ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬಿಂಗ್ ವಿವಾದ: ಪರ್ಯಾಯ ಉದ್ಯಮಕ್ಕೆ ಅವಕಾಶ

Last Updated 11 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಡಬಿಂಗ್ ವಿವಾದ ಕನ್ನಡ ಚಿತ್ರರಂಗಕ್ಕೆ ಹೊಸದೇನಲ್ಲ. 77ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಬಿಂಗ್ ವಿರುದ್ಧ ನಿರ್ಣಯ ಕೈಗೊಂಡ ಮೇಲೆ ಈ ವಿವಾದಕ್ಕೆ ಮತ್ತೆ ಜೀವ ಬಂದಿದೆ. ಡಬಿಂಗ್‌ಗೆ ಅವಕಾಶ ಕೊಟ್ಟರೆ ಕನ್ನಡ ಚಿತ್ರರಂಗದ ಜತೆ ಕನ್ನಡ ಭಾಷೆ, ಸಂಸ್ಕೃತಿ ನಾಶವಾಗುತ್ತದೆ ಎಂದು ಹೇಳುತ್ತಿದೆ ಒಂದು ಬಣ. ಸತ್ವ ಇರುವುದು ಉಳಿಯುತ್ತದೆ, ಇಲ್ಲದಿರುವುದು ಅಳಿಯುತ್ತದೆ. ಡಬಿಂಗ್‌ಗೆ ಅವಕಾಶ ಇದ್ದರೂ ನೆರೆಯ ರಾಜ್ಯಗಳಲ್ಲಿ ಅಲ್ಲಿನ ಭಾಷೆಯ ಚಿತ್ರರಂಗ ಬೆಳೆಯುತ್ತಿಲ್ಲವೇ?  ಬೇರೆ ಭಾಷೆಯ ಪುಸ್ತಕಗಳ ಅನುವಾದ ಆಗುವುದರಿಂದ ಕನ್ನಡ ಪುಸ್ತಕೋದ್ಯಮವೇನಾದರೂ ನಾಶವಾಗಿದೆಯೇ? ಎಂದು ಕೇಳುತ್ತಿದೆ  ಇನ್ನೊಂದು ಬಣ. ಈ ನಡುವೆ ಚಿತ್ರ ನೋಡುವ ಪ್ರೇಕ್ಷಕರ ಬೇಕು-ಬೇಡಗಳಿಗೆ ಯಾರಾದರೂ ಕಿವಿಗೊಟ್ಟಿದ್ದಾರೆಯೇ?


ಕಳೆದ ಹದಿನೈದು ದಿನಗಳಲ್ಲಿ ನಡೆದ ನಾಲ್ಕು ಘಟನೆಗಳನ್ನು ಸ್ವಲ್ಪ ಗಮನಿಸೋಣ:
1) ಕನ್ನಡ ಸಾಹಿತ್ಯ ಸಮ್ಮೇಳನ ಡಬಿಂಗ್ ಚಲನ ಚಿತ್ರದ ಬಗ್ಗೆ ನಿರ್ಣಯವೊಂದನ್ನು ಅಂಗೀಕರಿಸಿತು. ‘ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಡಬ್ಬಿಂಗ್‌ನಿಂದ ದೂರವಿದ್ದ ಕನ್ನಡ ಚಿತ್ರರಂಗ ಮತ್ತೆ ಡಬಿಂಗ್ ಸಂಸ್ಕೃತಿಯ ಮೋಹಕ್ಕೆ ಒಳಗಾಗುತ್ತಿರುವುದನ್ನು ವಿರೋಧಿಸಿದ ಸಮ್ಮೇಳನ ‘ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಮಾರಕವಾದ ಡಬಿಂಗ್ ಚಿತ್ರ ನಿರ್ಮಾಣಕ್ಕೆ ಸರ್ಕಾರ ಅವಕಾಶ ನೀಡಬಾರದು’ ಎಂದು ನಿರ್ಣಯವೊಂದನ್ನು ಅಂಗೀಕರಿಸಿತು. ಸಮ್ಮೇಳನಾಧ್ಯಕ್ಷರಾದ ಜಿ. ವೆಂಕಟಸುಬ್ಬಯ್ಯನವರೂ ಕೂಡ ತಮ್ಮ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಡಬಿಂಗ್ ಸಂಸ್ಕೃತಿಗೆ ಅವಕಾಶ ಬೇಡ ಎಂದು ಕರೆ ನೀಡಿದರು.

2) ಇದೇ ಸಮ್ಮೇಳನದಲ್ಲಿ ಹಿರಿಯ ನಟಿ ಬಿ. ಸರೋಜಾದೇವಿ ಅವರು ಚಲನಚಿತ್ರ ಕುರಿತಾದ ವಿಚಾರಗೋಷ್ಠಿಯಲ್ಲಿ ಮಾತನಾಡಿ ಡಬಿಂಗ್ ಕನ್ನಡಕ್ಕೆ ಏಕೆ ಬೇಡ? ರಾಮಾಯಣ, ಮಹಾಭಾರತಗಳನ್ನು ನಾವು ಡಬ್ ಮಾಡಬೇಕು - ಡಬ್ ಚಿತ್ರಗಳನ್ನು ನೋಡುವುದರಿಂದ ನಾವು ಬೆಳೆಯಬಹುದು ಎಂದು ತಮ್ಮ ವಾದವನ್ನು ಮಂಡಿಸಿದರು. ಸಭಿಕರು ಇದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದರೂ, ಯಾರು ಏನೇ ಹೇಳಲಿ, ನನ್ನ ವಾದವನ್ನು ನಾನು ಮಂಡಿಸಿಯೇ ತೀರುವೆ ಎಂದು ಬಿ. ಸರೋಜಾದೇವಿ ಡಬಿಂಗ್ ಪರವಾದ ತಮ್ಮ ಅಭಿಪ್ರಾಯವನ್ನು ಮಂಡಿಸಿದರು.

3) ಕರ್ನಾಟಕ ಚಲನಚತ್ರ ಅಕಾಡೆಮಿ, ಬನವಾಸಿ ಬಳಗ ಎಂಬ ವೃತ್ತಿಪರ ಕನ್ನಡಿಗರ ಗುಂಪಿನೊಂದಿಗೆ ಸೇರಿಕೊಂಡು ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿಯ ಬಗ್ಗೆ ಸಮೀಕ್ಷೆ ನಡೆಸಿತು. ‘ನಮ್ಮ ಚಿತ್ರೋದ್ಯಮ ಈಗ ಬೇರೆ ಬೇರೆ ಕಾರಣಗಳಿಂದ ಸಂಕಷ್ಟದ ಸ್ಥಿತಿಯನ್ನು ತಲುಪಿದೆ’ ಎಂದು ಅಭಿಪ್ರಾಯಪಟ್ಟಿರುವ ಚಲನಚಿತ್ರ ಅಕಾಡೆಮಿ, ಪರಭಾಷಾ ಚಿತ್ರಗಳನ್ನು ಡಬಿಂಗ್ ಮಾಡುವ ಕೆಲಸಕ್ಕೆ ಕನ್ನಡದಲ್ಲಿ ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ಉದ್ಯಮದಲ್ಲಿ ತೀವ್ರ ಅಸಮಾಧಾನ ತಲೆದೋರಿದ ನಂತರ ತಕ್ಷಣವೇ ವಾಪಸು ಪಡೆಯಿತು.

4) ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವಾಗ, ಡಬಿಂಗ್ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗ ನಟ ಉಪೇಂದ್ರ ಅವರದೇ ನಿರ್ದೇಶನದ ‘ಸೂಪರ್’ ಚಿತ್ರವನ್ನು ತೆಲುಗಿಗೆ ಡಬ್ ಮಾಡುವ ಬಗ್ಗೆ ಚರ್ಚೆ ನಡೆಸುತ್ತಿದ್ದರು.

ಈ ನಾಲ್ಕು ಘಟನೆಗಳೇ ಕನ್ನಡ ಚಿತ್ರರಂಗದಲ್ಲಿ ಈಗ ಬಿರುಗಾಳಿಯಂತೆ ಬೀಸುತ್ತಿರುವ ‘ಡಬಿಂಗ್ - ಬೇಕು - ಬೇಡ’ ವಿವಾದದ ವಿರೋದಾಭಾಸಗಳನ್ನು ಹೇಳುತ್ತದೆ.

ಪುನೀತ್ ರಾಜ್‌ಕುಮಾರ್, ದರ್ಶನ್, ಉಪೇಂದ್ರ ಅಭಿನಯಿಸುವ ಎಲ್ಲ ಕನ್ನಡ ಚಿತ್ರಗಳೂ ತೆಲುಗಿಗೆ ಡಬ್ ಆಗಿ ಆಂಧ್ರಪ್ರದೇಶದ ಎಲ್ಲ ಟೆಂಟ್‌ಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಆದರೆ ಕನ್ನಡಿಗರಾದ ನಮಗೆ ರಾಮ್‌ಚರಣ್ ತೇಜ, ಜೂನಿಯರ್ ಎನ್.ಟಿ.ಆರ್., ವೆಂಕಟೇಶ್, ನಾಗಾರ್ಜುನ ಅಭಿನಯದ ಚಿತ್ರಗಳನ್ನು ಕನ್ನಡದಲ್ಲಿ ನೋಡುವ ಭಾಗ್ಯ ಇಲ್ಲ. ಇಂಗ್ಲೀಷಿನಲ್ಲಿ ಹ್ಯಾರಿ ಪಾಟರ್ ಸಿನಿಮಾವನ್ನು, ಸ್ಪೈಡರ್ ಮ್ಯಾನ್, ಚಿತ್ರವನ್ನು ನಿನ್ನೆ ಬಿಡುಗಡೆಯಾದ ಜೇಮ್ಸ್ ಕ್ಯಾಮರೂನ್‌ನ ‘ಸ್ಯಾಂಕ್ಟಮ್’ ಚಿತ್ರವನ್ನು ಆಂಧ್ರದವರು ತೆಲುಗಿನಲ್ಲೂ, ಚೆನ್ನೈನಲ್ಲಿ ತಮಿಳಿನಲ್ಲೂ, ಉತ್ತರ ಭಾರತದಲ್ಲಿ ಹಿಂದಿ ಭಾಷೆಯಲ್ಲೂ ನೋಡುತ್ತಿದ್ದಾರೆ. ಕನ್ನಡಿಗರಾದ ನಮಗೆ ಇಂಥಹ ಅಸಾಧಾರಣ ಚಿತ್ರಗಳನ್ನು ಅರ್ಥವಾಗದಿದ್ದರೂ ಇಂಗ್ಲೀಷಿನಲ್ಲೇ ನೋಡಬೇಕಾದಂತಹ ಅನಿವಾರ್ಯತೆಯನ್ನು ಡಬಿಂಗ್ ವಿರೋಧಿಗಳು ಸೃಷ್ಟಿಸಿದ್ದಾರೆ. ಇದರಿಂದ ಡಬಿಂಗ್ ವಿರೋಧಿಸುತ್ತಿರುವವರು ಸಾಧಿಸುವುದಾದರೂ ಏನು? ಪರಭಾಷಾ ಚಿತ್ರಗಳನ್ನು ಕನ್ನಡದ ಜನ ನೋಡಿಯೇ ನೋಡುತ್ತಾರೆ.

ಅದನ್ನು ಸಂಪೂರ್ಣವಾಗಿ ನೋಡದಿರುವಂತೆ ಮಾಡಲು ಯಾರಿಂದ ಸಾಧ್ಯ? ಕನ್ನಡದಲ್ಲಿ ವಿಫಲವಾದ ಕಿಶೋರ್ ಅಭಿನಯದ ‘ಹುಲಿ’ ಚಿತ್ರವನ್ನು ಮಲಯಾಳಂನಲ್ಲಿ ‘ಭಯಪಡಾದೆ’ ಎನ್ನುವ ಹೆಸರಿನಲ್ಲಿ ಡಬ್ ಮಾಡಿದ್ದಾರೆ. ಆ ಚಿತ್ರ ಅಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಮುಮ್ಮಟಿ ಅತಿಥಿ ನಟನಾಗಿ ಅಭಿನಯಿಸಿದ್ದ ಆದಿತ್ಯ ಅಭಿನಯದ “ಲವ್‌” ಎನ್ನುವ ಕನ್ನಡ ಚಿತ್ರ ಬಾಕ್ಸಾಫೀಸಿನಲ್ಲಿ ಸೋತಿತ್ತು. ಅದೇ ಚಿತ್ರ ಮಲಯಾಳಂನಲ್ಲಿ ಡಬ್‌ಆಗಿ ಸೂಪರ್‌ಹಿಟ್ ಆಗಿದೆ. ತೆಲುಗಿನಲ್ಲಿ ಅರ್ಜುನ್‌ಸರ್ಜಾ ನಟಿಸಿದ ಎಲ್ಲ ಚಿತ್ರಗಳೂ ಮಲಯಾಳಂಗೆ ಡಬ್ ಆಗಿವೆ. ಈಗ ಚಿರಂಜೀವಿ ಸರ್ಜಾ ಕನ್ನಡದಲ್ಲಿ ಅಭಿನಯಿಸಿದ ಎರಡೂ ಕನ್ನಡ ಚಿತ್ರಗಳು ತೆಲುಗು, ಮಲಯಾಳಂಗೆ ಡಬ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿವೆ.

ಕನ್ನಡ ಚಿತ್ರಗಳನ್ನು ತಯಾರಿಸುವುದೇ ಇತರ ಭಾಷೆಗಳಿಗೆ ಡಬ್ ಮಾಡಲು ಎನ್ನುವಂತಹ ಪರಿಸ್ಥಿತಿ ಏರ್ಪಟ್ಟಿದೆ. ಇನ್ನು ಕನ್ನಡಕ್ಕೆ ಡಬಿಂಗ್ ಬೇಡ ಎಂದು ಹೇಳುತ್ತಿರುವುದು ಯಾರಿಗಾಗಿ? ಯಾರ ಹಿತ ಕಾಪಾಡಲು? ಕೆಲವರನ್ನು ಕಾಪಾಡಲು ಉದ್ಯಮವನ್ನೇ ಬಲಿಕೊಡುವುದು ಸರಿಯೇ?

ಕೆಲವು ಅಂಧಾಭಿಮಾನಿಗಳು ಡಬಿಂಗ್ ವಿರೋಧಿಸುತ್ತಿರುವುದಕ್ಕೆ ಕಾರಣ ಏನು ಎಂಬುದು ಅರ್ಥವಾಗುತ್ತಿಲ್ಲ. ಡಬ್ಬಿಂಗ್‌ನಿಂದ ಕನ್ನಡ ಸಿನಿಮಾ ಸಾಯುತ್ತದೆ. ಮೊದಲೇ ದುಃಸ್ಥಿತಿಯಲ್ಲಿರುವ ಚಿತ್ರರಂಗದಲ್ಲಿ ಕನ್ನಡ ಚಿತ್ರಗಳ ತಯಾರಿಕೆಯೇ ನಿಂತು ಹೋಗುತ್ತದೆ ಎಂದು ಕೆಲವರು ವಾದಿಸುತ್ತಿದ್ದಾರೆ. 77 ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗ ಇನ್ನೂ ಗಟ್ಟಿಯಾಗಿ ನಿಲ್ಲಲಾರದಷ್ಟು ಬಡವಾಗಿದೆಯೇ? ಪರಭಾಷಾ ಚಿತ್ರವೊಂದು ಕರ್ನಾಟಕದಲ್ಲಿ ಬಿಡುಗಡೆಯಾದರೆ ಇಡೀ ಕನ್ನಡ ಚಿತ್ರರಂಗವೇ ತರಗೆಲೆಯಾಗುತ್ತದೆ ಎನ್ನುವುದು ಹಾಸ್ಯಾಸ್ಪದವಲ್ಲವೇ?

ಪರ್ಯಾಯ ಉದ್ಯಮ: ಡಬಿಂಗ್‌ನಿಂದಾಗಿ ಪರ್ಯಾಯ ಉದ್ಯಮವೊಂದು ಬೆಳೆಯುತ್ತದೆ. ಕನ್ನಡ ಚಿತ್ರರಂಗ ಈಗ ನಿಂತ ನೀರಾಗಿದೆ. ಕನ್ನಡ ಸಿನಿಮಾದ ಮಿತಿಯೂ ಈ 78 ವರ್ಷಗಳ ಗತಿಯಲ್ಲಿ ಚೆನ್ನಾಗಿಯೇ ಗೊತ್ತಾಗಿದೆ. 110 ಚಿತ್ರಗಳು ವರ್ಷಕ್ಕೆ ತಯಾರಾದರೂ, ಗೆಲ್ಲುವುದು ಕನಿಷ್ಠ 10 ಚಿತ್ರಗಳು ಮಾತ್ರ. ಉಳಿದ ಚಿತ್ರಗಳು ಲೆಕ್ಕಕ್ಕೆ ಮಾತ್ರ. ರಾಜ್ಯದಲ್ಲಿ ಇರುವ 600 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲು ಕನ್ನಡ ಚಿತ್ರಗಳೇ ಸಾಲದು. 110 ಚಿತ್ರಗಳು ನಾಲ್ಕೇವಾರದಲ್ಲಿ ಚಿತ್ರಮಂದಿರದಿಂದ ಕಾಲ್ಕಿತ್ತರೆ (ಕೆಲವು ಕನ್ನಡ ಚಿತ್ರಗಳು ಒಂದೇ ವಾರಕ್ಕೆ ಡಬ್ಬ ಸೇರುತ್ತವೆ) ಉಳಿದ ವಾರಗಳಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುವುದು ಯಾವ ಚಿತ್ರ? ಅನಿವಾರ್ಯವಾಗಿ ಚಿತ್ರಮಂದಿರಗಳಲ್ಲಿ ಪರಭಾಷೆ ಚಿತ್ರಗಳ ಪ್ರದರ್ಶನವಾಗುತ್ತದೆ. ಡಬಿಂಗ್‌ಗೆ ಅವಕಾಶ ಕೊಟ್ಟರೆ ಅದೇ ಚಿತ್ರ ಕನ್ನಡವಾಗಿ ಪರಿವರ್ತನೆಯಾಗಿ ಪ್ರದರ್ಶನಗೊಳ್ಳುತ್ತದೆ. ಇದರಿಂದ ಕನ್ನಡಕ್ಕೇ ಲಾಭ ಬಂದಂತಾಗುತ್ತದೆ.

ಡಬಿಂಗ್‌ಗೆ ಅವಕಾಶ ಕೊಟ್ಟರೆ ಕನ್ನಡ ಚಿತ್ರರಂಗ ಸತ್ತು ಹೋಗುತ್ತದೆ ಎಂಬುದಕ್ಕೆ ಸಮರ್ಥನೆ ಇಲ್ಲ. ಹೊಸ ತಂತ್ರಜ್ಞಾನಗಳಿಗೆ, ಹೊಸ ಹೊಸ ಆವಿಷ್ಕಾರಗಳಿಗೆ ಯಾವುದೇ ಉದ್ಯಮವಾದರೂ ತೆರೆದುಕೊಳ್ಳಬೇಕು ಇಲ್ಲದಿದ್ದರೆ ಆ ಉದ್ಯಮ ನಿಂತ ನೀರಾಗುತ್ತದೆ. ಟೆಲಿವಿಷನ್ ಬಂದಾಗಲೂ ಕನ್ನಡ ಚಿತ್ರರಂಗದವರು ಅದನ್ನು ವಿರೋಧಿಸಿದ್ದರು. ಟ.ವಿ.ಯಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದರಿಂದ ಚಿತ್ರಮಂದಿರಕ್ಕೆ ಜನ ಬರುವುದಿಲ್ಲ ಎಂದೇ ವಾದಿಸುತ್ತಿದ್ದರು. ಈಗ ನೋಡಿ ಕೇಬಲ್ ಮತ್ತು ಸ್ಯಾಟಲೈಟ್ ಹಕ್ಕುಗಳ ಮಾರಾಟದಿಂದಲೇ ಕನ್ನಡ ಚಲನ ಚಿತ್ರರಂಗಕ್ಕೆ 50 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಟಿ.ವಿ.ಗಳೂ ಕೂಡ ಚಿತ್ರಗಳ ಆದಾಯದ ಒಂದು ಮೂಲವಾಯಿತು. ಅದೇ ರೀತಿ ವೀಡಿಯೋ ಮತ್ತು ಕ್ಯಾಸೆಟ್ ಹಕ್ಕುಗಳ ಲಾಭ ಕೂಡ ಹೆಚ್ಚಿದ್ದು ಸಂಗೀತ ಮತ್ತು ವೀಡಿಯೋ ಹಕ್ಕುಗಳ ಮಾರಾಟದಿಂದಲೇ 10 ಕೋಟಿ ಆದಾಯ ಹರಿದು ಬರುತ್ತದೆ.

ಮೊದಲು ಟಿ.ವಿ.ಯನ್ನೇ ವಿರೋಧಿಸಿದವರಿಗೆ ಅದರ ಮಹತ್ವದ ಅರಿವಾಗುತ್ತಿದೆ. ಪಿ.ವಿ.ಆರ್. ಐನಾಕ್ಸ್‌ಗಳು ಬಂದಾಗಲೂ ಈ ಚಿತ್ರಮಂದಿರಗಳಿಂದಾಗಿ ಕನ್ನಡ ಚಿತ್ರಗಳಿಗೆ ಕಂಟಕವಾಗುತ್ತದೆ ಎಂದೇ ಬೊಬ್ಬೆ ಹಾಕಿದರು. ಈಗ ಪಿವಿಆರ್‌ನಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಹಾತೊರೆಯುತ್ತಿದ್ದಾರೆ. ಡಿಜಿಟಲ್‌ನಲ್ಲಿ ಚಿತ್ರಗಳ ಹಂಚಿಕೆಯಾದರೆ ಕರ್ನಾಟಕದ ಬಹುತೇಕ ಚಿತ್ರಮಂದಿರಗಳು ತಾಂತ್ರಿಕ ಹಿಡಿತ ಹೊಂದಿರುವ ಮುಂಬೈವಾಲಾಗಳ ಕೈಗೆ ಹೋಗುತ್ತವೆ. ಆದ್ದರಿಂದ ಡಿಜಿಟಲ್ ವ್ಯವಸ್ಥೆ ಬೇಡ ಎಂಬ ಪ್ರತಿಭಟನೆ ಕೇಳಿ ಬಂತು. ಈಗ ರಾಜ್ಯದ 300 ಚಿತ್ರಮಂದಿರಗಳಲ್ಲಿ ಡಿಜಿಟಲ್ ಪ್ರೊಜೆಕ್ಷನ್ ವ್ಯವಸ್ಥೆ ಇದೆ. ಇದರಿಂದ ಚಿತ್ರ ಪ್ರದರ್ಶಿಸುವ ನಿರ್ಮಾಪಕರಿಗೆ ಚಿತ್ರದ ಪ್ರಿಂಟ್ ಖರ್ಚಿನಲ್ಲಿ ಗಣನೀಯವಾಗಿ ಉಳಿತಾಯವಾಗಲು ಕಾರಣವಾಗಿದೆ. ಜಾಕಿ, ಬಾಸ್, ಸೂಪರ್ ಚಿತ್ರಗಳನ್ನು ಏಕಕಾಲಕ್ಕೆ ರಾಜ್ಯದ 150 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದು ಈ ಡಿಜಿಟಲ್ ವ್ಯವಸ್ಥೆಯಿಂದಲೇ ಇದರಿಂದ ಶತದಿನ ನಡೆಸಿ ಬಾಕ್ಸ್ ಆಫೀಸ್ ಹಿಟ್ ಎಂದು ಹೇಳುವ ಬದಲು ಮೂರೇ ವಾರದಲ್ಲಿ ನಿರ್ಮಾಪಕರು ಹಣ ಬಾಚುತ್ತಿದ್ದಾರೆ.

ಸತತ ಬಳಕೆಯ ನಂತರವೂ ಡಿಜಿಟಲ್ ಪ್ರಿಂಟ್ ಹಾಳಾಗುವುದಿಲ್ಲ. ಅದಕ್ಕೆ ಯಾವುದೇ ರೀತಿಯ ಹಾನಿಯೂ ಆಗುವುದಿಲ್ಲ. ಅಲ್ಲದೆ ಚಿತ್ರಮಂದಿರದಲ್ಲಿ ವೀಕ್ಷಣೆಯೂ ಸುಧಾರಣೆ ಆಗಿದೆ. ಪ್ರಿಂಟನ್ನು ಚಿತ್ರಮಂದಿರಕ್ಕೆ ಹೊತ್ತುಕೊಂಡು ಬರುವ ತೊಂದರೆ ಇಲ್ಲ. ಹೆಚ್ಚು ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗುವುದರಿಂದ ನಕಲು ತಡೆಯಬಹುದು. ಚಿತ್ರಕ್ಕೆ ಒಳ್ಳೆಯ ಆರಂಭ ದೊರಕುವಂತೆ ಮಾಡಬಹುದು. ಬೆಳವಣಿಗೆ ಇಷ್ಟೊಂದು ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಮೊದಮೊದಲು ಪ್ರತಿಭಟಿಸಿದ ಚಿತ್ರ ನಿರ್ಮಾಪಕರೇ ಈ ಎಲ್ಲ ಬದಲಾವಣೆಗಳಿಂದ ಲಾಭ ಪಡೆದಿದ್ದಾರೆ.

ಡಬಿಂಗ್ ಚಿತ್ರಗಳಿಂದ ಲಾಭವಾಗದಿದ್ದೀತೇ?
ಡಬಿಂಗ್‌ನಿಂದ ಕನ್ನಡ ಸಿನಿಮಾಕ್ಕೆ ಡಬ್ ಮಾಡುವ ಕಲಾವಿದರಿಗೆ ಕೆಲಸ ಸಿಗುತ್ತದೆ. ಡಬಿಂಗ್ ಸಾಹಿತ್ಯ ರಚನೆ ಮಾಡುವವರಿಗೆ ಹೇರಳವಾದ ಅವಕಾಶವಿದೆ. ಬೇರೆಬೇರೆ ಭಾಷೆಗಳನ್ನು ಅರಿತವರಿಗೆ, ಕನ್ನಡದ ಜೊತೆ ಮಲಯಾಳಂ, ತಮಿಳು, ತೆಲುಗು, ಇಂಗ್ಲಿಷ್ ಹಿಂದಿ ಭಾಷೆಗಳನ್ನು ಅರಿತವರಿಗೆ ಅವಕಾಶವಿದೆ. ಈಗ ಕನ್ನಡದಲ್ಲಿ ಕಂಠದಾನ ಮಾಡುವ ಕಲಾವಿದರು ಮಾತ್ರ ಇದ್ದಾರೆ. ಇನ್ನು ಮುಂದೆ ಸಾಹಿತ್ಯ ರಚನೆ ಮಾಡುವವರು ಬರುತ್ತಾರೆ. ಅನುವಾದಕರಿದ್ದಂತೆ. ಸಂಗೀತ ಸಂಯೋಜಕರಿಗೆ ಅವಕಾಶವಿದೆ. ಹೀಗೆ ಬೇರೆ ಬೇರೆ ವರ್ಗಗಳಿಂದ ತಜ್ಞರು, ತಂತ್ರಜ್ಞರು, ಸಾಹಿತ್ಯ ರಚನಕಾರರು, ಸಿನಿಮಾ ಉದ್ಯಮವನ್ನು ಪ್ರವೇಶಿಸುತ್ತಾರೆ. ಉದ್ಯಮ ಬೆಳೆಯುತ್ತಾ ಹೋಗುತ್ತದೆ.

ಅಲ್ಲದೆ, ಈಗ ವರ್ಷಕ್ಕೆ ಸುಮಾರು 120 ನಿರ್ಮಾಪಕರು ಮಾತ್ರ ಸಿನಿಮಾ ವ್ಯವಹಾರ ಮಾಡುತ್ತಿದ್ದಾರೆ. ಡಬಿಂಗ್‌ಗೆ ಅವಕಾಶ ಕೊಟ್ಟರೆ, ತೆಲುಗು, ಇಂಗ್ಲಿಷ್ ಸಿನಿಮಾಗಳನ್ನು ಅನಾಮತ್ತಾಗಿ ಖರೀದಿಸಿ, ಅದನ್ನು ಕನ್ನಡದನಿಯ ಚಿತ್ರವನ್ನಾಗಿಸಿ, ಮಾರುಕಟ್ಟೆ ಸೃಷ್ಟಿಸುವ ಮತ್ತೂ ನೂರು ನಿರ್ಮಾಪಕರು ಹುಟ್ಟಿಕೊಳ್ಳುತ್ತಾರೆ. ಪರಭಾಷೆಯಲ್ಲಿ ಅದನ್ನು ನೋಡುವವರು ಗೊತ್ತಿರುವ ಭಾಷೆಯಲ್ಲೇ ನೋಡುವ ಅವಕಾಶ ಅಗಲಿದೆ. ಇನ್ನೂರು ಕೋಟಿ ವಹಿವಾಟು ಆಗುವ ಜಾಗದಲ್ಲಿ ನಾಲ್ಕುನೂರು ಕೋಟಿ ರೂ ವ್ಯವಹಾರ ನಡೆಯುತ್ತದೆ. ಸಿನಿಮಾ ಕೂಡಾ ಉಳಿಯುತ್ತದೆ. ಡಬಿಂಗ್‌ಗೆ ಅವಕಾಶ ಕೊಡುವುದರಿಂದ ಕನ್ನಡ ಚಿತ್ರರಂಗದ ಚಿತ್ರಣವೇ ಸಂಪೂರ್ಣ ಬದಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT