ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬಿಂಗ್: ವಿವೇಚನೆ ಬೇಕು

Last Updated 14 ಫೆಬ್ರುವರಿ 2011, 16:05 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಡಬಿಂಗ್‌ಗೆ ಅವಕಾಶ ಬೇಡ’ ಎಂದು ನಿರ್ಣಯಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಪರಭಾಷಿಕರಿಗೆ ‘ಕನ್ನಡ ವಾಹಿನಿ’ಗೆ ಸೇರಿಕೊಳ್ಳಲು ಇದ್ದ ಅವಕಾಶವನ್ನು ನಿರಾಕರಿಸಿರುವುದರ ಜೊತೆಗೆ ಪರಭಾಷೆಗಳು ಕರ್ನಾಟಕದಲ್ಲಿ ಮೆರೆಯಲು ಅನುವು ಮಾಡಿಕೊಟ್ಟಿದೆ.

ಚಾಲ್ತಿಯಲ್ಲಿರುವ ಡಬಿಂಗ್ ವಿರೋಧಿ ನೀತಿಯು ರಾಜ್ಯದಲ್ಲಿ  ನೆಲೆಸಿರುವ ಪರಭಾಷಿಕರ ಮೇಲೆ ಉಂಟು ಮಾಡಿರುವ ಪರಿಣಾಮಗಳನ್ನು ವಿಶ್ಲೇಷಿಸಿ, ಡಬಿಂಗ್‌ನ ಸಾಧಕ-ಬಾಧಕಗಳನ್ನು ಚರ್ಚಿಸಿ, ನಿರ್ಣಯಕ್ಕೆ ಬರಬೇಕಾಗಿದ್ದ ಕಸಾಪ ಹಿಂದು-ಮುಂದು ನೋಡದೆ ನಿರ್ಣಯ ಕೈಗೊಂಡದ್ದು ವಿಷಾದಕರ.

ಕರ್ನಾಟಕ ಇಂದು ಪರಭಾಷಾ ಚಿತ್ರಗಳ ಆಡುಂಬೊಲವಾಗಿದೆ. ಬೀದರ್‌ನಿಂದ ಚಾಮರಾಜನಗರದವರೆಗೆ ಪರಭಾಷಾ ಚಿತ್ರಗಳು ಎಗ್ಗಿಲ್ಲದೆ ಪ್ರದರ್ಶನ ಕಾಣುತ್ತಿವೆ. ಕನ್ನಡಿಗರು ತುಳು, ಕೊಡವ, ಬ್ಯಾರಿ, ಕೊಂಕಣಿ ಸೋದರ ಭಾಷೆಗಳನ್ನು ಪ್ರೋತ್ಸಾಹಿಸಬೇಕೇ ಹೊರತು ಬಲಾಢ್ಯ ತಮಿಳು, ತೆಲುಗು, ಹಿಂದಿ ಭಾಷೆಗಳನ್ನಲ್ಲ. ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಸೇರಿದಂತೆ ಬಹುತೇಕರು ಡಬಿಂಗ್ ಅನ್ನು ಒಂದು ಮಗ್ಗುಲಿನಿಂದ ನೋಡಿ ಅದು ತಂದೊಡ್ಡುವ ಅಪಾಯಗಳ ಬಗ್ಗೆ ಮಾತನಾಡುತ್ತಿದ್ದಾರೆಯೇ ವಿನಾ ಡಬಿಂಗ್‌ನಿಂದ ಕನ್ನಡಕ್ಕಾಗುವ ಉಪಯೋಗಗಳ ಬಗ್ಗೆ ಚಿಂತಿಸುತ್ತಿಲ್ಲ. ಸಾರಾಸಗಟಾಗಿ ಡಬಿಂಗ್ ಅನ್ನು ವಿರೋಧಿಸಿ, ಕನ್ನಡದ ಬೆಳವಣಿಗೆಯನ್ನು ಸಂಕುಚಿತಗೊಳಿಸಿರುವ ನಾವು ಅಲ್ಪಸಂಖ್ಯಾತರ ಮತ್ತು ಪರಭಾಷಿಕರ ಮನ-ಮನೆಯಂಗಳದಲ್ಲಿ ಕನ್ನಡಕ್ಕೆ ಹಾಕಿಸಿರುವ ಅಘೋಷಿತ ಬಹಿಷ್ಕಾರವನ್ನು ತೆರವುಗೊಳಿಸಬೇಕಿದೆ. 

ನೂರು ಅಮ್ಮ ಮನೆಗೆ ಬಂದರೂ ಹೆತ್ತಮ್ಮನೇ ನಮಗೆ ಶ್ರೇಷ್ಠ. ಕನ್ನಡ ಚಿತ್ರರಂಗದ ಬಗ್ಗೆ ಕನ್ನಡಿಗರಿಗೆ ಗೌರವಾಭಿಮಾನಗಳು ಇದ್ದೇ ಇರುತ್ತವೆ. ಕನ್ನಡ ಚಿತ್ರರಂಗ ಕನ್ನಡ ಭಾಷೆಯ ಸಮೃದ್ಧಿ ಬಗ್ಗೆಯೂ ಚಿಂತಿಸಿ, ಸೂಕ್ತ ಮಾರ್ಪಾಡುಗಳೊಂದಿಗೆ ಡಬಿಂಗ್‌ಅನ್ನು ಜಾರಿಗೊಳಿಸಲು ಅನುವು ಮಾಡಿಕೊಡಬೇಕು.

ಡಬಿಂಗ್‌ನಿಂದಾಗುವ ಅನನುಕೂಲಗಳನ್ನು ಸರ್ಕಾರದಿಂದ ಹೆಚ್ಚಿನ ಸಹಾಯಧನ, ಉತ್ತೇಜನ ಇತ್ಯಾದಿಗಳ ಮೂಲಕ ಪರಿಹರಿಸಿಕೊಳ್ಳುವ ಸಾಮರ್ಥ್ಯ ನಮ್ಮ ಚಿತ್ರರಂಗಕ್ಕಿದೆ. ಆದರೆ ಆತಂಕಕಾರಿ ಪ್ರಮಾಣದಲ್ಲಿ ಕರ್ನಾಟಕದಲ್ಲಿ ಪ್ರದರ್ಶಿತವಾಗುತ್ತಿರುವ ಪರಭಾಷಾ ಚಿತ್ರಗಳನ್ನು ಹಿಮ್ಮೆಟ್ಟಿಸುವ ಅಸ್ತ್ರ ಮತ್ತು ದಶಕಗಳಿಂದ ಇಲ್ಲಿ ವಾಸಿಸುತ್ತಿದ್ದರೂ ಕನ್ನಡವನ್ನು ಕಲಿಯದ, ಮಾತನಾಡದ ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ವಿಧಾನ ನಮಗೆ ಡಬಿಂಗ್ ಅಲ್ಲದೆ ಬೇರೇನು ಉಳಿದಿದೆ?

ನೆರೆನಾಡಿನವರು ತಮ್ಮ ಭಾಷೆಗಳಲ್ಲಿಯೇ ಇತರೆ ರಾಜ್ಯ, ದೇಶಗಳ ಚಲನಚಿತ್ರಗಳನ್ನು ನೋಡುತ್ತಾ ತಮ್ಮ ಭಾಷೆಗಳನ್ನು ಬೆಳೆಸುತ್ತಿದ್ದರೆ ನಾವು ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಭಾಷೆಗಳ ಮೊರೆ ಹೋಗಿದ್ದೇವೆ. ಪರಭಾಷೆಗಳ ಆಕ್ರಮಣಗಳು ಭವಿಷ್ಯದಲ್ಲಿ ನಾಡಿನ ನುಡಿ, ನೆಲ-ಜಲ ವಿಚಾರಗಳಲ್ಲಿ  ಸಮಸ್ಯೆಗಳನ್ನು ತಂದೊಡ್ಡಿ ಮುಂದಿನ ಪೀಳಿಗೆಯ ಕನ್ನಡಿಗರಿಗೆ ಕಂಟಕವಾಗಲಿವೆ. ಪರಭಾಷಿಕರು ಕನ್ನಡ ಕಲಿಯಬೇಕು ಎಂದು ನಿರ್ಣಯ ತೆಗೆದುಕೊಳ್ಳುವ ಕ.ಸಾ.ಪ.ಗೆ ಕನ್ನಡೇತರರಿಗೆ ಕನ್ನಡವನ್ನು ತಲುಪಿಸುವ ದಾರಿಯನ್ನು ಸುಗಮಗೊಳಿಸಬೇಕಾದ ಜವಾಬ್ದಾರಿಯೂ ಇದೆ.

ಕ.ಸಾ.ಪ ಕನ್ನಡ ಚಿತ್ರರಂಗ, ಕನ್ನಡ ಹೋರಾಟಗಾರರು ಮತ್ತು ಪ್ರಗತಿಪರ ಕನ್ನಡ ಚಿಂತಕರು ವಿವೇಚನೆಯಿಂದ ಡಬಿಂಗ್ ಬಗ್ಗೆ ಚರ್ಚಿಸಿ, ಕನ್ನಡಕ್ಕೆ ಅನ್ಯಭಾಷಿಕರ ಒಳ ಹರಿವು-ಹರವನ್ನು ವಿಸ್ತರಿಸುವ, ಕನ್ನಡವನ್ನು ಮುಕ್ತವಾಗಿರಿಸುವ ಅಗತ್ಯ ಇಂದು ನಮ್ಮ ಮುಂದಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT