ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಬಿಂಗ್‌ನಿಂದ ಬಹುಮುಖಿ ಲಾಭ:ಕುಂ.ವೀ

Last Updated 20 ಮೇ 2012, 19:20 IST
ಅಕ್ಷರ ಗಾತ್ರ

ಬೆಂಗಳೂರು:  `ಇತರೆ ಭಾಷೆಗಳ ಅತ್ಯುತ್ತಮ ಚಿತ್ರಗಳನ್ನು ಡಬ್ಬಿಂಗ್ ಮಾಡುವುದರಿಂದ ಕೇವಲ ಕನ್ನಡ ಚಿತ್ರೋದ್ಯಮಕ್ಕಷ್ಟೇ ಅಲ್ಲ. ನಮ್ಮ ಭಾಷೆ, ದೇಶದ ಬೆಳವಣಿಗೆ ಹಾಗೂ ಜ್ಞಾನಾಭಿವೃದ್ಧಿಗೂ ಸಹಕಾರಿಯಾಗಲಿದೆ~ ಎಂದು ಕಥೆಗಾರ ಕುಂ. ವೀರಭದ್ರಪ್ಪ ಹೇಳುವ ಮೂಲಕ ಡಬ್ಬಿಂಗ್ ಪರವಾದ ನಿಲುವನ್ನು ವ್ಯಕ್ತಪಡಿಸಿದರು.

ಆಕೃತಿ ಪುಸ್ತಕ ಪ್ರಕಾಶನ ಹಮ್ಮಿಕೊಂಡಿದ್ದ `ಸಂವಾದ~ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ರಾಷ್ಟ್ರೀಯ ಭಾಷೆ ಸೇರಿದಂತೆ ಇತರೆ ಭಾಷೆಗಳಲ್ಲಿ ಅನೇಕ ಅತ್ಯುತ್ತಮ ಚಿತ್ರಗಳಿವೆ. ಅಂತಹ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ನಮ್ಮ ಮಕ್ಕಳಿಗೆ ತಲುಪಿಸುವುದರಲ್ಲಿ ತಪ್ಪೇನಿದೆ? ಇದರಿಂದ ಕನ್ನಡ ಭಾಷೆ ಬೆಳವಣಿಗೆ ಜತೆಗೆ, ಮಕ್ಕಳ ಜ್ಞಾನಾರ್ಜನೆಗೂ ಅನುಕೂಲವಾಗಲಿದೆ~ ಎಂದು ಪ್ರತಿಪಾದಿಸಿದರು.

`ಒಬ್ಬ ಸಾಹಿತಿ ಅಧಿಕಾರ ವ್ಯಾಮೋಹ ಅಥವಾ ಆಸೆ- ಆಕಾಂಕ್ಷೆಗಳಿಗೆ ಒಳಗಾಗಿ ತನ್ನ ಆತ್ಮಸಾಕ್ಷಿಗೆ ಕುಂದು ತಂದುಕೊಂಡಲ್ಲಿ ಆತ ಸಾಹಿತಿಯೇ ಅಲ್ಲ. ಅಂತೆಯೇ, ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರೆಯಲು ಕೂಡ ಅರ್ಹನಲ್ಲ~ ಎಂದರು.

`ಮನುಷ್ಯನ ಜೀವಕ್ಕೆ ಮೂತ್ರಪಿಂಡ, ಹೃದಯ, ಯಕೃತ್ತು ಹೇಗೆ ಮುಖ್ಯವೋ ಹಾಗೆಯೇ ಸಮಾಜಕ್ಕೆ ಒಬ್ಬ ಸಾಹಿತಿ ಕೂಡ ಅಷ್ಟೇ ಮುಖ್ಯ. ಹೀಗಾಗಿ, ಸಮಾಜಕ್ಕೆ ಸಾಹಿತಿ ಯಕೃತ್ತು ಇದ್ದ ಹಾಗೆ~ ಎಂದು ಅವರು ಹೇಳಿದರು. `ಬರಹ ಬಾಟಲಿಯೊಳಗಿನ ಕ್ರಿಯಾಶೀಲ ಶಕ್ತಿ. ಅದನ್ನು ಎಲ್ಲಿಯವರೆಗೆ ಸಾಹಿತಿ ಜೋಪಾನವಾಗಿ ಕಾಪಾಡಲು ಸಾಧ್ಯವೋ ಅಲ್ಲಿಯವರೆಗೆ ಉತ್ತಮ ಬರಹಗಾರನಾಗಿರಲು ಸಾಧ್ಯ. ಆದರೆ, ಹೆಚ್ಚಿನವರಿಗೆ ಇದು ಸಾಧ್ಯವಾಗದೆ ನೇಪಥ್ಯಕ್ಕೆ ಸರಿದಿದ್ದಾರೆ~ ಎಂದು ಅವರು ವಿಷಾದಿಸಿದರು.

ಸಾಹಿತಿ ಸ್ವತಃ ವಿಮರ್ಶಕ:  `ಲೇಖಕ ವಿಮರ್ಶಕರನ್ನು ಗಮನದಲ್ಲಿಟ್ಟುಕೊಂಡು ಎಂದಿಗೂ ಸಾಹಿತ್ಯ ರಚಿಸುವುದಿಲ್ಲ. ಪ್ರತಿಯೊಬ್ಬ ಲೇಖಕನೂ ಸ್ವತಃ ಒಬ್ಬ ವಿಮರ್ಶಕ. ವಿಮರ್ಶಕರು ಪುಸ್ತಕದಲ್ಲಿರುವ ಒಳಿತಿಗಿಂತ ಲೋಪಗಳನ್ನೇ ಹೆಚ್ಚು ಬಿಂಬಿಸುತ್ತಾರೆ. ಇದು ಪುಸ್ತಕ ಖರೀದಿದಾರರ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ, ವಿಮರ್ಶೆಯು ಸಾಹಿತ್ಯಕ್ಕೆ ಪೂರಕವಾಗಿರಬೇಕು~ ಎಂದು ಅವರು ಸಲಹೆ ಮಾಡಿದರು.
`ವಿಮರ್ಶಕರು ಪುಸ್ತಕದಲ್ಲಿನ ಒಳಿತಿನ ಅಂಶಗಳ ಬಗ್ಗೆಯೇ ಉತ್ತಮ ವಿಮರ್ಶೆ ಮಾಡುವುದರಿಂದ ಪ್ರಕಾಶಕರಿಗೂ ಹಾಗೂ ಲೇಖಕರಿಗೂ ಅನುಕೂಲವಾಗಲಿದೆ~ ಎಂದರು.

ಸಾಹಿತ್ಯಕ್ಕೆ ಜಾತಿ ಬಣ್ಣ ಇಲ್ಲ:  ಬ್ರಾಹ್ಮಣ ಸಾಹಿತಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಹಿರಿಯ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರ ಆರೋಪದ ಬಗ್ಗೆ ಸಾಹಿತಿ ಮುಕುಂದರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಸಾಹಿತ್ಯಕ್ಕೆ ಯಾವುದೇ ಜಾತಿ ಬಣ್ಣ ಇಲ್ಲ. ಒಬ್ಬ ಸಾಹಿತಿ ತನ್ನ ಅನುಭವ, ಸಾಹಿತ್ಯ ಕೃಷಿ ಆಧಾರದಲ್ಲಿ  ಹೆಸರು ಮಾಡಲು ಸಾಧ್ಯ. ಹೀಗಾಗಿ, ಮಾಸ್ಟರ್ ಹಿರಣ್ಣಯ್ಯನವರ ಹೇಳಿಕೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ~ ಎಂದು ಪ್ರತಿಕ್ರಿಯಿಸಿದರು.

`ಸಾಹಿತಿಗಳು ಜನರಿಗೆ ಗೊತ್ತಿಲ್ಲದ ಪ್ರಪಂಚವನ್ನು ತೋರಿಸಲು ಪ್ರಯತ್ನಿಸಬೇಕು. ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಒಬ್ಬ ಶಿಕ್ಷಕನಾಗಿ, ಅದಕ್ಕಿಂತಲೂ ಮುಖ್ಯವಾಗಿ ಸೇವಕನಾಗಿ ಕೆಲಸ ಮಾಡಬೇಕು. ನಗರಕ್ಕಿಂತ ಹೆಚ್ಚು ಹಳ್ಳಿಗಳ ಸಮಸ್ಯೆಗಳಿಗೆ ಒತ್ತು ನೀಡಬೇಕು~ ಎಂದು ಕರೆ ನೀಡಿದರು.

ಅಪ್ಪ-ಅಮ್ಮ ಹಾರ್ಡ್‌ವೇರ್‌ಗಳು: `
ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಸಾಫ್ಟ್‌ವೇರ್‌ಗಳಾಗುತ್ತಿದ್ದರೆ, ಅಪ್ಪ-ಅಮ್ಮ ಹಾರ್ಡ್‌ವೇರ್‌ಗಳಾಗುತ್ತಿದ್ದಾರೆ. ಐಟಿ-ಬಿಟಿ ಕ್ಷೇತ್ರದಲ್ಲಿ ದುಡಿಯುವ ಮಕ್ಕಳು ದೇಶ-ವಿದೇಶಗಳಲ್ಲಿ ನೆಲೆಸಿದ್ದರೆ, ಅವರನ್ನು ಕಷ್ಟಪಟ್ಟು ಸಾಕಿ-ಸಲುಹಿದ ಅಪ್ಪ-ಅಮ್ಮಂದಿರು ಹಾರ್ಡ್‌ವೇರ್‌ಗಳಾಗುತ್ತಿದ್ದಾರೆ~ ಎಂದು ಸಭಿಕರ ಪ್ರಶ್ನೆಯೊಂದಕ್ಕೆಉತ್ತರಿಸಿದರು.

`ಸಮಾಜದಲ್ಲಿ ನಾಚಿಕೆ ಹಾಗೂ ಸಂಕೋಚ ಇಂದು ಸ್ಥಾನಪಲ್ಲಟವಾಗಿವೆ. ಕೇವಲ ರಾಜಕಾರಣಿಗಳಲ್ಲಿ ಮಾತ್ರವಲ್ಲ, ಎಲ್ಲ ವರ್ಗದ ಜನರಲ್ಲಿಯೂ ಇದು ಎದ್ದು ಕಾಣುತ್ತಿದೆ~ ಎಂದು ಕುಂ.ವೀ. ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT