ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾನ್ ನಗೆಯಾಟ

Last Updated 15 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ರಮೇಶ್ ಮತ್ತೆ ನಗಿಸಲು ಸಿದ್ಧವಾಗ್ದ್ದಿದಾರೆ. ತಮ್ಮ ನಿರ್ದೇಶನದ `ನಮ್ಮಣ್ಣ ಡಾನ್~ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದ ಅವರ ಮುಖದ ಗೆರೆಗಳಲ್ಲಿ ಅಂದು ಹುಟ್ಟುಹಬ್ಬದ (ಸೆ.10) ಸಂತಸವೂ ಭರ್ತಿಯಾಗಿತ್ತು.

ಚಿತ್ರದಲ್ಲಿ ಅವರದು ಮಕ್ಕಳ ಹೃದಯ ಬೇನೆ ವಾಸಿಮಾಡುವ ವೈದ್ಯನ ಪಾತ್ರವಾದ ಕಾರಣ, ಬಹುತೇಕ ವಿಕ್ರಂ ಆಸ್ಪತ್ರೆಯಲ್ಲಿಯೇ ಚಿತ್ರವನ್ನು ಚಿತ್ರೀಕರಿಸಿ, ಅಲ್ಲಿಯೇ ಪತ್ರಿಕಾಗೋಷ್ಠಿ ಆಯೋಜಿಸಿದ್ದರು.

ಅಂದು 47ನೇ ವರ್ಷಕ್ಕೆ ಕಾಲಿಟ್ಟ `ಬರ್ತ್‌ಡೇ ಬಾಯ್~ ರಮೇಶ್, ಚಿತ್ರತಂಡದ ಪ್ರತಿಯೊಬ್ಬರನ್ನೂ ಪರಿಚಯಿಸಿ ಮಾತಿಗೆ ಮೊದಲಾದರು.

`ಸಿನಿಮಾದಲ್ಲಿ ಹಣಕ್ಕಿಂತ ವೈದ್ಯಕೀಯ ಸೇವೆಯೇ ಮುಖ್ಯ ಎನ್ನುವ ವೈದ್ಯನ ಪಾತ್ರ ನನ್ನದು. ಆದರೆ ಆಸ್ಪತ್ರೆ ಮಾಲೀಕನಿಗೆ ಹಣವೇ ಮುಖ್ಯ. ಈ ಕತೆ ಬೈಪಾಸ್ ಸರ್ಜರಿ ಪರಿಚಯಿಸಿದ ಅರ್ಜೆಂಟೈನಾದ ಡಾ.ರೇನ್ ಫಾವ್ಲರೋ ಅವರ ಜೀವನವನ್ನು ಹೋಲುತ್ತದೆ.

ಚಿತ್ರದಲ್ಲಿ ವ್ಯವಸ್ಥೆಯನ್ನು ಎದುರಿಸಿ ಆದರ್ಶವಾಗಿ ಬದುಕುವುದನ್ನು ಮನರಂಜನಾತ್ಮಕವಾಗಿ ತೋರಿಸಲಾಗಿದೆ. 30 ಮಕ್ಕಳನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ~ ಎಂದು ವಿವರಣೆ ನೀಡಿದರು.

ಇರಾನ್ ಹುಡುಗಿ ಮೊನಾ ಪರ್ವೇಜ್ ಚಿತ್ರದ ನಾಯಕಿ. ಆಕೆಯ ತಾಯಿ ಕನ್ನಡಿಗರಾದ ಕಾರಣ ಅವರು ಕನ್ನಡ ಮಾತನಾಡುತ್ತಾರೆ. ಸ್ಕೂಟರ್ ಚಾಲನೆ ಮಾಡುತ್ತಿದ್ದರೂ ಮೊಬೈಲ್‌ನಲ್ಲಿ ಮಾತನಾಡುತ್ತಾ ಸಾಗುವ ನಾಯಕಿ ಆಕ್ಸಿಡೆಂಟ್ ಮಾಡಿ ಕೊಲೆ ಮಾಡುತ್ತಾರೆ. ಆದರೂ ಅವರನ್ನು ಕ್ಷಮಿಸಬಹುದಂತೆ. ಅಷ್ಟು ಮುಗ್ಧವಾಗಿ ಪಾತ್ರವನ್ನು ರೂಪಿಸಲಾಗಿದೆಯಂತೆ.

`ಕ್ರೇಜಿ ಕುಟುಂಬ~ ಚಿತ್ರದಲ್ಲಿ ನಟಿಸಿದ್ದ ಸನಾತನಿ ಈ ಚಿತ್ರದಲ್ಲಿ ನರ್ಸ್ ಪಾತ್ರ ನಿರ್ವಹಿಸುತ್ತಿದ್ದಾರೆ. `ಸೆಕ್ಸಿ ಪೇಶೆಂಟ್~ ಪಾತ್ರದಲ್ಲಿ ವೀಣಾ ಭಟ್ ವೈದ್ಯರಿಗೆ ಕಾಟ ಕೊಟ್ಟರೆ, ಪತ್ರಕರ್ತೆ ಸುನೈನಾ ಸಣ್ಣಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

`ನಟನೆಯ ಸೂಕ್ಷ್ಮಗಳನ್ನು ಗಮನಿಸಿ ನಮ್ಮಲ್ಲಿರುವ ಕಲೆಯನ್ನು ಪರಿಣಾಮಕಾರಿಯಾಗಿ ಹೊರತೆಗೆಯುವ ಉತ್ತಮ ನಿರ್ದೇಶಕ ರಮೇಶ್~ ಎಂದು ಮೆಚ್ಚಿಕೊಂಡ ಅಚ್ಯುತ ಕುಮಾರ್ ಅವರಿಗೆ ಚಿತ್ರದಲ್ಲಿ ನಾಯಕನ ಬೆಳವಣಿಗೆ ಕಂಡು ಅಸೂಯೆಪಡುವ ವೈದ್ಯನ ಪಾತ್ರ.

22ರ ಹರೆಯದ ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು ಇಂದಿನ ಯುವಕರಿಗೆ ಇಷ್ಟವಾಗುವ ಟ್ಯೂನ್‌ಗಳನ್ನು ನೀಡಿದ್ದಾರೆ. ಜೊತೆಗೆ `ಬಂಡೆ~ ಹೆಸರಿನ ಪಾತ್ರವನ್ನೂ ನಿರ್ವಹಿಸಿದ್ದಾರೆ. ಅವರು ಸಾಧುಕೋಕಿಲ ಸಹೋದರ ಲಯೇಂದ್ರ ಅವರ ಪುತ್ರ.

ಇದೇ ಸಂದರ್ಭದಲ್ಲಿ ಮೂವರು ಡಾನ್‌ಗಳಲ್ಲಿ ಒಬ್ಬರಾದ ರಾಜೇಂದ್ರ ಕಾರಂತ್ ತಮ್ಮ ಪಾತ್ರವನ್ನು ಮೆಚ್ಚಿಕೊಂಡರು. ಚಿತ್ರದಲ್ಲಿ ನಟಿಸಿರುವ ಉಳಿದಿಬ್ಬರು ಡಾನ್‌ಗಳಾದ ರಘುರಾಮ್, ರಾಜು ತಾಳಿಕೋಟೆ ಬಂದಿರಲಿಲ್ಲ. 

ರಮೇಶ್ ಜೊತೆ ಚಿತ್ರಕ್ಕೆ ಕತೆಯನ್ನು ಪಿಬಿಸಿ ಶೇಖರ್ ಬರೆದಿದ್ದು ಸಂಭಾಷಣೆಯ ಹೊಣೆಯನ್ನೂ ಹೊತ್ತಿದ್ದಾರೆ. ಎರಡನೇ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದ್ದು ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದು. 

ಕಾರ್ಯಕಾರಿ ನಿರ್ಮಾಪಕ ರವಿಜೋಶಿ, ಖಳನ ಪಾತ್ರಧಾರಿ ನಿತೀಶ್, ಲಯೇಂದ್ರ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT