ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಸ್ಟರ್‌ಗೆ ಪ್ರತಿಸ್ಪರ್ಧಿ ಸುಜುಕಿ ಎಸ್-ಕ್ರಾಸ್?

Last Updated 27 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಭಾರತದಲ್ಲಿ ಮಾರುತಿಯ ಮೂಲಕ ಕಾರ್ ಬಿಡುಗಡೆ ಮಾಡುವ ಸುಜುಕಿ, ಸ್ವತಂತ್ರವಾಗಿ ಇನ್ನೂ ಕಾರ್ ಮಾರುಕಟ್ಟೆಗೆ ಇಳಿಸಿಲ್ಲ. ದ್ವಿಚಕ್ರ ವಾಹನದಂತೆ ನಾಲ್ಕು ಚಕ್ರದಲ್ಲೂ ಸ್ವತಂತ್ರ ಮಾರುಕಟ್ಟೆ ಹೊಂದಲು ಸುಜುಕಿ ಸಜ್ಜಾಗುತ್ತಿರುವ ಲಕ್ಷಣಗಳಂತೂ ಕಂಡುಬರುತ್ತಿವೆ.

ಮಾರುತಿಯೇ ಆಗಲಿ, ಸುಜುಕಿಯೇ ಆಗಲಿ ಪ್ರಯೋಗಗಳನ್ನು ಮಾಡುವಲ್ಲಿ ನಿಸ್ಸೀಮರೇ ಆದರೂ, ಕೇವಲ ಸ್ಪರ್ಧೆಗಾಗಿ ಪ್ರಯೋಗ ಮಾಡುವವರು ಇವರಲ್ಲ. 2007ರಲ್ಲಿ ಟಾಟಾ ಸಂಸ್ಥೆ ನ್ಯಾನೊ ಕಾರ್ ಹೊರಬಿಟ್ಟಿರುವಾಗ ಮಾರುತಿ-ಸುಜುಕಿ ಸಹ ಒಂದು ಲಕ್ಷ ರೂಪಾಯಿಯ ಕಾರ್ ಹೊರತರಬಹುದು ಎಂಬುದು ಬಹುತೇಕರ ನಿರೀಕ್ಷೆಯಾಗಿತ್ತು.

ಆದರೆ ನಿರೀಕ್ಷೆ ಹುಸಿಗೊಳಿಸಿದ ಮಾರುತಿ-ಸುಜುಕಿ ದುಬಾರಿ ಕಾರ್‌ಗಳನ್ನು ಒಂದರ ಹಿಂದೊಂದು ಬಿಡುಗಡೆಗೊಳಿಸಿ ಅಚ್ಚರಿ ಮೂಡಿಸಿತ್ತು. ಆದರೆ ಈಗೇಕೊ ಈ ಲೆಕ್ಕಾಚಾರ ತಲೆಕೆಳಗಾದಂತಿದೆ. ಇತ್ತೀಚಿಗಷ್ಟೇ ಬಿಡುಗಡೆಗೊಂಡು ಅಭೂತಪೂರ್ವ ಯಶಸ್ಸು ಪಡೆದ ರೆನೊದ ಡಸ್ಟರ್ ಇದಕ್ಕೆ ಕಾರಣ.

ಡಸ್ಟರ್ ಭಾರತದ ಮಟ್ಟಿಗೆ ಹೊಸ ಬಗೆಯ ವಾಹನ. ಇದಕ್ಕೂ ಹಿಂದೆ ಮಾರುತಿ-ಸುಜುಕಿಯೇ ಜಿಪ್ಸಿಯನ್ನು ಹೊರತಂದಿತ್ತಾದರೂ ಅದರಲ್ಲಿ ಅನೇಕ ಕೊರತೆಗಳಿದ್ದವು. ಪಕ್ಕಾ ಆಫ್ ರೋಡ್ ವಾಹನವಾಗಿದ್ದರೂ ಹವಾನಿಯಂತ್ರಣ ವ್ಯವಸ್ಥೆ ಇರಲಿಲ್ಲ.

ಪವರ್ ಸ್ಟೀರಿಂಗ್ ಇರಲಿಲ್ಲ. ಪವರ್ ವಿಂಡೋಸ್ ಇತ್ಯಾದಿ ಯಾವುದೇ ಅತ್ಯಾಧುನಿಕ ಸೌಕರ್ಯಗಳು ಇರಲಿಲ್ಲ. ಈಗಲೂ ಜಿಪ್ಸಿ ಉತ್ಪಾದನೆಯಲ್ಲಿ ಇದೆ. ಆದರೆ ಯಾವ ಹೊಸ ಸವಲತ್ತೂ ಇದಕ್ಕೆ ಇನ್ನೂ ಸೇರ್ಪಡೆಯಾಗಿಲ್ಲ.

ಅದಕ್ಕೆ ಕಾರಣವೂ ಇದೆ. ಜಿಪ್ಸಿ ಸದ್ಯಕ್ಕೆ ಸಿಗುತ್ತಿರುವ ಅತ್ಯಂತ ಕಡಿಮೆ ಬೆಲೆಯ ಆಫ್ ರೋಡ್ 4 ವ್ಹೀಲ್ ಡ್ರೈವ್ ವಾಹನ. ಹವ್ಯಾಸಿ ಛಾಯಾಗ್ರಾಹಕರು, ವನ್ಯಜೀವಿ ಆಸಕ್ತರು ಅಥವಾ ಎಸ್ಟೇಟ್ ಮಾದರಿಯ ವಾಸಸ್ಥಾನಗಳಲ್ಲಿ ಇರುವವರಿಗೆ ಜಿಪ್ಸಿ ಹೇಳಿ ಮಾಡಿಸಿದಂತಿದೆ.

ಹಾಗಾಗೇ ಕಡಿಮೆ ಬೆಲೆಯಲ್ಲಿ ಉತ್ತಮ ವಾಹನ ನೀಡಲು ಮಾರುತಿ ಈ ಕೆಲವು ಸೌಲಭ್ಯಗಳನ್ನು ನೀಡಿಲ್ಲ. ಈ ಸೌಲಭ್ಯಗಳೆಲ್ಲ ಸೇರಿದಲ್ಲಿ ಜಿಪ್ಸಿಗೆ ಕನಿಷ್ಠವೆಂದರೂ 10 ಲಕ್ಷ ರೂಪಾಯಿ ಆಗಿಬಿಡುತ್ತದೆ. ಜಿಪ್ಸಿಯ ಈಗಿನ ಬೆಲೆ ಕೇವಲ 6.15 ಲಕ್ಷ ರೂಪಾಯಿಗಳು. ಇಷ್ಟು ಕಡಿಮೆ ಬೆಲೆಗಂತೂ ಸದ್ಯಕ್ಕೆ ಯಾವುದೇ 4 ವ್ಹೀಲ್ ಡ್ರೈವ್ ವಾಹನ ಲಭ್ಯವಿಲ್ಲ.

ಇನ್ನು ಡಸ್ಟರ್‌ನ ವಿಚಾರಕ್ಕೆ ಬರುವುದಾದರೆ ಇದು ಸಹ 4 ವ್ಹೀಲ್ ಡ್ರೈವ್ ವಾಹನವೇ. ಡಸ್ಟರ್ ಕನಿಷ್ಠ 7.5 ಲಕ್ಷ ರೂಪಾಯಿಯಿಂದ 12 ಲಕ್ಷ ರೂಪಾಯಿಯವರೆಗೂ ಬೆಲೆ ಬಾಳುತ್ತದೆ. ಆದರೆ ಜಿಪ್ಸಿಗೆ ಈಗಲೂ ಬಳಸಿದ ಕಾರ್ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಆದರೆ ಡಸ್ಟರ್‌ನ ವಿಚಾರ ಇನ್ನೂ ತಿಳಿದಿಲ್ಲ. ಡಸ್ಟರ್‌ನ ಬೆಲೆ ಖಂಡಿತವಾಗಿಯೂ ಜಿಪ್ಸಿಗಿದ್ದಂತೆ ಉತ್ತಮವಾಗಿ ಇರುವುದಿಲ್ಲ.

ಆದರೆ ಡಸ್ಟರ್ ಸದ್ಯಕ್ಕಂತೂ ಹೊಸ ವಾಹನವೇ ಆಗಿರುವುದರಿಂದ ಕೊಡುವ ಹಣಕ್ಕೆ ಮೋಸವಂತೂ ಖಂಡಿತಾ ಇಲ್ಲ ಎಂದೇ ಹೇಳಬಹುದು. ಏಕೆಂದರೆ 4 ವ್ಹೀಲ್ ಡ್ರೈವ್ ವಾಹನ ಮಾತ್ರವೇ ಅಲ್ಲದೇ, ಇದು ಐಷಾರಾಮಿ ವಾಹನವೂ ಹೌದು. ಇಂತಹ ಸೌಲಭ್ಯ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ.

ಅತ್ಯುತ್ತಮ ಎನ್ನಬಹುದಾದ ಎ.ಸಿ, ಎಲ್ಲ ರೀತಿಯ ಪವರ್ ಸೌಲಭ್ಯಗಳು (ಪವರ್ ವಿಂಡೋಸ್, ಪವರ್ ಸ್ಟೀರಿಂಗ್, ಪವರ್ ಬ್ರೇಕ್ ಇತ್ಯಾದಿ) ಇವೆ. ಇವೆಲ್ಲದರ ಜತೆಗೆ ವಿದೇಶಿ ತಂತ್ರಜ್ಞಾನದ ಗಿಯರ್ ಬಾಕ್ಸ್, ಎಂಜಿನ್ ಅಸೆಂಬ್ಲಿ ಇರುವುದರಿಂದ ಇದು ಅದ್ಭುತವೇ ಸರಿ. ಇವೇ ಡಸ್ಟರ್‌ನ ಯಶಸ್ಸಿನ ಗುಟ್ಟು. ಈ ರೀತಿಯ ವಾಹನ ಹಿಂದೆ ಭಾರತೀಯರಿಗೆ ಸಿಕ್ಕಿರದಿದ್ದ ಕಾರಣ, ಯಶಸ್ಸನ್ನೂ ಗಳಿಸಿಕೊಂಡಿತು.

ಸುಜುಕಿ ಎಸ್-ಕ್ರಾಸ್

ಆದರೆ ಇದು ಬೇರೆ ಕಾರ್ ಕಂಪೆನಿಗಳ ಹುಬ್ಬನ್ನು ಮೇಲೇಳಿಸಿದ್ದಲ್ಲಿ ಅಚ್ಚರಿಯೇನೂ ಇಲ್ಲ. ಸುಜುಕಿಯಂತೂ ತನ್ನ ಜಪಾನ್ ತಂತ್ರಜ್ಞಾನವನ್ನು ತನ್ನ ಹೊಸ ಕಾರ್‌ನ ಮೂಲಕ ಹೊರಬಿಡಲು ಮುಂದಾಗಿ ಬಿಟ್ಟಿದೆ. ಈ ಕಾರ್ ಅನ್ನು ಕ್ರಾಸ್ ಓವರ್ ಎಂಬ ವಿಭಾಗದಲ್ಲಿ ಗುರುತಿಸಲಾಗುತ್ತದೆ.

ಅಂದರೆ 4-ವ್ಹೀಲ್ ಐಷಾರಾಮಿ ಕಾರ್‌ಗೆ ಈಗ ಕರೆಯುವ ಹೊಸ ಹೆಸರಷ್ಟೇ. 4 ವ್ಹೀಲ್ ಐಷಾರಾಮಿ ಕಾರ್‌ಗಳತ್ತ ಭಾರತೀಯರ ಚಿತ್ತ ಈಗ ಹರಿದಿರುವ ಕಾರಣ, ಅದಕ್ಕೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡೇ ಸುಜುಕಿ ಈ ಹೊಸ ಕಾರ್ ಬಿಡಲು ಮುಂದಾಗಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ.

ಸುಜುಕಿ ಸಹಜವಾಗಿ ಭಾರತದಲ್ಲಿ ಮಾರುತಿ ಮೂಲಕವೇ ಹೊಸ ಕಾರ್ ಅನ್ನು ಬಿಡಬೇಕು. ಈ ಹಿಂದೆ ಅದು ತನ್ನ ಗ್ರಾಂಡ್ ವಿಟಾರಆ ಕಾರ್ ಅನ್ನು ಸಂಪೂರ್ಣವಾಗಿ ಜಪಾನ್‌ನಲ್ಲೇ ಉತ್ಪಾದಿಸಿ ಭಾರತದಲ್ಲಿ ಸುಜುಕಿ ಮೂಲಕ ಮಾರುವ ತಂತ್ರಗಾರಿಕೆ ಮಾಡಿತ್ತು. ಆಗಿನ ಕಾಲದಲ್ಲಿ ಗ್ರಾಂಡ್ ವಿಟಾರಾಗೆ ಅಕ್ಷರಶಃ ಪ್ರತಿಸ್ಪರ್ಧಿಯೇ ಇರಲಿಲ್ಲ.

ಹಾಗಾಗಿ ಕೊಂಚ ಮಟ್ಟಿಗೆ ಉತ್ತಮ ಯಶಸ್ಸನ್ನೇ ಪಡೆದಿತ್ತು. ಆಗ ಐಷಾರಾಮಿ ಎಸ್‌ಯುವಿ ಕೊಳ್ಳುವ ಸಮೂಹ ಭಾರತದಲ್ಲಿ ಕಡಿಮೆ ಇದ್ದದ್ದು, ಅಭೂತಪೂರ್ವ ಯಶಸ್ಸು ಸಿಗದೇ ಇದ್ದುದಕ್ಕೆ ಕಾರಣವಾಗಿತ್ತು. ಆದರೆ ಈಗ ಸುಜುಕಿಗೆ ಕಾಲ ಕೂಡಿ ಬಂದಿದೆ. ಅಥವಾ ಈ ಲೆಕ್ಕಾಚಾರದಲ್ಲಿ ಹೆಜ್ಜೆ ಇಟ್ಟಿದೆ. ಡಸ್ಟರ್‌ಗೆ ಸಿಕ್ಕ ಯಶಸ್ಸಿನ ಗುಂಗಲ್ಲಿ ಸುಜುಕಿ ಹೊಸ ಕಾರ್ ಬಿಡುಗಡೆ ಮಾಡಿದರೆ ಯಶಸ್ಸು ಸಿಕ್ಕೇ ಬಿಡುತ್ತದೆ ಎಂದೇನೂ ಇಲ್ಲ. ಆದರೆ ಸಾಧ್ಯತೆಗಳಂತೂ ಹೆಚ್ಚಿವೆ. ಅದಕ್ಕೆ ಕಾರಣಗಳೂ ಇವೆ.

ಅತ್ಯುತ್ತಮ ತಂತ್ರಜ್ಞಾನ

ಈಗಾಗಲೇ ಪ್ಯಾರಿಸ್ ಹಾಗೂ ಜಿನಿವಾ ಅಂತರ ರಾಷ್ಟ್ರೀಯ ಕಾರ್ ಉತ್ಸವಗಳಲ್ಲಿ ಪ್ರದರ್ಶನವಾಗಿರುವ ಸುಜುಕಿ ಎಸ್-ಕ್ರಾಸ್ ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಲನ ಎಂದೇ ಬಿಂಬಿಸಲಾಗಿದೆ. ಸುಜುಕಿ ಅಧಿಕೃತವಾಗಿ ಕಾರ್‌ನ ಸೌಲಭ್ಯಗಳ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲವಾದರೂ, ಅದರ ಸಾಕಷ್ಟು ತಾಂತ್ರಿಕ ವಿವರಗಳು ಬಾಯಿಂದ ಬಾಯಿಗೆ ಹರಡಿಬಿಟ್ಟಿವೆ.

4 ವ್ಹೀಲ್ ಡ್ರೈವ್ ಇರುವ, ಹೆಚ್ಚೂ ಕಡಿಮೆ ತನ್ನ ಗ್ರಾಂಡ್ ವಿಟಾರಾ ಕಾರ್‌ನ ಬದಲಿ ಕಾರ್ ಆಗಿ ಎಸ್-ಕ್ರಾಸ್ ಮೂಡಿಬರಲಿದೆ. ಅಂದರೆ ಗ್ರಾಂಡ್ ವಿಟಾರಾ ಕಾರ್ ಉತ್ಪಾದನೆ ನಿಲ್ಲಲಿದೆ. ಹಾಗಾದಾಗ ಸಹಜವಾಗೇ ಎಸ್-ಕ್ರಾಸ್‌ಗೆ ಹೆಚ್ಚು ಮಾರುಕಟ್ಟೆ ಸಿಗುತ್ತದೆ ಎಂಬುದು ಲೆಕ್ಕಾಚಾರ. ಆದರೆ ಡಸ್ಟರ್‌ಗೆ ಹೋಲಿಸಲೇ ಸಾಧ್ಯವಾಗದಷ್ಟು ಆಧುನಿಕ ಹಾಗೂ ಐಷಾರಾಮಿ ಆಗಿರುತ್ತದೆ ಎಂದು ವಾಹನ ತಜ್ಞರು ಹೇಳಲಾರಂಭಿಸಿದ್ದಾರೆ.

ಅಚ್ಚರಿಯೆಂದರೆ ಎಸ್-ಕ್ರಾಸ್ ಹಲವು ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ. ಜಪಾನ್, ಭಾರತ, ಆಫ್ರಿಕಾ ಹಾಗೂ ಯೂರೋಪ್‌ನ ಅನೇಕ ರಾಷ್ಟ್ರಗಳಲ್ಲಿ ಮಾರಾಟಕ್ಕೆ ಮುಕ್ತವಾಗಲಿದೆ.

ಇನ್ನು ಕಾರ್‌ನ ಕೆಲವು ಲಕ್ಷಣಗಳ ಬಗ್ಗೆ ಗಮನ ಹರಿಸೋಣ. ಕಾರ್ 4310 ಎಂಎಂ ಉದ್ದ, 1840 ಎಂಎಂ ಅಗಲ, 1600 ಎಂಎಂ ಎತ್ತರ ಇರಲಿದೆ. ಇದು ಡಸ್ಟರ್‌ಗಿಂತ 5 ಎಂಎಂ ಉದ್ದದಲ್ಲಿ ಕಡಿಮೆ (4315 ಎಂಎಂ), 18 ಎಂಎಂ ಹೆಚ್ಚು ಅಗಲ (1822 ಎಂಎಂ) ಹಾಗೂ 95 ಎಂಎಂ ಕಡಿಮೆ ಎತ್ತರ (1695 ಎಂಎಂ) ಇರಲಿರುವುದು ಕುತೂಹಲ ಮೂಡಿಸಿದೆ. ಅಂದರೆ ಇದು ಸಣ್ಣ ಕಾರೇ ಎಂದ ಹಾಗಾಯಿತು. ಹೆಚ್ಚೂ ಕಡಿಮೆ ಡಸ್ಟರ್‌ನಷ್ಟೇ ಗಾತ್ರ ಇರಲಿದೆ. 5 ಮಂದಿ ಆರಾಮಾಗಿ ಕೂರಬಲ್ಲ ಐಷಾರಾಮಿ ಸೌಲಭ್ಯ ಸಿಗಲಿದೆ.

ಇವುಗಳ ಜತೆಗೆ, ಅದ್ಭುತ ಕ್ಸೆನಾನ್ ಹೆಡ್‌ಲೈಟ್‌ಗಳು, ಎಲ್‌ಇಡಿ ಟೇಲ್ ಲೈಟ್‌ಗಳು ಇರುವುದು ವಿಶೇಷ. 2000 ಸಿಸಿ ಆಸುಪಾಸಿನ ಎಂಜಿನ್ ಇರಲಿದೆ. ಡೀಸೆಲ್ ಹಾಗೂ ಪೆಟ್ರೋಲ್ ಎರಡೂ ಅವತರಣಿಕೆಗಳಲ್ಲಿ ಕಾರ್ ಹೊರಬರಲಿದೆ. 4-ವ್ಹೀಲ್ ಹಾಗೂ 2-ವ್ಹೀಲ್ ಡ್ರೈವ್‌ಗಳೆರಡಲ್ಲೂ ಕಾರ್ ಲಭ್ಯವಾಗಲಿದೆ. ಹಾಗಾಗಿ ಕಡಿಮೆ ಬೆಲೆಯಲ್ಲೂ ಕಾರ್ ಹೊಂದಬೇಕು ಎನ್ನುವವರಿಗೆ ಇದರಿಂದ ಸಹಾಯವಾಗಲಿದೆ.

2013 ರ ಜುಲೈ ತಿಂಗಳಲ್ಲಿ ಕಾರ್ ಬಿಡುಗಡೆ ಆಗುವ ಸಾಧ್ಯತೆಗಳಿವೆ ಎಂದು ಕಂಪೆನಿ ಹೇಳಿಕೊಂಡಿದೆ. ಡಸ್ಟರ್‌ಗೆ ಹೋಲಿಸದೇ, ಇದನ್ನು ಸ್ವತಂತ್ರ ಕಾರ್ ಎಂದು ನೋಡಿದರೂ ಎಸ್-ಕ್ರಾಸ್ ಶ್ರೇಷ್ಠ ಕಾರ್ ಆಗುವುದರಲ್ಲಿ ಸಂಶಯವಿಲ್ಲ.

ಅಚ್ಚ ಹೊಸ ಪ್ಲಾಟ್‌ಫಾರಂನಲ್ಲಿ ಕಾರ್ ನಿರ್ಮಾಣವಾಗಿದೆ. ಹಾಗಾಗಿ ಸಂಪೂರ್ಣ ಹೊಸ ಕಾರ್ ನೋಟ ಚಾಲಕರಿಗೂ, ನೋಡುವವರಿಗೂ ಸಿಗುತ್ತದೆ. ಇನ್ನೇನೂ ಜೀಪ್ ಕಂಪೆನಿಯ ಕಾರ್‌ಗಳೂ ಹೊರ ಬರಲಿರುವುದರಿಂದ ಎಸ್-ಕ್ರಾಸ್ ಎದುರಿಸಬೇಕಾದ ಸ್ಪರ್ಧೆಯೇನೂ ಕಡಿಮೆಯದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT