ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಇಡಿ ಪಠ್ಯಕ್ರಮ ಪರಿಷ್ಕರಣೆ

ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಸಿದ್ಧತೆ
Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದಲ್ಲಿ ಡಿ.ಇಡಿ (ಡಿಪ್ಲೋಮಾ ಇನ್ ಎಜುಕೇಷನ್) ಕೋರ್ಸ್‌ನ ಪಠ್ಯಕ್ರಮ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ರಾಜ್ಯ ಶಿಕ್ಷಣ, ಸಂಶೋಧನೆ ಹಾಗೂ ತರಬೇತಿ ಸಂಸ್ಥೆ (ಡಿಎಸ್‌ಇಆರ್‌ಟಿ) ಮೂಲಕ ಈ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಪರಿಷ್ಕೃತ ಪಠ್ಯಕ್ರಮ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವ ಸಾಧ್ಯತೆ ಇದೆ.

ಬದಲಾದ ಪರಿಸ್ಥಿತಿಗೆ ತಕ್ಕಂತೆ, ಹಲವು ಹೊಸ ವಿಷಯ ಅಳವಡಿಸಿ ಶಿಕ್ಷಕರಾಗಬಯಸುವ ವಿದ್ಯಾರ್ಥಿಗಳಿಗೆ ಕಲಿಸಲು ಪಠ್ಯಕ್ರಮ ರೂಪಿಸಲಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಾಥಮಿಕ ಶಿಕ್ಷಣ ಬಲಗೊಳಿಸುವ ನಿಟ್ಟಿನಲ್ಲಿ, ಶಿಕ್ಷಣ ತಜ್ಞರ ತಂಡ ರಾಜ್ಯದಾದ್ಯಂತ ಶಿಕ್ಷಣ ಕ್ಷೇತ್ರದ ಪ್ರಮುಖರೊಂದಿಗೆ ಚರ್ಚಿಸಿ ಪಠ್ಯಕ್ರಮ ಪರಿಷ್ಕರಿಸಿದೆ. ಈ ಕುರಿತು 198 ಪುಟಗಳ ವರದಿಯನ್ನು `ಡಿಎಸ್‌ಇಆರ್‌ಟಿ' ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಪರಿಷ್ಕೃತ ಪಠ್ಯಕ್ರಮದಲ್ಲೇನಿದೆ?: ಈ ಹಿಂದೆ, ಸರ್ಟಿಫಿಕೇಟ್ ಕೋರ್ಸನ್ನು (ಟಿಸಿಎಚ್)  ಡಿ.ಇಡಿ ಎಂದು ಬದಲಾವಣೆ ಮಾಡಿದ ಸಂದರ್ಭದಲ್ಲಿ  2002ರಲ್ಲಿ ಪಠ್ಯಕ್ರಮ ರೂಪಿಸಲಾಗಿತ್ತು. ಈ ಪಠ್ಯಕ್ರಮವನ್ನು 2007ರಲ್ಲಿ ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಿಂದ (ಆರ್‌ಐಇ) ಮೌಲ್ಯಮಾಪನ ಮಾಡಿಸಲಾಗಿತ್ತು. ಇದೀಗ ಐದು ವರ್ಷಗಳ ನಂತರ, ಪಠ್ಯಕ್ರಮವನ್ನು ಪ್ರಸ್ತುತದ ಅವಶ್ಯಕತೆಗೆ ತಕ್ಕಂತೆ ಪರಿಷ್ಕರಿಸಲಾಗಿದೆ. ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು (ಎನ್‌ಸಿಇಆರ್‌ಟಿ, 2005) ಹಾಗೂ ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಟಿಇ, 2009) ಗಮನದಲ್ಲಿ ಇಟ್ಟುಕೊಂಡು ಈ ಕಾರ್ಯ ನಡೆದಿದೆ. ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಯಾಗಿರುವ ಹಿನ್ನೆಲೆಯಲ್ಲಿ ಹೊಸ ಕಲಿಕೆಯ ಅಗತ್ಯ ಇದೆ ಎಂದು ವರದಿ ಹೇಳಿದೆ.

ಪರಿಷ್ಕೃತ ಪಠ್ಯಕ್ರಮದ ಪ್ರಕಾರ, ಡಿ.ಇಡಿ ಪ್ರಶಿಕ್ಷಣಾರ್ಥಿ ಮೊದಲ ವರ್ಷ ಕಿರಿಯ ಪ್ರಾಥಮಿಕ ಶಾಲೆ (1ರಿಂದ 5ನೇ ತರಗತಿ) ಹಾಗೂ 2ನೇ ವರ್ಷ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (6ರಿಂದ 8) `ಇಂಟರ್ನ್‌ಷಿಪ್' ಮಾಡಬೇಕು. ಅರ್ಥಪೂರ್ಣ ಕಲಿಕೆಯ ಅವಕಾಶ ಕಲ್ಪಿಸುವ ಉದ್ದೇಶದಿಂದ ಸಂವಾದ, ಚರ್ಚೆಗಳು ಹಾಗೂ ರಚನಾತ್ಮಕ ಅಭ್ಯಾಸಕ್ಕೆ ಒತ್ತು ನೀಡಲಾಗಿದೆ. ಇದಕ್ಕಾಗಿ ಕ್ರಮವಾಗಿ ಮೊದಲ ಹಾಗೂ 2ನೇ ವರ್ಷದಲ್ಲಿ  ಅನುಕ್ರಮವಾಗಿ 440 ಹಾಗೂ 470 ಆಂತರಿಕ ಅಂಕಗಳನ್ನು ನಿಗದಿಪಡಿಸಲಾಗಿದೆ.

ಪರಿಣತರ ಎದುರು ಪಾಠ: ಪ್ರಶಿಕ್ಷಣಾರ್ಥಿಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಸಂವಹನ ಇಂಗ್ಲಿಷ್ ಕೋರ್ಸ್ ಪರಿಚಯಿಸಲಾಗುತ್ತಿದೆ. ಶಿಕ್ಷಕ ವೃತ್ತಿ ಅಭಿವೃದ್ಧಿ ಅಧ್ಯಯನಕ್ಕೆ ಸಂಬಂಧಿಸಿದಂತೆ ಎರಡು ವರ್ಷವೂ ಪಠ್ಯಕ್ರಮ ಇರುತ್ತದೆ. ಪ್ರಶಿಕ್ಷಣಾರ್ಥಿಗಳಿಗೆ ಮೊದಲ ವರ್ಷ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ 2ನೇ ವರ್ಷದಲ್ಲಿ ಹಿರಿಯ ಪ್ರಾಥಮಿಕಶಾಲೆ ಮಕ್ಕಳಿಗೆ ಕಲಿಸುವ ಸಾಮರ್ಥ್ಯ ವೃದ್ಧಿಸುವ ಬೋಧನಾ ಕ್ರಮ ಇರುತ್ತದೆ. ಕನ್ನಡ, ಗಣಿತಶಾಸ್ತ್ರ ಹಾಗೂ ಪರಿಸರ ಅಧ್ಯಯನ ವಿಷಯಗಳು ಪ್ರಥಮ ವರ್ಷದಲ್ಲಿ ಕಡ್ಡಾಯವಾದರೆ, ನಂತರದ ವರ್ಷದಲ್ಲಿ ಕನ್ನಡ ಮತ್ತು ಇಂಗ್ಲಿಷ್ ವಿಷಯದ ಜತೆ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನದಲ್ಲಿ ಒಂದು ಐಚ್ಛಿಕವಾಗಿರುತ್ತದೆ.

ತರಗತಿಗಳಲ್ಲಿ, ತಜ್ಞರು ಅಥವಾ ಕ್ಷೇತ್ರದ ಪರಿಣತರ ಎದುರು ಪ್ರಶಿಕ್ಷಣಾರ್ಥಿಗಳು ಪಾಠ ಮಾಡಬೇಕು. ಇದನ್ನು ದಾಖಲೆ ಮಾಡಿಕೊಳ್ಳಲಾಗುತ್ತದೆ. ಪ್ರತಿಯನ್ನು ಎಲ್ಲ ಡಿ.ಇಡಿ ಕಾಲೇಜುಗಳಿಗೂ ಕಳುಹಿಸಲಾಗುವುದು. ಪರಿಣಾಮಕಾರಿಯಾಗಿ ಪಾಠ ಮಾಡುವ ಕೌಶಲ ವೃದ್ಧಿಸುವುದು ಇದರ ಉದ್ದೇಶ.

ಶಿಕ್ಷಕರ ಅಭಿವೃದ್ಧಿ ಅಧ್ಯಯನದ ವಿಷಯದಲ್ಲಿ, ಕಲೆ, ಶಿಕ್ಷಣಕ್ಕೆ ಮೊದಲ ವರ್ಷ ಒತ್ತು ನೀಡಿದರೆ; 2ನೇ ವರ್ಷ ಶಾಂತಿಗಾಗಿ ಶಿಕ್ಷಣ, ವೃತ್ತಿ ಮತ್ತು ಶಿಕ್ಷಣಕ್ಕೆ ಒತ್ತು ನೀಡಲಾಗುವುದು. ಎರಡೂ ವರ್ಷ ದೈಹಿಕ ಶಿಕ್ಷಣ ಕಡ್ಡಾಯವಾಗಿರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಡಯೆಟ್ ಪ್ರಾಂಶುಪಾಲರಾದ ಪ್ರೇಮಾ, `ಡಿ.ಇಡಿ ಪಠ್ಯಕ್ರಮ ಪರಿಷ್ಕರಣೆಗೆ ಸಿದ್ಧತೆ ನಡೆಯುತ್ತಿದೆ. ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನಲ್ಲಿ ರೂಪಿಸಿರುವ ಪಠ್ಯಕ್ರಮ ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ವಯವಾಗಲಿದೆ.

ದೇಶದ ಎಲ್ಲ ಡಿ.ಇಡಿ ಕಾಲೇಜುಗಳಲ್ಲಿಯೂ ಏಕರೂಪ ಪಠ್ಯಕ್ರಮ ಜಾರಿಗೆ ಬರಲಿದೆ (ಪ್ರಸ್ತುತ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿದೆ). ಪ್ರಾಥಮಿಕ ಶಿಕ್ಷಣದ ಸಮಗ್ರೀಕರಣ, ಪಠ್ಯಕ್ರಮಗಳಲ್ಲಿ ಬದಲಾವಣೆ ಆಗುತ್ತಿರುವ ಹಾಗೂ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಗಿರುವ ಈ ಸಂದರ್ಭದಲ್ಲಿ ಡಿ.ಇಡಿ ಪಠ್ಯಕ್ರಮ ಬದಲಾವಣೆ ಮಹತ್ವ ಪಡೆದಿದೆ. ನಿರಂತರ ವ್ಯಾಪಕ ಮೌಲ್ಯಮಾಪನಕ್ಕೆ ಸಹಕಾರಿಯಾಗಲಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT