ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಟ್ ಒಲ್ಲದ ಬುಲ್ ಬುಲ್

Last Updated 5 ಜುಲೈ 2013, 19:59 IST
ಅಕ್ಷರ ಗಾತ್ರ

ಹೊಟ್ಟೆ ಬೇಕು ಬೇಕೆಂದು ಬೇಡಿದರೂ ಊಟ ತ್ಯಜಿಸಿ ದೇಹವನ್ನು ಬಡವಾಗಿಸಿ ಬೀಗುವ ನಟಿಯರೇ ಹೆಚ್ಚು. ಆದರೆ ಈ `ಬುಲ್‌ಬುಲ್' ಡಯಟ್ ಎಂಬ ಪದಕ್ಕೆ ಬೆನ್ನು ಹಾಕಿ ಕುಳಿತಿದೆ. ದೇಹ ಸೌಂದರ್ಯ ಕಾಪಾಡಿಕೊಳ್ಳಲು ಬೇಕಿರುವುದು ಪಥ್ಯವಲ್ಲ, ಕಸರತ್ತು ಎಂಬ ಮಂತ್ರ ನಟಿ ರಚಿತಾ ರಾಮ್ ಅವರದು.

`ಬುಲ್‌ಬುಲ್' ಚಿತ್ರದಲ್ಲಿ ನಟ ದರ್ಶನ್‌ಗೆ ನಾಯಕಿಯಾಗಿ ನಟಿಸಿದ ರಚಿತಾ, ಫಿಟ್‌ನೆಸ್ ಕಾಪಾಡಿಕೊಳ್ಳುವ ಬಗೆ ಬಲು ಸರಳ. `ಹೊಟ್ಟೆ ತುಂಬಾ ತಿನ್ನಿ, ಅಷ್ಟೇ ಕಸರತ್ತು ನಡೆಸಿ' ಎಂಬುದು ಅವರ ತತ್ವ. ದೇಹಾರೋಗ್ಯ ಕಾಪಾಡಿಕೊಳ್ಳುವಲ್ಲಿ ರಚಿತಾರಿಗೆ ತಂದೆಯೇ ಮಾರ್ಗದರ್ಶಿ.

ಈಗಿನ ಮಕ್ಕಳು ಡಯಟ್ ನೆಪದಲ್ಲಿ ಊಟವನ್ನೇ ಸರಿ ಮಾಡುವುದಿಲ್ಲ. ತನ್ನ ಮಕ್ಕಳು ಹಾಗಿರಬಾರದು ಎಂಬ ಆಶಯ ತಂದೆ ರಾಮು ಅವರದು. ಮನೆಯಲ್ಲಿನ ಈ ಡಯಟ್ ವಿರೋಧಿ ಕಾನೂನಿಗೆ ರಚಿತಾ ಸಹ ಬದ್ಧ. ತಂದೆ ವೃತ್ತಿಪರ ಭರತನಾಟ್ಯ ಪಟು. ನೃತ್ಯದಿಂದಲೇ ದೇಹಾರೋಗ್ಯ ರಕ್ಷಣೆ ಸಾಧ್ಯ ಎಂಬುದು ಅವರ ನಂಬಿಕೆ.

ದೇಹದಲ್ಲಿ ಬೆವರು ಹರಿಸುವುದು ಹೇಗೆ ಎಂಬುದನ್ನು ಚೆನ್ನಾಗಿ ಬಲ್ಲರು. ಚಿತ್ರೀಕರಣ ಇರಲಿ, ಇಲ್ಲದಿರಲಿ ತಂದೆಯ ನೃತ್ಯ ಶಾಲೆಯಲ್ಲಿ ಕನಿಷ್ಠ ಒಂದು ಗಂಟೆ ನೃತ್ಯಾಭ್ಯಾಸ ಕಡ್ಡಾಯ. ಬೆಳಿಗ್ಗೆ ಎಂಟು ಗಂಟೆಗೆ ಉಪಾಹಾರ, ಮಧ್ಯಾಹ್ನ ಒಂದು ಮತ್ತು ರಾತ್ರಿ ಎಂಟು ಗಂಟೆಗೆ ಸರಿಯಾಗಿ ಊಟ. ಇದಾವುದರ ಲೆಕ್ಕಾಚಾರದಲ್ಲಿಯೂ ರಚಿತಾ ತಪ್ಪುವವರಲ್ಲ. ಊಟವಷ್ಟೇ ಅಲ್ಲ. ಯಾವ ಸಮಯದಲ್ಲಿಯೂ ಹೊಟ್ಟೆಯನ್ನು ಖಾಲಿ ಇಟ್ಟುಕೊಳ್ಳಲು ಅವರಿಗೆ ಸಾಧ್ಯವಿಲ್ಲವಂತೆ. ಏನಾದರೂ ತಿನ್ನುತ್ತಲೇ ಇರಬೇಕು.

ಡ್ರೈಫ್ರೂಟ್ಸ್, ಜ್ಯೂಸ್ ಹೀಗೆ ಒಂದಿಲ್ಲೊಂದು ತಿನಿಸು ಉದರ ಸೇರುತ್ತಲೇ ಇರುತ್ತದೆ. ಜೊತೆಗೆ ಬಿಸಿನೀರು, ಗ್ರೀನ್ ಟೀ. ಝೀರೋ ಸ್ೈ, ಥಳಕು ಬಳುಕಿನ ದೇಹ ಎಂದೆಲ್ಲಾ ಡಯೆಟ್ ಮೊರೆ ಹೋಗದ ರಚಿತಾ, ದೇಹಕ್ಕೆ ಕಸರತ್ತು ನೀಡುವ ವಿಷಯದಲ್ಲಿ ಮಾತ್ರ ಕಟ್ಟುನಿಟ್ಟು. ಬೆಳಿಗ್ಗೆ ಜಿಮ್‌ನಲ್ಲಿ ಎರಡು ಗಂಟೆ ಬೆವರಿಳಿಸುತ್ತಾರೆ. ಟ್ರೆಡ್‌ಮಿಲ್, ಆರ್ಮ್ ಬಿಲ್ಟ್ ಮಾಡಲು ಡಂಬಲ್ಸ್, ಸಿಟಪ್ಸ್, ಸ್ಕಿಪ್ಪಿಂಗ್ ರಚಿತಾರಿಗೆ ಪ್ರಿಯವಾದ ಕಸರತ್ತುಗಳು. ಸಂಜೆ ವೇಳೆ ಒಂದರಿಂದ ಒಂದೂವರೆ ಗಂಟೆ ತಂದೆಯ ಜೊತೆ ನೃತ್ಯ ಅಭ್ಯಾಸ ಸಾಗುತ್ತದೆ.

ದಿನದಲ್ಲಿ ಯಾವ ಕೆಲಸ ತಪ್ಪಿದರೂ ನೃತ್ಯ ಮಾತ್ರ ತಪ್ಪುವುದಿಲ್ಲ. ಸ್ನೇಹಿತರಿಗಿಂತ ಅಪ್ಪ ಅಮ್ಮ ಮತ್ತು ಅಕ್ಕನೊಂದಿಗೆ ಹೆಚ್ಚು ಸಮಯ ಕಳೆಯುವ ಅವರಿಗೆ ತಮ್ಮ ಜೀವನಶೈಲಿಯಿಂದ ಮಾನಸಿಕ ಆರೋಗ್ಯವೂ ಚೆನ್ನಾಗಿದೆ ಎಂಬ ಖುಷಿ. ನಟಿಯರಿಗೆ ದೇಹ ನಿರ್ವಹಣೆ ಅತಿ ಮುಖ್ಯ ಎಂಬ ನೀತಿಯನ್ನು ಅವರು ಮರೆತಿಲ್ಲ. ನಟಿಯಾದ ಬಳಿಕ ಅವರ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳಾಗಿವೆ. ಯಾವ ಕಾರಣಕ್ಕೂ ದೈಹಿಕ ಕಸರತ್ತಿಗೆ ನೀಡುವ ಸಮಯವನ್ನು ಕಡಿಮೆ ಮಾಡುವುದಿಲ್ಲ ಎಂಬುದು ಅವರ ದೃಢ ನಿಲುವು.

ನೀಳಕಾಯವನ್ನು ಕಾಪಾಡಿಕೊಳ್ಳುವಲ್ಲಿ ಮಾತ್ರವಲ್ಲ, ರಚಿತಾ ಚರ್ಮದ ಸೌಂದರ್ಯದ ವಿಷಯದಲ್ಲೂ ಸೂಕ್ಷ್ಮ. ನಟಿಯರು, ರೂಪದರ್ಶಿಯರ ನಡೆಗಿಂತ ಇಲ್ಲಿಯೂ ಅವರು ಭಿನ್ನ. ರಾಸಾಯನಿಕ ಅಂಶಗಳುಳ್ಳ ಕಾಸ್ಮೆಟಿಕ್‌ಗಳಿಂದ ಅವರು ದೂರ. ಮುಖದ ಸೌಂದರ್ಯಕ್ಕೆ ಅವರು ನಂಬಿರುವುದು ಆಯುರ್ವೇದವನ್ನು. ಗಂಧ, ಮೊಸರು, ಟೊಮ್ಯಾಟೊ, ಜೇನುತುಪ್ಪ, ಹಾಲು ಹೀಗೆ ಮನೆಯಲ್ಲಿಯೇ ಇರುವ ರಾಸಾಯನಿಕ ರಹಿತ ಸಾಮಗ್ರಿಗಳೇ ಅವರ ಸೌಂದರ್ಯ ವೃದ್ಧಿಯ ರಹಸ್ಯ.

ಬ್ಯೂಟಿಪಾರ್ಲರ್‌ಗಳೆಂದರೆ ಅವರಿಗೆ ಹಿಂಜರಿಕೆ. ಚರ್ಮಕ್ಕೆ ಹಾನಿಯಾದ ಅನುಭವದ ಕಾರಣ ಮನೆಮದ್ದನ್ನೇ ಅವರು ಅವಲಂಬಿಸಿದ್ದಾರೆ. ಅಮ್ಮನೇ ಸ್ವತಃ ಕೆಲವು ಔಷಧಗಳನ್ನು ತಯಾರಿಸಿಕೊಡುತ್ತಾರೆ. ಇನ್ನು ಮನೆಯಲ್ಲಿ ಇದ್ದಾಗ ಬಿಡುವಿನ ಅವಧಿಯಲ್ಲಂತೂ ವದನಕ್ಕೆ ಮೊಸರಿನ ಚಿಕಿತ್ಸೆ ನಡೆಸುತ್ತಾರೆ ರಚಿತಾ.

ಸ್ಪಾಗಳಲ್ಲಿ ಸಾವಿರಗಟ್ಟಲೆ ತೆತ್ತು ಪಡೆದುಕೊಳ್ಳುವ ಸೌಂದರ್ಯ ತಾತ್ಕಾಲಿಕ ಮತ್ತು ಅಸುರಕ್ಷಿತ. ಆದರೆ ಮನೆಮದ್ದಿನ ಚಿಕಿತ್ಸೆಯಿಂದ ಸೌಂದರ್ಯವೂ ಇದೆ, ಚರ್ಮದ ರಕ್ಷಣೆಯೂ ಇದೆ ಎನ್ನುತ್ತಾರೆ ಅವರು.
-ಅಮಿತ್ ಎಂ.ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT