿಸಿ, ಮೇಲಾಧಿಕಾರಿಗಳಿಗೆ ಕಳುಹಿಸಿ ಕೊಡಲಾಗುವುದು ಎಂದರು. ಜತೆಗೆ ಒಂದು ವಾರದ ಒಲಗೆ ನಾಕಾದಲ್ಲಿ ಕನ್ನಡ ಫಲಕ ಹಾಕಲಾಗುತ್ತದೆ ಎಂದು ತಿಳಿಸಿದರು.

ದೀಪಕ ಗುಡಗನಟ್ಟಿ, ಪ್ರಭು ಪುರಾಣಿಕಮಠ, ಭೂಪಾಲ ಅತ್ತು, ಸುಮಿತ ಗಿರೆಪ್ಪಗೌಡ್ರ, ಚಿದಾನಂದ ಪಟ್ಟಣಶೆಟ್ಟಿ, ಸಮೀರ ಪಾಶಾ, ಮುನ್ನಾ ಶೇಖ, ಅನೀಲ ಗಡದ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT