ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ-20 ಕ್ರಿಕೆಟ್ ಪಂದ್ಯ ಇಂದು: ಯಾರ ಮಡಿಲಿಗೆ ಜಯ...?

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಬೆಟ್ಟದಷ್ಟು ಆಸೆ ಹೊತ್ತು ಬಂದಿದ್ದ ಇಂಗ್ಲೆಂಡ್ ಪಡೆ ನಾಲ್ಕು ದಿನಗಳ ಹಿಂದೆಯಷ್ಟೇ ಕೋಲ್ಕತ್ತದಲ್ಲಿ `ಕ್ಲೀನ್ ಸ್ವೀಪ್~ ನಿರಾಸೆ ಅನುಭವಿಸಿದೆ. `ಮಹಿ~ ಪಡೆ ಸೋಲಿನ ಮುಯ್ಯಿ ತೀರಿಸಿಕೊಂಡು ದೀಪಾವಳಿ `ಹಬ್ಬ~ ಆಚರಿಸಿದೆ.
 
ಆದರೆ, ಶನಿವಾರ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಏಕೈಕ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಯಾರಿಗೆ...?

ಇಂಥದ್ದೊಂದು ಪ್ರಶ್ನೆ ಅಭಿಮಾನಿಗಳನ್ನು ಪಟ್ಟು ಬಿಡದೇ ಕಾಡುತ್ತಿದೆ. ಅದಕ್ಕೆ ಕಾರಣವು ಬಲವಾಗಿದೆ. ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ದೋನಿ ಬಳಗಕ್ಕೆ ಅಪ್ಪಳಿಸಿದ್ದ ಸತತ ಸೋಲಿನ ಸುನಾಮಿಯ ಅಲೆಗಳ ಕಹಿ ನೆನಪುಗಳು ಇನ್ನೂ ಮಾಸಿಲ್ಲ.

ಅದರಲ್ಲಿ ಈಗ ಏಕದಿನ ಸರಣಿಯಲ್ಲಿ ಭಾರತ ಗೆಲುವು ಪಡೆದು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಈಗ ಟ್ವೆಂಟಿ-20 ಸೋಲಿನ ತಿರುಗೇಟು ನೀಡುವುದಷ್ಟೇ ಬಾಕಿ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರಸ್ಥಾನದಿಂದ ಭಾರತವನ್ನು ಕೆಳಗಿಳಿಸಿದ ಇಂಗ್ಲೆಂಡ್ ಪಡೆಗೆ, ಈಗ ತಿರುಗೇಟು ನೀಡಲು ದೋನಿ ಪಡೆ ಕಾತರದಲ್ಲಿದೆ. ಇದೇ ಮೊದಲ ಸಲ ಐಸಿಸಿ ಪ್ರಕಟಿಸಿರುವ ಟ್ವೆಂಟಿ-20 ಮಾದರಿಯ ರ‌್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್ ತಂಡವನ್ನು ತವರು ನೆಲದಲ್ಲಿಯೇ ಮಣಿಸಬೇಕು ಎನ್ನುವುದು ದೋನಿ ಪಡೆಯ ಆಶಯ.

ಯುವ ಆಟಗಾರರನ್ನು ನೆಚ್ಚಿಕೊಂಡಿರುವ ಭಾರತ ಏಕದಿನ ಸರಣಿಯಲ್ಲಿ ನೀಡಿದ ಪ್ರದರ್ಶನವನ್ನು ಇಲ್ಲಿಯೂ ಪುನರಾವರ್ತಿಸಿದರೆ, ಮತ್ತೊಂದು ಗೆಲುವು ಕಟ್ಟಿಟ್ಟ ಬುತ್ತಿ. ಏಕದಿನ ಸರಣಿಯಲ್ಲಿನ ಸೋಲು ಸಹಜವಾಗಿಯೇ ಆಂಗ್ಲರ ನಾಡಿನ ಆಟಗಾರರ ಆತ್ಮ ವಿಶ್ವಾಸಕ್ಕೆ ಕೊಡಲಿ ಪೆಟ್ಟು ನೀಡಿದೆ. ಆದರೂ, ಯಾವುದೇ ಕ್ಷಣದಲ್ಲೂ ತಿರುಗೇಟು ನೀಡುವ ಸಾಮರ್ಥ್ಯ ಈ ತಂಡಕ್ಕಿದೆ ಎನ್ನುವುದನ್ನು ಮರೆಯುವಂತಿಲ್ಲ.

ಇಂಗ್ಲೆಂಡ್ ತಂಡ ಗ್ರೇಮ್ ಸ್ವಾನ್, ಕ್ರಗ್ ಕೀಸ್ವೆಟರ್, ಕೆವಿನ್ ಪೀಟರ್ಸನ್ ಹಾಗೂ ರವಿ ಬೋಪಾರ ಅವರ ಬ್ಯಾಟಿಂಗ್ ಶಕ್ತಿಯನ್ನು ನೆಚ್ಚಿಕೊಂಡಿದೆ. `ಬೌಲರ್‌ಗಳಾದ ಟಿಮ್ ಬ್ರೆಸ್ನನ್, ಸ್ಪಿವನ್ ಫಿನ್ ಇನ್ನೂ ಪರಿಣಾಮಕಾರಿಯೆನಿಸಿಲ್ಲ. ಈ ಪಂದ್ಯದಲ್ಲಿ ಅವರು ಭಾರತದ ಗೆಲುವಿನ ಓಟಕ್ಕೆ ತಡೆಗೋಡೆಯಾಗಲಿದ್ದಾರೆ~ ಎಂದು ನಾಯಕ ಗ್ರೇಮ್ ಸ್ವಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಲ್ಕು ಇನಿಂಗ್ಸ್‌ಗಳಿಂದ 212 ರನ್ ಕಲೆ ಹಾಕಿರುವ ದೋನಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ನಾಯಕನಿಗೆ ತಕ್ಕ ಸಾಥ್ ನೀಡುತ್ತಿರುವ ವಿರಾಟ್ ಕೊಹ್ಲಿ (ಐದು ಪಂದ್ಯಗಳಿಂದ 270) ತಮ್ಮ `ವಿರಾಟ~ ರೂಪವನ್ನು ತೋರಿಸಿದ್ದಾರೆ.

ತಂಡಗಳು:

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಶ್ರೀನಾಥ್ ಅರವಿಂದ್, ರವೀಂದ್ರ ಜಡೇಜಾ, ಪ್ರವೀಣ್ ಕುಮಾರ್, ಅಜಿಂಕ್ಯ ರಹಾನೆ, ರಾಹುಲ್ ಶರ್ಮ, ರಾಬಿನ್ ಉತ್ತಪ್ಪ, ಉಮೇಶ್ ಯಾದವ್, ವರುಣ್ ಆ್ಯರನ್, ರವಿಚಂದ್ರನ್ ಅಶ್ವಿನ್, ವಿರಾಟ್ ಕೊಹ್ಲಿ, ಯುಸುಫ್ ಪಠಾಣ್, ಸುರೇಶ್ ರೈನಾ, ಮನೋಜ್ ತಿವಾರಿ ಹಾಗೂ ವಿನಯ್ ಕುಮಾರ್.

ಇಂಗ್ಲೆಂಡ್: ಗ್ರೇಮ್ ಸ್ವಾನ್ (ನಾಯಕ), ಕ್ರಗ್ ಕೀಸ್ವೆಟರ್,  ಕೆವಿನ್ ಪೀಟರ್ಸನ್, ರವಿ ಬೋಪಾರ, ಜಾನಿ ಬೈಸ್ಟ್ರೋವ್, ಸಮಿತ್ ಪಟೇಲ್, ಟಿಮ್ ಬ್ರೆಸ್ನನ್, ಸ್ಟಿವನ್ ಫಿನ್, ಜೆ. ಡರ್ನ್‌ಬ್ಯಾಚ್, ಸ್ಟುವರ್ಟ್ ಮೇಕರ್, ಅಲೆಕ್ಸ್ ಹಾಲೆಸ್, ಜೋಸ್ ಬಟ್ಲರ್ ಹಾಗೂ  ಗ್ರಹಾಮ್ ಆನಿಯನ್ಸ್,
ಅಂಪೈರುಗಳು: ಬಿಲ್ಲಿ ಬೌಡೆನ್ (ನ್ಯೂಜಿಲೆಂಡ್) ಮತ್ತು ಸುಧೀರ್ ಅಸ್ನಾನಿ,
ಮೂರನೇ ಅಂಪೈರ್: ಎಸ್. ರವಿ, ಪಂದ್ಯದ ರೆಫರಿ: ರೋಷನ್ ಮಹಾನಮ (ಶ್ರೀಲಂಕಾ).
ಪಂದ್ಯ ನಡೆಯುವ ಸ್ಥಳ: ಈಡನ್ ಗಾರ್ಡನ್ಸ್ ಕ್ರೀಡಾಂಗಣ, ಕೋಲ್ಕತ್ತ
ಪಂದ್ಯ ಆರಂಭ: ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT