ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಲ್‌ಗೆ ವಿದ್ಯಾರ್ಹತೆ ನಿಗದಿ: ಪ್ರತಿಭಟನೆ

Last Updated 2 ಆಗಸ್ಟ್ 2013, 10:41 IST
ಅಕ್ಷರ ಗಾತ್ರ

ಶಿವಮೊಗ್ಗ: ವಾಹನ ಚಾಲನಾ ಪರವಾನಗಿ (ಡಿ.ಎಲ್) ಪಡೆಯಲು ವಿದ್ಯಾರ್ಹತೆ ಪಡೆಯಲು ವಿದ್ಯಾರ್ಹತೆ ನಿಗದಿಪಡಿಸಿರುವದನ್ನು ವಿರೋಧಿಸಿ  ವಾಹನ ಚಾಲಕರ ಹಿತರಕ್ಷಣಾ ವೇದಿಕೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿತು.

ಐಎಂಎ ಕಾಯ್ದೆ ಪ್ರಕಾರ ಆಟೊ ಚಾಲಕರು, ಆಟೋ ಚಾಲನೆ ಮಾಡಬೇಕಾದರೆ ಕಡ್ಡಾಯವಾಗಿ 8 ಅಥವಾ 10ನೇ ತರಗತಿಯಲ್ಲಿ ತೇರ್ಗಡೆ ಆಗಿರಬೇಕು. ಆಗ ಮಾತ್ರ ಅವರಿಗೆ ವಾಹನ ಚಾಲನಾ ಪರವಾನಿಗೆ ಪತ್ರ ನೀಡಲಾಗುವುದು ಎಂಬ ಜಿಲ್ಲಾಧಿಕಾರಿ ಅವರ ನಿರ್ಧಾರ ಸರಿಯಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಈ ನಿಯಮ ಆಟೊ ಚಾಲಕರು ಅಲ್ಲದೆ ಲಾರಿ, ಬಸ್, ಟ್ಯಾಕ್ಸಿ ಹಾಗೂ ಇತರೆ ವಾಹನಗಳ ಚಾಲಕರಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ. ಬಹುತೇಕ ವಾಹನ ಚಾಲಕರು ಅನಕ್ಷರಸ್ಥರಾಗಿದ್ದು, ಎಸ್ಸೆಸ್ಸೆಲ್ಸಿ ಪುಸ್ತಕ ಓದಿ, ಪರೀಕ್ಷೆ ಬರೆದು ಪಾಸ್ ಆಗುವುದು ಅಸಾಧ್ಯವಾದ ವಿಚಾರ. ಐಎಂಎ ಕಾಯ್ದೆಯಲ್ಲಿಯೇ ಈ ರೀತಿಯ ನಿಯಮ ಮಾಡಿದ್ದರೇ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾರಿಗೆ ಸಚಿವರು ಈ ನಿಯಮಾವಳಿಗೆ ಸೂಕ್ತ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಹಲವು ವರ್ಷಗಳಿಂದ ವಾಹನ ಚಾಲನೆ ಮಾಡುತ್ತಿರುವ ಅನುಭವಿ ಚಾಲಕರಿಗೆ ವಿದ್ಯಾರ್ಹತೆಯ ನಿಯಮದಿಂದ ಮುಕ್ತಗೊಳಿಸಬೇಕು. ಅನಕ್ಷರಸ್ಥ ಆಟೋ ಚಾಲಕರನ್ನು ಗುರುತಿಸಿ ಅವರಿಗೆ ಸಾರಿಗೆ ನೀತಿ-ನಿಯಮ, ರಸ್ತೆ ಸಂಚಾರ ನಿಯಮ, ಸುರಕ್ಷತಾ ನಿಯಮಗಳ ಬಗ್ಗೆ ವಿಶೇಷ ತರಬೇತಿ ನೀಡಿ, ಅವರಲ್ಲಿ ಜ್ಞಾನ ಮೂಡಿಸಿ ಪ್ರಮಾಣ ಪತ್ರ ನೀಡಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಹಾಗೆಯೇ ಈ ಹಿಂದೆ ಶಿವಮೊಗ್ಗ ನಗರಸಭೆಯು ಆಟೊ ಚಾಲಕರಿಗೆ ಮೀಟರ್ ಅಳವಡಿಕೆಗೆ ನೀಡುತ್ತಿದ್ದ ಸಹಾಯಧನವನ್ನು ಜಿಲ್ಲಾಧಿಕಾರಿ ಸ್ಥಗಿತಗೊಳಿಸಿರುವುದು ಸರಿಯಲ್ಲ. ಕೂಡಲೇ ಈ ಹಿಂದಿನಂತೆ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಸುರಿಯುತ್ತಿದ್ದ ಧಾರಾಕಾರ ಮಳೆಯಲ್ಲೆ ಪ್ರತಿಭಟನಾಕಾರರು ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು.

ಪ್ರತಿಭಟನೆಯ ನೇತೃತ್ವವನ್ನು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ವೇದಿಕೆಯ ಜಿಲ್ಲಾ ಅಧ್ಯಕ್ಷ ಡಿ.ರಾಜಶೇಖರಪ್ಪ, ಮುಖಂಡರಾದ ಎಸ್.ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷ ಎಸ್.ಎನ್.ಚನ್ನಬಸಪ್ಪ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT