ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೈವ್ಯಾಲಿ ವಿ.ವಿ. ಹಗರಣ- ಶಿಕ್ಷಣಕ್ಕೆ ಭಂಗವಾಗದಂತೆ ತೀರ್ಪು:ಭರವಸೆ

Last Updated 2 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅತಂತ್ರಗೊಂಡಿರುವ ಟ್ರೈವ್ಯಾಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕಾಲ್ಪಟ್ಟಿ ತೊಡಿಸಿರುವುದಕ್ಕೆ ಭಾರತ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿರುವ ಬೆನ್ನಲ್ಲೇ, ಈ ಪ್ರಕರಣಗಳ ವಿಚಾರಣೆ ವೇಳೆ ‘ಸಾಮಾನ್ಯ ಜ್ಞಾನ ಆಧರಿಸಿ ಸೂಕ್ತ ತೀರ್ಪು’ ನೀಡುವುದಾಗಿ ಅಮೆರಿಕದ ವಲಸೆ ಇಲಾಖೆ ಭರವಸೆ ನೀಡಿದೆ.

ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ  ನಿರ್ದೇಶಕ (ಐಸಿಇ) ಜಾನ್ ಭಾರತದ ರಾಯಭಾರಿ ಮೀರಾ ಶಂಕರ್ ಅವರಿಗೆ ಈ ಭರವಸೆ ನೀಡಿದ್ದಾರೆ.

ಮೋಸ ಹೋಗಿರುವ ಭಾರತೀಯ ವಿದ್ಯಾರ್ಥಿಗಳ ಚಲನವಲನದ ಮೇಲೆ ನಿಗಾ ಇರಿಸಲೆಂದು ರೇಡಿಯೊ ಕಾಲರ್ ತೊಡಿಸಿರುವ ಐಸಿಇ ಹಾಗೂ ಅಮೆರಿಕದ ಮತ್ತಿತರ ಇಲಾಖೆಗಳ ಕಾರ್ಯವೈಖರಿ ವಿರುದ್ಧ ಭಾರತದ ರಾಯಭಾರ ಕಚೇರಿ ತೀವ್ರ ಆಕ್ಷೇಪ ಎತ್ತಿದ ಹಿನ್ನೆಲೆಯಲ್ಲಿ ಮೋರ್ಟನ್ ಅವರು ಮೀರಾ ಶಂಕರ್‌ರನ್ನು ಭೇಟಿಯಾಗಿದ್ದರು.

ಟ್ರೈವ್ಯಾಲಿ ಹಗರಣ ಪ್ರಕರಣದಲ್ಲಿ ಬಹುತೇಕ ಭಾರತೀಯ ವಿದ್ಯಾರ್ಥಿಗಳು ಮುಗ್ಧರು. ಆದರೆ ಕೆಲವರು ಇದರಲ್ಲಿ ಭಾಗಿಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲವೆಂದು ಮಾತುಕತೆ ವೇಳೆ ಮೋರ್ಟನ್ ಅಭಿಪ್ರಾಯಪಟ್ಟರು ಎನ್ನಲಾಗಿದೆ.

ಈ ಪ್ರಕರಣವನ್ನು ಸಾಮಾನ್ಯೀಕರಿಸುವುದಿಲ್ಲ.  ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಕರಣವನ್ನೂ ಬಿಡಿ ಪ್ರಕರಣವೆಂದು ಭಾವಿಸಿ ಸೂಕ್ತ ಮಾರ್ಗೋಪಾಯ ಹುಡುಕುವುದಾಗಿ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಅರ್ಹ ಭಾರತೀಯ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಭಂಗವಾಗದಂತೆ ವಿಪುಲ ಅವಕಾಶಗಳನ್ನು ಸೃಷ್ಟಿಸುವ ಜತೆಗೆ ಪರ್ಯಾಯ ಆಯ್ಕೆಗಳನ್ನು ಒದಗಿಸುವ ಭರವಸೆಯನ್ನೂ ನೀಡಿದ್ದಾರೆ. ಆದರೆ ಇದೇ ವೇಳೆ ಕೆಲವರನ್ನು ಬಲವಂತವಾಗಿ ದೇಶದಿಂದ ಹೊರಹಾಕುವ ಕಠಿಣ ಕ್ರಮವೂ ಜಾರಿಗೊಳ್ಳಬಹುದು ಎನ್ನಲಾಗಿದೆ.

ಈ ಮಧ್ಯೆ ಭಾರತದ ರಾಯಭಾರಿ ಮೀರಾ ಶಂಕರ್ ಅವರು ಐಸಿಇ ಮಾತ್ರವಲ್ಲದೆ ಗೃಹ ಇಲಾಖೆ ಹಾಗೂ ವಿದೇಶಾಂಗ ಇಲಾಖೆಗಳ ಜತೆಯೂ ಈ ಕುರಿತು ಗಂಭೀರವಾಗಿ ಚರ್ಚಿಸಿದ್ದಾರೆ.

ಬೇರೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅನುವು ಕಲ್ಪಿಸುವ ‘ಸ್ಟೂಡೆಂಟ್ ಅಂಡ್ ಎಕ್ಸ್‌ಚೇಂಜ್ ವಿಸಿಟರ್ ಇನ್‌ಫರ್ಮೇಷನ್ ಸಿಸ್ಟಮ್’ (ಸೆವಿಸ್) ಸೇವೆಯನ್ನು ಸ್ಥಗಿತಗೊಳಿಸಿರುವುದರ ವಿರುದ್ಧ ಅವರು ಧ್ವನಿ ಎತ್ತಿದ್ದಾರೆ.

ಟ್ರೈವ್ಯಾಲಿಯಲ್ಲಿದ್ದ ಭಾರತೀಯ  ವಿದ್ಯಾರ್ಥಿಗಳಿಗೆ ಅಮೆರಿಕವನ್ನು ತೊರೆಯುವ ಉದ್ದೇಶವಿಲ್ಲವಾದ್ದರಿಂದ ಹಾಗೂ ಅವರೆಲ್ಲರ ಬಳಿಯೂ ನಿಯಮಬದ್ಧ ವೀಸಾ ಇರುವುದರಿಂದ ಅವರಿಗೆ ರೇಡಿಯೊ ಕಾಲರ್ ಕಟ್ಟುವ ಅಗತ್ಯವಿಲ್ಲ ಎಂದು ಅವರು ವಾದಿಸಿದ್ದಾರೆ.

ಟ್ರೈವ್ಯಾಲಿ ವಿ.ವಿ. ಸ್ಥಾಪಕ ಹಾಗೂ ಅಧ್ಯಕ್ಷ ಸೂಸನ್ ಸು ವಿರುದ್ಧ ನಡೆದಿರುವ ತನಿಖೆಯಲ್ಲಿ ಭಾರತದ ವಿದ್ಯಾರ್ಥಿಗಳನ್ನು ಬಲಿಪಶು ಮಾಡಬಾರದು. ತನ್ನ ವಿದ್ಯಾರ್ಥಿಗಳ ಸ್ಥಿತಿಯನ್ನು ಮಾನವೀಯ ನೆಲೆಯಲ್ಲಿ ನೋಡಬೇಕು ಎಂದೂ ಮೀರಾ ಒತ್ತಾಯಿಸಿದ್ದಾರೆ.

ಭಾರತೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಬಾರದು. ತಾವಾಗಿಯೇ ಬಯಸುವ ವಿದ್ಯಾರ್ಥಿಗಳಿಗೆ ಸ್ವದೇಶಕ್ಕೆ ತೆರಳಲು ಅವಕಾಶ ಕಲ್ಪಿಸಬೇಕು. ಜತೆಗೆ, ಅಮೆರಿಕದ ಅಧಿಕೃತ ವಿ.ವಿ.ಗಳಲ್ಲಿ ಪ್ರವೇಶ ಪಡೆಯುವುದಕ್ಕೆ ಪೂರಕವಾಗಿ ಪುನಃ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.


ಉಚಿತ ಕಾನೂನು ನೆರವು
ವಾಷಿಂಗ್ಟನ್ (ಪಿಟಿಐ): ಟ್ರೈವ್ಯಾಲಿ ವಿ.ವಿ. ಹಗರಣದಿಂದಾಗಿ ತೊಂದರೆಗೆ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಭಾರತೀಯ ಕಾನ್ಸುಲೇಟ್ ಕಚೇರಿ ಮತ್ತು ದಕ್ಷಿಣ ಏಷ್ಯಾ ವಕೀಲರ ಸಂಘಗಳು (ಎಸ್‌ಎಬಿಎ) ಉಚಿತ ಕಾನೂನು ಶಿಬಿರ ಏರ್ಪಡಿಸಿವೆ.

ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಶನಿವಾರ ಉಚಿತ ಶಿಬಿರ ನಡೆಯಲಿದೆ. ಇಂತಹುದೇ ಉಚಿತ ಶಿಬಿರಗಳನ್ನು ಬೇರೆ ನಗರಗಳಲ್ಲಿರುವ ಕಾನ್ಸುಲೇಟ್ ಕಚೇರಿಗಳಲ್ಲಿ ನಡೆಸುವ ಬಗ್ಗೆ ಭಾರತೀಯ ರಾಯಭಾರ ಕಚೇರಿ ಪ್ರಯತ್ನಶೀಲವಾಗಿದೆ ಎನ್ನಲಾಗಿದೆ.

ಸಂತ್ರಸ್ತ ವಿದ್ಯಾರ್ಥಿಗಳು ಒಬ್ಬ ವಕೀಲರಿಂದ ಮತ್ತೊಬ್ಬ ವಕೀಲರತ್ತ ಎಡತಾಕುತ್ತಿದ್ದುದನ್ನು ನೋಡಿ ಉಚಿತ ಶಿಬಿರ ನಡೆಸಲು ನಿರ್ಧರಿಸಲಾಯಿತು ಎಂದು ಕಾನ್ಸುಲೇಟ್ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT