ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬಿಂಗ್; ಕನ್ನಡ ಚಲನ ಚಿತ್ರರಂಗಕ್ಕೆ ಮಾರಕ

Last Updated 17 ಫೆಬ್ರುವರಿ 2011, 16:15 IST
ಅಕ್ಷರ ಗಾತ್ರ

ಐದು ದಶಕಗಳಿಗೂ ಹೆಚ್ಚು ಕಾಲ ಡಬಿಂಗ್‌ನಿಂದ ದೂರವಿದ್ದ ಕನ್ನಡ ಚಿತ್ರರಂಗದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಡಬಿಂಗ್‌ಅನ್ನು ಹಿಂಬಾಗಿಲಿನಿಂದ ತರುವ ಪ್ರಯತ್ನ ಮಾಡುತ್ತಿವೆ. 1960ರ ದಶಕದಲ್ಲಿ ಸಾಹಿತಿಗಳು ಚಳವಳಿಯ ಮೂಲಕ ಕನ್ನಡ ಅಭಿಮಾನವನ್ನು ಮೈಗೂಡಿಸುವುದರ ಜೊತೆಗೆ ಚಲನಚಿತ್ರರಂಗಕ್ಕೆ ಮಾರಕವಾಗುವ ಡಬಿಂಗ್ ವಿರುದ್ಧ ನಿಂತರು. ಚಿತ್ರರಂಗಕ್ಕೆ ಮುಂದೆ ಈ ನಿಲುವು ವರವಾಯಿತು.

ಕನ್ನಡ  ಚಿತ್ರರಂಗದ ಹಿರಿಯಣ್ಣ ಡಾ. ರಾಜಕುಮಾರ್ ಅವರಂತೂ ಇದರ ವಿರುದ್ಧ ದನಿಯೆತ್ತಿದರು. ‘ಡಬಿಂಗ್ ಚಿತ್ರಗಳಿಂದ ಕನ್ನಡದಲ್ಲಿ ತಯಾರಾಗುವ ಚಿತ್ರಗಳಿಗೆ ಕೊಡಲಿ ಪೆಟ್ಟು. ಹತ್ತು ಚಿತ್ರ ತಯಾರಾದರೆ ಹಲವರಿಗೆ ಅವಕಾಶವಿದೆ. ಅದರಲ್ಲಿ ಐದು ಚಿತ್ರ ಡಬ್ ಆದರೆ ಒಂದಿಷ್ಟು ಜನರಿಗೆ ಅವಕಾಶ ತಪ್ಪುತ್ತದೆ. ಇದೊಂದು ವ್ಯವಹಾರ, ಸಂಪಾದನೆಯೇ ಅದರ ಮೂಲ ಉದ್ದೇಶ ಎಂಬ ಮಾತು ನಿಜವಾದರೂ ಅದು ಕಲೆಯನ್ನು ಬಿಟ್ಟು ಆಡುವ ಮಾತಲ್ಲ. ಕಲೆ, ವ್ಯವಹಾರಗಳು ಸಮರಸ ಸಾಧಿಸಬೇಕು. ಒಂದಕ್ಕಾಗಿ ಇನ್ನೊಂದು ತ್ಯಾಗ ಆಗಬಾರದು. ಆಯಾ ಭಾಷೆಯ ಜನ ಆಯಾ ಭಾಷೆಗಳಲ್ಲಿ ಆಯಾ ಭಾಷೆಯ ಕಲಾವಿದರನ್ನೇ ಗೊತ್ತುಮಾಡಿಕೊಂಡು ಚಿತ್ರ ತೆಗೆಯಲಿ. ಕೆಲವು ಚಿತ್ರಗಳು ಬಡವಾಗಿರಬಹುದು. ಲೋಕದಲ್ಲಿ ಬಡವ ಶ್ರೀಮಂತರಿಬ್ಬರಿಗೂ ಬಾಳಲು ಅವಕಾಶವಿಲ್ಲವೇ? ಹಾಗೆಯೇ ಇದೂ ಸಹ. ಯಾವ ಭಾಷೆಯಿಂದ ಯಾವ ಭಾಷೆಗೂ ಡಬ್ ಆಗಬಾರದು. ಇದೀಗ ಕಣ್ಣು ಬಿಡುತ್ತಿರುವ ಕನ್ನಡ ಚಿತ್ರರಂಗಕ್ಕಂತೂ ಇದು ಕುಠಾರಪ್ರಾಯ. ಅದನ್ನು ತಡೆಯಲು ಕನ್ನಡ ಜನ ಶಕ್ತರು. ಪ್ರೇಕ್ಷಕರು ಡಬಿಂಗ್ ಚಿತ್ರಗಳನ್ನು ಸ್ವೀಕರಿಸದಿರಲಿ’ ಎಂಬುದು ಆ ಸಂದರ್ಭದಲ್ಲಿ  ರಾಜಕುಮಾರ್ ನೀಡಿದ ಹೇಳಿಕೆ.

ಕನ್ನಡ ಕಲಾವಿದರು ಮತ್ತು ತಂತ್ರಜ್ಞರ ಒಕ್ಕೂಟ ಡಬಿಂಗ್ ಯೋಚನೆಯನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಕನ್ನಡಕ್ಕೆ ಪರಭಾಷೆಯ ಚಿತ್ರಗಳು, ಸರಣಿಗಳು ಡಬ್ ಆದರೆ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಕೆಲಸ ಮಾಡುವ ಸಹಸ್ರಾರು ಜನರ ಜೀವನಕ್ಕೆ ತೊಂದರೆಯಾಗುತ್ತದೆ. ಪರಭಾಷೆಯಿಂದ ಒಂದು ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುವುದರಿಂದ ಕನ್ನಡ ಭಾಷೆಗೆ ಅನುಕೂಲವಾಗುತ್ತದೆ ಎನ್ನುವ ವಾದವನ್ನು ಕೆಲವರು ಮುಂದಿಡುತ್ತಾರೆ. ಆದರೆ ಒಂದು ಭಾಷೆ ಎನ್ನುವುದು ಕೇವಲ ಸಂವಹನಕ್ಕಾಗಿ ಬಳಕೆಯಾಗುವುದಲ್ಲ. ಅದು ಆ ಭಾಷೆಯನ್ನಾಡುವ ಜನರ, ಆಚಾರ, ವಿಚಾರ, ನಡೆ, ನುಡಿಗಳ ಸಂಕೇತ.

ಇತ್ತೀಚೆಗೆ ಕೆಲವು ಮಂದಿ ಪರಭಾಷೆಯ ನಿರ್ಮಾಪಕರು ಕನ್ನಡಕ್ಕೆ ಡಬಿಂಗ್ ಚಿತ್ರಗಳನ್ನು ತರುವ ಹುನ್ನಾರ ನಡೆಸುತ್ತಿರುವುದು ತಿಳಿದುಬಂದಿದೆ. ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ‘ಯಾವುದೇ ಕಾರಣಕ್ಕೂ ಇಂತಹ ಪ್ರಯತ್ನವನ್ನು ತಡೆಯಬೇಕು’ ಎಂದು ಕರೆ ನೀಡಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಸೇರಿದಂತೆ ಚಿತ್ರರಂಗದ ಎಲ್ಲ ಸಂಘಟನೆಗಳು ಇದರ ವಿರುದ್ಧ ನಿಂತಿವೆ. ಆದರೂ ಸಮಯಸಾಧಕ ವ್ಯಾಪಾರೀ ಮನೋಭಾವದ ಕೆಲವರು ಈ ಪ್ರಯತ್ನದ ಹಿಂದೆ ಇದ್ದಾರೆ ಎನ್ನುವುದು ವಿಷಾದಕರ.

ಐವತ್ತು ವರ್ಷಗಳ ಹಿಂದೆ ಕನ್ನಡ ಚಿತ್ರರಂಗ ಡಬಿಂಗ್ ಚಿತ್ರಗಳನ್ನು ತಡೆದಿರುವುದರ ಪರಿಣಾಮವಾಗಿ ಇಲ್ಲಿ ಚಿತ್ರೋದ್ಯಮ ಬೆಳೆದಿದೆ. ಸಹಸ್ರಾರು ಮಂದಿ ಸೃಜನಶೀಲರು, ಕಾರ್ಮಿಕರು ಇಲ್ಲಿ ಬದುಕು ಕಂಡುಕೊಂಡಿದ್ದಾರೆ. ಭಾರತದ ಇತರ ಚಿತ್ರರಂಗಗಳು ಡಬಿಂಗ್ ನಿಷೇಧ ಕುರಿತಂತೆ ಚಿಂತಿಸಲು ಆರಂಭಿಸಿದರೆ, ಕನ್ನಡ ಚಿತ್ರರಂಗದಲ್ಲಿ ಅದಕ್ಕೆ ವಿರುದ್ಧವಾದ ನಡೆ ಸೋಜಿಗವೇ ಸರಿ. ಚಿತ್ರರಂಗದ ಕಾರ್ಮಿಕರ, ತಂತ್ರಜ್ಞರ, ಕಲಾವಿದರ, ಬರಹಗಾರರ ಕೆಲಸಗಳಾಚೆ, ಇದು ನಮ್ಮ ಸಾಂಸ್ಕೃತಿಕ ಪರಂಪರೆಯ ಮೇಲೂ ದಾಳಿ ಇಡುತ್ತದೆ ಎನ್ನುವುದನ್ನು ನಾವು ಮರೆಯಬಾರದು.

ಪ್ರಾರಂಭದಲ್ಲಿ ಡಬಿಂಗ್ ಚಿತ್ರಗಳಿಗೆ ವಿರೋಧಗಳಿರಲಿಲ್ಲ. ಆದರೆ ಅವುಗಳ ಸಂಖ್ಯೆ ಹೆಚ್ಚುತ್ತಾ ಬಂದು, ಆಗ ತಾನೇ ಕಣ್ಣು ಬಿಡುತ್ತಿದ್ದ ಕನ್ನಡ ಚಿತ್ರಗಳ ತಯಾರಿಕೆಗೆ ಕುತ್ತು ಬಂದು, ಕನ್ನಡ ಚಿತ್ರಗಳನ್ನೇ ನಂಬಿಕೊಂಡಿದ್ದ ಕಲಾವಿದರು ಮತ್ತು ತಂತ್ರಜ್ಞರಿಗೆ ಕೆಲಸವಿಲ್ಲದಂತಾಗಿ ಅವರ ಜೀವನವೇ ದುರ್ಭರವಾದಾಗ ಡಬಿಂಗ್ ಚಿತ್ರಗಳ ವಿರುದ್ಧ ಚಳವಳಿ ಪ್ರಾರಂಭವಾಯಿತು. ಇದರಲ್ಲಿ ಕನ್ನಡ ಕಲಾವಿದರ ಜತೆಗೆ ಕನ್ನಡ ಪರ ಸಂಘ ಸಂಸ್ಥೆಗಳೂ ಕೈ ಜೋಡಿಸಿದವು. ಈ ನಡುವೆ ರಾಜಕುಮಾರ್, ಜಿ.ವಿ. ಅಯ್ಯರ್, ಬಾಲಕೃಷ್ಣ, ನರಸಿಂಹರಾಜು ಅವರು ಸೇರಿ ಕನ್ನಡ ಚಲನಚಿತ್ರ ಕಲಾವಿದರ ಸಂಘವನ್ನು ಸ್ಥಾಪಿಸಿ ಆ ಸಂಘದ ವತಿಯಿಂದ ರಾಜ್ಯದಾದ್ಯಂತ ನಾಟಕಗಳನ್ನಾಡಿಯಾದರೂ ಜೀವನ ನಡೆಸುವ ಯೋಜನೆ ಹಾಕಿದರು. ಕೇವಲ ಪ್ರಾಯೋಗಿಕವಾಗಿ ಪ್ರಾರಂಭವಾದ ಈ ಯೋಜನೆ ಅವರ ನಿರೀಕ್ಷೆಗಳನ್ನೂ ಮೀರಿ ಅದ್ಭುತ ಯಶಸ್ಸನ್ನು ಗಳಿಸಿತು. ನಂತರ ಇದೇ ಸಂಸ್ಥೆ ‘ರಣಧೀರ ಕಂಠೀರವ’ ಚಿತ್ರ ನಿರ್ಮಿಸಿತು. ಇದರ ಬಿಡುಗಡೆಗೆ ಸಾಕಷ್ಟು ತೊಂದರೆಯಾಯಿತು. ಚಿತ್ರ ಸೋತಿತು. ‘ರಣಧೀರ ಕಂಠೀರವ’ ಆರ್ಥಿಕವಾಗಿ ಸೋತರೂ ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಒಂದು ಹೊಸ ಮೈಲುಗಲ್ಲನ್ನೇ ಸ್ಥಾಪಿಸಿತು.

ಕನ್ನಡ ನಾಡಿನಲ್ಲಿಯೇ ಕನ್ನಡ ಚಿತ್ರಗಳ ಪ್ರದರ್ಶನಕ್ಕಾಗಿ ನಿರ್ಮಾಪಕರು ಪರದಾಡುವುದು ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕಲೆಗಳಿಗಾದ ಘೋರ ಅಪಮಾನವೆಂಬ ಕೂಗೆದ್ದಾಗ ಕನ್ನಡ ಅಭಿಮಾನ ಜಾಗೃತವಾಯಿತು. ಅದೇ ಸಮಯದಲ್ಲಿ ಚುರುಕುಗೊಂಡಿದ್ದು ಡಬಿಂಗ್ ವಿರೋಧದ ಚಳವಳಿ.
 ಅ.ನ.ಕೃಷ್ಣರಾಯರು ಮಣಿಪಾಲದಲ್ಲಿ 42ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿಯೇ ಕನ್ನಡ ಚಳವಳಿಯ ಮೊದಲ ಕಹಳೆಯನ್ನು ಮೊಳಗಿಸಿದರು. ನಂತರ ಶಾಂತವೇರಿ ಗೋಪಾಲಗೌಡರ ಒತ್ತಾಸೆಯಿಂದ  ವಿದ್ಯಾರ್ಥಿ ಮುಖಂಡರಾದ ಕೋಣಂದೂರು ಲಿಂಗಪ್ಪ, ಬಂದಗದ್ದೆ ರಮೇಶ್ ಮುಂತಾದವರು ‘ಕನ್ನಡ ಯುವಜನ ಸಭಾ’ ಎಂಬ ಸಂಘಟನೆಯನ್ನು ರೂಪಿಸಿದರು.ಕನ್ನಡದ ಪರ ಕೂಗೆತ್ತಿದ್ದವರಲ್ಲಿ ನಾಟಕಕಾರ ಶ್ರೀರಂಗ ಅವರೂ ಸೇರಿದ್ದರು.  ಬೆಂಗಳೂರಿನಲ್ಲಿ ನಡೆಯುತ್ತಿದ್ದ ರಾಮನವಮಿ, ಗಣೇಶೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಗೆ, ಕನ್ನಡ ಕಲಾವಿದರಿಗೆ ಅವಕಾಶಗಳು ದುರ್ಲಭವಾಗಿದ್ದುದು ಕನ್ನಡಿಗರ ಕಿಚ್ಚನ್ನು ಕೆರಳಿಸಿತು. ಇದರಿಂದಾಗಿ ಕನ್ನಡಿಗರು ಕೆಲವು ಕಾಲ ಅಸಂಘಟಿತರಾಗಿಯೇ ಹೋರಾಡಬೇಕಾಯಿತು. ಶಾಂತವೇರಿ ಗೋಪಾಲಗೌಡ ಮತ್ತು ಅಂದಾನಪ್ಪ ದೊಡ್ಡಮೇಟಿಯವರಂಥವರು ಈ ಹೋರಾಟಗಳಿಗೆ ಬೆಂಬಲವಾಗಿ ನಿಂತರು. ಅರವತ್ತರ ದಶಕದ ಆರಂಭದಲ್ಲಿ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಬಹುತೇಕ ತಮಿಳು, ತೆಲುಗು, ಹಿಂದಿ ಚಿತ್ರಗಳೇ ಪ್ರದರ್ಶಿತವಾಗುತ್ತಿದ್ದವು. ಪ್ರದರ್ಶಿತವಾಗುತ್ತಿದ್ದ ಕೆಲವೇ ಕನ್ನಡ ಚಿತ್ರಗಳಲ್ಲಿ ಬಹುಪಾಲು ಬೇರೆ ಭಾಷೆಗಳಿಂದ ಡಬ್ ಆದ ಚಿತ್ರಗಳೇ ಇದ್ದವು. ಕನ್ನಡ ಚಳವಳಿಗಾರರ ಆಕ್ರೋಶ ಅಂತಹ ಚಿತ್ರಗಳತ್ತ ತಿರುಗಿತು.

ಡಬಿಂಗ್ ಚಿತ್ರಗಳ ವಿರುದ್ಧ ಹೋರಾಟದ ಚುಕ್ಕಾಣಿ ಹಿಡಿದವರು ನಾಡಿಗೇರ ಕೃಷ್ಣರಾಯರು. ಕನ್ನಡದ ಸೊಗಡಾಗಲಿ, ವಾತಾವರಣವಾಗಲಿ ಇಲ್ಲದ ಈ ಚಿತ್ರಗಳ ವಿರುದ್ಧ ಅವರು ಕೆರಳಿ ‘ಇತ್ತೀಚಿನ ಚಳವಳಿಯಿಂದ ಕನ್ನಡಿಗರು ಹೆಚ್ಚು ಹೆಚ್ಚು ಕನ್ನಡ ಚಿತ್ರಗಳನ್ನು ನೋಡುತ್ತಿರುವುದು ಅಭಿಮಾನದ ಸಂಗತಿ. ಆದರೆ ಕನ್ನಡಿಗರ ಅಭಿಮಾನದ ದುರ್ಲಾಭವನ್ನು ಇಂದು ಅನೇಕ ಚಿತ್ರೋದ್ಯಮಿಗಳು ಪಡೆಯುತ್ತಿರುವುದು ದುರ್ದೈವದ ಸಂಗತಿ.
ಕೇವಲ ಭಾಷೆ ಕನ್ನಡವಾದರೆ ಸಾಲದು. ಚಿತ್ರಗಳಲ್ಲಿ ಕರ್ನಾಟಕದ ಸಂಸ್ಕೃತಿ, ಪರಿಸರವೂ ಕಾಣಿಸಬೇಕು. ಇಲ್ಲದಿದ್ದರೆ ಕಳಪೆ ಚಿತ್ರಗಳನ್ನು ಬಹಿಷ್ಕರಿಸಬೇಕಾಗುತ್ತದೆ’ ಎಂದು ಕರೆಯಿತ್ತರು. ‘ಯಶೋದೆ ಕೃಷ್ಣ’ ತೆಲುಗಿನಿಂದ ಕನ್ನಡಕ್ಕೆ ಡಬ್ ಆದಾಗ ನಾಡಿಗೇರ ಕೃಷ್ಣರಾಯರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯೇ ಆಯಿತು. ‘ಮೋಹಿನಿ ರುಕ್ಮಾಂಗದ’ ಚಿತ್ರದ ವೇಳೆಗೆ ಈ ಚಳವಳಿ ಉಗ್ರ ರೂಪಕ್ಕೆ ತಿರುಗಿ ಮಿನರ್ವ ಥಿಯೇಟರ್‌ನಲ್ಲಿ ಆ ಚಿತ್ರದ ಪ್ರಿಂಟನ್ನು ಸುಟ್ಟುಹಾಕಿದ ನಂತರ ಡಬಿಂಗ್ ಚಿತ್ರಗಳ ತಯಾರಿಕೆ ನಿಂತುಹೋಯಿತು. ಆನಂತರ ಯಾವುದೇ ಡಬಿಂಗ್ ಚಿತ್ರ ತಯಾರಾಗಿರಲಿಲ್ಲ.
ಕನ್ನಡ ಚಿತ್ರರಂಗದ ಕೆಲವು ಖ್ಯಾತನಾಮರೂ ತಮ್ಮ ಹೇಳಿಕೆಗಳಿಂದ ಡಬಿಂಗ್ ವಿರುದ್ಧ ಸಮರವನ್ನೇ ಸಾರಿದರು. ‘ಮೂಲ ಚಿತ್ರಗಳಿಗೆ ಬೇಕಾದರೆ ಕನ್ನಡದ ಕಾಮೆಂಟರಿ ಕೊಡಲಿ, ಆದರೆ ಡಬ್ ಮಾಡುವುದು ಸಲ್ಲ’ ಎಂದು ತಾರೆ ಹರಿಣಿ ಹೇಳಿದರೆ, ‘ಡಬಿಂಗ್‌ನಿಂದ ಕನ್ನಡಕ್ಕೆ ದ್ರೋಹ, ಕನ್ನಡವನ್ನು ಹಾಳು ಮಾಡಲೆಂದೇ ಬಂದ ಡಬಿಂಗ್ ಚಿತ್ರಗಳಿಗೆ ಕನ್ನಡಿಗರೇ ಸಹಾಯಕ್ಕೆ ನಿಲ್ಲುವುದು ಸರಿಯಲ್ಲ. ಅಂತಹವರು ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ ಕನ್ನಡದ ಉದ್ಧಾರಕರಲ್ಲ’ ಎಂದು ಗುಡುಗಿದವರು ಕಣಗಾಲ್ ಪ್ರಭಾಕರಶಾಸ್ತ್ರಿಗಳು.

‘ಡಬ್ ಆದ ಚಿತ್ರಗಳು ಎಷ್ಟೇ ಚೆನ್ನಾಗಿದ್ದರೂ ಕನ್ನಡದ ಪ್ರೇಕ್ಷಕರು ಅವುಗಳನ್ನು ತಿರಸ್ಕರಿಸಬೇಕು’ ಎಂಬ ಕರೆಯನ್ನು ಸಂಗೀತ ನಿರ್ದೇಶಕ ರಾಜನ್-ನಾಗೇಂದ್ರ ನೀಡಿದರೆ, ‘ಡಬಿಂಗ್‌ನಿಂದಾಗಿ ಕನ್ನಡ ಕಲಾವಿದರೆಲ್ಲ ಅಭಿನಯವನ್ನು ಮರೆತು ‘ಮಾತುಗಾರ’ರಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು ಆರೂರು ಪಟ್ಟಾಭಿ. ‘ಒಂದು ಚಿತ್ರ ಕನ್ನಡಕ್ಕೆ ಡಬ್ ಆದರೆ ಎರಡು ಕನ್ನಡ ಚಿತ್ರಗಳು ನಾಶವಾಗುತ್ತವೆ. ಈಗಾಗಲೇ ಕನ್ನಡ ಕಲಾವಿದರಿಗೆ ಅರೆ ಹೊಟ್ಟೆಗೆ ಗಂಜಿ ಇಲ್ಲದ ಸ್ಥಿತಿಯಲ್ಲಿ ಪರಿಸ್ಥಿತಿ ಇನ್ನಷ್ಟು ವಿಷಮಿಸುವುದು ಖಂಡಿತ’ ಎಂದು ಆತಂಕಪಟ್ಟವರು ಜಿ.ವಿ.ಅಯ್ಯರ್.

ಕನ್ನಡ ನಾಡಿನಲ್ಲಿ ಈ ವಿವಾದ ಇದ್ದಾಗಲೇ ಮದರಾಸಿನಲ್ಲಿ ಕೆಲವು ತೆಲುಗು ಕಲಾವಿದರಿಂದ ಬೇರೊಂದು ರೀತಿಯ ಪ್ರತಿಕ್ರಿಯೆ ತೀಕ್ಷ ್ಣವಾಗಿ ಕೇಳಿ ಬಂತು. ಅಂದಿನ ಸೂಪರ್‌ಸ್ಟಾರ್ ಸಾವಿತ್ರಿ ತಾವು ಅಭಿನಯಿಸಿದ ಕೆಲವು ಉತ್ತಮ ಚಿತ್ರಗಳು ಬೇರೆ ಭಾಷೆಗಳಿಗೆ ಡಬ್ ಆದಾಗ ತಾವು ಮೂಲಚಿತ್ರಗಳಲ್ಲಿ ಸೊಗಸಾಗಿ ನಿರ್ವಹಿಸಿದ ಪಾತ್ರಗಳು ನಿಸ್ತೇಜವಾಗಿ ಸೋತು ಸೊರಗುವುದನ್ನು ಉಗ್ರವಾಗಿ ಖಂಡಿಸಿದರು. ಖ್ಯಾತ ನಟ ಎಸ್.ವಿ.ರಂಗರಾಯರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾವು ಅಭಿನಯಿಸುವ ಚಿತ್ರಗಳ ಕಾಂಟ್ರಾಕ್ಟ್‌ಗಳಲ್ಲಿ ತಮ್ಮ ಪಾತ್ರವನ್ನು ಡಬ್ ಮಾಡಿಸಬಾರದೆಂಬ ಷರತ್ತನ್ನು ಸೇರಿಸಲು ಪ್ರಾರಂಭಿಸಿದರು.

ಅಂದಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದಿನಷ್ಟು ಪ್ರಾತಿನಿಧಿಕವಾಗಿರಲಿಲ್ಲ. ಪ್ರದರ್ಶಕರ ಪ್ರಭಾವವೇ ಹೆಚ್ಚಾಗಿದ್ದ ಆ ಸಂಸ್ಥೆ ಈ ಸಮಸ್ಯೆಯ ಬಗ್ಗೆ ಯಾವುದೇ ರೀತಿಯ ನಿಲುವನ್ನು ತೆಗೆದುಕೊಳ್ಳುವುದು ಸುಲಭವೂ ಆಗಿರಲಿಲ್ಲ. ಕನ್ನಡ ಪರ ಸಂಘಟನೆಗಳೇ ಅನೌಪಚಾರಿಕವಾಗಿ ಒಂದು ನಿರ್ಧಾರಕ್ಕೆ ಬರಬೇಕಾಯಿತು. ಇನ್ನು ಮುಂದೆ ಕನ್ನಡಕ್ಕೆ ಡಬ್ ಆದ ಯಾವುದೇ ಚಿತ್ರದ ಪ್ರದರ್ಶನಕ್ಕೆ ಅವಕಾಶ ಕೊಡಬಾರದೆಂಬ ಈ ನಿರ್ಣಯಕ್ಕೆ ಯಾವುದೇ ಕಾನೂನಿನ ಅಥವಾ ನಿಯಮಗಳ ಶಕ್ತಿಯಿಲ್ಲದಿದ್ದರೂ ಆ ವೇಳೆಗಾಗಲೇ ಹೆಪ್ಪುಗಟ್ಟಿದ್ದ ಸಾರ್ವಜನಿಕ ವಿರೋಧಕ್ಕೆ ತಲೆ ಬಾಗಿ ಕನ್ನಡಕ್ಕೆ ಚಿತ್ರಗಳನ್ನು ಡಬ್ ಮಾಡುವ ಸಂಪ್ರದಾಯ ತಾನೇ ತಾನಾಗಿ ಕ್ಷೀಣಗೊಂಡಿತು.

ಅಂದು ಡಬಿಂಗ್ ವಿರೋಧಿ ಚಳವಳಿಯಲ್ಲಿ ಸಕ್ರಿವಾಗಿ ಭಾಗಿಗಳಾದ ಕನ್ನಡ ಸಾರಸ್ವತ ಪ್ರಪಂಚದ ಪ್ರತಿಷ್ಠಿತರನ್ನು ಕೃತಜ್ಞತೆಯಿಂದ ನೆನೆಯುತ್ತದೆ ಕನ್ನಡ ಚಿತ್ರರಂಗ. ಈ ಚಳವಳಿಯಲ್ಲಿ ಕನ್ನಡ ಪತ್ರಿಕೆಗಳು ತಮ್ಮನ್ನು ತೊಡಗಿಸಿಕೊಂಡ ರೀತಿ  ಪ್ರಶಂಸಾರ್ಹ. ಇವು ಹಳೆಯ ದಿನಗಳ ಮಾತು. ಇದೀಗ ಮತ್ತೆ ಡಬಿಂಗ್ ಆಸಕ್ತಿಗಳು ಕುದುರತೊಡಗಿವೆ. ಕೆಲವು ಮಂದಿ ಪರಭಾಷಾ ನಿರ್ಮಾಪಕರು ಈ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಕನ್ನಡದ ಕೆಲವು ಮಂದಿ ನಿರ್ಮಾಪಕರ ಒತ್ತಾಸೆಯೂ ಇದೆ ಎನ್ನುವ ಮಾತಿದೆ. ಹಾಗಾಗಿ ಇದನ್ನು ತಡೆಯಲು ಎಲ್ಲ ರೀತಿಯ ಪ್ರಯತ್ನವೂ ಆಗಬೇಕಾಗಿದೆ. ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ ಮಂದಿಯನ್ನು ಉಳಿಸಿದ ಅನ್ನದಾತರಾದ ಕನ್ನಡಿಗರ ಸಹಕಾರ ಬೇಕಾಗಿದೆ.
 

ಅಶೋಕ್
(ಲೇಖಕರು- ನಟರು ಮತ್ತು  ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟದ ಅಧ್ಯಕ್ಷರು)

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT