ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಿಪ್ಪು ಮತ್ತು ಟಾಯ್ಲೆಟ್

ಸಂಕ್ರಾಂತಿ ಪ್ರಬಂಧ ಸ್ಪರ್ಧೆ, ಮೆಚ್ಚುಗೆ ಪಡೆದ ಪ್ರಬಂಧ
Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕಾರ್ಗತ್ತಲ ರಾತ್ರಿ. ನಮ್ಮ ಬಸ್ ಕತ್ತಲೆಯನ್ನು ಸೀಳಿಕೊಂಡು ರಭಸದಿಂದ ಮುನ್ನುಗ್ಗುತ್ತಿತ್ತು. ಯಾರೋ ಕಿಟಕಿಯನ್ನು ಅರೆತೆರೆದಿದ್ದರು. ಅಲ್ಲಿಂದ ಒಳ ನುಸುಳಿದ ಕುಳಿರ್ಗಾಳಿ ಬಸ್‌ನ ತುಂಬೆಲ್ಲ ನುಸುಳಿ ಇನ್ನಿಲ್ಲದ ಉಪದ್ರವ ಕೊಡುತ್ತಿತ್ತು. ಕರಾವಳಿ ಒಳನಾಡಾದ ಕಾರಣ ನಮ್ಮೂರಲ್ಲಿ ಆ ಚಳಿಗಾಲದಲ್ಲೂ ಬೆವರಿಸುವ ಸೆಖೆಯಿತ್ತು. ಜಗತ್ತಿನಲ್ಲೆಲ್ಲ ಅದೇ ವಾತಾವರಣ ಇರಬಹುದು ಅಂತ ನಂಬಿಕೊಂಡ ಶತದಡ್ಡಿ ನಾನು ನಾಯಿ ನಾಲಗೆಯಂತಾ ಶಾಲು ತಂದಿದ್ದೆ. ಪರಿಣಾಮ ಅಕ್ಷರಶಃ ಗಡಗಡ ನಡುಕ. ಪುಣ್ಯಕ್ಕೆ ಅದ್ಯಾವುದೋ ಊರು ಹತ್ತಿರವಾಗುತ್ತಿದ್ದಂತೆ ಡ್ರೈವರ್ ಬಸ್ ನಿಲ್ಲಿಸಿದ. `ಹತ್ತ್ ನಿಮ್ಶ ಟೈಮಿದೆ ನೋಡಿ...' ಕಂಡಕ್ಟರ್ ಎಲ್ಲರನ್ನೂ ಬಡಿದೆಬ್ಬಿಸುವ ಹಾಗೆ ಗಟ್ಟಿಯಾಗಿ ಕಿರುಚಿದ. ಶಾಲಿನೊಳಗೆ ಹೂತುಕೊಂಡೇ ಹೊರಬಂದೆ. ಆವರೆಗೆ ಅನುಭವಿಸಿದ್ದ ಸಿಕ್ಕಾಪಟ್ಟೆ ಚಳಿಗೆ ಟಾಯ್ಲೆಟ್‌ಗೆ ಹೋಗೋದು ಅರ್ಜೆಂಟಾಗಿತ್ತು.

ಪಾನ್‌ಬೀಡಾ ಸ್ಟಾಲಿದ್ದ ಪುಟ್ಟ ಗೂಡಂಗಡಿಯಲ್ಲಿ ಒಂದಿಷ್ಟು ಜನ ಹೊಗೆ ಬಿಡುತ್ತಾ ಚಾ ಕುಡೀತಿದ್ದರು. ತುಸುವೇ ದೂರದಲ್ಲಿದ್ದ ಹೋಟೆಲಿಂದ ಬರುತ್ತಿದ್ದ `ಧೂಂ ಮಚಾಲೇ..' ಹಾಡಿಗೂ ತಾನು ಎಳೆಯುತ್ತಿದ್ದ ಸಿಗರೇಟಿಗೂ ಏನಾದ್ರೂ ಸಂಬಂಧ ಇರಬಹುದಾ ಅಂತೇನೋ ಯೋಚನೆ ಮಾಡುತ್ತಿದ್ದ ದಪ್ಪ ಕಣ್ಣಿನ ಆಸಾಮಿ ನನ್ನನ್ನೇ ಗುರಾಯಿಸತೊಡಗಿದ. ಗಮನಿಸದಂತೆ ಮುಂದೆ ಹೋದೆ.

ಈ ರಾತ್ರಿಯನ್ನು ಗುತ್ತಿಗೆ ತೆಗೆದುಕೊಂಡವರ ಹಾಗೆ ಗಂಡಸರು ನಿಂತಿದ್ದರು. ಒಂದು ಹೆಣ್ಣು ಪ್ರಾಣಿಯೂ ಇಲ್ಲ. ಯಾರಲ್ಲಿ ಕೇಳುವುದು? `ಏನು ಬೇಕಿತ್ತು ಮೇಡಂ' ಗಾಬರಿ ಬಿದ್ದು ನೋಡಿದೆ. ಆ ದಪ್ಪ ಗಂಡಸಿನ ಕಣ್ಣಿಂದ ತಪ್ಪಿಸಿಕೊಳ್ಳುವ ತರಾತುರಿಯಲ್ಲಿ ಹೊಟೇಲ್‌ನ ಹತ್ತಿರಕ್ಕೆ ಬಂದಿದ್ದೆ. ಕ್ಯಾಷಿಯರ್ ಸೀಟ್‌ನಲ್ಲಿ ಕೂತಿದ್ದವನು ನನ್ನನ್ನು ಗಮನಿಸಿ ಎಲ್ಲೋ ಟೀ ಕುಡಿಯಲು ಬಂದಿರಬೇಕು ಅಂತಂದುಕೊಂಡು ಆ ಪ್ರಶ್ನೆ ಕೇಳಿದ್ದ. ಆ ಅಪರಾತ್ರಿ ಗಂಡು ಪ್ರಪಂಚದಲ್ಲಿ ಒಬ್ಬಳೇ ಕೂತು ಚಾ ಕುಡಿಯುವಷ್ಟು ಧೈರ್ಯ ಆ ಹೊತ್ತಿಗೆ ನನಗಿರಲಿಲ್ಲ. `ಏನಿಲ್ಲ' `ಲೇಡೀಸ್ ಟಾಯ್ಲೆಟ್ ಎಲ್ಲಿದೆ?' ಅಂತ ಕೇಳಿದೆ. ಜೋರಾಗಿ ಹಾಕಿದ್ದ ಹಾಡು, ಚಾ ಕುಡೀತಿದ್ದವರ ಗಲಾಟೆ ಮಧ್ಯೆ `ಏನಿಲ್ಲ' ಎಂದಿದ್ದಷ್ಟೇ ಕೇಳಿರಬೇಕು ಆ ಆಸಾಮಿಗೆ. ಬೇರೆ ಗಿರಾಕಿಗಳ ಕಡೆ ಹೊರಳಿ ವಿಚಾರಿಸತೊಡಗಿದ.

ಗಂಡಸರೆಲ್ಲ ರೋಡ್‌ಸೈಡ್ ನಿಂತೇ ಮೂತ್ರಶಂಕೆ ತೀರಿಸಿಕೊಳ್ಳುತ್ತಿದ್ದರು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಕಂಡಕ್ಟರ್, `ಈ ಹೊಟೇಲ್ ಹಿಂದೆ ಹೋಗಿ ಮೇಡಂ. ಲೆಫ್ಟ್ ಸೈಡ್‌ನಲ್ಲೇ ಇದೆ' ಅಂದ. ಕೊಚ್ಚೆ ನೀರು ಅದೇ ದಾರಿಯಲ್ಲೇ ಹೋಗುತ್ತಿತ್ತು. ಕಾಲೆಲ್ಲ ಪಿಚಪಿಚ.

ಪ್ಯಾಂಟನ್ನ ತುಸು ಮೇಲಕ್ಕೆತ್ತಿ ಅದೇ ದಾರಿಯಲ್ಲಿ ಹೆಜ್ಜೆ ಹಾಕಿದೆ. ಅರೆ ಬೆಳಕಲ್ಲಿ ನೀಲಿ ಡ್ರಮ್‌ನಲ್ಲಿ ನೀರು ತುಂಬಿಟ್ಟಿದ್ದು ಕಾಣಿಸಿತು. ಕೆಟ್ಟ ವಾಸನೆ ಮೂಗಿಗೆ ಬಡಿಯಿತು. ಅಲ್ಲಿಗೆ ಟಾಯ್ಲೆಟ್ ಇರುವುದು ಕನ್‌ಫರ್ಮ್. ವಾಸನೆಯ ಜಾಡುಹಿಡಿದು ಹೋದರೆ ಸೊಟ್ಟಗೆ `ಶೌಚಾಲಯ' ಅಂತ ಬೋರ್ಡ್. ಮಿಣಮಿಣ ಬೆಳಕಿನಲ್ಲಿ `ಮಹಿಳೆಯರಿಗೆ' ಅಂತ ಬರೆದದ್ದು ಕಂಡು ಧೈರ್ಯ ಬಂತು.

ಕುತ್ತಿಗೆಗೆ ಕೆಂಪನೆಯ ಟವೆಲ್ ಸುತ್ತಿಕೊಂಡಿದ್ದ ವ್ಯಕ್ತಿಯೊಬ್ಬ ಮೆಟ್ಟಲಿನ ಮೇಲೆ ಕೂತು ಸಂಜೆ ಪೇಪರಿನೊಳಗೆ ಮುಳುಗಿ ಹೋಗಿದ್ದ. ಎರಡು ರೂಪಾಯಿ ಕಾಯಿನ್ ಮುಂದಿಟ್ಟು ಅಡಿಯಿಟ್ಟದ್ದೇ `ಮೇಡಂ' ಅಂತ ಕಿರುಚಿದ್ದು ಕಂಡು ತಿರುಗಿ ನೋಡಿದೆ. `ಒಂದ್ನಿಮಿಷ ಇಲ್ಲೇ ನಿಲ್ಲಿ ಈಗ್ಬಂದೆ' ತನ್ನ ಪೋಲಿಯೊ ಕಾಲೆಳೆಯುತ್ತಾ ಟಾಯ್ಲೆಟ್ ಒಳಹೊಕ್ಕು ದಬದಬ ಬಾಗಿಲು ಬಡಿಯತೊಡಗಿದ. ಒಂದಿಬ್ಬರು ಗಂಡಸರು ಡ್ರೆಸ್ ಸರಿ ಮಾಡಿಕೊಂಡು ಸರಸರನೆ ಹೊರನಡೆದರು. ಏನಾಗ್ತಿದೆ ಇಲ್ಲಿ ಅಂತ ಗೊತ್ತಾಗದೇ ಬೆಪ್ಪಳ ಹಾಗೆ ನೋಡುತ್ತಿದ್ದಾಗ, ಪಾನ್‌ಬೀಡಾ ಜಗಿದು ಕೆಂಪಾಗಿದ್ದ ಹಲ್ಲುಗಳನ್ನು ಧಾರಾಳವಾಗಿ ತೆರೆದು, `ಈಗ ಹೋಗಿ ಮೇಡಂ' ಅಂದ. ಅರ್ಜೆಂಟಾಗಿದ್ದ ಕಾರಣ ಸೀದಾ ಒಳ ಹೋದೆ. ಟಾಯ್ಲೆಟ್ ಒಳ ಗೋಡೆಯ ಮೇಲೆ ಕೆಂಪು ಸೀರೆಯೊಂದು ಅಸಹಜವಾಗಿ ನೇತಾಡುತ್ತಿತ್ತು. ಕಾಲಡಿ ಸಿಗರೇಟಿನ ತುಂಡುಗಳು. ವಾಸನೆಗೆ ಬವಳಿ ಬಂದಂತಾಯ್ತು. ಸಾವರಿಸಿಕೊಂಡು ಟಾಯ್ಲೆಟ್ ಒಳಹೊಕ್ಕೆ. ಯೂಸ್ ಮಾಡಿ ಎಸೆದ ಪ್ಯಾಡ್‌ನಿಂದ ಬರುತ್ತಿದ್ದ ದುರ್ನಾತ. ಹೊಕ್ಕಷ್ಟೇ ವೇಗವಾಗಿ ಹೊರಬಂದೆ. ಚಿಲಕವಿಲ್ಲದ ಕೊನೆಯ ಟಾಯ್ಲೆಟ್‌ನಲ್ಲೇ ಕೆಲಸ ಪೂರೈಸಿ ಬಸ್ ಹತ್ತಿ ಕೂತಾಗಲೇ ನಿರಾಳ.

ಶಾಲೆಯ ದಿನಗಳು ನೆನಪಾದವು. ನಾನೋದಿದ್ದ ಪುಟ್ಟ ಹಳ್ಳಿಯ ಶಾಲೆಯಲ್ಲಿ ಶೌಚಾಲಯವಿರಲಿಲ್ಲ. ಹುಡುಗರು ಪೊದೆಗಳಲ್ಲಿ ಮೂತ್ರ ಮಾಡುತ್ತಿದ್ದರೆ, ಹುಡುಗಿಯರು ಗುಡ್ಡೆಯ ಬದಿ ಓಡಿಹೋಗಿ `ಒಂದಾ' ಮಾಡುತ್ತಿದ್ದೆವು. ಹತ್ತು ನಿಮಿಷದ ಆ ಅವಧಿಯಲ್ಲಿ `ಕುಲೆ' ಅಂತ ಕರೆಸಿಕೊಳ್ಳುವ ಪಿಶಾಚಿಗಳು, ಭೂತದ ಕಥೆಗಳು ಮಕ್ಕಳ ನಾಲಿಗೆಯಲ್ಲಿ ಬೇರೆಬೇರೆ ಆಕಾರ ಪಡೆದು ನಮ್ಮನ್ನು ಬೆಚ್ಚಿಬೀಳಿಸುತ್ತಿದ್ದವು. ಸಂಜೆ ಶಾಲೆ ಬಿಟ್ಟ ಮೇಲೆ ಕಾಡುದಾರಿಯಲ್ಲಿ ನಡೆದು ಹೋಗುವಾಗ ಸಣ್ಣ ತರಗೆಲೆಯ ಶಬ್ದವೂ ನಮ್ಮನ್ನು ಬುಡ ಹಿಡಿದು ಅಲುಗಾಡಿಸುತ್ತಿತ್ತು. ಹೈಸ್ಕೂಲ್‌ನಲ್ಲಿ ಟಾಯ್ಲೆಟ್ ಇದ್ದರೂ ಅಲ್ಲಿ ಒಂದು ತೊಟ್ಟು ನೀರಿಲ್ಲದೇ, ಮತ್ತೆ ಗುಡ್ಡದ ಪೊದರಿನಲ್ಲಿ ಕಾರ್ಯ ಪೂರೈಸುತ್ತಿದ್ದೆವು.

ಬಯಲು ಶೌಚಾಲಯಕ್ಕೆ ಸಂಬಂಧಪಟ್ಟ ಹಾಗೆ ನನಗೆ ಮರೆಯಲಾಗದ ಅನುಭವವಾದದ್ದು ಹಿಮಾಲಯದ ಕಡೆ ಹೊರಟಾಗ. ಮನಾಲಿಯಿಂದ ಹೊರಡುವ ಹಿಂದಿನ ದಿವಸ, ನಾಳೆ ತಿನ್ನಲಿಕ್ಕೆ ಸಿಗುತ್ತದೋ ಇಲ್ಲವೋ ಅಂತ ಸಿಕ್ಕಿದ್ದೆಲ್ಲ ತಿಂದಿದ್ದೆ.

ಅಂದುಕೊಂಡದ್ದು ನಿಜವಾಯಿತು. ಮರುದಿನ ತಿನ್ನುವುದಕ್ಕೆ ಬೇಕಾದಷ್ಟು ಸಿಕ್ಕಿದರೂ ನನಗೆ ಮಾತ್ರ ತಿನ್ನಲಾಗಲಿಲ್ಲ.
ಅದು ಬೆಳಗಿನ ಜಾವದ 4.30ರ ಹೊತ್ತು. ಐದಕ್ಕೆ ಮನಾಲಿಯಿಂದ ಹೊರಡುವ ಬಸ್‌ನಲ್ಲಿ ಪ್ರಯಾಣಿಸಿ, ಸಂಜೆ ಐದರ ಹೊತ್ತಿಗೆ ನಾವು ಹಿಮಾಲಯದ ಕೊನೆಯ ವಾಹನ ನಿಲ್ದಾಣ ಸ್ಪಿತಿ ಕಣಿವೆಯ ಕಾಝಾ ತಲುಪಬೇಕಿತ್ತು. ಹೊಟ್ಟೆಯಲ್ಲಿ ಅದಾಗಲೇ ಪ್ರಳಯ ಶುರುವಾಗಿತ್ತು. ಇನ್ನೇನು ಬಸ್ ಹೊರಡಬೇಕು ಅನ್ನುವಷ್ಟರಲ್ಲಿ ಬಳಬಳ ವಾಂತಿ.

ಅಲ್ಲಿಂದ ಶುರು. ಹಿಮಾಲಯ ಪರ್ವತಗಳನ್ನು ಕಣ್ತುಂಬಿಕೊಳ್ಳಬೇಕೆಂಬ ನನ್ನ ಆಸೆಯ ನಡುವೆಯೇ ಹಿಮಾಲಯದ ತಪ್ಪಲು ತಪ್ಪಲುಗಳಲ್ಲಿ ಭೇದಿ ಮಾಡಿಕೊಂಡದ್ದು ಮಾತ್ರ ಮರೆಯಲಾಗದ ಅನುಭವ. ಬೆಳಗಿನ ಐದರ ಹಿಮಾಲಯದ ಅದ್ಭುತ ಸೂರ್ಯೋದಯವನ್ನು ನಮ್ಮ ತಂಡದ ಎಲ್ಲರೂ ಆಸ್ವಾದಿಸುತ್ತಾ ಫೋಟೊ ತೆಗೆಯುತ್ತಿದ್ದರೆ ನಾನು ಹೊಟ್ಟೆ ನೋವಿಂದ ಮುಖ ಕಿವುಚಿಕೊಂಡು ಒದ್ದಾಡುತ್ತಿದ್ದೆ. ಎರಡೂ ಬದಿ ಗಗನಚುಂಬಿ ಬೆಟ್ಟಗಳು, ಕೆಳಗೆ ಆಳದ ಕಮರಿಗಳ ದರ್ಶನ ಮಾಡಿಸುತ್ತಾ ಸಂಪೂರ್ಣ ಹಿಮದಿಂದಾವೃತವಾದ ರೋಹ್ತಾಂಗ್‌ಪಾಸ್‌ನಲ್ಲಿ ಬಸ್ ನಿಂತಿತು. ಸಮುದ್ರ ಮಟ್ಟಕ್ಕಿಂತ 13,051 ಅಡಿ ಎತ್ತರದ ರುದ್ರರಮಣೀಯ ರೋಹ್ತಾಂಗ್‌ಪಾಸ್‌ನಲ್ಲಿ ಎಲ್ಲರೂ ಶಿಖರಗಳ ದರ್ಶನ ಮಾಡುತ್ತಿದ್ದರೆ, ನಾನು ಚಳಿಯಲ್ಲಿ ಗಡಗಡ ನಡುಗುತ್ತಾ ಶೌಚಾಲಯ ಎಲ್ಲಿ ಅಂತ ಹುಡುಕುತ್ತಿದ್ದೆ.

ಎಡಗಡೆ ಬಣ್ಣ ಬಣ್ಣದ ಟೆಂಟ್‌ಗಳಿದ್ದವು. ಅದರಲ್ಲೊಂದರಲ್ಲಿ ಟಾಯ್ಲೆಟ್. `ಲೇಡೀಸ್ ಟಾಯ್ಲೆಟ್?' ಅಂದ್ರೆ ಸುಮ್ಮನೇ ನಕ್ಕ ವ್ಯಕ್ತಿಯೊಬ್ಬ  ಅಲ್ಲೇ ಹೋಗು ಅಂತ ಸೂಚಿಸಿದ. `ಇಲ್ಲೆಲ್ಲ ಟಾಯ್ಲೆಟ್ ಇರೋದೇ ಅಪರೂಪ. ಅಂತದ್ದರಲ್ಲಿ ನೀನು ಲೇಡೀಸ್, ಜಂಟ್ಸ್ ಅಂತೆಲ್ಲ ಮಾತಾಡ್ತೀಯಲ್ಲ?' ಫ್ರೆಂಡ್ ದಬಾಯಿಸಿದ. ನಮ್ಮೂರಲ್ಲೆಲ್ಲೂ ಕಾಣಸಿಗದ ಪೆಟ್ಟಿಗೆಯಂತಾ ಆಕೃತಿಯೊಳಗೆ ಶೌಚ ಕಾರ್ಯ  ಪೂರೈಸಬೇಕು. ನೀರಿಗೆ ಕೈ ಹಾಕಿದ ಕೂಡಲೇ ಶಾಕ್ ಹೊಡೆದಂತೆ ಕೈ ಹಿಂದಕ್ಕೆಳೆದುಕೊಂಡೆ. ತಂಪು ಅಂದ್ರೆ ತಂಪು. ಅದಕ್ಕಿಂತ ತಂಪಿರಲು ಸಾಧ್ಯವಿಲ್ಲ ಅಷ್ಟೆ. ದೇವರೇ ನನ್ನ ಆಗಿನ ಪರಿಸ್ಥಿತಿ ಯಾರಿಗೆ ಹೇಳಲಿ?

ಟಾರಿಲ್ಲದ ಕಾಲುದಾರಿಯಂತಿದ್ದ ಮಾರ್ಗದಲ್ಲಿ ತನ್ನ ದೈತ್ಯದೇಹದ ಸಮತೋಲನ ಸಾಧಿಸುತ್ತಾ ಎಚ್‌ಎಸ್‌ಆರ್‌ಟಿ ಬಸ್ ಆಮೆ ಗತಿಯಲ್ಲಿ ಸಾಗುತ್ತಿತ್ತು. ಒಂದೊಂದು ತಿರುವು ಬಂದಾಗಲೂ ಪ್ರವಾಸಿಗರ ಎದೆಬಡಿತ ಏರುತ್ತಿತ್ತು. ಸೀಟಿಗೊತ್ತಿ ಕುಳಿತು ಸಮತೋಲನ ಕಾಯ್ದುಕೊಳ್ಳಲು ಹೆಣಗುತ್ತಿದ್ದೆ. ಸ್ವಲ್ಪ ಎಚ್ಚರ ತಪ್ಪಿದರೂ ಬಸ್‌ನಲ್ಲೇ ಭೇದಿ. ಬಚಾವ್! ಹೊರಟ ಎರಡೇ ಗಂಟೆಯಲ್ಲಿ ಬಸ್ ಡಾಬಾ ಬಳಿ ನಿಂತುಬಿಟ್ಟಿತು.

ಆದರೆ ಒಂದು ಸಣ್ಣ ಪೊದರೂ ಇಲ್ಲದೆ ಬಣ್ಣ ಬಣ್ಣದ ಪುಟ್ಟ ಹೂಗಳಿಂದ ತುಂಬಿದ್ದ ಆ ಪ್ರದೇಶದಲ್ಲಿ ಎಲ್ಲಿ ಕೂತರೂ ಜನರಿಗೆ ಕಾಣುವಂತಿತ್ತು. ಗಂಡಸರು ಮಾತ್ರ ಯಾವ ನಾಚಿಗೆಯೂ ಇಲ್ಲದೆ ದಾರಿ ಬದಿಯೇ ನಿಂತು ಕರ್ಫ್ಯೂ ಹೇರಿದ್ದರು. ನಾನೆಂಬ ಸೂಕ್ಷ್ಮಜೀವಿ ವಾಟರ್ ಬಾಟಲ್ ಹಿಡಿದು ಅಲ್ಲಿಂದಿಲ್ಲಿ ಓಡಾಡಿದ್ದೇ ಬಂತು. ಜಾಗ ಸಿಗಲಿಲ್ಲ. ತಂದಿದ್ದ ಕೊಡೆಯನ್ನೇ ಅಡ್ಡ ಹಿಡಿದು ಕೂತೆ. ಅಷ್ಟರಲ್ಲಿ ಪರ್ವತದ ಕೆಳ ಪ್ರದೇಶದಿಂದ ಸ್ಥಳೀಯ ಜನರಿಬ್ಬರು ನಾನು ಕೂತಿದ್ದ ಜಾಗದ ಹತ್ತಿರ ಬರಲಾರಂಭಿಸಿದರು. ಏನಾದರಾಗಲಿ ಅಂದುಕೊಂಡು ಕೂತಲ್ಲಿಂದ ಕದಲಲಿಲ್ಲ. ಸೂಕ್ಷ್ಮ ಅರಿತು ಅವರೇ ದಾರಿ ಬದಲಾಯಿಸಿದರು.

ಮುಗಿಲೆತ್ತರ ಬೆಟ್ಟಗಳ ತಪ್ಪಲಲ್ಲಿ ಸದ್ದು ಮಾಡುತ್ತಾ ಹರಿಯುತ್ತಿದ್ದ ಚಂದ್ರಾ ನದಿ. ಅದರ ತೀರದಲ್ಲಿ ಶೀಟು ಹೊದೆಸಿದ ನಾಲ್ಕೈದು ಜೋಪಡಿಗಳು, ಚಾರಣಿಗರ ಕ್ಯಾಂಪ್‌ಗಳು. ಬೆಟ್ಟವಿಳಿದು ಬರುವ ಬಸ್, ಟ್ಯಾಕ್ಸಿಗಳು ಇಲ್ಲಿ ಒಂದು ಸುದೀರ್ಘ ನಿಟ್ಟುಸಿರು ಬಿಟ್ಟು ನಿಂತುಬಿಡುತ್ತವೆ. ಡ್ರೈವರ್‌ಗಳು ಜೋಪಡಿ ಹೆಂಗಸರ ಜತೆ ಹರಟುತ್ತಾ ಟೀ ಹೀರುತ್ತಾರೆ. ಪ್ರಯಾಣಿಕರು ನದಿಯ ದಂಡೆಯಲ್ಲಿ ಸಣ್ಣ ವಾಕ್ ಮಾಡುತ್ತಾರೆ. ನನ್ನದು ಯಥಾಪ್ರಕಾರ ವಾಟರ್ ಬಾಟಲ್ ಹಿಡಿದು ಸರ್ವೇ ಕಾರ್ಯ. ಬ್ಲಾಕ್ ಟೀ ಕುಡಿದು ಯಥಾಸ್ಥಾನಂ ಉದ್ವಾಸಯಾಮಿ.

ಇದೀಗ ಸ್ವಲ್ಪ ದೂರ ನದಿಯ ದಂಡೆಯಲ್ಲೇ ಪಯಣ. ನಾವು ಹೋದಲ್ಲೇ ದಾರಿ. ದೊಡ್ಡ ದೊಡ್ಡ ಕಲ್ಲುಗಳ ನಡುವೆ ಓಲಾಡುತ್ತಾ, ಮುಂದೆ ಹೋದರೆ ರಸ್ತೆ ಮಧ್ಯೆಯೇ ಹರಿಯುವ ಝರಿ. ಅದು ಛೋಟಾದಾರಾ. ಮೊಣಗಂಟಿಗಿಂತ ಮೇಲಿರುವ ನೀರಲ್ಲೂ ಉಬ್ಬಸ ಬಂದವರಂತೆ ಬಸ್ ಚಲಿಸುತ್ತಿತ್ತು. ನನ್ನ ಸ್ಥಿತಿ ತೀರಾ ಹದಗೆಡುತ್ತಿತ್ತು. ತೊಟ್ಟು ನೀರು ಕುಡಿದರೂ ಒಂದೋ ವಾಂತಿ, ಇಲ್ಲಾ ಇನ್ನೊಂದು! ಬತಾಲ್ ಎಂಬ ಪರ್ವತಗಳೇ ಕೋಟೆಯಂತೆ ಸುತ್ತುವರಿದಿದ್ದ ಒಂಟಿ ಧಾಬಾದಲ್ಲಿ ಸ್ನೇಹಿತರ ಬಲವಂತಕ್ಕೆ ಚಾವಲ್, ಸಬ್ಜಿ ತಿಂದದ್ದೇ ಪರಿಸ್ಥಿತಿ ಕೈ ಮೀರಿ ಹೋಯ್ತು. ಹಿಮಪರ್ವತಗಳಿಂದ ಬಲವಾಗಿ ಬೀಸಿಬರುತ್ತಿದ್ದ ಹಿಮಗಾಳಿಗೆ ತತ್ತರಿಸುತ್ತಾ ನಾನು ಬೆಟ್ಟದಡಿ ವಾಟರ್ ಬಾಟಲ್ ಹಿಡಿದು ಕುಸಿದು ಕುಳಿತಿರುತ್ತಿದ್ದೆ. ಒಂಚೂರೂ ಬೇಜಾರು ಮಾಡಿಕೊಳ್ಳದೇ ಪರಿಸ್ಥಿತಿ ಅರ್ಥ ಮಾಡಿಕೊಂಡ ಚಾಲಕ ನನಗಾಗಿ ಕಾಯುತ್ತಿದ್ದ.

ಮಧ್ಯಾಹ್ನ 3.45. ದೇಹದ ಶಕ್ತಿಯೆಲ್ಲ ಸೋರಿಹೋಗಿ ಅರೆಜೀವವಾಗಿದ್ದ ನಾನು ಆಗಷ್ಟೇ ಕಣ್ಣುತೆರೆದಿದ್ದೆ. ಬಟಾಣಿ ಹೊಲಗಳನ್ನು ಕಂಡು ಕಾಝಾ ಬಂದೇಬಿಟ್ಟಿತು ಅಂದುಕೊಂಡೆ. ಇಲ್ಲ, ಇನ್ನೂ ಎರಡು ಗಂಟೆ ದಾರಿ ಉಳಿದಿತ್ತು. ಯಾರೋ ಬಾಯಿಗೆ ಗ್ಲೂಕೋಸ್ ಹಾಕಿದರು. ಮತ್ತೆ ಕಣ್ಣು ಮುಚ್ಚಿದೆ. ಮತ್ತೆ ಎಚ್ಚರವಾದದ್ದು ಕಾಝಾದಲ್ಲೇ. ನನ್ನ ಸ್ಥಿತಿ ಕಂಡು ನಾವು ಉಳಿದುಕೊಳ್ಳಬೇಕಿದ್ದ ಹೊಟೇಲ್‌ನವರು ಅವರ ಟ್ಯಾಕ್ಸಿಯಲ್ಲೇ ಆಸ್ಪತ್ರೆಗೆ ಸಾಗಿಸಿದರು.

ದೊಡ್ಡ ಗೋದಾಮಿನಂತಿದ್ದ ಆಸ್ಪತ್ರೆಯಿಡೀ ಕತ್ತಲು. ಜನರೇಟರ್ ಕೆಟ್ಟು ಹೋಗಿತ್ತು. ಒಂದಿಬ್ಬರು ನರ್ಸ್‌ಗಳು ಕೊಳಕಾದ ರೂಮೊಂದರಲ್ಲಿ ಮಲಗಿಸಿದರು. ರೂಮ್‌ಗಿಂತ ಹತ್ತು ಪಟ್ಟು ಕೊಳಕಾಗಿ ಕೋಣೆಗೆ ಅಟ್ಯಾಚ್ ಆಗಿದ್ದ ಆ ಟಾಯ್ಲೆಟ್ ಕೆಟ್ಟು ಯಾವುದೋ ಯುಗವಾಗಿತ್ತು. ಹಳದಿ ಬಣ್ಣಕ್ಕೆ ತಿರುಗಿದ್ದ ಕ್ಯಾನೊಂದನ್ನು ಕೊಟ್ಟು ಕೊನೇ ರೂಮಿನ ಕಡೆ ಕೈ ತೋರಿಸಿದ ಆಯಾ, ಹಿಂದಿ ಮಿಶ್ರಿತ ಭೋಟಿ ಭಾಷೆಯಲ್ಲಿ ಅದೇನೋ ಹೇಳಿದಳು. ಅರ್ಥವಾಯ್ತು. ಗಂಟೆಗೆ ಇಪ್ಪತ್ತು ಇಪ್ಪತ್ತೈದು ಬಾರಿ ಟಾಯ್ಲೆಟ್‌ಗೆ ಹೋಗಬೇಕಾದ ಸ್ಥಿತಿಯಲ್ಲಿ ನೀರು ಸರಬರಾಜು ರಾತ್ರಿಯಿಡೀ ನಿರಂತರವಾಗಿ ನಡೆಯುತ್ತಿತ್ತು.

`ಏ ಅಂವ ಹುಡುಗ. ಅವ ಮಾಡ್ತಾನೆ ಅಂತ ನೀನೂ ರೋಡ್‌ಸೈಡ್ ಉಚ್ಚೆ ಮಾಡೋದಾ? ಕೊಳಕಿ!' ಅಜ್ಜಿ ಎಲ್ಲರೆದುರು ಬೈದು ಮರ್ಯಾದೆ ತೆಗೆದಿದ್ದರು. ದೂರ ಎಲ್ಲಾದರೂ ಹೋಗುವಾಗ ಅಪ್ಪ, ತಮ್ಮ ರೋಡ್ ಸೈಡಲ್ಲೇ ಉಚ್ಚೆ ಮಾಡಿದ್ರೆ ನಾನು, ಅಮ್ಮ ಟಾಯ್ಲೆಟ್ ಹುಡುಕಿಕೊಂಡು ಹೋಗಬೇಕಿತ್ತು. ಸಿಕ್ಕಿದರೆ ಸಿಕ್ಕಿತು. ಇಲ್ಲದಿದ್ದರೆ ಹೊಟ್ಟೆನೋವೇ ಗತಿ. ಒಂದ್ಸಲ ಸಿಟ್ಟು ಬಂದು ಕೇಳಿದ್ದೆ. `
ಅವರೆಲ್ಲ ಮಾಡ್ತಾರೆ, ನಾನ್ಯಾಕೆ ಮಾಡ್ಬಾರ್ದು?' ಅಂತ. `ಶ್ಶೀ ಅವರೆಲ್ಲ ನೋಡ್ತಾರೆ.' ಅಮ್ಮ ನಸು ಮುನಿಸಿನಿಂದ ಹೇಳಿದ್ದಳು. `ಅವರು ಮಾಡಿದ್ರೆ ನಾವೆಲ್ಲ ನೋಡಿದ್ರೆ ಪರವಾಗಿಲ್ವಾ?' ಅಂದಾಗ `ಅವರು ಗಂಡಸರು. ನಡುರೋಡಲ್ಲಿ ಮಾಡ್ತಾರೆ ಅಂತ ನಾನೂ ನೀನೂ ಮಾಡಲಿಕ್ಕಾಗುತ್ತಾ?' ಅಂದಿದ್ಲು.

ಗಂಡಸರು ನೋಡುತ್ತಾರೆ ಅನ್ನುವ ಮುಜುಗರಕ್ಕೆ, ದುರ್ವಾಸನೆ ಬೀರುವ ಗಾಳಿಯಾಡದ ಗೂಡಿನಂತಾ ರೂಮಿನೊಳಗೆ ಕೂತು ಗಡಿಬಿಡಿಯಲ್ಲಿ ಶೌಚ ಕ್ರಿಯೆ ಮುಗಿಸುತ್ತಿದ್ದುದು ನೆನಪಾಗಿ ನಗು ಬಂತು.

ಹಿಮಾಲಯ ನನಗೆ ಬೇರೆಯದೇ ಪಾಠ ಕಲಿಸಿತ್ತು. ಟಾಯ್ಲೆಟ್‌ಗಳಿಲ್ಲದ ಅಲ್ಲಿನ ಹಳ್ಳಿ ಹೆಣ್ಣು ಮಕ್ಕಳೂ ನನ್ನಮ್ಮನ ಮಾತು ಮೀರಿ ಬೆಳೆದಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT