ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾರ್ಲಿಂಗ್‌ನಲ್ಲಿ ಬಸವಳಿದ ಯೋಗಿ!

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಶೂಟಿಂಗ್ ಶುರುವಾದಾಗಿನಿಂದಾಲೂ ಫಾಸ್ಟ್ ಆಗೇ ನಡೀತು. ಸಂತು ಸಖತ್ ಬೆಂಡೆತ್ತಿದ್ದಾನೆ’ ಎಂದು ದೂರಿದರು ಯೋಗಿ. ಚಿತ್ರೀಕರಣದ ವೇಳೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಅವರ ಕಾಲಿಗೆ ಗಾಯವಾಗಿದ್ದು, ಅದು ಇನ್ನೂ ಸಂಪೂರ್ಣ ವಾಸಿಯಾಗಿಲ್ಲವಂತೆ. ಇಂಥ ಸ್ಥಿತಿ ಮಧ್ಯೆಯೂ ಕೆಲಸ ತೆಗೆಸಿಕೊಂಡ ನಿರ್ದೇಶಕ ಸಂತು ಬಗ್ಗೆ ಸುದ್ದಿಮಿತ್ರರ ಎದುರು ಮಂಡಿಸಿದ ದೂರು ಅಪಾರ ಮೆಚ್ಚುಗೆಯಿಂದಲೇ ಕೂಡಿತ್ತು.

‘ಡಾರ್ಲಿಂಗ್’ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಆ ಪ್ರಯುಕ್ತ ಕುಂಬಳಕಾಯಿ ಒಡೆದ ಚಿತ್ರತಂಡ ತನ್ನ ಅನುಭವ ಹಂಚಿಕೊಂಡಿತು. ಕೇರಳದಲ್ಲಿ ಒಂದು ವಾರದ ಚಿತ್ರೀಕರಣ ಹೊರತುಪಡಿಸಿದರೆ ಉಳಿದಿದ್ದೆಲ್ಲ ಬೆಂಗಳೂರಿನಲ್ಲೇ ನಡೆಸಲಾಗಿದೆ.
ಫೈಟ್ ಅಥವಾ ಇನ್ನಾವುದೇ ಕಠಿಣ ದೃಶ್ಯವಿರಲಿ; ಡ್ಯೂಪ್ ಬೇಕು ಅಂತ ಯೋಗಿ ಕೇಳೋದೇ ಇಲ್ಲವಂತೆ. ಅದು ಯೋಗಿ ಮೇಲೆ ಸಂತು ಇಟ್ಟಿರುವ ಅಭಿಮಾನವನ್ನು ಹೆಚ್ಚಿಸಿದೆ. ‘ಕಮರ್ಷಿಯಲ್ ಸಿನಿಮಾಗೆ ಏನು ಬೇಕೋ ಅದು ಇದರಲ್ಲಿದೆ. ಎಲ್ಲರೂ ಒಂದಾಗಿ ಕೆಲಸ ಮಾಡಿದ್ದೇವೆ. ಯೋಗಿ ಹಾಗೂ ಇತರ ಕಲಾವಿದರು ನೀಡಿದ ಬೆಂಬಲವಂತೂ ಮರೆಯಲಾಗದು’ ಎಂದು ಸಂತು ಸ್ಮರಿಸಿದರು.

ನಿರ್ಮಾಣಕ್ಕೆ ಹೋಲಿಸಿದರೆ ನಿರ್ದೇಶನದ ಕೆಲಸ ಸುಲಭ ಎಂಬುದು ಸಂತು ಈ ಚಿತ್ರದ ಮೂಲಕ ಪಡೆದುಕೊಂಡ ಅನುಭವ!
‘ಹಾಡುಗಳ ಚಿತ್ರೀಕರಣದ ಸಮಯದಲ್ಲಿ ಸಾಕಾಗಿ ಹೋಗಿತ್ತು’ ಅಂತ ಅಲವತ್ತುಕೊಂಡಿದ್ದು ಯೋಗಿ. ತಾನೊಬ್ಬ ಡಾನ್ಸರ್ ಅಂತ ಖ್ಯಾತಿ ಪಡೆದಿದ್ದೇ ಈ ಕಷ್ಟಕ್ಕೆ ಕಾರಣವಾಯ್ತೇ ಎಂಬ ಹಳಹಳಿಕೆ ಅವರದು.

‘ಸಿನಿಮಾದಲ್ಲಿ ನನ್ನದು ಟ್ಯಾಟು ಕಲಾವಿದನ ಪಾತ್ರ. ನಾನೂ ಸೇರಿದಂತೆ ಎಲ್ಲಾ ಕಲಾವಿದರು ಹಗಲಿರುಳೂ ಕೆಲಸ ಮಾಡಿದ್ದೇವೆ. ಕೆಲವು ದೃಶ್ಯ ನೋಡಿದ್ದೇನೆ. ತುಂಬ ಚೆನ್ನಾಗಿ ಬಂದಿವೆ’ ಎಂದು ಖುಷಿ ಹಂಚಿಕೊಂಡರು. ಸಂತು ಕೆಲಸ ತುಂಬಾ ಅಚ್ಚುಕಟ್ಟು ಎಂದು ಶ್ಲಾಘಿಸಿದರು.

ತಮಿಳು, ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ಮುಕ್ತಾ ಅವರಿಗೆ ಇದು ಕನ್ನಡದ ಮೊದಲ ಸಿನಿಮಾ. ಇನ್ನಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದರು. ತಮ್ಮದು ಗಂಭೀರ ಪಾತ್ರವಾದರೂ ಜನರು ಬಿದ್ದು ಬಿದ್ದು ನಗುವಂಥದು ಎಂದು ಆದಿ ಲೋಕೇಶ್ ಹೇಳಿದರು. ಚಿತ್ರದಲ್ಲಿ ಐದು ಹಾಡುಗಳಿದ್ದು, ಅವುಗಳಿಗೆ ನಾಲ್ವರು ನೃತ್ಯ ಸಂಯೋಜನೆ ಮಾಡಿದ್ದೊಂದು ವಿಶೇಷ. ಈ ಪೈಕಿ ಕಲೈ ಎರಡು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ‘ಯೋಗಿ ಅವರಲ್ಲಿ ಎಂಥದೇ ಡಾನ್ಸ್‌ಗೂ ಹೆಜ್ಜೆ ಹಾಕುವ ಸಾಮರ್ಥ್ಯ ಇದೆ’ ಎಂದು ಮೆಚ್ಚಿಕೊಂಡರು.

ಸಂಭಾಷಣೆ ಬರೆದ ಮಂಜು ಮಾಂಡವ್ಯ ಅವರದು ಎಲ್ಲರಿಗಿಂತ ವಿಭಿನ್ನ ಅನುಭವ. ಸಂಭಾಷಣೆಯನ್ನು ಚಿತ್ರೀಕರಣದ ಸ್ಥಳಕ್ಕೆ, ನಿರ್ದೇಶಕರ ಬಳಿಗೆ ಕಳಿಸಲು ಅವರಿಗೆ ನೆರವಾಗಿದ್ದು ಮೊಬೈಲ್‌ನಲ್ಲಿರುವ ವಾಟ್ಸ್ ಆ್ಯಪ್‌ನಿಂದ! ವಿವಿಧ ತಂತ್ರಜ್ಞರು ಬಂಡವಾಳ ಹೂಡಿ ನಿರ್ಮಿಸುತ್ತಿರುವ ‘ಡಾರ್ಲಿಂಗ್‌’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT