ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾಫಿಕ್ ಗಲ್ಲಿ ಅಂಗೈನೆಲ್ಲಿ!

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಒಂದೆಡೆ ಅರೆಬರೆ ಮೆಟ್ರೊ ಕಾಮಗಾರಿ. ಮತ್ತೊಂದೆಡೆ ಹಿಡಿ ಜಾಗದಲ್ಲೇ ತಲೆಯೆತ್ತುತ್ತಿರುವ ಕಟ್ಟಡಗಳು. ಸಾಲದೆಂಬಂತೆ ದಿನೇದಿನೇ ಏರುತ್ತಿರುವ ವಾಹನಗಳ ಸಂಖ್ಯೆ. ಫುಟ್‌ಪಾತ್ ಮೇಲೂ ಸ್ಕೂಟರ್‌ಗಳ ಸರ್ಕಸ್. ಈ ಎಲ್ಲಾ ಇಕ್ಕಟ್ಟುಗಳ ನಡುವೆ ನುಸುಳಿಕೊಂಡು ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಹಿಂದಿರುಗುವಷ್ಟರಲ್ಲಿ ಹೋದ ಜೀವ ಮರಳಿಬಂದಂತೆ. ಇದು ದಿನನಿತ್ಯ ನಗರವಾಸಿಗಳು ಸಮಸ್ಯೆಗಳಿಗೆ ಒಡ್ಡಿಕೊಳ್ಳುವ ಪರಿ.

ಮೆಟ್ರೊ, ಅಂಡರ್‌ಪಾಸ್, ಫ್ಲೈ ಓವರ್, ಓವರ್ ಬ್ರಿಜ್ ಹೀಗೆ ಬೃಹತ್ ಕಾಮಗಾರಿಗಳ ಜತೆ ಅಲ್ಲಲ್ಲಿ ಅಗೆಯುವ ಚಿಕ್ಕ ಪುಟ್ಟ ಗುಂಡಿಗಳಿಗೂ ಪೈಪೋಟಿಗಿಳಿಯುತ್ತವೆ. ಅದೂ ಟ್ರಾಫಿಕ್ ಜಾಮ್‌ಗೆ ನೆಪ. ಇನ್ನು ಮಳೆ ಬಂದರಂತೂ ಪರಿಸ್ಥಿತಿ ಹೇಳತೀರದು. ಇದಕ್ಕೆ ಪೂರಕವಾಗಿ ಪ್ರಸ್ತುತ ನಲವತ್ತು ಲಕ್ಷಕ್ಕೂ ಹೆಚ್ಚು ವಾಹನಗಳು ನಗರದಲ್ಲಿವೆ.

ಆದರೆ ಈ ಟ್ರಾಫಿಕ್ ಸಮಸ್ಯೆಯನ್ನು ಪ್ರತಿದಿನ ಶಪಿಸುತ್ತಾ ಸಾಗುವ ಬದಲು ಟ್ರಾಫಿಕ್ ಜಂಜಾಟದಿಂದ ಪಾರಾಗುವ ಸಾಧ್ಯತೆ ಇದೆ ಎನ್ನುತ್ತಿದೆ ಬಿಟಿಐಎಸ್ (ಬೆಂಗಳೂರು ಟ್ರಾನ್ಸ್‌ಪೋರ್ಟ್ ಇನ್ಫರ್ಮೇಷನ್ ಸಿಸ್ಟಂ) ವೆಬ್‌ಸೈಟ್. ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ತಂತ್ರಜ್ಞಾನದ ಸಹಕಾರ ನೀಡಲು ಅಶ್ವಿನ್ ಮಹೇಶ್ ಎಂಬುವರು `ಮ್ಯಾಪುನಿಟಿ ಇನ್‌ಫರ್ಮೇಶನ್ ಸಿಸ್ಟಂ' ಅನ್ನು ಆರಂಭಿಸಿದ್ದು, ಇದರ ಭಾಗವಾಗಿ ನಗರದ ಪ್ರತಿ ಕ್ಷಣದ ಟ್ರಾಫಿಕ್ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಟ್ರಾಫಿಕ್ ಮಾನಿಟರಿಂಗ್ ಸೆಂಟರ್ ಸಹಯೋಗದೊಂದಿಗೆ 2005ರಲ್ಲಿ ಪರಿಚಯಿಸಿದರು.

ನಗರದ ಸಂಚಾರ ಹೊರೆಯನ್ನು ಸರಾಗಗೊಳಿಸುವ ಉದ್ದೇಶ ಹೊಂದಿರುವ ಈ ಜಾಲತಾಣ ಪ್ರತಿಕ್ಷಣದ ಸಂಚಾರ ದಟ್ಟಣೆಯ ಮಾಹಿತಿಯನ್ನೂ ನಗರಿಗರಿಗೆ ನೀಡುತ್ತದೆ. ಟ್ರಾಫಿಕ್, ಸಂಚಾರ ಸಂಬಂಧಿ ಮಾಹಿತಿ, ಪಾಲ್ಗೊಳ್ಳುವಿಕೆ ಹಾಗೂ ಮೊಬೈಲ್- ಹೀಗೆ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಈ ವೆಬ್‌ಸೈಟ್ ಜನರಿಗೆ ಸಹಕರಿಸಲಿದೆ. ಮಾಹಿತಿಯಡಿಯಲ್ಲಿ ಟ್ರಾಫಿಕ್, ಸಂಚಾರ ನಿರ್ದೇಶನ, ದಂಡ, ಆರ್‌ಟಿಒ, ಸಾರ್ವಜನಿಕ ಕಚೇರಿಗಳು, ಸುರಕ್ಷತಾ ಕ್ರಮ, ಬಸ್‌ಗಳ ಕುರಿತು ಹಾಗೂ ಪಾರ್ಕಿಂಗ್ ಬಗೆಗೆ ಮಾಹಿತಿ ಪಡೆಯಬಹುದು. ವೆಬ್‌ಸೈಟ್ ಬಳಸಿಕೊಂಡು ಕಾರ್ ಪೂಲಿಂಗ್ ಮಾಡಬಹುದು. ಟ್ರಾಫಿಕ್‌ಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗೆಗೆ ಪ್ರತಿಕ್ರಿಯೆಗಳನ್ನೂ ನೀಡಬಹುದು. ಇನ್ನು ಮೊಬೈಲ್ ಮೂಲಕ `ಅಪ್ಲಿಕೇಶನ್ ಡೌನ್‌ಲೋಡ್' ಮಾಡಿಕೊಂಡು ಕ್ಷಣಕ್ಷಣದ ಮಾಹಿತಿ ಪಡೆಯಬಹುದು.

`ನಗರದಲ್ಲಿ 179 ಜಂಕ್ಷನ್‌ಗಳಲ್ಲಿ ಲೈವ್ ಕ್ಯಾಮೆರಾ ಅಳವಡಿಸಿದ್ದು, ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್‌ನಲ್ಲಿ (ಟಿಎಂಸಿ- ವಾಹನ ದಟ್ಟಣೆ ನಿರ್ವಹಣಾ ಕೇಂದ್ರ) ನಗರದ ಪ್ರತಿ ಕ್ಷಣದ ಟ್ರಾಫಿಕ್ ಮಾಹಿತಿಯೂ ದಾಖಲಾಗುತ್ತದೆ (ರೆಕಾರ್ಡ್ ಆಗುತ್ತದೆ). ಇದರಿಂದ ಟ್ರಾಫಿಕ್ ಪೊಲೀಸರಿಗೆ ಮಾತ್ರವಲ್ಲದೆ ಬಿಟಿಐಎಸ್ ವೆಬ್‌ಸೈಟ್‌ನ ಮೂಲಕವೂ ಮಾಹಿತಿ ಸಾರ್ವಜನಿಕರಿಗೂ ತಲುಪುತ್ತದೆ' ಎನ್ನುತ್ತಾರೆ ಹೆಚ್ಚುವರಿ ಸಂಚಾರ ಪೊಲೀಸ್ ಆಯುಕ್ತ ಡಾ. ಎಂ.ಎ.ಸಲೀಂ.

ವಾಹನ ದಟ್ಟಣೆ ಸೂಚಕ
ಬೆಳಿಗ್ಗೆ ಹೊತ್ತು ಕೆಲಸಕ್ಕೆ ಹೋಗುವ ಗಡಿಬಿಡಿ. ಕೆಲಸ ಬಿಟ್ಟರೆ ಮನೆ ಸೇರುವ ಆತುರ. ಆದರೆ ನಮಗಿದ್ದಷ್ಟೇ ಅವಸರ ವಾಹನಗಳನ್ನು ತುಂಬಿಕೊಂಡ ರಸ್ತೆಗಳಿಗೆ ಇರುವುದಿಲ್ಲ. ಈ ಸಂದರ್ಭದಲ್ಲಿ ಮೊಬೈಲ್ ಮೂಲಕ ವೆಬ್‌ಸೈಟ್‌ಗೆ ಲಾಗಿನ್ ಆದರೆ ಸಾಕು, ನಿಮ್ಮ ದಾರಿ ಸ್ಪಷ್ಟ. ನೀವು ಹೋಗುವ ದಾರಿಯಲ್ಲಿ ಟ್ರಾಫಿಕ್ ಜಾಮ್ ಎಷ್ಟಿದೆ, ಆ ರಸ್ತೆಯ ಬದಲು ಬೇರೆ ಯಾವ ಪರ್ಯಾಯ ಮಾರ್ಗದಲ್ಲಿ ಹೋಗಬಹುದು? ಬಸ್‌ನಲ್ಲಿ ಹೋಗಬೇಕಾದರೆ ಯಾವ ನಂಬರಿನ ಬಸ್ ಹತ್ತಬೇಕು, ಆ ಬಸ್ ಯಾವ ಮಾರ್ಗದಲ್ಲಿ ಸಾಗುತ್ತದೆ ಎಂಬಿತ್ಯಾದಿ ಮಾಹಿತಿ ಪಡೆಯಲು ಸಾಧ್ಯ.

ಕಾರ್ ಪೂಲಿಂಗ್
`ಆಟೊ ಶೇರಿಂಗ್' ಬಗ್ಗೆ ನಿಮಗೆ ಗೊತ್ತಿರಬಹುದು. ನೀವು, ನಿಮ್ಮ ಪರಿಚಿತರು ಒಂದೇ ದಾರಿಯಲ್ಲಿ ಎಲ್ಲಿಗಾದರೂ ಹೋಗಬೇಕೆಂದರೆ, ಒಟ್ಟಿಗೆ ಆಟೊ ಹಿಡಿದು ಮೀಟರ್ ದರವನ್ನು ಹಂಚಿಕೊಳ್ಳುವುದುಂಟು. ಆದರೆ ಕಾರುಗಳಿಗೂ ಇಂತಹ ಅವಕಾಶವಿದೆ. ಅದು ಕಾರ್ ಪೂಲಿಂಗ್ ಆಯ್ಕೆ ಮೂಲಕ. ನಿಮ್ಮ ದಾರಿಯಲ್ಲಿ ನೀವು ಗೊತ್ತುಪಡಿಸಿದ ಕಾರಿನಲ್ಲಿ ಅದೇ ಮಾರ್ಗವಾಗಿ ಹೋಗಬೇಕಾದ ಮತ್ತೊಬ್ಬರನ್ನೂ ಸಂಪರ್ಕಿಸಿ ಹಣದ ಹೊರೆಯನ್ನೂ ಕಡಿಮೆ ಮಾಡಿಕೊಳ್ಳಬಹುದು. ನಿಮ್ಮ ಮೊಬೈಲ್‌ನಂಬರ್ ನಮೂದಿಸಿ ಈ ಅವಕಾಶ ಪಡೆಯಬಹುದು.

ಪಾರ್ಕಿಂಗ್ ಮಾಹಿತಿ
ವಾಹನ ದಟ್ಟಣೆ ಟ್ರಾಫಿಕ್ ಸಮಸ್ಯೆಗೆ ಒಂದು ಕಾರಣವಾದರೆ, ಪಾರ್ಕಿಂಗ್ ಇನ್ನೊಂದು ಕಾರಣ. ನಿರ್ದಿಷ್ಟ ಸ್ಥಳಕ್ಕೆ ಹೋಗಬೇಕೆಂದರೆ ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆಯೋ ಇಲ್ಲವೋ ಎಂಬುದನ್ನೂ ಮುಂಚಿತವಾಗಿ ತಿಳಿದುಕೊಳ್ಳುವುದೂ ಅವಶ್ಯಕ. ಎಲ್ಲೆಲ್ಲಿ ಪಾರ್ಕಿಂಗ್‌ಗೆ ಸೂಕ್ತ ಅವಕಾಶವಿದೆ ಎಂಬುದನ್ನೂ ಈ ಜಾಲತಾಣದಲ್ಲಿ ಕಂಡುಕೊಳ್ಳುವ ಅವಕಾಶವಿದೆ. ಇದರಿಂದ ಪಾರ್ಕಿಂಗ್‌ಗೆಂದು ಅನವಶ್ಯಕವಾಗಿ ಸಮಯ ವ್ಯರ್ಥವಾಗುವುದು ತಪ್ಪುತ್ತದೆ. ನಿಮ್ಮಂತೆ ಮತ್ತೊಬ್ಬರು ಟ್ರಾಫಿಕ್ ಕಿರಿಕಿರಿಯಿಂದ ಪರಿತಪಿಸಬಾರದು ಎಂಬ ಕಾಳಜಿ ಇದ್ದರೆ, ನಿಮ್ಮ ಪ್ರತಿಕ್ರಿಯೆಯನ್ನೂ ವೆಬ್‌ಸೈಟ್‌ನಲ್ಲಿ ನಮೂದಿಸಬಹುದು. ವೆಬ್‌ಸೈಟ್: www.btis.in

ಒಂದಿಷ್ಟು ಮಾಹಿತಿ...
ರಸ್ತೆಗಳ ಚಿತ್ರಣ ತೋರುವ ನಕ್ಷೆಯೂ ವೆಬ್‌ಸೈಟ್‌ನಲ್ಲಿದೆ. ನಗರದ ಪೂರ್ಣ ಭೂಪ್ರದೇಶದ ನಕ್ಷೆಯಲ್ಲಿ ಕೆಂಪು, ಹಸಿರು, ಕೇಸರಿ ಬಣ್ಣಗಳಲ್ಲಿ ರಸ್ತೆಗಳ ವಾಸ್ತವ ಪರಿಸ್ಥಿತಿ ಬಿಂಬಿಸುವ ಬಿಂದುಗಳಿರುತ್ತವೆ. ಕೆಂಪು ಸಂಪೂರ್ಣ ವಾಹನ ದಟ್ಟಣೆ ಇದೆ ಎಂಬುದನ್ನು ಸೂಚಿಸಿದರೆ, ಕೇಸರಿ ವಾಹನ ಸಂಚಾರ ನಿಧಾನಗತಿಯಲ್ಲಿ ಇರುವುದನ್ನು ಸಂಕೇತಿಸುತ್ತದೆ. ಹಸಿರು ಇದ್ದರೆ ಅಲ್ಲಿ ಸಂಚಾರ ಸರಾಗವಾಗಿದೆ ಎಂದರ್ಥ. ನಗರದ ಸುಮಾರು 600 ಬಿಎಂಟಿಸಿ ಬಸ್‌ಗಳಿಗೆ ಜಿಪಿಎಸ್ ಸಾಧನ ಅಳವಡಿಸಿದ್ದು, ಇದರಿಂದ ವಾಹನಗಳ ದಟ್ಟಣೆಯನ್ನು ತಿಳಿಯಬಹುದು.

ಟ್ರಾಫಿಕ್ ಲೈವ್ ಕ್ಯಾಮೆರಾ
ನಕ್ಷೆಗಳ ಜೊತೆ ಟ್ರಾಫಿಕ್‌ನ ನೈಜ ಚಿತ್ರಣ ನೀಡುವಂತಹ `ಟ್ರಾಫಿಕ್ ಸರ್ವಿಲನ್ಸ್ ಕ್ಯಾಮೆರಾ'ಗಳ ಮೂಲಕ ವೆಬ್‌ಸೈಟ್‌ನಲ್ಲಿ ವಾಹನ ದಟ್ಟಣೆ ಪ್ರಮಾಣವನ್ನು ನೇರವಾಗಿ ನೋಡಬಹುದು. ನಿರ್ದಿಷ್ಟ ಸ್ಥಳವನ್ನು ನಮೂದಿಸಿದರೆ, ಅಲ್ಲಿನ ಟ್ರಾಫಿಕ್ ಚಿತ್ರಣ ತೆರೆಮೇಲೆ ಮೂಡುತ್ತದೆ. 179ಜಂಕ್ಷನ್‌ಗಳಲ್ಲಿ ಈ ಲೈವ್ ಕ್ಯಾಮೆರಾಗಳು ಇರುವುದರಿಂದ ಟ್ರಾಫಿಕ್ ಪರಿಸ್ಥಿತಿ ಸುಲಭವಾಗಿ ತಿಳಿಯುತ್ತದೆ. ಅಷ್ಟೇ ಅಲ್ಲ, ಈ ಮಾಹಿತಿ ಕ್ಷಣಕ್ಷಣಕ್ಕೂ ಅಪ್‌ಡೇಟ್ ಆಗುತ್ತಿರುತ್ತದೆ.

ಮಾರ್ಗ ಕಂಡುಕೊಳ್ಳಿ
ಕೇವಲ ಟ್ರಾಫಿಕ್ ಕುರಿತು ಮಾಹಿತಿ ಸಿಕ್ಕರೆ ಸಾಕೆ? ಬೆಂಗಳೂರಿನಂಥ ಮಹಾನಗರದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಪರದಾಡುವ ಪರಿಸ್ಥಿತಿ ಸಹಜ. ಆದರೆ ಚಿಂತಿಸಬೇಕಿಲ್ಲ.

ಬಸ್ ಸರ್ಚ್ ಆಯ್ಕೆಯಲ್ಲಿ ನೀವು ಪ್ರಸ್ತುತ ಇರುವ ಜಾಗ ಮತ್ತು ತಲುಪಬೇಕಾದ ಸ್ಥಳದ ಹೆಸರನ್ನು ನಮೂದಿಸಿದರೆ ಸಾಕು. ಯಾವ ಬಸ್ ಅಲ್ಲಿಗೆ ಹೋಗುತ್ತದೆ, ಯಾವ ಮಾರ್ಗದಲ್ಲಿ ಎಂಬುದನ್ನು ಕಂಡುಕೊಳ್ಳಬಹುದು. ನಿರ್ದಿಷ್ಟ ಸ್ಥಳವನ್ನು ನಮೂದಿಸಿದರೆ ನೀವು ಹೋಗಬೇಕಾದ ಬಸ್ ನಂಬರ್‌ಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ. ಹಸಿರು ಬಣ್ಣದ ಬಿಗ್ 10 ಬಸ್, ನೀಲಿ ಬಣ್ಣದ ಬಿಗ್ ಸರ್ಕಲ್ ಬಸ್‌ಗಳು ಸಂಚರಿಸುವ 12 ಮಾರ್ಗದ ವಿವರಗಳು ಈ ವೆಬ್‌ಸೈಟ್‌ನಲ್ಲಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT