ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಎಂ.ಆರ್. ರವಿ ಅಧಿಕಾರ ಸ್ವೀಕಾರ

ಮೈಸೂರು ಮಹಾನಗರಪಾಲಿಕೆ ಆಯುಕ್ತರಾಗಿ
Last Updated 3 ಸೆಪ್ಟೆಂಬರ್ 2013, 8:34 IST
ಅಕ್ಷರ ಗಾತ್ರ

ಮೈಸೂರು: ಮಹಾನಗರಪಾಲಿಕೆ ಆಯುಕ್ತರಾಗಿ ಡಾ.ಎಂ.ಆರ್. ರವಿ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು. `ಸಾಂಸ್ಕೃತಿಕ ನಗರದ ಅಭಿವೃದ್ಧಿ, ಸ್ವಚ್ಛತೆ ಮತ್ತು ಬೀದಿ ದೀಪಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಕುಡಿಯುವ ನೀರು ಸಮರ್ಪಕ ಪೂರೈಕೆ ಮಾಡಲಾಗುವುದು. ದಸರಾ ಇನ್ನೇನು ಸಮೀಪಿಸುತ್ತಿದೆ. ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮಾಡಿ ಕಾಲಮಿತಿಯೊಳಗೆ ಮುಗಿಸಲಾಗುವುದು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು. ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲು ಅವರು ನಿರ್ಧರಿಸಿದ್ದಾರೆ. ದಸರಾದಲ್ಲಿ ಮಹಾನಗರಪಾಲಿಕೆಯದ್ದು ಪ್ರಮುಖ ಪಾತ್ರ ಇದೆ. ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಲಾಗುವುದು' ಎಂದು ಹೇಳಿದರು.

`ದಸರಾ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಬರಲಿದ್ದಾರೆ. ಆ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವುದು ಪಾಲಿಕೆಯ ಆದ್ಯ ಕರ್ತವ್ಯ. ದಸರಾ ವೇಳೆ  ಸ್ವಚ್ಛತೆಗೆ ವಿಶೇಷ ಗಮನ ಹರಿಸಲಾಗುವುದು' ಎಂದು ತಿಳಿಸಿದರು.

`ದಸರಾ ಕಾಮಗಾರಿಗಳನ್ನು ಕಳಪೆ ಮಾಡಿದ ಗುತ್ತಿಗೆದಾರರನ್ನು ಈ ಹಿಂದೆ ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಈ ಬಾರಿ ಕಳಪೆ ಕಾಮಗಾರಿ ಮಾಡಿದವರನ್ನು ಸಹ ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಹಿಂದೆಯೂ ಪಾಲಿಕೆ ಆಯುಕ್ತರಾಗಿದ್ದ ರವಿ ಅವರನ್ನು ಪಾಲಿಕೆ ಚುನಾವಣೆ ನಿಮಿತ್ತ ಶಿವಮೊಗ್ಗ ನಗರಸಭೆ ಆಯಕ್ತರಾಗಿ ವರ್ಗಾವಣೆ ಮಾಡಲಾಗಿತ್ತು. ಅಲ್ಲಿನ ಆಯುಕ್ತರಾಗಿದ್ದ ಪಿ.ಜಿ. ರಮೇಶ್ ಅವರನ್ನು ಮೈಸೂರಿನ ಪಾಲಿಕೆಗೆ ಆಯುಕ್ತರಾಗಿ ಸರ್ಕಾರ ವರ್ಗಾವಣೆ ಮಾಡಿತ್ತು.

ವಿಧಾನಸಭೆ ಚುನಾವಣೆ ವೇಳೆ ಬೆಳಗಾವಿ ವಿಶೇಷ ಜಿಲ್ಲಾಧಿಕಾರಿಯಾಗಿ ಅವರು ಸೇವೆ ಸಲ್ಲಿಸಿದ್ದರು. ಮೈಸೂರಿನ ಸ್ಥಳೀಯ ಆಂಗ್ಲ ಪತ್ರಿಕೆಯಲ್ಲಿ ಪತ್ರಕರ್ತರಾಗಿ, ಕೋಲಾರದಲ್ಲಿ ಉಪನ್ಯಾಸಕರಾಗಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾಗಿ, ಉನ್ನತ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ, ಕೊಡಗು ಜಿಲ್ಲೆ ಉಪ ವಿಭಾಗಾಧಿಕಾರಿಯಾಗಿ ಹಾಗೂ ಒಮ್ಮೆ ದಸರಾ ಉಪ ವಿಶೇಷಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT