ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಸ್‌ಎಸ್ ಒಡಕಿನ ಲಾಭ ಸ್ವಾರ್ಥರ ಪಾಲು

Last Updated 7 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ದಲಿತ ಸಂಘಟನೆಗಳು ಒಡೆದು ಹೋಗಿರುವುದರ ಲಾಭವನ್ನು ಸ್ವಾರ್ಥ ರಾಜಕಾರಣಿಗಳು ಪಡೆದುಕೊಳ್ಳುತ್ತಿದ್ದಾರೆ~ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ದಲಿತ ಸಂಘರ್ಷ ಸಮಿತಿ ನಗರದ ಪುರಭವನದಲ್ಲಿ ಮಂಗಳವಾರ `ಪ್ರಸ್ತುತ ರಾಜಕಾರಣ: ಸಾಮಾಜಿಕ ನ್ಯಾಯ ಮತ್ತು ಸವಾಲುಗಳು~ ವಿಷಯದ ಬಗ್ಗೆ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ದಲಿತ ಸಂಘಟನೆಗಳು ಇಂದು ಹಲವು ಸಂಘಗಳಾಗಿ ಒಡೆದು ಹೋಗಿವೆ. ದಲಿತ ಚಳವಳಿಗಳು ತೀವ್ರತೆ ಕಳೆದುಕೊಂಡಿವೆ. ಇದರಿಂದ ಸ್ವಾರ್ಥ ರಾಜಕಾರಣಿಗೆ ಲಾಭವಾಗುತ್ತಿದೆ. ಹೀಗಾಗಿ ದಲಿತರು ಸಂಘಟಿತರಾಗಿ ಪ್ರಾಮಾಣಿಕ ಹೋರಾಟಕ್ಕೆ ಮುಂದಾಗಬೇಕು. ತಮ್ಮ ಉದ್ಧಾರ ತಮ್ಮಿಂದಲ್ಲದೇ ಮತ್ತಾರಿಂದಲೂ ಅಲ್ಲ ಎಂಬುದನ್ನು ದಲಿತರು ಹಾಗೂ ಹಿಂದುಳಿದವರು ಅರಿಯಬೇಕು~ ಎಂದು ಅವರು ಹೇಳಿದರು.

`ಹಣ ಹಾಗೂ ಜಾತಿಯ ಬಲದಿಂದ ಅಧಿಕಾರಕ್ಕೆ ಬರುವ ಸರ್ಕಾರ ಎಂದಿಗೂ ಸಂವಿಧಾನವನ್ನು ಗೌರವಿಸುವುದಿಲ್ಲ. ಮೇಲ್ಜಾತಿ ಹಾಗೂ ಶ್ರೀಮಂತರ ಕೈಗೆ ಅಧಿಕಾರ ಸಿಕ್ಕರೆ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತದೆ. ಇದಕ್ಕೆ ಬಳ್ಳಾರಿಯೇ ಉತ್ತಮ ಉದಾಹರಣೆ. ಸದ್ಯದ ರಾಜಕೀಯ ಪರಿಸ್ಥಿಯಲ್ಲಿ ಮಹಾತ್ಮ ಗಾಂಧೀಜಿಯೇ ಚುನಾವಣೆಗೆ ಸ್ಪರ್ಧಿಸಿದ್ದರೂ ಗೆದ್ದು ಬರಲು ಸಾಧ್ಯವಾಗುತ್ತಿರಲಿಲ್ಲ. ರಾಜ್ಯ ಸರ್ಕಾರಕ್ಕೆ ದಲಿತರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಜಾತಿವಾರು ಗಣತಿಯ ಉದ್ದೇಶಕ್ಕಾಗಿಯೇ 23 ಕೋಟಿ ರೂಪಾಯಿ ಹಣವಿದ್ದರೂ ಸರ್ಕಾರ ಗಣತಿ ನಡೆಸಲು ಮುಂದಾಗುತ್ತಿಲ್ಲ~ ಎಂದರು.

`ರಾಜ್ಯದಲ್ಲಿ ಸರ್ಕಾರವೇ ಕೋಮು ಗಲಭೆಯನ್ನು ಪ್ರಚೋದಿಸುತ್ತಿದೆ. ಹಿಂದೂಗಳ ಪರವಾಗಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಸಂಘಟನೆಗಳಿಗೆ ಸರ್ಕಾರ ಕುಮ್ಮಕ್ಕು ನೀಡಿ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸುತ್ತಿದೆ. ಕುಸ್ಮಾದ ಮಾಜಿ ಅಧ್ಯಕ್ಷ ಜಿ.ಎಸ್.ಶರ್ಮ ಅವರನ್ನು ಬಂಧಿಸಬೇಕಾಗಿದ್ದ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಇಂದು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮುಂದಿನ ದಿನಗಳಲ್ಲಿ ದಲಿತರು ಹಾಗೂ ಹಿಂದುಳಿದವರ ಮೇಲೆ ನಡೆಯಲಿದೆ. ಈ ಬಗ್ಗೆ ಎಚ್ಚರದಿಂದಿರಬೇಕಾದ್ದು ಅಗತ್ಯ~ ಎಂದು ಅವರು ಹೇಳಿದರು.

ಸಾಹಿತಿ ಡಾ.ಎಲ್.ಹನುಮಂತಯ್ಯ ಮಾತನಾಡಿ, `ದಲಿತರನ್ನು ಹೀನಾಯವಾಗಿ ಕಾಣುವ ಪರಿಸ್ಥಿತಿ ಇಂದಿಗೂ ಗ್ರಾಮೀಣ ಭಾಗದಲ್ಲಿ ಉಳಿದುಕೊಂಡಿದೆ. ದೇಶದಲ್ಲಿ ಅಸ್ಪೃಶ್ಯತೆ ಇಂದಿಗೂ ಆಚರಣೆಯಲ್ಲಿರುವುದು ಅವಮಾನಕರ. ಸಂವಿಧಾನದ 17 ವಿಧಿಯಲ್ಲಿ ಅಸ್ಪೃಶ್ಯತೆ ಅಪರಾಧ ಎಂದು ಹೇಳಿದ್ದರೂ, ಕಾನೂನಿನ ಅನುಷ್ಠಾನದ ಲೋಪದಿಂದಾಗಿ ದಲಿತರ ಮೇಲಿನ ಶೋಷಣೆ ನಿರಂತರವಾಗಿ ನಡೆಯುತ್ತಲೇ ಇದೆ. ಒಗ್ಗಟ್ಟಿಲ್ಲದೇ ಇರುವುದೇ ಮೇಲ್ಜಾತಿಯ ಜನರು ದಲಿತರನ್ನು ಶೋಷಿಸಲು ಕಾರಣ. ಹೀಗಾಗಿ ದಲಿತರೆಲ್ಲರೂ ಸಂಘಟಿತ ಹೋರಾಟಕ್ಕೆ ಮುಂದಾಗಬೇಕಾದ್ದು ಅಗತ್ಯ~ ಎಂದರು.

`ಶಾಲಾ ಪಠ್ಯಕ್ರಮದಲ್ಲಿ ಹಿಂದುತ್ವ ತುಂಬಲು ಹೊರಟಿರುವ ಸರ್ಕಾರದ ಕ್ರಮ ಸರಿಯಲ್ಲ. ದಲಿತರ ಹಾಗೂ ಹಿಂದುಳಿದವರ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಳಜಿ ಇಲ್ಲ~ ಎಂದು ಅವರು ಆರೋಪಿಸಿದರು.
ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು ಮತ್ತಿತರರು ಉಪಸ್ಥಿತರಿದ್ದರು.

`ಜಗದೀಶ ಶೆಟ್ಟರ್ ಬಿಎಸ್‌ವೈ ನೆರಳು~

`ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ದಿನದಿಂದಲೂ ಜಗದೀಶ ಶೆಟ್ಟರ್ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೆರಳಿನಂತೆ ಕೆಲಸ ಮಾಡುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳುತ್ತಾ ರೈತರಿಗೆ ಮೋಸ ಮಾಡಲಾಗುತ್ತಿದೆ. ಅಲ್ಪ ಪ್ರಮಾಣದ ಸಾಲವನ್ನು ಮನ್ನಾ ಮಾಡಿ ಮುಂದಿನ ಚುನಾವಣೆಗೆ ಮತ ಕಲೆಹಾಕುವ ಕೆಲಸದಲ್ಲಿ ಜಗದೀಶ ಶೆಟ್ಟರ್ ಹಾಗೂ ಯಡಿಯೂರಪ್ಪ ತೊಡಗಿದ್ದಾರೆ. ಸುವರ್ಣ ಭೂಮಿ ಯೋಜನೆಯ ಮೊದಲ ಹಂತದ ಪ್ರೋತ್ಸಾಹಧನವೇ ಇನ್ನೂ ಸಮರ್ಪಕವಾಗಿ ವಿತರಣೆಯಾಗಿಲ್ಲ. ಹೀಗಿರುವಾಗ ಎರಡನೇ ಹಂತಕ್ಕೆ ಚಾಲನೆ ನೀಡಿರುವುದು ಕೇವಲ ಪ್ರಚಾರದ ತಂತ್ರ. ತಮ್ಮ ಬಳಿ ಅಧಿಕಾರ ಇದ್ದಾಗ ಸುಮ್ಮನಿದ್ದ ಯಡಿಯೂರಪ್ಪ ಈಗ ಸರ್ಕಾರದ ನ್ಯೂನತೆಗಳನ್ನು ಎತ್ತಿತೋರುತ್ತಿದ್ದಾರೆ~

- ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT