ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಕ್ ತಾಣವಾದ ತೇರು ಮೈದಾನ

Last Updated 7 ಜುಲೈ 2013, 10:45 IST
ಅಕ್ಷರ ಗಾತ್ರ

ಹುಮನಾಬಾದ್: ವೀರಭದ್ರೇಶ್ವರ ತೇರು ಮೈದಾನ ಗುಜರಿ ಅಂಗಡಿ ತುಂಬಿದ್ದು ಅಲ್ಲದೇ ಮರಳು ಟ್ರಕ್‌ಗಳ ತಾಣವಾಗಿ ಮಾರ್ಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರು ಆ ಮೂಲಕ ಸಂಚರಿಸುವುದು ಕಷ್ಟವಾಗಿದೆ.

ಮಹಿಳೆಯರು ಹಾಗೂ ವಿಶೇಷವಾಗಿ ಶಾಲಾ ಮಕ್ಕಳು ಮುಖ್ಯರಸ್ತೆಯಿಂದ ಹೋಗಲು ಇಚ್ಛಿಸದವರು ಅನೇಕ ವರ್ಷಗಳಿಂದ ಆ ಮಾರ್ಗವನ್ನೇ ಅವಲಂಬಿಸಿದ್ದಾರೆ.

ಹೀಗೆ ಟ್ರಕ್‌ಗಳು ನಿಲ್ಲುತ್ತಿರುವ ಕಾರಣ ಅಲ್ಲಿಂದ ಸಂಚರಿಸುವುದು ಕಷ್ಟಸಾಧ್ಯವಾಗಿದೆ.
ಮೈದಾನಕ್ಕೆ ಹೊಂದಿಕೊಂಡಿರುವ ವಿವಿಧ ಅಂಗಡಿಗಳ ಎದುರಿಗೆ ಮರಳು ತುಂಬಿದ ಟ್ರಕ್‌ಗಳು ಸಾಲುಗಟ್ಟಿ ನಿಲ್ಲುತ್ತಿರುವುದರಿಂದ ಗ್ರಾಹಕರಿಗೆ ನಮ್ಮ ಅಂಗಡಿಗಳೇ ಕಾಣಿಸದ ಕಾರಣ ವ್ಯಾಪಾರ ನಡೆಸುವುದು ದುಸ್ತರವಾಗಿದೆ.
ಲಕ್ಷಾಂತರ ರೂಪಾಯಿ ಬಾಡಿಗೆ ನೀಡಿ, ಅಂಗಡಿ ಪಡೆದ ನಾವು ಪ್ರತಿವರ್ಷ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಅಲ್ಲಿನ ವ್ಯಾಪಾರಿಗಳು.

ಎಲ್ಲದರ ಮಧ್ಯೆ ಅದೆಷ್ಟೋ ಟ್ರಕ್‌ಗಳು ಪುರಸಭೆ ಕಚೇರಿ ಮುಂಭಾಗದಲ್ಲಿ ಸಾಲುಗಟ್ಟಿ ನಿಲ್ಲುತ್ತಿರುವ ಕಾರಣ ಕಚೇರಿಗೆ ಹೋಗುವವರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಪಕ್ಕದಲ್ಲಿನ ಗುಜರಿ ವ್ಯಾಪಾರಿಗಳು ಅಂಗಡಿಯ ಎದುರಿಗೆ ಇರುವ ತೇರು ಮೈದಾನ ಅರ್ಧದಷ್ಟು ಸ್ಥಳದಲ್ಲಿ ಹಳೆ ಸಾಮಗ್ರಿ ಸಂಗ್ರಹಿಸುತ್ತಿದ್ದಾರೆ.

ಈ ಸ್ಥಳ ನಮ್ಮ ವ್ಯಾಪ್ತಿಗೆ ಒಳಪಟ್ಟಿದ್ದಲ್ಲ. ಆದರೂ ಸಂಬಂಧಪಟ್ಟವರು ತೆರವುಗೊಳಿಸಿಕೊಟ್ಟಲ್ಲಿ ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ.

ವಿಷಯ ತಹಶೀಲ್ದಾರ ಅವರ ಗಮನಕ್ಕೆ ತರುವುದಾಗಿ ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ `ಪ್ರಜಾವಾಣಿ'ಗೆ ತಿಳಿಸಿದರು.

ವಿಶೇಷವಾಗಿ ಮಳೆಗಾಲ ಅವಧಿಯಲ್ಲಿ ಮೊಳಕಾಲುದ್ದ ನೀರು ನಿಂತಾಗ ಅಲ್ಲಿಂದ ಸಂಚರಿಸುವುದು ಅಸಾಧ್ಯ.
ಅಂಥದ್ದರಲ್ಲಿ ವಾಹನಗಳ ನಿಲುಗಡೆಯಿಂದ ಇಡೀ ಪ್ರದೇಶವೇ ಗಬ್ಬು ನಾರುತ್ತಿದೆ. ಸಂಬಂಧಪಟ್ಟವರು ಸದರಿ ಟ್ರಕ್‌ಗಳ ನಿಲುಗಡೆ ಮೇಲೆ ನಿಯಂತ್ರಣ ಹೇರಿ, ತಮಗೆ ನೆಮ್ಮದಿ ಜೀವನ ನಡೆಸಲು ಅನುಕೂಲ ಕಲ್ಪಿಸಬೇಕು ಎನ್ನುವುದು ವ್ಯಾಪಾರಸ್ಥರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT