ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೋಫಿ ಬೇಡ !

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

ಚೀನಾದಲ್ಲಿ ನಡೆದ ಏಷ್ಯನ್ ಬೀಚ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡ ಚಾಂಪಿಯನ್ ಪಟ್ಟದೊಂದಿಗೆ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಇಂತಹ ದೊಡ್ಡ ಸಾಧನೆಗೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಸಿಗಲಿಲ್ಲ. ಸಹಜವಾಗಿಯೇ ಚಿನ್ನದ ಹುಡುಗಿಯರು ನಿರಾಸೆ ಹಾಗೂ ಅಸಮಾಧಾನಗೊಂಡಿದ್ದಾರೆ.

ಪ್ರಶಸ್ತಿ ಪಡೆದ ಈ ನಾಲ್ವರ ತಂಡ ಕಳೆದೊಂದು ತಿಂಗಳಿನಿಂದ ಉದ್ಯಾನ ನಗರಿಯ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್‌ಎಐ) ಕಠಿಣ ತರಬೇತಿ ಪಡೆಯುತ್ತಿದೆ. ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ (ಬಿಎಫ್‌ಐ) ಕೋಚ್ ಪ್ರೇಮ್ ಕುಮಾರ್ ತಂಡಕ್ಕೆ ತರಬೇತಿ ನೀಡುತ್ತಿದ್ದಾರೆ.

ಜುಲೈ ಏಳರಿಂದ ತೈವಾನ್‌ನಲ್ಲಿ ನಡೆಯಲಿರುವ ವಿಲಿಯಂ ಜಾನ್ಸ್ ಕಪ್‌ಗಾಗಿ ತಂಡ ತಯಾರಿ ನಡೆಸುತ್ತಿದೆ. ತಂಡದ ಗೀತು ಅನ್ನಾ ಜೋಸ್ (ಕೇರಳ), ಅನಿತಾ ಪಾಲ್ ದೊರೈ (ನಾಯಕಿ-ಚೆನ್ನೈ), ಕಿರಣ್‌ಜೀತ್ ಕೌರ್ (ಪಂಜಾಬ್) ಮೂಲದ ಈ ಮೂವರು ಆಟಗಾರರು ಆಗಷ್ಟೇ ಅಭ್ಯಾಸ ಮುಗಿಸಿದ್ದರು. (ಇನ್ನೊಬ್ಬ ಆಟಗಾರ್ತಿ ಶಿರಿನ್ ವಿಜಯ್ ಕೈ ಗಾಯಗೊಂಡ ಕಾರಣ ತರಬೇತಿ ನಿಲ್ಲಿಸಿ ತನ್ನೂರು ಮಹಾರಾಷ್ಟ್ರಕ್ಕೆ ತೆರಳಿದ್ದಾರೆ).

ದೇಶದಲ್ಲಿ ಕ್ರಿಕೆಟ್ ಹೊರತಾಗಿ ಬೇರೆ ಆಟಗಳಿಗೆ ಪ್ರೋತ್ಸಾಹ ಕಡಿಮೆ ಎಂಬುದು ಅವರ ಒಟ್ಟು ಅಭಿಪ್ರಾಯ. ಅವರೊಂದಿಗೆ `ಮೆಟ್ರೊ~ ನಡೆಸಿದ ಮಾತುಕತೆ...


ಏಷ್ಯನ್ ಬೀಚ್ ಕ್ರೀಡಾಕೂಟದ ಅನುಭವ...

ಅದ್ಭುತವಾಗಿತ್ತು. ಮಂಗೋಲಿಯಾ, ಮಾಲ್ಡೀವ್ಸ್, ಚೀನಾ ವಿರುದ್ಧ ಆಡಿದ ಎಲ್ಲಾ ಪಂದ್ಯಗಳೂ ರೋಚಕವಾಗಿದ್ದವು. ಚೀನಾದ ಆಟಗಾರ್ತಿಯರಂತೂ ಅಂಗಳದಲ್ಲೇ ನಮ್ಮನ್ನು ಅಣಕಿಸುತ್ತಿದ್ದರು. ಸೆಮಿಫೈನಲ್‌ನಲ್ಲಿ ಮಂಗೋಲಿಯಾ ತಂಡವೂ ನಮಗೆ ಸವಾಲಾಗಿತ್ತು. ಅವರ ಬಲಿಷ್ಠ ದೇಹವೇ ನಮ್ಮನ್ನು ದುರ್ಬಲಗೊಳಿಸುತ್ತವೆ.
 
ಇನ್ನು ಅವರ ವಿರುದ್ಧ ಗೆಲುವು ಸಾಧಿಸುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಭಾರತ ಮೊದಲ ಬಾರಿಗೆ ಪ್ರಶಸ್ತಿ ಪಡೆದ ಕಾರಣಕ್ಕೋ ಏನೋ... ನಾವು ಅಲ್ಲಿ ಸಾಕಷ್ಟು ನಿರ್ಲಕ್ಷ್ಯಕ್ಕೊಳಗಾದೆವು.


ಮುಂದಿನ ಟೂರ್ನಿ ಕುರಿತು...

ತೈವಾನ್‌ನಲ್ಲಿ ಆಡಲು ನಾವು ಸಿದ್ಧತೆ ನಡೆಸುತ್ತಿದ್ದೇವೆ. ಈಗ ಗೆದ್ದಿರುವ ಚಿನ್ನದ ಪದಕ ನಮಗೆ ಮತ್ತಷ್ಟು ಪ್ರೋತ್ಸಾಹ ತುಂಬಿದೆ. ಕೊರಿಯಾ, ಥಾಯ್ಲೆಂಡ್, ಜಪಾನ್ ಸವಾಲು ನೀಡುವ ತಂಡಗಳು. ಕಳೆದ ಬಾರಿ ಎರಡನೇ ಹಂತದಲ್ಲಿ ಕೊರಿಯಾ ವಿರುದ್ಧ ಸೋತು ಹಿಂತಿರುಗಿದ್ದೆವು. ಈ ಬಾರಿ ಪ್ರಶಸ್ತಿ ಗಳಿಸುವ ವಿಶ್ವಾಸ ಹಾಗೂ ಛಲವಿದೆ.

ಬೀಚ್ ಬ್ಯಾಸ್ಕೆಟ್‌ಬಾಲ್ ಸಾಮಾನ್ಯ ಆಟಕ್ಕಿಂತ ಹೇಗೆ ಭಿನ್ನ?
ಇದು ಹತ್ತು ನಿಮಿಷ ಇಲ್ಲವೇ 21 ಗೋಲುಗಳಿಗೆ ಸೀಮಿತಗೊಳ್ಳುವ ಆಟ. ಒಳಾಂಗಣ ಆಟದಲ್ಲಿ ಐದು ಮಂದಿ ಇದ್ದರೆ, ಇಲ್ಲಿ ಮೂರು ಮಂದಿ ಮಾತ್ರ ಇರುತ್ತಾರೆ. ಬೀಚ್ ಆಟದಲ್ಲಿ ಕೋರ್ಟ್ ಕೂಡ ಸಣ್ಣದು. ಕ್ರಿಕೆಟ್‌ನಲ್ಲಿ `ಟ್ವೆಂಟಿ-20~ ಬಂದಂತೆ ಬ್ಯಾಸ್ಕೆಟ್‌ಬಾಲ್‌ನಲ್ಲಿ `ತ್ರೀ-ಆಂಡ್-ತ್ರೀ~ ಆಟಗಳೇ ಹೆಚ್ಚು ಬೆಳೆಯುತ್ತಿದ್ದು, ಮುಂದೆ ಇವೇ ಪ್ರಸಿದ್ಧಿ ಹೊಂದಲಿವೆ.

ಬಿಎಫ್‌ಐ ಪ್ರೋತ್ಸಾಹ ಹೇಗಿದೆ?
ಇದಕ್ಕೆ ಉತ್ತರ ಹೇಳುವುದು ಕಷ್ಟ. ಆಟಗಾರರಿಗೆ ನೀಡಬೇಕಾದ ನೈತಿಕ ಬೆಂಬಲವನ್ನೇನೋ ನೀಡುತ್ತಿದೆ. ಅದರ ಹೊರತಾಗಿ ನಾವು ಪಡೆಯುತ್ತಿರುವುದು ಟ್ರೋಫಿ ಮಾತ್ರ. ಎ, ಬಿ, ಸಿ ಕೆಟಗರಿ ಆಟಗಾರರೆಂದು ವಿಭಾಗಿಸಿರುವುದು ನೆಪ ಮಾತ್ರಕ್ಕೆ. ಕಳೆದ ವರ್ಷದಿಂದ `ಎ~ ದರ್ಜೆಯ ಆಟಗಾರ್ತಿಯರಿಗೆ ಕಂತುಗಳ ಮೂಲಕ ತಿಂಗಳಿಗೆ ಮೂವತ್ತು ಸಾವಿರ ನೀಡುವುದಾಗಿ ಘೋಷಿಸಿದ್ದರೂ ಈವರೆಗೆ ಸಿಕ್ಕಿದ್ದು ನಾಲ್ಕು ಕಂತುಗಳು ಮಾತ್ರ.
 
ಮೂರು ತಿಂಗಳು ಬಳಸಬಹುದಾದ ಸ್ಪೋರ್ಟ್ಸ್ ಶೂಗಳಿಗೆ ನಾವು ಏಳು ಸಾವಿರ ರೂ. ತೆರಬೇಕು. ಆಟದೊಂದಿಗೆ ಉಳಿದ ಖರ್ಚು ಸಂಭಾಳಿಸುವುದು ಸವಾಲಿನ ಕೆಲಸವೇ. ಅಲ್ಲೊಂದು ಇಲ್ಲೊಂದು ಟ್ರೋಫಿ ಎತ್ತಿದರಷ್ಟೇ ಸಾಲದು, ನಮ್ಮ ಬದುಕೂ ಸಾಗಬೇಕಲ್ಲಾ?
ಕಳೆದ ಹತ್ತು ವರ್ಷಗಳಿಂದ ದೇಶಕ್ಕಾಗಿ ಆಡುತ್ತಿದ್ದೇವೆ.

ಅದರಿಂದ ಗಳಿಸಿದ್ದು ರೈಲ್ವೇ ಇಲಾಖೆಯಲ್ಲಿ `ಸಿ~ ಗ್ರೇಡ್ ಸಂಬಳದ ಉದ್ಯೋಗ ಹಾಗೂ ನಾಲ್ಕು ಕಂತಿನ ಹಣ ಮಾತ್ರ. ಕ್ರಿಕೆಟ್‌ನಂತೆ ನಾವೂ ಆಡುವುದು ದೇಶಕ್ಕಾಗಿಯೇ. ಆದರೆ ನಮ್ಮನ್ನು ಗುರುತಿಸುವವರಿಲ್ಲ, ಸನ್ಮಾನಿಸುವವರಿಲ್ಲ. ಪ್ರದರ್ಶನ ಆಧರಿಸಿ ನಗದು ನಿಗದಿಪಡಿಸುತ್ತೇವೆ ಎಂದು ಹೇಳಿದ್ದರೂ ಅದು ಜಾರಿಯಾಗಿಲ್ಲ. ಇತಿಹಾಸದಲ್ಲೇ ಮೊದಲ ಬಾರಿಗೆ ಚೀನಾ ವಿರುದ್ಧ ಗೆದ್ದು ಟ್ರೋಫಿ ತಂದಿದ್ದರೂ ಅದು ಸುದ್ದಿಯಾಗಿಲ್ಲ (ನಾಯಕಿ ಅನಿತಾ ಹೇಳಿದ್ದು).

ದಿನವೂ ಎಷ್ಟು ಹೊತ್ತು ಅಭ್ಯಾಸ ಮಾಡುತ್ತೀರಿ?
ಬೆಳಿಗ್ಗೆ ಆರರಿಂದ ಒಂಬತ್ತು ಹಾಗೂ ಸಂಜೆ ನಾಲ್ಕರಿಂದ ಏಳು. ಅಂತರರಾಷ್ಟ್ರೀಯ ಪಂದ್ಯಗಳಿದ್ದಾಗ ಒಂದು ತಿಂಗಳು ತರಬೇತಿ ನೀಡುತ್ತಾರೆ. ಇದರ ಹೊರತಾಗಿ ನಮಗೆ ಅಭ್ಯಾಸ ಮಾಡಲು ಕೋರ್ಟ್ ಇಲ್ಲ. ಹೊರಾಂಗಣದಲ್ಲೇ ಅಭ್ಯಾಸ ಮಾಡಬೇಕು. ಇದು ಮೊಣಕಾಲು ನೋವಿಗೆ ಕಾರಣವಾಗುವುದೂ ಉಂಟು.

ನಿಮ್ಮ ಕೋಚ್ ಹೇಗಿದ್ದಾರೆ?
ಪ್ರತಿಯೊಬ್ಬ ಕೋಚ್ ತನ್ನದೇ ಆದ ವಿಭಿನ್ನ ಶೈಲಿ ಹೊಂದಿರುತ್ತಾನೆ. ಈಗಿರುವ ಕೋಚ್ ವಿದ್ಯಾರ್ಥಿಗಳ ಮಧ್ಯೆ ಅಂತರ ಕಾಯ್ದುಕೊಳ್ಳುವುದಿಲ್ಲ. ತರಬೇತಿಯ ಸಮಯದಲ್ಲೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ವಿದೇಶಿ ತರಬೇತುದಾರರು ಭಾರತೀಯ ಆಟಗಾರರ ಮನಸ್ಥಿತಿ ಅರ್ಥೈಸಿಕೊಳ್ಳುವುದರಲ್ಲೇ ಆರು ತಿಂಗಳು ಕಳೆದು ಹೋಗಿರುತ್ತದೆ. ಪ್ರತಿವರ್ಷ ಕೋಚ್ ಬದಲಾಗುತ್ತಿದ್ದರೆ ಹೊಂದಾಣಿಕೆ ಸಮಸ್ಯೆಯೂ ಕಾಡುತ್ತದೆ.

ಬೆಂಗಳೂರು ಹೇಗಿದೆ?
ಚೆನ್ನಾಗಿದೆ. ಭಾರತ ಕ್ರೀಡಾ ಪ್ರಾಧಿಕಾರ ಆಟಗಾರರಿಗೆ ಬೇಕಾದ ಬೆಂಬಲ ನೀಡುತ್ತಿದೆ. ಇಲ್ಲಿನ ಹವಾಗುಣ ನಮ್ಮ ಅಭ್ಯಾಸದ ಅವಧಿ ಹೆಚ್ಚುವಂತೆ ಮಾಡಿದೆ. ಮಹಿಳಾ ಹಾಸ್ಟೆಲ್‌ನಲ್ಲಿ ಕೊಡುವ ಊಟ ಬಿಟ್ಟರೆ ದಕ್ಷಿಣ ಭಾರತದ ಇತರ ತಿನಿಸುಗಳ ರುಚಿ ನೋಡಿಲ್ಲ.

ಇಲ್ಲೇ ಸಮೀಪದಲ್ಲಿರುವ ಗೋಪಾಲನ್ ಮಾಲ್‌ನ ಕೆಎಫ್‌ಸಿ ನಮ್ಮ ನೆಚ್ಚಿನ ಊಟದ ತಾಣ. (ಪಂಜಾಬ್ ಬೆಡಗಿ ಕಿರಣ್‌ಜಿತ್‌ಗೆ ಮಸಾಲೆ ದೋಸೆ, ಸಾಂಬಾರ್ ಹಾಗೂ ಇಡ್ಲಿ ಬಲು ಇಷ್ಟವಂತೆ!) ಶಾಪಿಂಗ್‌ಗೆ ಕಮರ್ಷಿಯಲ್ ಸ್ಟ್ರೀಟ್ ಸೂಕ್ತ ಸ್ಥಳ. ವಂಡರ್ ಲಾಗೆ ಹೋಗಬೇಕೆಂದಿದ್ದರೂ ಸಮಯ ಹೊಂದಿಸಲಾಗಲಿಲ್ಲ ಎಂಬ ನೋವೂ ಇದೆ.

ಕೋಚ್ ಹೀಗಂತಾರೆ...
ಟ್ರಾಫಿಕ್ ಸಮಸ್ಯೆ ಹೊರತಾಗಿ ಬೆಂಗಳೂರು ಚೆನ್ನಾಗಿದೆ. ಅಭ್ಯಾಸಕ್ಕೂ ಉತ್ತಮ ವೇದಿಕೆಯಿದೆ ಎನ್ನುವ ಪ್ರೇಮ್ ಕುಮಾರ್ ಕಳೆದ ಫೆಬ್ರುವರಿಯಲ್ಲಿ ತಂಡದ ತರಬೇತುದಾರರಾಗಿ ಆಯ್ಕೆಯಾದವರು. ಇದೀಗ ಎಸ್‌ಎಐನಲ್ಲಿ ಜೂನಿಯರ್ ಆಟಗಾರರೂ ಸೇರಿದಂತೆ ಒಟ್ಟು 16 ಮಂದಿಗೆ ತರಬೇತಿ ನೀಡುತ್ತಿದ್ದಾರೆ.

`ತಂಡಕ್ಕೆ ವಿದೇಶಿ ಕೋಚ್ ನೇಮಿಸುವುದರಲ್ಲಿ ತಪ್ಪಿಲ್ಲ. ಆಟದಲ್ಲಿ ಅವರ ತಾಂತ್ರಿಕ ಅಂಶಗಳನ್ನು ಕಲಿಯಲು ನೆರವಾಗುತ್ತದೆ. ನಾನು ಆಯ್ಕೆಯಾಗುವ ಮುನ್ನ ತಂಡದ ಜವಾಬ್ದಾರಿ ಹೊತ್ತಿದ್ದು ವಿದೇಶಿ ತರಬೇತುದಾರ.

ಈಗ ಬಾಸ್ಕೆಟ್‌ಬಾಲ್ ಪುರುಷರ ತಂಡವನ್ನು ಮುನ್ನಡೆಸುತ್ತಿರುವುದೂ ಕೆಮೀ ನಾಟ್ ಎಂಬ ವಿದೇಶಿ ತರಬೇತುದಾರನೇ.ಅಮೆರಿಕಾದಲ್ಲಿ ಸ್ಟ್ರೀಟ್ ಪ್ಲೇ ಎಂದು ಕರೆಯಲಾಗುವ ಬೀಚ್ ಕ್ರೀಡಾಕೂಟ ಭಾರತಕ್ಕೆ ಬಂದಿದ್ದು 2008ರಲ್ಲಿ. ಹಾಗೆ ನೋಡಿದರೆ ಭಾರತ ತಂಡ ಬೀಚ್ ಟೂರ್ನಿಗಳಲ್ಲಿ ಆಡಿದ್ದು ಕಡಿಮೆ.
 
ಹೆಚ್ಚು ಪಂದ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಕ್ರೀಡಾಪಟುಗಳ ಆತ್ಮವಿಶ್ವಾಸ ಹೆಚ್ಚುತ್ತದೆ. ಏಷ್ಯನ್ ಹಾಗೂ ಯುರೋಪಿಯನ್ ತಂಡಗಳ ನಡುವಿನ ವ್ಯತ್ಯಾಸ ಅರಿಯುವುದು ಸುಲಭವಾಗುತ್ತದೆ~ ಎನ್ನುತ್ತಾರೆ ಪ್ರೇಮ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT