ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡರ್ಟಿ ಅಲ್ಲ! ಡರ್ಟ್ ಬೈಕ್ ತಜ್ಞ

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಮಣ್ಣು, ಕೆಸರು, ತಿರುವು, ಹೆಜ್ಜೆ ಹೆಜ್ಜೆಗೂ ಅಪಾಯಗಳನ್ನು ತುಂಬಿಟ್ಟ ರಸ್ತೆಯಲ್ಲಿ ಕಿವಿ ಗಡಚಿಕ್ಕುವ ಶಬ್ದದೊಂದಿಗೆ ಮೊದಲಿಗರಾಗಬೇಕೆಂಬ ಕನಸಿನೊಂದಿಗೆ ಮುನ್ನುಗ್ಗಲು ಕಾಲಲ್ಲಿ ಗೇರನ್ನು ತುಳಿಯುತ್ತಾ, ಕೈಯಲ್ಲಿನ ಆಕ್ಸಿಲೇಟರ್ ತಿರುಗಿಸುವ ಬೈಕ್ ರೇಸ್ ನಿಜಕ್ಕೂ ರೋಮಾಂಚನಕಾರಿ. ನೇರವಾಗಿರುವ ರಸ್ತೆಗಳಲ್ಲಿ ಸಾಗುವ ಬೈಕ್‌ಗಳು ಸ್ವಲ್ಪ ಆಯ ತಪ್ಪಿದರೂ ಬೀಳುವುದುಂಟು. ಆದರೆ ಅಂಕು-ಡೊಂಕಾದ, ಹಳ್ಳ ದಿಣ್ಣೆಗಳನ್ನು ಹೊಂದಿರುವ ಮೋಟೋ ಕ್ರಾಸ್ ಹಾಗೂ ಆಟೋ ಕ್ರಾಸ್ ರೇಸುಗಳಲ್ಲಿ ಓಡಿಸುವ ಬೈಕುಗಳನ್ನು ಲೀಲಾಜಾಲವಾಗಿ ಓಡಿಸುವ ಸವಾರನ ಚಾಕಚಕತ್ಯೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅಲ್ಲಿ ಓಡುವ ಬೈಕ್ ಕೂಡಾ. ಸಾಮಾನ್ಯ ಬೈಕ್‌ಗಳನ್ನೇ ಡರ್ಟ್ ಟ್ರಾಕ್‌ಗಾಗಿ ಬದಲಾಯಿಸಲಾಗುತ್ತದೆ. ಹೆಚ್ಚು ಶಕ್ತಿ, ವೇಗದಲ್ಲೂ ಸಮತೋಲನ ಕಾಯ್ದುಕೊಳ್ಳುವ ಗುಣ, ಎಂಜಿನ್ ಕಾರ್ಯಕ್ಷಮತೆ ಹಾಗೂ ಎಂಜಿನ್‌ಗೆ ನೆರವಾಗಬಲ್ಲ ಚೇಂಬರ್ ಇತ್ಯಾದಿ ಗುಣಗಳನ್ನು ಅಳವಡಿಸಿದರೆ ಮಾತ್ರ ಅದೊಂದು ರೇಸ್ ಬೈಕ್ ಆಗಲಿದೆ. ಅಂಥ ಬೈಕ್ ತಯಾರಿಯಲ್ಲಿ ಸಿದ್ಧ ಹಸ್ತ ಬೆಂಗಳೂರಿನ ಕಲಾಸಿಪಾಳ್ಯದ ಫಯಾಜ್ ಪಾಷಾ.

`ಹಲವರು ಕೆಟಲಾಗ್ ಓದಿ ರಿಪೇರಿ ಕೆಲಸ ಮಾಡುತ್ತಾರೆ. ಆದರೆ ನನಗೆ ಓದಲು ಬಾರದು. ಬೈಕ್‌ನ ಶಬ್ದದಲ್ಲೇ ಅದರ ಗುಣವನ್ನು ಪತ್ತೆ ಹಚ್ಚಬಲ್ಲೆ ಹಾಗೂ ಸಿದ್ಧಪಡಿಸಬಲ್ಲೆ. ಬಹುತೇಕರಿಗೆ ನನ್ನ ಕೆಲಸ ಇಷ್ಟವಾಗಿದೆ. ಹೀಗಾಗಿ ದೂರದ ಊರುಗಳಿಂದ ಇಲ್ಲಿಗೆ ಬೈಕ್ ತೆಗೆದುಕೊಂಡು ಬರುತ್ತಾರೆ. ಕೆಲವರು ನನ್ನನ್ನೇ ಅಲ್ಲಿಗೆ ಕರೆಸಿಕೊಳ್ಳುವುದೂ ಉಂಟು~. ಉಂಟು ಎನ್ನುವ ಫಯಾಜ್ ಬೈಕ್ ರಿಪೇರಿ ಕಲಿತದ್ದು ಒಂದು ದೊಡ್ಡ ಕಥೆ.

ಬೈಕ್ ಹುಚ್ಚು ಹತ್ತಿಸಿಕೊಂಡಾಗ ಫಯಾಜ್‌ಗಿನ್ನೂ ಒಂಬತ್ತು ವರ್ಷ. ವಿವಿ ಪುರಂನಲ್ಲಿದ್ದ ಬೈಕ್ ರಿಪೇರಿ ಮಾಡುವ ಯೂಸುಫ್ ಬಳಿ ಫಯಾಜ್ ಕೆಲಸಕ್ಕೆ ಸೇರಿದರು. ಇದೇನು ದುಡಿದು ಮನೆಯನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಮಾಡಿದ ಕೆಲಸವಲ್ಲ.

ಬೈಕ್ ಮೇಲಿನ ಆಸಕ್ತಿ ಅವರನ್ನು ಪಠ್ಯಪುಸ್ತಕದಿಂದ ದೂರಮಾಡಿತ್ತು. ಫಯಾಜ್ ತಮ್ಮ ಕೆಲಸ ಆರಂಭಿಸಿದ್ದು ದಿನಕ್ಕೆ ಒಂದು ರೂಪಾಯಿ ಸಂಬಳದಿಂದ. ಬೈಕ್‌ನ ಪ್ರತಿಯೊಂದು ಭಾಗವನ್ನೂ ಬೆರಗುಗಣ್ಣಿನಿಂದಲೇ ನೋಡುತ್ತಿದ್ದ ಬಾಲಕ ತನ್ನ ಮಾಲೀಕರ ಕೈಚಳಕವನ್ನು ಹಾಗೂ ನೈಪುಣ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಅಕ್ಷರಗಳು ಅರ್ಥವಾಗದಿದ್ದರೂ ಬೈಕ್‌ನ ಅಂತರಂಗ ಅರ್ಥವಾಗಲು ಹೆಚ್ಚು ಕಾಲ ಬೇಕಾಗಲಿಲ್ಲ.

 `ಆರಂಭದಲ್ಲಿ ಗ್ರೀಸ್ ಒರೆಸುವುದು, ಬಿಡಿ ಭಾಗಗಳನ್ನು ಬಿಚ್ಚುವುದು, ಬೈಕ್ ತೊಳೆಯುವ ಕೆಲಸಗಳನ್ನು ನನಗೆ ನೀಡಲಾಗುತ್ತಿತ್ತು. ಅದರಲ್ಲೇ ನನಗೇನೋ ತೃಪ್ತಿ. ಅವರು ಎಂಜಿನ್ ಕೆಲಸ ಮಾಡುವಾಗ ನಾನು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಶತಾಯಗತಾಯ ನನಗೆ ಬೈಕ್‌ನ ಎಂಜಿನ್ ಕೆಲಸ ಕಲಿಯಬೇಕೆಂಬ ಹಠ ನನ್ನಲ್ಲಿ ಮೂಡಿತ್ತು. ಬಿಡಿ ಭಾಗಗಳಲ್ಲೇ ಹಲವು ವರ್ಷಗಳು ಉರುಳಿದವು. ನಂತರ ಮಾಲೀಕರು ಹೊರಗೆ ಹೋದಾಗಲೆಲ್ಲಾ ಎಂಜಿನ್ ಅನ್ನು ಹತ್ತಿರದಿಂದ ನೋಡುವ ಹಾಗೂ ಮುಟ್ಟುವ ಅವಕಾಶ ದೊರಕಿತು.  ಎಂಜಿನ್ ಮುಟ್ಟುತ್ತಿದ್ದ ನನ್ನನ್ನು ನೋಡಿದ ಮಾಲೀಕರು `ಏನು ಮಾಡುತ್ತಿದ್ದೀಯ?~ ಎಂದು ಕೇಳಿದರೇ ವಿನಃ ನನ್ನ ಉತ್ಸಾಹಕ್ಕೆಂದೂ ಅವರು ತಣ್ಣೀರೆರಚಲಿಲ್ಲ~ ಎಂದು ಫಯಾಜ್ ಬಾಲ್ಯವನ್ನು ನೆನಪಿಸಿಕೊಂಡರು.

 ಫಯಾಜ್ ಪಾಷಾ ಅವರಿಗೆ ಕೆಲಸ ನೀಡಿದ್ದ ಯೂಸುಫ್ ಸ್ವತಃ ಡರ್ಟ್ ಬೈಕ್ ಸವಾರರು. ಯೂಸುಫ್ ಅವರಿಗಿದ್ದ ಆ ಕಲೆ ಕೆಲವೇ ಸಮಯದಲ್ಲಿ ಫಯಾಜ್ ಕರಗತ ಮಾಡಿಕೊಂಡರು. ಡರ್ಟ್ ಬೈಕ್‌ಗಳನ್ನು ಓಡಿಸುವುದು ಅವರಿಗೆ ಲೀಲಾಜಾಲವೆನಿಸಿತು. ಬೈಕ್ ಓಡಿಸುತ್ತಲೇ ಬೈಕ್‌ನ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಸಂಶೋಧನೆ ನಡೆಸತೊಡಗಿದರು.

ಚೇಂಬರ್‌ನ ಅಳತೆಯಲ್ಲಿನ ಬದಲಾವಣೆ, ಕ್ರಾಂಕ್ ಸಿದ್ಧಪಡಿಸುವುದು, ಎಂಜಿನ್ ಕಾಯಿಲ್‌ನ ವೈರಿಂಗ್ ಬದಲಿಸುವುದು ಹೀಗೆ ರೇಸ್‌ನಲ್ಲಿ ಮೊದಲಿಗರಾಬೇಕೆಂದರೆ ವಾಹನ ಸಿದ್ಧತೆ ಹೇಗಿರಬೇಕೆಂಬುದನ್ನು ತಮ್ಮ ಅನುಭವದಿಂದಲೇ ಕಲಿತರು. ಹೀಗೆಯೇ ಅವರ ಸಂಬಳವೂ ಏರುತ್ತಾ ಹೋಯಿತು. ತಾವೇ ಸಿದ್ಧಪಡಿಸಿದ ಬೈಕ್‌ಗಳನ್ನು ಫಯಾಜ್ ಮೈಸೂರು, ಹಾಸನ, ಚಿಕ್ಕಮಗಳೂರು, ಕೊಚ್ಚಿ, ಕೊಯಂಬತ್ತೂರು, ಊಟಿ, ಮದರಾಸು ಹೀಗೆ ಮೋಟೊ ಕ್ರಾಸ್ ಹಾಗು ಆಟೋ ಕ್ರಾಸ್ ರೇಸುಗಳು ನಡೆಯುವಲ್ಲಿ ತೆಗೆದುಕೊಂಡು ಹೋಗಿ ರೇಸ್‌ಗಳಲ್ಲಿ ಪಾಲ್ಗೊಂಡರು. ಕೆಲವು ರೇಸ್‌ಗಳಲ್ಲಿ ಅವರು ಮೊದಲಿಗರಾದರು.

ಟ್ರೋಫಿಗಳು, ಹೆಸರು, ಕೀರ್ತಿ ಎಲ್ಲವೂ ಫಯಾಜ್ ಪಾಲಾದವು. ಹೀಗೆ ನಾಲ್ಕಾರು ವರ್ಷಗಳ ಕಾಲ ಫಯಾಜ್ ಪಾಲ್ಗೊಳ್ಳದ ರೇಸ್‌ಗಳಿರಲಿಲ್ಲ. ದೇಶದ ಎಲ್ಲೇ ಡರ್ಟ್ ಬೈಕ್ ರೇಸ್ ನಡೆದರೂ ಅಲ್ಲಿ ಫಯಾಜ್ ಇರುತ್ತಿದ್ದರು. ಹೀಗೆ ಫಯಾಜ್ ಯೂಸುಫ್ ಬಳಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿ ಕೌಶಲ್ಯ ಕಲಿತರು. ಫಯಾಜ್‌ರ ಸಪೂರ, ದೇಹ ಕೂಡಾ ಡರ್ಟ್ ಬೈಕ್ ಸವಾರಿಗೆ ಹೇಳಿ ಮಾಡಿಸಿದಂತಿದೆ.

ಈಗ ಕರ್ನಾಟಕ ಟ್ಯೂನ್ ಮೋಟಾರ್ಸ್ ಎಂಬ ತಮ್ಮದೇ ಸ್ವಂತ ವರ್ಕ್‌ಶಾಪ್ ಹೊಂದಿರುವ ಫಯಾಜ್ ಅನುಭವದಂತೆ “ಬೆಂಗಳೂರಿನಲ್ಲಿ ಬೈಕ್ ಸಿದ್ಧಪಡಿಸುವುದು ಕಷ್ಟ. ಏಕೆಂದರೆ ಒಂದು ಬೈಕ್ ಸಿದ್ಧಪಡಿಸಿದ ನಂತರ ಕನಿಷ್ಠ ಐದು ಕಿಲೋ ಮೀಟರ್‌ನಷ್ಟು ಓಡಿಸಬೇಕು. ಬೈಕ್ ಹೊರಗೆ ತೆಗೆದರೆ ಒಂದಲ್ಲಾ ಒಂದು ಕ್ಯಾತೆ ತೆಗೆದು ಪೊಲೀಸರು ಸಾವಿರಾರು ರೂಪಾಯಿ ದಂಡ ಹಾಕುತ್ತಾರೆ”. ರೋಮಾಂಚಕಾರಿಯಾಗಿ ಕಾಣಿಸುವ ಡರ್ಟ್ ರೇಸ್‌ನಲ್ಲಿ ಭಾಗವಹಿಸುವುದೂ ಬಹಳ ಲಾಭದಾಯಕವೇನೂ ಅಲ್ಲ. “ಡರ್ಟ್ ರೇಸ್‌ನಲ್ಲಿ ಪ್ರಾಯೋಜಕರು ಸಿಕ್ಕರೆ ಕೈಯಲ್ಲಿ ಒಂದಿಷ್ಟು ಕಾಸು ಸೇರುತ್ತದೆ. ನಾನು ಓಡಿಸುವಾಗ ಖುಷಿಯಿಂದ ಕೆಲವರು ಪೆಟ್ರೋಲ್ ಹಾಕಿಸುತ್ತಿದ್ದರು. ಇನ್ನೂ ಕೆಲವರು ಗಾಡಿಯ ಬಿಡಿ ಭಾಗ ಖರೀದಿಸಲು ಹಣ ನೀಡುತ್ತಿದ್ದರು. ಒಂದು ಬೈಕ್ ಸಿದ್ಧಪಡಿಸಲು ಕನಿಷ್ಠ 5-8 ಸಾವಿರ ರೂಪಾಯಿ ಬೇಕು. ರೇಸ್‌ನಲ್ಲಿ ಗೆದ್ದರೆ ಹಣ, ಇಲ್ಲವೆಂದರೆ ಅದು ನನ್ನಂಥವರಿಗೆ ನಷ್ಟ” ಎಂದು ಫಯಾಜ್ ಡರ್ಟ್ ರೇಸ್‌ನ ವಾಸ್ತವವನ್ನು ಬಿಚ್ಚಿಟ್ಟರು.

ಯಮಹ ಆರ್‌ಎಕ್ಸ್, ಸುಜುಕಿ ಷೋಗನ್, ಶಾವ್ಲಿನ್, ಫಿಯರೊ, ಕೈನೆಟಿಕ್, ಟಿವಿಎಸ್ ಮೊಪೆಡ್, ಡಿಯೋ ಹೀಗೆ ಫಯಾಜ್ ಬಳಿ ಬಂದ ಹಲವಾರು ವಾಹನಗಳು ಡರ್ಟ್ ರೇಸಿಗಾಗಿ ಸಜ್ಜಾಗಿವೆ. ಫಯಾಜ್ ಅವರಲ್ಲಿ ತಯಾರಾದ ಬೈಕುಗಳಿಂದ ಸುಮಾರು 500ಕ್ಕೂ ಹೆಚ್ಚು ಟ್ರೋಫಿಗಳು ಬಂದಿವೆ ಎಂದರೆ ಅದು ಅವರ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಐದಾರು ವರ್ಷಗಳ ಕಾಲ ಡರ್ಟ್ ಬೈಕ್ ಓಡಿಸಿದ ಫಯಾಜ್ ನಂತರ ಉತ್ಸಾಹಿ ಯುವಕರನ್ನು ಮುಂದೆ ತರುವ ದೃಷ್ಟಿಯಿಂದ ಸವಾರಿಯನ್ನು ಬಿಟ್ಟುಕೊಟ್ಟರು. ಈಗ ಫಯಾಜ್ ಕೇವಲ ಬೈಕ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಚಾಮರಾಜನಗರ, ಹಾಸನ ಹೀಗೆ ಕರ್ನಾಟಕದ ಕೆಲವು ಭಾಗಗಳಿಂದ ಡರ್ಟ್ ಬೈಕ್ ಸಿದ್ಧಪಡಿಸಲು ಅವರ ಬಳಿ ಬೈಕ್‌ಗಳು ಬರುತ್ತವೆ. ಜತೆಗೆ ಅವರದ್ದೇ ಆದ ಡರ್ಟ್ ಬೈಕ್‌ಗಳು ಅವರಲ್ಲಿವೆ. ಮೋಟೋ ರೇಸ್‌ಗಳು ಎಲ್ಲಿ ನಡೆಯುತ್ತಿದೆಯೋ ಅಲ್ಲಿ ಫಯಾಜ್ ಆರಂಭಿಸಿರುವ ಕರ್ನಾಟಕ ಟ್ಯೂನ್ ಮೋಟಾರ್ಸ್‌ (ಕೆಟಿಎಂ)ನ ಬೈಕ್ ಇದ್ದೇ ಇರುತ್ತದೆ. 

 ಫಯಾಜ್ ಅವರ ಕೆಟಿಎಂ ಆರಂಭವಾಗಿ ಹತ್ತು ವರ್ಷಗಳಾಗಿವೆ. ಈಗ ಅವರು ಐದಾರು ಯುವಕರಿಗೆ ಕೆಲಸ ಕೊಟ್ಟಿದ್ದಾರೆ. ಮೈಗೆ ಗ್ರಿಸ್ ಮಾಡಿಕೊಳ್ಳದೆ ಕೆಲಸ ನಿಭಾಯಿಸಬಲ್ಲವರಾದ್ದರಿಂದ ಅಂದು ಅವರು ತೊಟ್ಟಿದ್ದ ಮಿರಮಿರನೆ ಮಿಂಚುವ ಹೊಸ ಹಳದಿ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣ ಪ್ಯಾಂಟ್ ಅವರಿಗೆ ಒಪ್ಪುತ್ತಿತ್ತು.

ಕೇವಲ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಫಯಾಜ್ ಅವರ ಮೊಗದಲ್ಲಿ ಮದುಮಗನ ಕಳೆಯೂ ತುಂಬಿತ್ತು. ಫಯಾಜ್‌ಗೆ ಈಗ 32 ವರ್ಷ. ಆದರೆ ಬೈಕ್ ತಯಾರಿಯಲ್ಲಿ ಅವರ ಅನುಭವ 23 ವರ್ಷ. ಬೈಕ್ ಮೇಲಿದ್ದ ಅವರ ಪ್ರೀತಿ ಅವರನ್ನು ಡರ್ಟ್ ಬೈಕ್ ಕ್ಷೇತ್ರದಲ್ಲಿ ಹೆಸರುವಾಸಿಯನ್ನಾಗಿ ಮಾಡಿದೆ. ನಾಲ್ಕಾರು ಜನಕ್ಕೆ ಕೆಲಸ ಕೊಡುವ ಮಟ್ಟಕ್ಕೆ ಅವರು ಬೆಳೆದು ನಿಂತಿದ್ದಾರೆ. ಹೊಸ ಯುವಕರಲ್ಲಿ ಹುರುಪು ಹಾಗೂ ಭರವಸೆ ತುಂಬಬಲ್ಲ ಹೃದಯ ವೈಶಾಲ್ಯತೆ ಅವರಲ್ಲಿದೆ. ಎಂಥದ್ದೇ ಬೈಕ್ ಆದರೂ ಅದನ್ನು ಸಿದ್ಧಪಡಿಸಬಲ್ಲೆ ಎಂಬ ಆತ್ಮವಿಶ್ವಾಸವನ್ನು ಅವರು ಹೊಂದಿದಾರೆ.
(ಫಯಾಜ್  ದೂರವಾಣಿ ಸಂಖ್ಯೆ: 7899891190)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT