ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾಫಿಕ್ ಕಿರಿಕಿರಿ, ಸರಿಯಾಗೋದು ಯಾವಾಗ?

ಚಿತ್ರದುರ್ಗ: ಹೆಚ್ಚಿದ ಸಂಚಾರ ದಟ್ಟಣೆ, ವಾಹನ ಸವಾರರ ಗೋಳು
Last Updated 17 ಜುಲೈ 2013, 9:28 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರ ವಿಸ್ತಾರಗೊಂಡಂತೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸಂಚಾರ ದಟ್ಟಣೆ ವಿಪರೀತವಾಗುತ್ತಿದೆ. ಪರಿಣಾಮವಾಗಿ ನಗರದ ಹೃದಯಭಾಗದಲ್ಲೇ ನಿತ್ಯ ಲಘು ಅಪಘಾತಗಳು ಸಂಭವಿಸುತ್ತಿವೆ. ವಾಹನ ಸವಾರರು ರಸ್ತೆಯ ನಡುವೆಯೇ ಜಗಳಕ್ಕೆ ನಿಲ್ಲುತ್ತಾರೆ.

ಸಂಚಾರ ನಿಯಂತ್ರಣಕ್ಕಾಗಿ ನಗರದ ಪ್ರಮುಖ ರಸ್ತೆಯ ಮೂರು ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಮೂರು ವೃತ್ತಗಳಲ್ಲೂ ಸಂಚಾರಿ ನಿಯಂತ್ರಣ ವಿಭಾಗದ ಪೊಲೀಸರ ಕಾವಲಿರುತ್ತದೆ. ಇಷ್ಟಿದ್ದರೂ ಸಂಚಾರಿ ದಟ್ಟಣೆ ನಿಯಂತ್ರಣಕ್ಕೆ ಬರುತ್ತಿಲ್ಲ.

ನಿತ್ಯವೂ ಕಿರಿಕಿರಿ: ನಗರದ ಬೆಂಗಳೂರು- ದಾವಣಗೆರೆ ರಸ್ತೆಯಲ್ಲಿ ದಿನಪೂರ್ತಿ ವಾಹನ ದಟ್ಟಣೆ. ಮೈಸೂರು ಬ್ಯಾಂಕ್ ವೃತ್ತದ ಸಮೀಪದಲ್ಲೇ ಹೆಚ್ಚು ಟ್ರಾಫಿಕ್ ಕಿರಿಕಿರಿ. ಈ ವೃತ್ತದ ನಾಲ್ಕು ದಿಕ್ಕುಗಳಲ್ಲೂ ಬ್ಯಾಂಕ್, ಕಾಲೇಜುಗಳಿವೆ. ಮಾರುಕಟ್ಟೆಗೆ ಹೋಗಲು ಇದೇ ರಸ್ತೆ ಬಳಸುತ್ತಾರೆ.

ಕೆಎಸ್‌ಆರ್‌ಟಿಸಿ ಬಸ್‌ಗಳೆಲ್ಲ ಈ ವೃತ್ತವನ್ನೇ ಹಾದು ಹೋಗಬೇಕು. ಇಷ್ಟು ಸಂಚಾರ ದಟ್ಟಣೆಯ ನಡುವೆ ರಸ್ತೆ ಬದಿಯಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎನ್ನುತ್ತಾರೆ ಕೆಳಗೋಟೆಯ ನಿವಾಸಿ ಹನುಮಂತಪ್ಪ.

ಸಿಗ್ನಲ್ ಗಲಿಬಿಲಿ: ಮೈಸೂರು ಬ್ಯಾಂಕ್ ವೃತ್ತ ಹಾಗೂ ಎಂ.ಜಿ ವೃತ್ತದಲ್ಲಿ ಸಿಗ್ನಲ್‌ಗಳ ಅಸಮರ್ಪಕ ಕಾರ್ಯ ನಿರ್ವಹಣೆಯಿಂದ ಸಮಸ್ಯೆಯಾಗಿದೆ. ಒಂದು ಸಿಗ್ನಲ್‌ನಿಂದ ಮತ್ತೊಂದು ಸಿಗ್ನಲ್‌ಗೆ ಬದಲಾವಣೆ ಮಾಡುವಾಗ ಸಮಯದ ಅಂತರವಿಲ್ಲ. ಹೀಗಾದಾಗ ಎರಡೂ ದಿಕ್ಕಿನಿಂದ ವಾಹನ ಸವಾರರು ನುಗ್ಗುತ್ತಾರೆ. ಹಾಗಾಗಿ ಸಿಗ್ನಲ್ ಬದಲಾವಣೆ ಸಮಯದಲ್ಲಿ 2-3 ಸೆಕೆಂಡ್ ಕಾಲಾವಕಾಶ ನೀಡಬೇಕು ಎನ್ನುತ್ತಾರೆ ಕೆಳಗೋಟೆಯ ತಿಪ್ಪೇಸ್ವಾಮಿ.

ದನಗಳ ಹಾವಳಿ: ಬೀಡಾಡಿ ದನಗಳ ಹಾವಳಿಯಿಂದ ನಗರದ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ. ಈಚೆಗೆ ಜಿಲ್ಲಾಧಿಕಾರಿ ದನಗಳ ಮಾಲೀಕರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದರೂ, ಸಮಸ್ಯೆ ಪರಿಹಾರವಾಗಿಲ್ಲ. ಈ ದನಗಳು ಎಂ.ಜಿ. ವೃತ್ತ, ಬಸ್ ನಿಲ್ದಾಣದಲ್ಲಿ ಹೆಚ್ಚಾಗಿ ಬೀಡು ಬಿಡುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ.

ಪಾರ್ಕಿಂಗ್ ಅವ್ಯವಸ್ಥೆ: ಪ್ರಮುಖ ರಸ್ತೆ ಮತ್ತು ನಗರದ ಒಳಭಾಗದ ರಸ್ತೆಗಳ ಬದಿಯಲ್ಲಿ ಮನಸ್ಸಿಗೆ ಬಂದ ಹಾಗೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಕಾರುಗಳನ್ನು ನಿಲ್ಲಿಸುವವರು ಸಂಚಾರ ನಿಯಮಗಳನ್ನು ಪಾಲಿಸುವುದಿಲ್ಲ. ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿ `ನೋ ಪಾರ್ಕಿಂಗ್' ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಾರೆ.

ಇದರಿಂದ ರಾಜೇಂದ್ರ  ವೃತ್ತದ ಕಡೆಗೆ ಪ್ರಯಾಣಿಸುವವರಿಗೆ, ಡಿಸಿ ಕಚೇರಿಗೆ ಬರುವವರಿಗೆ ತೊಂದರೆಯಾಗುತ್ತಿದೆ. ಪಾರ್ಕಿಂಗ್ ಅವ್ಯವಸ್ಥೆಯಿಂದಾಗಿ ರಸ್ತೆಗಳು ಕಿರಿದಾಗುತ್ತವೆ, ಸಂಚಾರ ಸಂಕಷ್ಟವಾಗುತ್ತಿದೆ ಎನ್ನುವುದು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಗೂ ವಕೀಲರ ಆರೋಪ.

ಶಿಸ್ತು ಅಗತ್ಯ: ಕಿರಿದಾದ ರಸ್ತೆಗಳಲ್ಲಿ ಸ್ಥಳದ ಕೊರತೆಯಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗಿದ್ದರೆ, ವಿಶಾಲವಾಗಿರುವ ಹೊಳಲ್ಕೆರೆ ರಸ್ತೆ, ದಾವಣಗೆರೆ ರಸ್ತೆಯಲ್ಲೂ ಈ ಸಮಸ್ಯೆ ಕಾಣುತ್ತಿದೆ. ವಿಶಾಲ ರಸ್ತೆಗಳಲ್ಲಿ ವಿಭಜಕವಿಲ್ಲದ್ದರಿಂದ ಮನಸೋಇಚ್ಛೆ ವಾಹನ ಚಾಲನೆ ಮಾಡುತ್ತಾರೆ.

ಈ ರಸ್ತೆಗಳಲ್ಲಿ ಆಟೊ ಚಾಲಕರು ವಾಹನಗಳನ್ನು ಹಿಂದಿಕ್ಕುವ ಪ್ರಯತ್ನದಲ್ಲಿ ಸಹ ಸವಾರರನ್ನು ತಳ್ಳಿಕೊಂಡು ಹೋಗುತ್ತಾರೆ. ತಿರುವಿನ ಸಿಗ್ನಲ್ ಬಳಸದೇ ಆಟೊ ಚಾಲನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ರಸ್ತೆ ವಿಶಾಲವಾಗಿದ್ದರೂ ಟ್ರಾಫಿಕ್ ಕಿರಿಕಿರಿ ಮಾತ್ರ ತಪ್ಪಿಲ್ಲ ಎನ್ನುತ್ತಾರೆ ವಿ.ಪಿ. ಬಡಾವಣೆಯ ಎಸ್.ಶ್ರೀನಿವಾಸ್.

ವಿ.ಪಿ.ಬಡಾವಣೆಯ ಮುಖ್ಯ ರಸ್ತೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ರಸ್ತೆ ದಾಟುವುದೇ ಕಷ್ಟವಾಗುತ್ತಿದೆ. ಈ ರಸ್ತೆಯಲ್ಲಿ ಪಾದಚಾರಿ ಮಾರ್ಗವನ್ನು ಪ್ರತ್ಯೇಕಿಸಿ, ರಸ್ತೆಯ ನಿಗದಿತ ಸ್ಥಳದಲ್ಲೇ (ಲೇನ್) ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎನ್ನುವುದು ವಿ.ಪಿ.ಬಡಾವಣೆಯ ಉಮಾ ಅವರ ಅಭಿಪ್ರಾಯ.

ಪೊಲೀಸರು ಬೇಕು: ನಗರದ ಪ್ರಮುಖ ವೃತ್ತಗಳನ್ನು ಹೊರತುಪಡಿಸಿ ಬೇರೆಲ್ಲೂ ಸಂಚಾರ ಪೊಲೀಸರನ್ನು ನಿಯೋಜಿಸಿಲ್ಲ.  ವಿಶೇಷವಾಗಿ ಶಾಲೆ ಬಿಡುವ ವೇಳೆಯಲ್ಲಿ ಸೇಂಟ್ ಜೋಸೆಫ್ ಕಾನ್ವೆಂಟ್ ಹಾಗೂ ವಿದ್ಯಾವಿಕಾಸ ಶಾಲೆಗಳ ಸಮೀಪದಲ್ಲಿ ಸಂಚಾರ ದಟ್ಟಣೆ ಹೆಚ್ಚು. ಇಂಥ ವೃತ್ತಗಳಲ್ಲಿ ಸಂಚಾರ ಪೊಲೀಸರು ವಾಹನಗಳನ್ನು ನಿಯಂತ್ರಿಸಿ, ಮಕ್ಕಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವುದು ಪೋಷಕರ ಒತ್ತಾಯ.

`ಸಿಗ್ನಲ್ ಸರಿಪಡಿಸಲು ಕ್ರಮ'
ನಗರದಲ್ಲಿ ಎಲ್ಲೆಲ್ಲಿ, ಯಾವ ಪ್ರಮಾಣದಲ್ಲಿ ಸಂಚಾರ ದಟ್ಟಣೆ ಇದೆ ಎಂಬುದನ್ನು ಆಧರಿಸಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದಾದರೆ ಸಿಗ್ನಲ್ ಬದಲಾವಣೆಯ ಸಮಯವನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಸಂಚಾರ ನಿಯಮ ಉಲ್ಲಂಘಿಸುವ ಆಟೊ ಚಾಲಕರ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ನಗರದಲ್ಲಿರುವ ಆಟೊಗಳಿಗೆ ಸಂಚಾರಿ ಪೊಲೀಸ್ ವಿಭಾಗದಿಂದ ಪ್ರತ್ಯೇಕ ಸಂಖ್ಯೆ ನೀಡಲಾಗಿದೆ. `ಟಿಪಿಎಸ್' ಎಂಬ ಹೆಸರಿನಿಂದ ಆಟೊ ಸಂಖ್ಯೆಯನ್ನು ಗುರುತಿಸಲಾಗುತ್ತದೆ. ಇದರ ಜತೆಗೆ ರಾತ್ರಿ ಪಾಳಿಯಲ್ಲಿ ಆಟೊ ಚಾಲನೆ ಮಾಡುವವರಿಗೆ ಪ್ರತ್ಯೇಕ ಪರವಾನಗಿ ನೀಡುತ್ತೇವೆ. 

ನಗರದಲ್ಲಿ ವಾಹನ ನಿಲುಗಡೆಗೆ ಸ್ಥಳಗಳನ್ನು ಗುರುತಿಸುವ ಕೆಲಸ ಆರಂಭವಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ, ಯಾವ ರಸ್ತೆಯ ಯಾವ ಬದಿಯಲ್ಲಿ  ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ಸೂಚಿಸಲಾಗುತ್ತದೆ. ಹಿಂದೆ ಈ ವ್ಯವಸ್ಥೆ ಜಾರಿಯಲ್ಲಿತ್ತು. ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತದೆ.

ಶೀಘ್ರದಲ್ಲೇ ವಾಹನ ಸವಾರರಿಗೆ `ಸಂಚಾರ ನಿಯಮಗಳ' ಅರಿವು ಮೂಡಿಸುವ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಕುರಿತು ಸೂಚನೆ ನೀಡಿದ್ದಾರೆ. ವೃತ್ತಗಳಲ್ಲಿ `ಜೀಬ್ರಾ' ಕ್ರಾಸಿಂಗ್, ವಿಭಜಕ ಅಳವಡಿಕೆ ನಗರಸಭೆಗೆ ಬಿಟ್ಟ ವಿಚಾರ.
- ಎಸ್.ಕೆ.ಶಂಕರ್, ಇನ್‌ಸ್ಪೆಕ್ಟರ್, ಸಂಚಾರ ವಿಭಾಗ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT