ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಲ್ ಇಲ್ಲದೆ ಅಪಘಾತ : ರೂ 30 ಲಕ್ಷ ದಂಡ!

Last Updated 5 ಜನವರಿ 2012, 5:30 IST
ಅಕ್ಷರ ಗಾತ್ರ

ಮೈಸೂರು: ಚಾಲನಾ ಪರವಾನಗಿ (ಡಿಎಲ್) ಇಲ್ಲದೆ ವಾಹನ ಚಾಲನೆ ಮಾಡಿ ಅಪಘಾತ ಮಾಡಿ ಯಾವುದಾದರೂ ವ್ಯಕ್ತಿಯ ಕೈ-ಕಾಲು ಊನ ಮಾಡಿದರೆ ಅಂತಹವರಿಗೆ ರೂ.30 ಲಕ್ಷ ದಂಡ ವಿಧಿಸಲಾಗುತ್ತದೆ. 18 ವರ್ಷಕ್ಕಿಂತ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ!

ಇದೇನಿದು ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆಯೆ? ಎಂದು ಹುಬ್ಬೇರಿಸಬೇಡಿ. ಇದು ಸಾಧ್ಯವೂ ಇದೆ. ಡಿಎಲ್, ಇನ್ಸುರೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದ ಸಂದರ್ಭದಲ್ಲಿ ಅಪಘಾತವಾಗಿ ಸರ್ಕಾರಿ ನೌಕರನಿಗೆ ತೀವ್ರ ಪೆಟ್ಟಾಗಿ, ಇಲ್ಲವೆ ಮೃತಪಟ್ಟರೆ ಆತನ ಕುಟುಂಬದವರು ನ್ಯಾಯಾಲಯದ ಮೊರೆ ಹೋದಲ್ಲಿ ದೊಡ್ಡ ಮೊತ್ತದ ದಂಡ ತೆರಬೇಕಾದುದು ಮಾತ್ರ ಖಚಿತ.

ವಾಹನಕ್ಕೆ ಇನ್ಸುರೆನ್ಸ್, ಡಿಎಲ್ ಇಲ್ಲದ ಯುವಕ/ಯುವತಿ ವಾಹನ ಚಾಲನೆ ಮಾಡಿ ಅಪಘಾತ ಮಾಡಿದ್ದರಿಂದ ವ್ಯಕ್ತಿಯ ಅಂಗಾಂಗ ಶಾಶ್ವತ ಊನವಾಗಿದೆ. ಅಪಘಾತಕ್ಕೀಡಾದ ವ್ಯಕ್ತಿ ಸರ್ಕಾರಿ ಉದ್ಯೋಗಿಯಾಗಿದ್ದು, ಭವಿಷ್ಯದಲ್ಲಿ ಬಡ್ತಿ ಪಡೆದು ನಿವೃತ್ತಿ ಹೊಂದುವವರೆಗೂ ಲಕ್ಷಾಂತರ ರೂಪಾಯಿಯನ್ನು  ವೇತನದ ಮೂಲಕ ಗಳಿಸುತ್ತಿದ್ದರು. ಅಪಘಾತದಿಂದ ಇದೆಲ್ಲವೂ ಕೈತಪ್ಪಲಿದೆ. ಅಪಘಾತಕ್ಕೆ ಕಾರಣನಾದ ಚಾಲಕನಿಗೆ ದಂಡ ವಿಧಿಸಿ ಅಪಘಾತಕ್ಕೀಡಾದ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸರ್ಕಾರಿ ಉದ್ಯೋಗಿ ಪರ ವಕೀಲ ವಾದ ಮಂಡಿಸಿ, ನ್ಯಾಯ ದೊರಕಿಸಿ ಕೊಡಬಹುದು. ಆಗ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಡಿಎಲ್ ಇಲ್ಲದವರು, ಪೋಷಕರಿಗೆ ಈ ವಿಷಯ ತಿಳಿದೇ ಇಲ್ಲ. ಅಪಘಾತವಾದರೆ ದಂಡ ಕಟ್ಟಿ ವಾಹನ ಬಿಡಿಸಿಕೊಳ್ಳಬಹುದು ಎಂದು ಯೋಚಿಸುವವರೇ ಹೆಚ್ಚು. ಈ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ಇದನ್ನು ಸಾರ್ವಜನಿಕರಲ್ಲಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸುವ ಕೆಲಸವನ್ನು ನಗರ ಸಂಚಾರ ಪೊಲೀಸರು ಇದೀಗ ಆರಂಭಿಸಿದ್ದಾರೆ.

ರಸ್ತೆ ಬದಿ ನಿಂತು ವಾಹನ ತಪಾಸಣೆ ಮಾಡಿ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕುತ್ತಿದ್ದ ಸಂಚಾರ ಪೊಲೀಸರು ಮತ್ತು ಅಧಿಕಾರಿಗಳು ಇದೀಗ ಅದನ್ನು ಬಿಟ್ಟು ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಂತೆ ಪಾಠ ಮಾಡುತ್ತಿದ್ದಾರೆ. ಇವೆಲ್ಲವೂ ಸಾಧ್ಯವಾ ಗಿರುವುದು 23ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಿಂದ.
ಇದೀಗ ದೇಶದಾದ್ಯಂತ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಅದರಂತೆ ನಗರ ಸಂಚಾರ ಪೊಲೀಸರು ಸಹ ಸಪ್ತಾಹವನ್ನು ಆಚರಿಸುತ್ತಿದ್ದು, ಬರೆ ಕಾರ್ಯಕ್ರಮಗಳಿಗೆ ಸಪ್ತಾಹವನ್ನು ಸೀಮಿತಗೊಳಿಸಿಲ್ಲ. ಬದಲಿಗೆ ಜಾಗೃತಿ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಅದರಲ್ಲೂ ಯುವ ಜನತೆ ಬಗ್ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

 `ಅಪಘಾತದಿಂದ ಕಣ್ಣೀರು ಸುರಕ್ಷತೆಯಿಂದ ಉಲ್ಲಾಸ~ ಧ್ಯೇಯ ವಾಕ್ಯದಡಿ ಈ ಬಾರಿಯ ಸಪ್ತಾಹವನ್ನು ಆಚರಿಸಲಾಗುತ್ತಿದೆ. ವಸ್ತುಪ್ರದರ್ಶನ ಆವರಣದಲ್ಲಿ ಸಂಚಾರ ಪೊಲೀಸ್ ಮಳಿಗೆ ಮತ್ತು ಶಾಲಾ- ಕಾಲೇಜುಗಳಲ್ಲಿ ಇದೀಗ ಜಾಗೃತಿ ಪಾಠವನ್ನು ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮಾಡಲಾಗುತ್ತಿದೆ. ಡಿಎಲ್ ಇಲ್ಲದೆ ವಾಹನ ಅಪಘಾತವಾದಲ್ಲಿ ಇಷ್ಟು ದೊಡ್ಡ ಮೊತ್ತದ ದಂಡ ಕಟ್ಟುವ ಸಾಧ್ಯತೆ ಇದೆ ಎಂಬುದನ್ನು ಅರಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ದಂಗಾದರು!

ಹೆಣ್ಣು ಮಕ್ಕಳು ಮೇಕಪ್ ಹಾಳಾಗುತ್ತದೆಂದು, ಗಂಡು ಮಕ್ಕಳು ಹೇರ್ ಸ್ಟೈಲ್ ಹಾಳಾಗುತ್ತದೆಂದು ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುತ್ತಾರೆ. ಶ್ರೀಮಂತ ಮಕ್ಕಳು ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿ, ಒಂದು ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಲ್ಲಿ ನೂರು ರೂಪಾಯಿ ದಂಡ ಕಟ್ಟಿ ವಾಹನವನ್ನು ಬಿಡಿಸಿಕೊಂಡು ಹೋಗುತ್ತಾರೆ. ಆದರೆ ಅಪಘಾತವಾದಾಗ ತಲೆಗೆ ಪೆಟ್ಟು ಬಿದ್ದಲ್ಲಿ ಅಮೂಲ್ಯವಾದ ಜೀವಕ್ಕೆ ಕುತ್ತು ಬರುತ್ತದೆ. `ನಿಮ್ಮ ತಲೆಯನ್ನು ನೀವೇ ರಕ್ಷಿಸಿಕೊಳ್ಳಿ, ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ~ ಎಂಬ ನೀತಿಪಾಠವನ್ನು ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹೇಳುತ್ತಿದ್ದಾರೆ.

`ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿದರೆ ಏನೂ ಪ್ರಯೋಜನವಿಲ್ಲ. ಸಂಚಾರ ನಿಯಮದ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ನಗರದಲ್ಲಿ ಜರುಗಿದ ಅಪಘಾತದಿಂದ 2010 ರಲ್ಲಿ 140 ಮಂದಿ, 2011 ರಲ್ಲಿ 111 ಮಂದಿ ಸಾವನ್ನಪ್ಪಿದ್ದಾರೆ. ಈ ವರ್ಷ ಈ ಸಂಖ್ಯೆಯನ್ನು 100 ಕ್ಕಿಂತ ಕಡಿಮೆ ಮಾಡಬೇಕೆನ್ನುವುದು ನಮ್ಮ ಗುರಿ. ದಂಡ ವಿಧಿಸುವ ಹಾದಿ ಬಿಟ್ಟು ಜಾಗೃತಿ ಮಾರ್ಗವನ್ನು ಹಿಡಿದಿದ್ದೇವೆ~ ಎಂದು ಡಿಸಿಪಿ (ಅಪರಾಧ ಮತ್ತು ಸಂಚಾರ) ಪಿ.ರಾಜೇಂದ್ರ ಪ್ರಸಾದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT