ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆಗೆ ನುಗ್ಗಿ ಆರೋಪಿ ಕರೆದೊಯ್ದ ಬಿಜೆಪಿ ಶಾಸಕರು

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಜೀವ ಬೆದರಿಕೆ ಪ್ರಕರಣ ಸಂಬಂಧ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ  ಬಿಜೆಪಿ ನಗರಸಭೆ ಸದಸ್ಯರೊಬ್ಬರನ್ನು ಬಿಜೆಪಿಯ ಇಬ್ಬರು ಶಾಸಕರು ಪೊಲೀಸ್ ಠಾಣೆಗೆ ನುಗ್ಗಿ ಬಲವಂತವಾಗಿ ಬಿಡಿಸಿಕೊಂಡು ಹೋದ ಘಟನೆ ಬುಧವಾರ ನಡೆಯಿತು.

ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಗರಸಭೆ ನಾಮನಿದೇರ್ಶಿತ ಬಿಜೆಪಿ ಸದಸ್ಯ ರಾಜು ಬಳೂಲಮಠ ಎಂಬುವವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಬಾಗಲಕೋಟೆ ಕ್ಷೇತ್ರದ ಶಾಸಕ ವೀರಣ್ಣ ಚರಂತಿಮಠ ಮತ್ತು ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ ಅವರಿಬ್ಬರೂ ಪೊಲೀಸ್ ಠಾಣೆಗೆ ನುಗ್ಗಿ, ಪೊಲೀಸರನ್ನು  ನಿಂದಿಸಿ, ಬಲವಂತವಾಗಿ ಬಿಡಿಸಿಕೊಂಡು ಹೋದರು.

ಬಳಿಕ ಇನ್‌ಸ್ಪೆಕ್ಟರ್ ಮಹಾಂತೇಶ ಹೊಸಪೇಟಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಶಾಸಕರ ಬೆಂಬಲಿಗರು ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದರು. ಇನ್ನೊಂದೆಡೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಯಿಂದ ನೊಂದ ಪೊಲೀಸ್ ಸಿಬ್ಬಂದಿ ಪ್ರತಿಭಟನೆಗೆ ಸಜ್ಜಾದ ಪರಿಣಾಮ ಠಾಣೆ ಎದುರು ಕೆಲಹೊತ್ತು ನಾಟಕೀಯ ಬೆಳವಣಿಗೆಗಳು ನಡೆದವು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ, ಧರಣಿ ನಿರತ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ಸಾರ್ವಜನಿಕರು ಮತ್ತು ಸುದ್ದಿ ಮಾಧ್ಯಮದವರ ಎದುರೇ ಇಷ್ಟೆಲ್ಲ ಘಟನೆ ನಡೆದರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಘಟನೆ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.

ಶಾಸಕದ್ವಯರು ಠಾಣೆಗೆ ನುಗ್ಗಿ ಆರೋಪಿಯನ್ನು ಬಿಡಿಸಿಕೊಂಡು ಹೋದ ಸನ್ನಿವೇಶವನ್ನು ಸ್ವತಃ ಪೊಲೀಸರೇ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರೂ ಘಟನೆಗೆ ಸಂಬಂಧಿಸಿದಂತೆ ಯಾರೊಬ್ಬರ ಮೇಲೂ ದೂರು ದಾಖಲಾಗಿಲ್ಲ.

ಘಟನೆ ವಿವರ: ಶಾಸಕ ವೀರಣ್ಣ ಚರಂತಿಮಠ  ಕಾರ್ಯಾಧ್ಯಕ್ಷರಾಗಿರುವ ಬಸವೇಶ್ವರ ವಿದ್ಯಾವರ್ದಕ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಜಿಲ್ಲಾ ಪುನರ್ವಿಂಗಡನಾ ಸಮಿತಿ ಮಾಜಿ ಅಧ್ಯಕ್ಷ ಟಿ.ಎಂ. ಹುಂಡೇಕಾರ  ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಶಾಸಕರ ಬೆಂಬಲಿಗರಾದ ರಾಜೂ ಬಳೂಲಮಠ ಸೇರಿದಂತೆ ಎಂಟು ಜನರು ಇದೇ  5ರಂದು ಹುಂಡೇಕಾರ ಅವರ ಮನೆಗೆ ನುಗ್ಗಿ ಜೀವಬೆದರಿಕೆ ಹಾಕಿದ್ದರು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
 
ಈ ನಡುವೆ ಪಾಸ್‌ಪೋರ್ಟ್ ಮಾಡಿಸುವ ಸಂಬಂಧ ಬುಧವಾರ ಪೊಲೀಸ್ ಠಾಣೆಗೆ ಆಗಮಿಸಿದ್ದ ಆರೋಪಿ ರಾಜು ಬಳೂಲಮಠನನ್ನು ಜೀವಬೆದರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡರು. ಈ ಸುದ್ದಿ ತಿಳಿದ  ವೀರಣ್ಣ ಚರಂತಿಮಠ ಹಾಗೂ ನಾರಾಯಣಸಾ ಭಾಂಡಗೆ ಠಾಣೆಗೆ ನುಗ್ಗಿ ಅವರನ್ನು ಬಿಡಿಸಿಕೊಂಡು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT