ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ. 8ರಿಂದ ದತ್ತ ಜಯಂತಿ

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತದ ದತ್ತಾತ್ರೇಯ ಪೀಠದಲ್ಲಿ ಡಿಸೆಂಬರ್ 8ರಿಂದ 10ರವರೆಗೆ ದತ್ತ ಜಯಂತಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಬಜರಂಗ ದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ ತಿಳಿಸಿದರು.

ದತ್ತ ಜಯಂತಿಗೆ ಈ ವರ್ಷ ಉತ್ತರ ಕರ್ನಾಟಕದಿಂದ ಹೆಚ್ಚು ಜನ ಆಗಮಿಸಲಿದ್ದಾರೆ. 20ರಿಂದ 25 ಸಾವಿರ ಮಂದಿ ಆಗಮನ ನಿರೀಕ್ಷೆ ಇದೆ. ಡಿ. 8ರಂದು ದತ್ತ ಪೀಠದ್ಲ್ಲಲಿ ಅನುಸೂಯದೇವಿ ಪೂಜೆ, ಗಣಪತಿ ಹೋಮ, ರುದ್ರಹೋಮ ಹಾಗೂ ಚಿಕ್ಕಮಗಳೂರಿನಲ್ಲಿ ಮಹಿಳೆಯರಿಗೆ ಸಂಕೀರ್ತನಾ ಯಾತ್ರೆ ನಡೆಯಲಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ದತ್ತ ಪೀಠದಲ್ಲಿ 9ರಂದು ಗಣಪತಿ ಹೋಮ, ದುರ್ಗಾ ಹೋಮ ನಡೆಯಲಿದೆ. ಅದೇ ದಿನ ಮಧ್ಯಾಹ್ನ 2.30ಕ್ಕೆ ಚಿಕ್ಕಮಗಳೂರಿನ ರತ್ನಗಿರಿ ರಸ್ತೆಯ ಕಾಮಧೇನು ಗಣಪತಿ ದೇವಾಲಯ ಆವರಣದಲ್ಲಿ ಶೋಭಾಯಾತ್ರೆ ಆರಂಭವಾಗಲಿದೆ. ನಂತರ ಬಹಿರಂಗ ಸಭೆಯಲ್ಲಿ ಬಜರಂಗ ದಳ ರಾಷ್ಟ್ರೀಯ ಸಂಚಾಲಕ ಸುಭಾಷ್ ಚೌಹಾಣ್ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಪೀಠದಲ್ಲಿ 10ರಂದು ಗಣಹೋಮ, ದತ್ತಹೋಮ ಹಾಗೂ ಧಾರ್ಮಿಕ ಸಭೆಗಳು ನಡೆಯಲಿವೆ. ಭಕ್ತರಿಗೆ ಪ್ರಸಾದ ವಿತರಿಸಲಾಗುವುದು. ಬರುವ ಭಕ್ತರು ದತ್ತಪಾದುಕೆ ದರ್ಶನ ಪಡೆದು, ತಂದಿರುವ ಪಡಿ ಸಮರ್ಪಿಸುವರು ಎಂದರು.
ದತ್ತಮಾಲೆ: ನವೆಂಬರ್ 29ರಿಂದ ರಾಜ್ಯದಾದ್ಯಂತ ದತ್ತಮಾಲೆ ಧರಿಸುವ ಸಹಸ್ರಾರು ಮಂದಿ ಭಕ್ತರು 11 ದಿನ ಶ್ರದ್ಧಾಭಕ್ತಿಯಿಂದ ಗುರು ದತ್ತಾತ್ರೇಯರನ್ನು ಪೂಜಿಸುವರು. ಈ ದಿನಗಳಲ್ಲಿ ರಾಜ್ಯದ ವಿವಿಧೆಡೆ ನೂರಾರು ಸಂಕೀರ್ತನಾ ಯಾತ್ರೆ ಜರುಗಲಿವೆ ಎಂದರು.

ಹಿಂದೂ ಅರ್ಚಕರ ನೇಮಕ, ತ್ರಿಕಾಲ ಪೂಜೆ, ಗೋರಿಗಳ ಸ್ಥಳಾಂತರ ಸೇರಿದಂತೆ ಪ್ರಮುಖ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಗುವುದು. ದತ್ತಪೀಠ ನಿರ್ವಹಣೆಗೆ ಶಾಶ್ವತ ಅಧಿಕಾರಿ ನೇಮಿಸಬೇಕು. ಪೀಠದಲ್ಲಿದ್ದ ಬೆಲೆ ಬಾಳುವ ವಿಗ್ರಹ ಮತ್ತಿತರ ವಸ್ತುಗಳು ಹಾಗೂ ಇನಾಂ ಆಗಿ ಬಂದ ಆಸ್ತಿ ಮಾರಾಟವಾಗಿರುವುದರ ತನಿಖೆ ನಡೆಸಿ ವಶಕ್ಕೆ ಪಡೆಯುವಂತೆ ಒತ್ತಾಯಿಸಲಾಗುವುದು ಎಂದರು.

ದತ್ತಮಾಲಾ ಅಭಿಯಾನ ಕುರಿತು ನ. 6ರಂದು ಮೈಸೂರಿನಲ್ಲಿ ಪ್ರಾಂತಮಟ್ಟದ ಸಂಚಾಲಕರ ಸಮಾವೇಶ ಆಯೋಜಿಸಲಾಗಿದ್ದು, ಗ್ರಾಮಮಟ್ಟದ ಸಂಚಾಲಕರೂ ಭಾಗವಹಿಸಲಿದ್ದಾರೆ ಎಂದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕ ಸಹ ಕಾರ್ಯದರ್ಶಿ ಶಿವಶಂಕರ್, ಸಹ ಕಾರ್ಯದರ್ಶಿ ಪ್ರೇಮಕಿರಣ್, ಖಜಾಂಚಿ ಯೋಗೀಶ್ ರಾಜ್‌ಅರಸ್, ಬಜರಂಗ ದಳ ಜಿಲ್ಲಾ ಸಂಚಾಲಕ ಉದಯ್, ತಾಲ್ಲೂಕು ಸಂಚಾಲಕ ಶಾಂತಿ, ನಗರ ಸಂಚಾಲಕ ರಾಜುಕೋಟೆ, ವಿಎಚ್‌ಪಿ ತಾಲ್ಲೂಕು ಅಧ್ಯಕ್ಷ ಕಿಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT