ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಬಿಂಗ್‌ಗೆ ವಿರೋಧ `ಮೊಂಡುವಾದ'

Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಬೆಂಗಳೂರು:  `ಬೇರೆ ಭಾಷೆಗಳಲ್ಲಿರುವ ಉತ್ತಮ ಗುಣಮಟ್ಟದ ಸಿನಿಮಾಗಳನ್ನು ವೀಕ್ಷಿಸುವುದಕ್ಕೆ ಡಬ್ಬಿಂಗ್ ಸಹಕಾರಿ. ಹೀಗಿರುವಾಗ ಡಬ್ಬಿಂಗ್ ಬೇಡವೆಂದು ಮೊಂಡುವಾದ ಮಾಡುವುದು ಅರ್ಥಹೀನ' ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ಅಂಕಿತ ಪುಸ್ತಕ ಪ್ರಕಾಶನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. `ಅಕ್ಷರಸ್ಥರಾದಂತೆ ಮೌಖಿಕ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಾನಪದವನ್ನು ಒಳಗೊಂಡಂತೆ ದೇಸಿ ಸಂಸ್ಕೃತಿಯೂ ನಶಿಸುತ್ತಿದೆ ಎಂಬ ಆತಂಕ ಎದುರಾಗಿದೆ. ಆದರೆ ಇಂದಿಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀವಂತವಾಗಿರುವ ಯಕ್ಷಗಾನ ಮತ್ತು ಪಾಡ್ದನದಂತಹ ಕಲೆಗಳು ಅಕ್ಷರಸ್ಥರ ನಡುವೆಯೂ ಉಳಿದು ನಿಂತಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ನಾನು ಅಕ್ಷರದ ವಿರೋಧಿಯಲ್ಲ. ಆದರೆ, ಆಧುನಿಕರಲ್ಲಿ ಮನೆಮಾಡಿರುವ ಈ ನೆಲದ ಸಂಸ್ಕೃತಿ ತಿರಸ್ಕರಿಸುವ ಮನೋಭಾವ ಮತ್ತು ಚಾರಿತ್ರ್ಯಹೀನತೆಯನ್ನು ಬಲವಾಗಿ ವಿರೋಧಿಸುತ್ತೇನೆ' ಎಂದು ಸ್ಪಷ್ಟನೆ ನೀಡಿದರು.

ವಿಮರ್ಶಕ ಪ್ರೊ.ನರಹಳ್ಳಿ ಬಾಲಸುಬ್ರಹ್ಮಣ್ಯ, `ಜಾನಪದವೆಂದರೆ ಸಮುದಾಯ ಪ್ರಜ್ಞೆ. ಆಧುನೀಕರಣ ಹಾಗೂ ವಿಘಟಿತಗೊಳ್ಳುತ್ತಿರುವ ಸಮಾಜದಲ್ಲಿ ಈ ಪ್ರಜ್ಞೆ ಕಳೆದುಹೋಗುತ್ತಿರುವುದರಿಂದ ಜಾನಪದವೆಂಬ ಪದವೂ ಮರೆಯಾಗುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದರು.
ಪ್ರೊ.ಬಸವರಾಜ ಕಲ್ಗುಡಿ ಅವರ `ಕಂಬಾರರ ಸಾಹಿತ್ಯದ ನೆಲೆ ಬೆಲೆ',  ಡಾ.ಜಯಪ್ರಕಾಶ ಮಾವಿನಕುಳಿ ಅವರ `ಶಿಖರ ಶೇಖರ ಕಂಬಾರ', ಲೇಖಕ ಡಾ.ವೀರೇಶ್ ಬಡಿಗೇರ ಅವರ `ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು' ಕೃತಿಯನ್ನು ಬಿಡುಗಡೆ ಮಾಡಲಾಯಿತು. ವಿಮರ್ಶಕ ಪ್ರೊ. ಸಿ.ಎನ್. ರಾಮಚಂದ್ರನ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT