ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಶರಣಭೂಪಾಲರಡ್ಡಿ ಕೆಜೆಪಿಗೆ ಸೇರ್ಪಡೆ

Last Updated 7 ಡಿಸೆಂಬರ್ 2012, 6:14 IST
ಅಕ್ಷರ ಗಾತ್ರ

ಯಾದಗಿರಿ: ಯುವ ಮುಖಂಡ ಡಾ. ಶರಣಭೂಪಾಲರಡ್ಡಿ ನಾಯ್ಕಲ್ ಹಾಗೂ ಅವರ ಪತ್ನಿ, ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಡಾ. ಶೈಲಜಾ ಶರಣಭೂಪಾಲರಡ್ಡಿ, ಇತ್ತೀಚೆಗೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಕೆಜೆಪಿ ಪಕ್ಷಕ್ಕೆ ಸೇರ್ಪಡೆ ಆದರು.

ಕಳೆದ ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ಉಭಯ ನಾಯಕರು, ಇದೀಗ ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಯಾದಗಿರಿ ಮತಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸಿದ್ಧತೆ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಬಹಿರಂಗಪಡಿಸಿದ ಡಾ. ಶರಣಭೂಪಾಲರಡ್ಡಿ, ಬೆಂಗಳೂರಿಗೆ ತೆರಳಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದು, ಇಬ್ಬರೂ ಕೆಜೆಪಿ ಪಕ್ಷಕ್ಕೆ ಅಧೀಕೃತವಾಗಿ ಸೇರ್ಪಡೆ ಆಗಿದ್ದೇವೆ ಎಂದರು.

ಬಿ.ಎಸ್. ಯಡಿಯೂರಪ್ಪನವರ ಅಧಿಕಾರ ಅವಧಿಯಲ್ಲಿ ಸಾಕಷ್ಟು ಜನೋಪಯೋಗಿ ಕೆಲಸಗಳು ಆಗಿವೆ. ಈಗಲೂ ಜನರು ಯಡಿಯೂರಪ್ಪನವರನ್ನು ನೆನೆಯುತ್ತಿದ್ದಾರೆ. ಯಾದಗಿರಿಯನ್ನು ಜಿಲ್ಲೆಯಾಗಿ ರಚಿಸುವ ಮೂಲಕ ನುಡಿದಂತೆ ನಡೆದ ಯಡಿಯೂರಪ್ಪ, ಭಾಗ್ಯಲಕ್ಷ್ಮಿ ಯೋಜನೆ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ವೃದ್ಧರಿಗೆ ಸಂಧ್ಯಾ ಸುರಕ್ಷಾ ಯೋಜನೆ, ನೌಕರರ ನಿವೃತ್ತಿ ವಯೋಮಿತಿ 60ಕ್ಕೆ ಏರಿಕೆ, ಕೃಷಿಕರಿಗೆ ಶೇ.1 ರ ದರದಲ್ಲಿ ಸಾಲ ವಿತರಣೆ, ಕೃಷಿಗಾಗಿ ಪ್ರತ್ಯೇಕ ಬಜೆಟ್, ಸುವರ್ಣ ಭೂಮಿ ಯೋಜನೆ, ಭೂಚೇತನ, ಗ್ರಾಮಗಳ ಅಭಿವೃದ್ಧಿಗೆ ಸುವರ್ಣ ಗ್ರಾಮೋದಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ವಿವರಿಸಿದರು.

ಯಾದಗಿರಿ ಜಿಲ್ಲಾ ಕೇಂದ್ರವಾಗಿ ಮಾಡಿದ್ದಷ್ಟೇ ಅಲ್ಲದೇ, ಜಿಲ್ಲೆ ಅಭಿವೃದ್ಧಿಗೆ ರೂ.300 ಕೋಟಿ ಪ್ಯಾಕೇಜ್, ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ಅಗತ್ಯ ಅನುದಾನವನ್ನು ಜಿಲ್ಲೆಗೆ ಒದಗಿಸಿದ್ದಾರೆ. ಇದರ ಜೊತೆಗೆ ಜಿಲ್ಲಾ ಕೇಂದ್ರಕ್ಕೆ ಅಗತ್ಯವಾಗಿರುವ ಹಲವು ಕಟ್ಟಡಗಳ ನಿರ್ಮಾಣಕ್ಕೂ ಚಾಲನೆ ನೀಡಿದ್ದಾರೆ ಎಂದ ಅವರು, ಯಡಿಯೂರಪ್ಪನವರ ಜತೆಗೆ ಹೋದರೆ ಜಿಲ್ಲೆಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಆಗಲಿವೆ ಎಂಬುದು ಮನವರಿಕೆ ಆಗಿರುವ ಹಿನ್ನೆಲೆಯಲ್ಲಿ ಕೆಜೆಪಿ ಪಕ್ಷಕ್ಕೆ ಸೇರ್ಪಡೆ ಆಗಿರುವುದಾಗಿ ತಿಳಿಸಿದರು.

ಟಿಕೆಟ್ ಖಚಿತ: ಯಾದಗಿರಿ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿಯಾಗಿ ತಾವು ಸ್ಪರ್ಧಿಸುವುದು ಖಚಿತ ಎಂದು ತಿಳಿಸಿದ ಅವರು, ಈಗಾಗಲೇ ಕೆಜೆಪಿ ಪಕ್ಷದ ಟಿಕೆಟ್ ದೊರೆಯುವುದು ನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಪಕ್ಷದ ಸಂಘಟನೆ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ತಾವು ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ಯುವ ಹಾಗೂ ವಿದ್ಯಾವಂತರಾಗಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದರು.
ಹಾವೇರಿಯಲ್ಲಿ ಡಿ.9 ರಂದು ನಡೆಯುವ ಕೆಜೆಪಿ ಸಮಾವೇಶದಲ್ಲಿ ಕ್ಷೇತ್ರದಿಂದ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ತೆರಳುತ್ತಿದ್ದು, ಇದೊಂದು ಐತಿಹಾಸಿಕ ಸಮಾವೇಶವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT