ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡರ್ಬಿರಜತ ವರ್ಷ ಕ್ರಿಕೆಟ್ ಹರ್ಷ

Last Updated 7 ಜೂನ್ 2012, 19:30 IST
ಅಕ್ಷರ ಗಾತ್ರ

ಕ್ರೀಡಾಂಗಣದ ತುಂಬಾ ಕ್ರಿಕೆಟ್ ಮೇನಿಯಾ, ಬ್ಯಾಟು ಬಾಲುಗಳ ಸದ್ದು, ಐಪಿಎಲ್‌ನಂತೆ ಇಲ್ಲೂ 20 ಓವರುಗಳು, ಆರು ತಂಡಗಳು. ಗೆದ್ದವರಿಗೆ ಟ್ರೋಫಿಯ ಉಡುಗೊರೆ. ಅರೇ ಮತ್ತೊಂದು ಐಪಿಎಲ್ ಶುರುವಾಯಿತೇ? ಅನ್ನಬೇಡಿ. ಇದು ಮನರಂಜನೆ ಜತೆಗೆ ಬಡವರಿಗೆ ದೇಣಿಗೆ ನೀಡಲು ಆಡುವ ಕ್ರಿಕೆಟ್. ತಂಡದಲ್ಲಿನ ಆಟಗಾರರು ಕ್ರಿಕೆಟ್ ಪರಿಣತಿ ಪಡೆದವರಲ್ಲ. ಆದರೂ  ಕಣಕ್ಕಿಳಿದು ಸೆಣಸಲಿದ್ದಾರೆ.

ಕಿಂಗ್‌ಫಿಷರ್ ಡರ್ಬಿ ತನ್ನ 25ನೇ ವರ್ಷದ ಸಂಭ್ರಮಾಚರಣೆಗಾಗಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯಿದು. ಈ ಪಂದ್ಯದಿಂದ ಸಂಗ್ರಹವಾದ ಹಣವನ್ನು ಬಡತನದಲ್ಲಿರುವ ಕ್ರೀಡಾ ಪ್ರತಿಭೆಗಳಿಗೆ ದೇಣಿಗೆ ರೂಪದಲ್ಲಿ ಕೊಡಲಾಗುತ್ತದೆ.

ಜೂನ್ ಐದರಿಂದ ಆರಂಭವಾಗಿರುವ ಪಂದ್ಯದಲ್ಲಿ ಒಟ್ಟು ಆರು ತಂಡಗಳು ಸೆಣಸಲಿವೆ. ಕರ್ನಾಟಕ ರೇಸ್ ಹಾರ್ಸ್ ಓನರ್ಸ್, ಟ್ರೈನ್ ಹಾರ್ಸ್ ಅಸೋಸಿಯೇಷನ್, ಬೆಂಗಳೂರು ಟರ್ಫ್ ಕ್ಲಬ್ ಸಿಬ್ಬಂದಿಗಳು, ಕಿಂಗ್‌ಫಿಷರ್, ಜಾಕೀಸ್ ಮತ್ತು ಮಾಧ್ಯಮ ಈ ಆರು ತಂಡಗಳ ನಡುವೆ ಪಂದ್ಯ ನಡೆಯಲಿದೆ.
 
ಅಂತಿಮ ಹಂತ ತಲುಪುವ ತಂಡವು ಚಿತ್ರನಟ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದೊಂದಿಗೆ ಸೆಣಸಲಿದೆ. ಜುಲೈ 15ರಂದು ಬೆಂಗಳೂರು ಟರ್ಫ್ ಕ್ಲಬ್ ಅಂತಿಮ ಹಣಾಹಣಿಗೆ ವೇದಿಕೆಯಾಗಲಿದ್ದು, ಮೊದಲ ಮತ್ತು ಎರಡನೇ ಸುತ್ತಿನ ಪಂದ್ಯಗಳು ಎನ್‌ಆರ್‌ಎ ಅರಮನೆ ಮೈದಾನದಲ್ಲಿ ಜೂನ್ 13ರವರೆಗೆ ನಡೆಯಲಿವೆ.

ಕಿಂಗ್‌ಫಿಷರ್ ಕ್ರಿಕೆಟ್ ಟ್ರೋಫಿ  ಪಂದ್ಯಕ್ಕೆ ಚಿತ್ರನಟ ಅಂಬರೀಷ್ ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು. ಜೊತೆಗೆ ವಿವಿಧ ತಂಡಗಳ ಟೀ-ಶರ್ಟ್‌ಗಳನ್ನು ಬಿಡುಗಡೆ ಗೊಳಿಸಿದರು. ಯುಬಿಎಲ್ ಮಾರ್ಕೆಟಿಂಗ್‌ನ ಹಿರಿಯ ಉಪಾಧ್ಯಕ್ಷ ಸಮರ್‌ಸಿಂಗ್ ಶೇಖಾವತ್ ಹಾಗೂ ರೇಸ್ ಹಾರ್ಸ್ ಮಾಲೀಕ ಪಿ. ಅರುಣ್ ಕುಮಾರ್ ಈ ಕ್ಷಣಗಳಿಗೆ ಸಾಕ್ಷಿಯಾದರು.

`ಐಪಿಎಲ್‌ಗಿಂತ ಈ ಪಂದ್ಯ ಹೆಚ್ಚು ಜನ ಮನ್ನಣೆ ಗಳಿಸಲಿ ಎಂದು ಹಾರೈಸುತ್ತೇನೆ. ಇದರಲ್ಲಿ ಯಾವುದೇ ಬೆಟ್ಟಿಂಗ್ ಇಲ್ಲ. ತಂಡಗಳ ಉತ್ಸಾಹವನ್ನು ನೋಡಿದರೆ ನನಗೂ ಆಡಬೇಕೆನಿಸುತ್ತಿದೆ. ಬಡಮಕ್ಕಳಿಗೆ ಬೆಳಕು ನೀಡುವ ಉದ್ದೇಶದೊಂದಿಗೆ ಆಯೋಜಿಸಿರುವ ಪಂದ್ಯಕ್ಕೆ ಸಾರ್ವಜನಿಕರು ಪ್ರೋತ್ಸಾಹ ನೀಡುವ ಅಗತ್ಯವಿದೆ~ ಎಂದರು ಅಂಬರೀಷ್.

`ನಾವು ಈ ಪಂದ್ಯದಲ್ಲಿ ಸ್ಪರ್ಧೆಗಿಳಿಯುತ್ತಿಲ್ಲ; ಭಾಗವಹಿಸುತ್ತಿದ್ದೇವಷ್ಟೇ. ಭಾಗವಹಿಸುವ ಎಲ್ಲಾ ತಂಡಗಳೂ ಸೂಕ್ತ ತರಬೇತಿ ಪಡೆದು ಸಜ್ಜಾಗಿವೆ. ಬಲಿಷ್ಠ ತಂಡಗಳೇ ಕಣಕ್ಕಿಳಿಯುತ್ತಿವೆ. ಜಿದ್ದಾ-ಜಿದ್ದಿನ ಸೆಣಸಾಟ ಬೇಡ. ಖುಷಿ, ಸಂತೋಷ, ಮನರಂಜನೆಗಾಗಿ ಆಡೋಣ. ನಾವು ಆಡುವುದು ಬಡ ಜನರಿಗೆ ಉಪಯೋಗವಾಗುವುದಾದರೆ ಇದಕ್ಕಿಂತ ಇನ್ನೇನು ಬೇಕು. ಭಾಗವಹಿಸುವ ಎಲ್ಲಾ ತಂಡಗಳಿಗೂ ಶುಭವನ್ನು ಕೋರುತ್ತೇನೆ~ ಎನ್ನುತ್ತಾ ವೇದಿಕೆಯಿಂದ ಸರಿದರು ಸುದೀಪ್.

`ಮೂರು ತಂಡಗಳಿಗೆ ಒಂದರಂತೆ ಎರಡು ಗುಂಪು ಮಾಡಲಾಗುತ್ತದೆ. ಪ್ರತಿಗುಂಪೂ ಎದುರಾಳಿ ತಂಡದೊಂದಿಗೆ ಸೆಣಸಬೇಕು. ಸೆಮಿಫೈನಲ್ ಹಂತ ತಲುಪಿ ಅಂತಿಮ ಸುತ್ತಿಗೆ ಪ್ರವೇಶ ಪಡೆಯುವ ತಂಡವು ಸುದೀಪ್ ತಂಡದೊಂದಿಗೆ ಕಣಕ್ಕಿಳಿಯಲಿದೆ. ಈ ಪಂದ್ಯದಿಂದ ಸಂಗ್ರಹವಾದ ಹಣವನ್ನು ಬಡವರ ಸಹಾಯಕ್ಕಾಗಿ ಉಳಿಸಿಕೊಳ್ಳುತ್ತಿರುವುದು ಸಂತಸ ನೀಡಿದೆ~ ಎಂದರು ಸಮರ್‌ಸಿಂಗ್ ಶೇಖಾವತ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT