ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ-20 ಯುಗದಲ್ಲಿ ಮೊದಲ ಏಕದಿನ ವಿಶ್ವಕಪ್

Last Updated 19 ಫೆಬ್ರುವರಿ 2011, 16:40 IST
ಅಕ್ಷರ ಗಾತ್ರ

ಇದು ಕ್ರಿಕೆಟ್‌ನ ಹೊಸ ಯುಗ. ಆಟ ಬದಲಾಗಿದೆ. ಶೈಲಿಯಲ್ಲಿ ಹೊಸತನ ಅಳವಡಿಕೆಯಾಗಿದೆ. ಟೆಸ್ಟ್ ಹಾಗೂ ಏಕದಿನದ ಜೊತೆಗೆ ಟ್ವೆಂಟಿ-20 ಎನ್ನುವ ಹೊಸ ಪ್ರಕಾರವೂ ಸೇರಿಕೊಂಡಿದೆ. ಚುಟುಕು ಕ್ರಿಕೆಟ್ ಭಾರಿ ಜನಪ್ರಿಯತೆಯನ್ನೂ ಗಳಿಸಿದೆ. ಆದ್ದರಿಂದ ಇದನ್ನು ಟ್ವೆಂಟಿ-20 ಕ್ರಿಕೆಟ್ ಯುಗವೆಂದು ಹೇಳಬಹುದು. ಈ ಕ್ರಿಕೆಟ್ ಪ್ರಕಾರ ಹುಟ್ಟಿಕೊಂಡ ನಂತರ ನಡೆಯುತ್ತಿರುವ ಮೊಟ್ಟ ಮೊದಲ ಏಕದಿನ ಕ್ರಿಕೆಟ್ ಬಗ್ಗೆ ಆಸಕ್ತಿ ಮೂಡಿರುವುದು ಸಹಜ.
 
ಏಕೆಂದರೆ ಇಪ್ಪತ್ತು ಓವರುಗಳ ರೋಚಕ ಆಟದ ಪ್ರಭಾವದ ಬಿಗಿಯಪ್ಪುಗೆಯಲ್ಲಿ ಕ್ರಿಕೆಟಿಗರು ಮಾತ್ರವಲ್ಲ ಕ್ರಿಕೆಟ್ ಪ್ರೇಮಿಗಳೂ ಬಂಧಿಗಳಾಗಿದ್ದಾರೆ. ಆಟಗಾರರಂತೂ ಭಾರಿ ಸವಾಲು ಎದುರಿಸಿದ್ದಾರೆ. ಕಾರಣ ಮೂರೂ ಪ್ರಕಾರದಲ್ಲಿ ಆಡುವಂಥ ಪರಿಣತಿ ಹೊಂದುವುದು ಕಾಲದ ಅಗತ್ಯವಾಗಿದೆ. ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ವಿಭಿನ್ನವಾದ ಗತಿಯನ್ನು ಹೊಂದಿವೆ. ಅದಕ್ಕೆ ಹೊಂದಿಕೊಂಡು ಪ್ರದರ್ಶನ ಮಟ್ಟವನ್ನು ಕಾಯ್ದುಕೊಳ್ಳುವುದು ಸುಲಭವಲ್ಲ.

ಚುಟುಕು ಕ್ರಿಕೆಟ್ ಪರಿಣಾಮವು ಏಕದಿನ ಪಂದ್ಯಗಳ ಮೇಲೆ ಹೇಗೆ ಆಗುತ್ತಿದೆ ಎನ್ನುವುದನ್ನು ಅರಿಯುವುದಕ್ಕೆ ಈ ಬಾರಿಯ ವಿಶ್ವಕಪ್ ಸೂಕ್ತ ವೇದಿಕೆಯಾಗಿದೆ. ಏಕದಿನ ಪಂದ್ಯಗಳು ಆರಂಭವಾದ ದಿನಗಳಲ್ಲಿ ಟೆಸ್ಟ್‌ನಲ್ಲಿ ಅದರ ಪರಿಣಾಮ ಕಾಣಿಸಿತ್ತು. ಅದೇ ರೀತಿಯಲ್ಲಿ ಟ್ವೆಂಟಿ-20 ಕೂಡ ಈಗ ಏಕದಿನ ಕ್ರಿಕೆಟ್ ಮೇಲೆ ಪ್ರಭಾವ ಮಾಡಿದೆ ಎನ್ನುವುದು ನನ್ನ ಅಭಿಪ್ರಾಯ. ಅದಕ್ಕೆ ವಿಶ್ವಕಪ್‌ನಲ್ಲಿ ಖಂಡಿತ ಸಾಕ್ಷಿಗಳು ಸಿಗಲಿವೆ.

ಏಕದಿನ ಕ್ರಿಕೆಟ್‌ನಲ್ಲಿ ಐವತ್ತು ಓವರುಗಳ ಅವಧಿಯಲ್ಲಿ ಸಾಕಷ್ಟು ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ತಂಡವೊಂದು ಕೈಜಾರಿ ಹೋಗುತ್ತಿರುವ ಪಂದ್ಯದ ಮೇಲೆ ಹಿಡಿತ ಸಾಧಿಸುವಂಥ ಅವಕಾಶಗಳೂ ಇದರಲ್ಲಿ ಹೆಚ್ಚು. ಒಂದು ಹಂತದಲ್ಲಿ ತಪ್ಪುಗಳನ್ನು ಮಾಡಿದ ತಂಡವು; ಆನಂತರ ತಿದ್ದಿಕೊಂಡು ಪಂದ್ಯಕ್ಕೆ ತಿರುವು ನೀಡಲು ಸಾಧ್ಯ.

‘ಟಿ-20’ ಎನ್ನುವುದು ಬಂದ ನಂತರ ಏಕದಿನ ಪಂದ್ಯದಲ್ಲಿ ಈ ಸಾಧ್ಯತೆ ಇನ್ನಷ್ಟು ಹೆಚ್ಚಿದೆ. ಏಕೆಂದರೆ ಪ್ರತಿಯೊಂದು ತಂಡದಲ್ಲಿ ಆಕ್ರಮಣಕಾರಿ ಆಟವಾಡುವಂಥ ಬ್ಯಾಟ್ಸ್‌ಮನ್‌ಗಳ ಸಂಖ್ಯೆ ಅಧಿಕವಾಗಿದೆ. ಆದ್ದರಿಂದ ಐವತ್ತು ಓವರುಗಳ ಪಂದ್ಯವು ಹಲವಾರು ಉಪಕಥೆಗಳು ಇರುವಂಥ ಕಾವ್ಯವಾಗಿ ಈ ಬಾರಿಯ ವಿಶ್ವಕಪ್‌ನಲ್ಲಿ ಹೊರಹೊಮ್ಮುವ ನಿರೀಕ್ಷೆಯಿದೆ.        -ಗೇಮ್‌ಪ್ಲಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT