ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಕ್ಸಿ ಖಾತರಿ: ಸಂಘಟನೆಯ ದಾರಿ

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿರುವ ಸಾವಿರಾರು ಅಸಂಘಟಿತ ಟ್ಯಾಕ್ಸಿಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನವನ್ನು ಇಬ್ಬರು ಐಐಎಂ ಪದವೀಧರರು ಮಾಡಿದ್ದಾರೆ. ವಿಶ್ವಾಸಾರ್ಹತೆಯನ್ನೇ ಬಂಡವಾಳವನ್ನಾಗಿಸಿಕೊಂಡು ಕಡಿಮೆ ದರದಲ್ಲಿ ಟ್ಯಾಕ್ಸಿಗಳು ಲಭ್ಯವಾಗುವುದರ ಜತೆಗೆ ಸ್ನೇಹಮಯವಾಗಿ, ಸುರಕ್ಷಿತ ಸಂಚಾರ ನೀಡುವ ಗುರಿಯೊಂದಿಗೆ `ಟ್ಯಾಕ್ಸಿಫಾರ್‌ಶೂರ್' ಎಂಬ ಸಂಸ್ಥೆಯನ್ನು ಇವರು ಹುಟ್ಟುಹಾಕಿದ್ದಾರೆ.

ಸೂರತ್ಕಲ್‌ನ ಎನ್‌ಐಟಿಕೆ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿರುವ ಜಿ.ರಘುನಂದನ್ ಹಾಗೂ ಅಪ್ರಮೇಯ ರಾಧಾಕೃಷ್ಣನ್ ಐಐಎಂ ಅಹಮದಾಬಾದ್‌ನಲ್ಲಿ ಮ್ಯಾನೇಜ್‌ಮೆಂಟ್ ಪದವಿ ಪಡೆದವರು. ಜಗತ್ತಿನ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಏನಾದರೂ ಹೊಸತನ್ನು ನೀಡುವ ಸಂಕಲ್ಪದೊಂದಿಗೆ `ಟ್ಯಾಕ್ಸಿಫಾರ್‌ಶೂರ್' ಆರಂಭಿಸಿದರು.

`ಬೆಂಗಳೂರಿಗೆ ಟ್ಯಾಕ್ಸಿಗಳಿಗೇನೂ ಬರವಿಲ್ಲ. ಆದರೆ ಅವುಗಳ ವಿಶ್ವಾಸಾರ್ಹತೆ ಹಾಗೂ ದುಬಾರಿ ಬೆಲೆಯಿಂದಾಗಿ ನಿತ್ಯ ಬಾಡಿಗೆ ಪಡೆಯುವ ಕಾರ್ಪೊರೇಟ್ ಕಂಪೆನಿಗಳು ಹಾಗೂ ಗ್ರಾಹಕರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡಿವೆ. ಉದಾಹರಣೆಗೆ ಇಂದಿರಾನಗರದಲ್ಲಿರುವ ಗ್ಯಾರೇಜ್‌ನಲ್ಲಿರುವ ಕಾರು ವಿಜಯನಗರದಿಂದ ವ್ಯಕ್ತಿಯೊಬ್ಬರನ್ನು ಹತ್ತಿಸಿಕೊಂಡು ಐಟಿಪಿಎಲ್‌ಗೆ ಹೋಗಬೇಕೆಂದರೆ ಇಂದಿರಾನಗರದಿಂದಲೇ ಮೀಟರ್ ಚಾಲೂ ಮಾಡುತ್ತಾರೆ. ನಂತರ ಪುನಃ ಅದು ಕೊನೆಯಾಗುವುದು ಇಂದಿರಾನಗರದಲ್ಲಿರುವ ಗ್ಯಾರೇಜ್‌ನಲ್ಲೇ. ಇದನ್ನು ತಪ್ಪಿಸಲೆಂದೇ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಈ ಸಮಸ್ಯೆ ನಿವಾರಣೆಗೆ ಪ್ರಯತ್ನ ನಡೆಸಿದ್ದೇವೆ' ಎಂದೆನ್ನುತ್ತಾರೆ ಅಪ್ರಮೇಯ.

`ಟ್ಯಾಕ್ಸಿಫಾರ್‌ಶೂರ್' ಅಡಿಯಲ್ಲಿ ಸಂಚರಿಸುವ ಟ್ಯಾಕ್ಸಿಗಳ ಚಾಲಕರಿಗೆ ಐದು ಸಾವಿರ ರೂಪಾಯಿಗಳ ಆ್ಯಂಡ್ರಾಯ್ಡ ಫೋನ್ ಜತೆಗೆ ಇವರದ್ದೇ ಆದ ಒಂದು ಅಪ್ಲಿಕೇಷನ್ ಇನ್‌ಸ್ಟಾಲ್ ಮಾಡಲಾಗಿರುತ್ತದೆ. ಜಿಪಿಎಸ್ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುವ ಈ ಮೊಬೈಲ್ ಆ್ಯಪ್ ಐದಕ್ಕೂ ಹೆಚ್ಚು ಮಾಹಿತಿಗಳನ್ನು ತನ್ನೊಳಗೆ ಶೇಖರಿಸಿಟ್ಟುಕೊಳ್ಳಲಿದೆ. ಈ ಮಾಹಿತಿ ಆಧಾರದ ಮೇಲೆ ಟ್ಯಾಕ್ಸಿ ಚಾಲಕರಿಗೆ ಪ್ರಯಾಣ ಸಿಗಲಿದೆ. `ಟ್ಯಾಕ್ಸಿಫಾರ್‌ಶೂರ್'ಗೆ ಕರೆ ಮಾಡುವ ಅಥವಾ ಜಾಲತಾಣದ ಮೂಲಕ ಟ್ಯಾಕ್ಸಿ ನೋಂದಾಯಿಸುವ ಗ್ರಾಹಕರು ತಾವು ಇರುವ ಸ್ಥಳದಿಂದ ಐದು ಕಿಲೋ ಮೀಟರ್ ಸುತ್ತಳತೆಯಲ್ಲೇ ಇರುವ ಟ್ಯಾಕ್ಸಿಗಳಿಗೆ ಬುಕ್ಕಿಂಗ್ ಸಂದೇಶ ರವಾನೆಯಾಗುತ್ತದೆ. ಆಸಕ್ತ ಚಾಲಕರು ಇದನ್ನು ಒಪ್ಪಿಕೊಳ್ಳಬಹುದು. ಇಲ್ಲವೆಂದಾದಲ್ಲಿ ಬಿಡಬಹುದು. ಒಪ್ಪಿಕೊಂಡವರ ಈ ಹಿಂದಿನ ಗ್ರಾಹಕರ ರೇಟಿಂಗ್, ಇರುವ ದೂರ, ಆ ದಿನದ ದುಡಿಮೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಒಬ್ಬ ಚಾಲಕರಿಗೆ ಅದು ದಕ್ಕಲಿದೆ.

`ಇಷ್ಟು ಮಾತ್ರವಲ್ಲದೆ, ಇದೇ ತಂತ್ರಜ್ಞಾನ ಬಳಸಿ ಮಹಿಳೆಯರು ಸೇರಿದಂತೆ ಟ್ಯಾಕ್ಸಿಫಾರ್‌ಶೂರ್‌ನಲ್ಲಿ ಸಂಚರಿಸುವ ಗ್ರಾಹಕರ ಸುರಕ್ಷತೆಯನ್ನೂ ಕಾಪಾಡುವ ಗುರಿ ಈ ತಂಡದ್ದು. ಟ್ಯಾಕ್ಸಿ ಹತ್ತಿದ ಪ್ರಯಾಣಿಕರು ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಕೇಂದ್ರ ಕಚೇರಿ ಬಳಿ ಇರುತ್ತದೆ. ಇದರಿಂದ ಚಾಲಕರು ಯಾವುದೇ ರೀತಿಯ ಅಕ್ರಮ ನಡೆಸುವುದು ಅಸಾಧ್ಯ. ಕ್ಯಾಬ್ ಸಂಚರಿಸುವ ಪ್ರತಿಕ್ಷಣದ ಮಾಹಿತಿಯೂ ಇಲ್ಲಿ ದಾಖಲಾಗುತ್ತಿರುತ್ತದೆ. ಪ್ರಯಾಣ ಮುಗಿದ ನಂತರ ಗ್ರಾಹಕರಿಗೆ ತಮ್ಮ ಅನುಭವ ದಾಖಲಿಸಲು ಒಂದು ಅರ್ಜಿಯನ್ನೂ ನೀಡಲಾಗುತ್ತದೆ. ಪ್ರಯಾಣದಲ್ಲೇನಾದರೂ ತೊಂದರೆಯಾದಲ್ಲಿ ಅಥವಾ ಟ್ಯಾಕ್ಸಿ ಚಾಲಕ ಅಗತ್ಯಕ್ಕಿಂತ ಹೆಚ್ಚಿನ ಹಣ ಪಡೆದಲ್ಲಿ ಅದನ್ನು ಮರಳಿ ಆ ಪ್ರಯಾಣಿಕರಿಗೆ ಕೊಡಿಸುವ ವ್ಯವಸ್ಥೆಯೂ ಇಲ್ಲಿದೆ. ಗ್ರಾಹಕ ಸಂಬಂಧಿ ವ್ಯವಹಾರ ನಿರ್ವಹಣೆ ತಂಡವು ಇದನ್ನು ನಿಭಾಯಿಸಲಿದೆ. ಕಾಲಕಾಲಕ್ಕೆ ವಾಹನಗಳ ಶುಚಿತ್ವ, ಚಾಲಕನ ಸಮವಸ್ತ್ರ ಪರಿಶೀಲನೆ ಇತ್ಯಾದಿ ಜತೆಗೆ ಪ್ರತಿ ಮಂಗಳವಾರ ಕಚೇರಿಯಲ್ಲಿ 25 ಚಾಲಕರಿಗೆ ನಡವಳಿಕೆ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಕಾರ್ಯಾಗಾರದಲ್ಲಿ ಎಲ್ಲ ಚಾಲಕನೂ ಪ್ರತಿ ಆರು ತಿಂಗಳಿಗೊಮ್ಮೆ ಪಾಲ್ಗೊಳ್ಳಲೇಬೇಕು. ಕಾಲಕಾಲಕ್ಕೆ ಚಾಲಕರ ಆರೋಗ್ಯ ತಪಾಸಣೆಯೂ ನಡೆಯಲಿದೆ' ಎಂದು ಅಪ್ರಮೇಯ ತಿಳಿಸಿದರು.

ಸದ್ಯ ಬೆಂಗಳೂರಿನಲ್ಲಿ ಸಂಚರಿಸುತ್ತಿರುವ ರೇಡಿಯೊ ಟ್ಯಾಕ್ಸಿಗಳ ದರ ಪ್ರತಿ ಕಿಲೋ ಮೀಟರ್‌ಗೆ ರೂ19.5 ಇದೆ. ಆದರೆ `ಟ್ಯಾಕ್ಸಿಫಾರ್‌ಶೂರ್' ಇಂಡಿಕಾ ಕಾರು ಆದಲ್ಲಿ ಹವಾನಿಯಂತ್ರಿತ ಕಾರಿಗೆ ಪ್ರತಿ ಕಿಲೋ ಮೀಟರ್‌ಗೆ ರೂ14 ಹಾಗೂ ಹವಾನಿಯಂತ್ರಣ ಬೇಡವೆಂದರೆ ರೂ13 ನಿಗದಿಪಡಿಸಿದೆ. ಜತೆಗೆ ಸೆಡಾನ್ ಮಾದರಿಯ ಕಾರುಗಳಿಗೆ ಪ್ರತಿ ಕಿಲೋ ಮೀಟರ್‌ಗೆ ರೂ15 ನಿಗದಿಪಡಿಸಿದೆ.

ಇಷ್ಟು ಮಾತ್ರವಲ್ಲದೆ ವಿಮಾನ ನಿಲ್ದಾಣದಿಂದ ಪ್ರಯಾಣಿಸುವ ಗ್ರಾಹಕರಿಗೆ ತಾವು ಹೋಗಬೇಕಾದ ಸ್ಥಳದ ದೂರದ ಕುರಿತು ಸರಿಯಾದ ಮಾಹಿತಿ ಇಲ್ಲದಿದ್ದಲ್ಲಿ ರೂ499 ಪ್ಯಾಕೇಜ್ ಹಾಗೂ ಸ್ಥಳದ ಮಾಹಿತಿ ಇದ್ದಲ್ಲಿ ಪ್ರತಿ ಕಿಲೋ ಮೀಟರ್‌ಗೆ  ರೂ10ರ ದರದಲ್ಲಿ ಟ್ಯಾಕ್ಸಿ ಲಭ್ಯ.

ಬೆಂಗಳೂರಿನಲ್ಲಿ 2011ರಲ್ಲೇ ಆರಂಭವಾಗಿರುವ `ಟ್ಯಾಕ್ಸಿಫಾರ್‌ಶೂರ್' ನಾಲ್ಕು ತಿಂಗಳ ಹಿಂದೆ ದೆಹಲಿಯಲ್ಲೂ ಕಾರ್ಯಾರಂಭ ಮಾಡಿದೆ. ತಲಾ ಒಂದೊಂದು ಟ್ಯಾಕ್ಸಿ ಹೊಂದಿರುವ ಸ್ನೇಹಿತರು ಒಂದು ಗುಂಪು ಮಾಡಿಕೊಂಡು `ಟ್ಯಾಕ್ಸಿಫಾರ್‌ಶೂರ್' ಸೇರಬಹುದಾಗಿದೆ. ಇದಕ್ಕಾಗಿ ರೂ10 ಸಾವಿರವನ್ನು ಸಂಸ್ಥೆಯಲ್ಲಿ ಭದ್ರತಾ ಠೇವಣಿಯಾಗಿ ಇಡಬೇಕು. ಸ್ಥಳದಿಂದ ಸ್ಥಳಕ್ಕೆ, ಏರ್‌ಪೋರ್ಟ್ ಸೇವೆ, ದಿನದ ಬಾಡಿಗೆಗೆ, ಬೆಂಗಳೂರಿನಿಂದ ಬೇರೆ ಊರುಗಳಿಗೆ ಹೋಗಲು ಇಲ್ಲಿ ಟ್ಯಾಕ್ಸಿಗಳು ದೊರೆಯುತ್ತವೆ.

ಕೇವಲ ಇಂಡಿಕಾ, ಸೆಡಾನ್‌ಗಳು ಮಾತ್ರವಲ್ಲದೆ ದುಬಾರಿ ಬೆಲೆಯ ರೋಲ್ಸ್‌ರಾಯ್ಸ, ಹಮ್ಮರ್, ಜಾಗ್ವಾರ್, ಮರ್ಸಿಡೀಸ್, ಬಿಎಂಡಬ್ಲೂ ಇತ್ಯಾದಿ ವಿಲಾಸಿ ಕಾರುಗಳು ಲಭ್ಯ. ಅವುಗಳ ಐಷಾರಾಮಿಗೆ ತಕ್ಕಂತೆ ಬೆಲೆ ನಿಗದಿಪಡಿಸಲಾಗಿದೆ. `ಟ್ಯಾಕ್ಸಿಫಾರ್‌ಶೂರ್' ಬೇಕಾದಲ್ಲಿ 60601010ಕ್ಕೆ ಕರೆ ಮಾಡಿದರಾಯಿತು.

ಹೆಚ್ಚಿನ ಮಾಹಿತಿಗೆ: www.taxiforsure.com .
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT