ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಗೋರ್ ಅಧ್ಯಯನ ಪೀಠ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರ 150 ನೇ ಜಯಂತಿಯ ನೆನಪಿಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಅಧ್ಯಯನ ಪೀಠ ಸ್ಥಾಪಿಸಲಾಗುವುದು~ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಪ್ರಭುದೇವ್ ಹೇಳಿದರು.

ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ರವೀಂದ್ರನಾಥ ಟ್ಯಾಗೋರ್ ಅವರ ಪುನರ್ಮನನ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, `ಟ್ಯಾಗೋರರ 150ನೇ ಜಯಂತಿ ಸಂದರ್ಭದಲ್ಲಿ ಅವರ ಹೆಸರಿನ ಅಧ್ಯಯನ ಕೇಂದ್ರದ ಅವಶ್ಯಕತೆ ಇದೆ. ರಾಷ್ಟ್ರಕ್ಕೆ ರಾಷ್ಟ್ರಗೀತೆಯನ್ನು ಕೊಟ್ಟ ಮಹನೀಯ ಕವಿ ರವೀಂದ್ರನಾಥ ಟ್ಯಾಗೋರ್ ಅವರು. ರಚನೆಯ ನೂರು ವರ್ಷಗಳ ನಂತರವೂ ತನ್ನ ಜನಪ್ರಿಯತೆಯನ್ನು ಕಾಯ್ದುಕೊಂಡಿರುವ ಅಪೂರ್ವ ರಚನೆ ಜನಗಣ ಮನ. ಟ್ಯಾಗೋರರ ಎಲ್ಲಾ ಕೃತಿಗಳೂ ಕನ್ನಡಕ್ಕೆ ಅನುವಾದವಾಗಬೇಕು. ಆ ಮೂಲಕ ಟ್ಯಾಗೋರರನ್ನು ಇನ್ನಷ್ಟು ಹತ್ತಿರವಾಗಿಸುವ ಪ್ರಯತ್ನಗಳಾಗಬೇಕು~ ಎಂದು ಆಶಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಇಂದ್ರನಾಥ ಚೌಧರಿ ಮಾತನಾಡಿ, `ಶತಮಾನ ಕಂಡ ದೊಡ್ಡ ಬರಹಗಾರ ರವೀಂದ್ರನಾಥ ಟ್ಯಾಗೋರ್ ಅವರು. ಅವರದು ಬಹುಮುಖಿ ವ್ಯಕ್ತಿತ್ವ. ತಮ್ಮ ಸಾಂಸ್ಕೃತಿಕ ನೋಟಗಳಿಂದ ಜಗತ್ತನ್ನು ಕಂಡು, ಅದನ್ನು ದರ್ಶನ ಮಾಡಿಸಿದ ದೊಡ್ಡ ದಾರ್ಶನಿಕ ಟ್ಯಾಗೋರ್. ಇಂಗ್ಲಿಷ್ ನವೋದಯ ಸಾಹಿತ್ಯದ ಪ್ರೇರಣೆ ರವೀಂದ್ರರ ಮೇಲೆ ಹೆಚ್ಚಾಗಿದೆ. ಅವರ ಒಂದೊಂದು ಬರಹಗಳು ಅಪೂರ್ವ~ ಎಂದರು.

ಕೋಲ್ಕತ್ತದ ಜಾದವ್‌ಪುರ್ ವಿಶ್ವವಿದ್ಯಾಲಯದ ತೌಲನಿಕ ಅಧ್ಯಯನ ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಡಾ.ಅಮಿಯಾ ದೇವ್ `ಟ್ಯಾಗೋರರ ಸಾಹಿತ್ಯದ ಪದ ಶಕ್ತಿ~ ಯ ಬಗ್ಗೆ ಹಾಗೂ ಕಲಾವಿದ ಡಾ.ಶಂಕರ್ ಮಜುಂದಾರ್ `ಟ್ಯಾಗೋರರ ಚಿತ್ರಕಲೆ~ ಯ ವಿಚಾರವಾಗಿ ಪ್ರಬಂಧ ಮಂಡಿಸಿದರು.

ವಿಚಾರ ಸಂಕಿರಣದಲ್ಲಿ ಶೇಷಾದ್ರಿಪುರಂ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಡಾ.ವೂಡೆ ಪಿ. ಕೃಷ್ಣ, ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ.ಅನುರಾಧಾ ರಾಯ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT