ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕಿ ಬರ್ಡ್ ನಿರ್ಧಾರಕ್ಕೆ ವಿಶ್ವ ಕ್ರಿಕೆಟ್ ಅಚ್ಚರಿ

ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ತಂಡದಲ್ಲಿ ಸಚಿನ್, ಬ್ರಾಡ್ಮನ್ ಹೆಸರಿಲ್ಲ!
Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾಜಿ ಅಂತರರಾಷ್ಟ್ರೀಯ ಅಂಪೈರ್ ಇಂಗ್ಲೆಂಡ್‌ನ ಡಿಕಿ ಬರ್ಡ್ ಪ್ರಕಟಿಸಿರುವ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಡಾನ್ ಬ್ರಾಡ್ಮನ್ ಅವರ ಹೆಸರು ಇಲ್ಲದಿರುವುದಕ್ಕೆ ವಿಶ್ವ ಕ್ರಿಕೆಟ್ ಅಚ್ಚರಿ ಹಾಗೂ ಆಘಾತ ವ್ಯಕ್ತಪಡಿಸಿದೆ.

ಈ ಆಯ್ಕೆ ಅಸಮತೋಲನದಿಂದ ಕೂಡಿದ್ದು, ಪೂರ್ವಗ್ರಹ ಪೀಡಿತವಾಗಿದೆ ಎಂದು ಮಾಜಿ ಆಟಗಾರರು ಡಿಕಿ ಅವರ ಆಯ್ಕೆಯನ್ನು ಟೀಕಿಸಿದ್ದಾರೆ. ಸುನಿಲ್ ಗಾವಸ್ಕರ್ ಈ ತಂಡದಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಆಟಗಾರ.

`ಈ ಆಯ್ಕೆ ಪಕ್ಷಪಾತದಿಂದ ಕೂಡಿದೆ. ತಂಡ ಕೂಡ ಸಮತೋಲನದಿಂದ ಕೂಡಿಲ್ಲ. ತಮಗೆ ಚೆನ್ನಾಗಿ ಗೊತ್ತಿರುವ ಆಟಗಾರರನ್ನು ಮಾತ್ರ ಡಿಕಿ ಬರ್ಡ್ ಆಯ್ಕೆ ಮಾಡಿದ್ದಾರೆ. ಗಾವಸ್ಕರ್ ಅವರ ಆಯ್ಕೆಗೆ ನನ್ನ ಸಹಮತವಿದೆ. ಆದರೆ ಸಚಿನ್ ಹಾಗೂ ಬ್ರಾಡ್ಮನ್ ಅವರಂಥ ಆಟಗಾರರನ್ನು ಕೈಬಿಟ್ಟಿರುವುದು ಸರಿಯಲ್ಲ' ಎಂದು ಮಾಜಿ ನಾಯಕ ಅಜಿತ್ ವಾಡೇಕರ್ ಪ್ರತಿಕ್ರಿಯಿಸಿದ್ದಾರೆ.

ಈ ತಂಡದಲ್ಲಿ ವೆಸ್ಟ್‌ಇಂಡೀಸ್‌ನ ಬ್ರಯಾನ್ ಲಾರಾ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್. ವೆಸ್ಟ್‌ಇಂಡೀಸ್‌ನ ಶ್ರೇಷ್ಠ ವೇಗಿಗಳಾದ ಮಾಲ್ಕಮ್ ಮಾರ್ಷಲ್, ಆ್ಯಂಡಿ ರಾಬರ್ಟ್ಸ್, ಜೊಯೆಲ್ ಗಾರ್ನರ್ ಹಾಗೂ ಮೈಕಲ್ ಹೋಲ್ಡಿಂಗ್‌ಗೆ ಕೂಡ ಸ್ಥಾನ ಸಿಕ್ಕಿಲ್ಲ.

`ಬರ್ಡ್ ಅವರಿಗೆ ಕ್ರಿಕೆಟ್ ಬಗ್ಗೆ ಸರಿಯಾದ ಜ್ಞಾನ ಇಲ್ಲ ಎನಿಸುತ್ತದೆ. ಏಕೆಂದರೆ ಅವರು ಬ್ರಾಡ್ಮನ್ ಆಡಿದ್ದನ್ನು ನೋಡಿರಲಾರರು. ಸಚಿನ್ ಹಾಗೂ ಬ್ರಾಡ್ಮನ್ ಯಾವ ರೀತಿಯ ಆಟಗಾರರು ಎಂಬುದನ್ನು ಅಂಕಿ ಅಂಶಗಳೇ ಹೇಳುತ್ತವೆ. ಅಂಪೈರ್ ಆಗಿದ್ದಾಗಲೂ ಬರ್ಡ್ ಪಕ್ಷಪಾತದ ನಿರ್ಧಾರ ಕೈಗೊಳ್ಳುತ್ತಿದ್ದರು. ಆದರೆ ಇಂಗ್ಲೆಂಡ್ ಮಾಧ್ಯಮಗಳು ಅವರನ್ನು ಹೀರೊ ಆಗಿ ಮಾಡಿದವು' ಎಂದು ಮಾಜಿ ಆಟಗಾರ ಚಂದು ಬೋರ್ಡೆ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ 80ನೇ ವರ್ಷದ ಜನ್ಮದಿನದ ಅಂಗವಾಗಿ ಬರ್ಡ್ ಇಂಗ್ಲೆಂಡ್‌ನ ದಿನಪತ್ರಿಕೆ `ದಿ ಟೆಲಿಗ್ರಾಫ್'ಗೆ ನೀಡಿದ ಸಂದರ್ಶನದಲ್ಲಿ ಸಾರ್ವಕಾಲಿಕ ಶ್ರೇಷ್ಠ ತಂಡ ಆಯ್ಕೆ ಮಾಡಿದ್ದಾರೆ. ಮಾಜಿ ಆಟಗಾರರಾದ ನಾರಿ ಕಾಂಟ್ರಾಕ್ಟರ್, ಶಿವಲಾಲ್ ಯಾದವ್, ಬಾಪು ನಾಡಕರ್ಣಿ ಕೂಡ ಬರ್ಡ್ ಅವರ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ.

`ಟೆಸ್ಟ್‌ನಲ್ಲಿ 99.94 ಸರಾಸರಿ ಹೊಂದಿರುವ ಬ್ರಾಡ್ಮನ್ ಅವರನ್ನು ಕೈಬಿಟ್ಟಿದ್ದು ಏಕೆ ಎಂಬುದನ್ನು ಬರ್ಡ್ ಅವರ ಬಳಿಯೇ ಕೇಳಬೇಕು' ಎಂದು ಅನ್ಶುಮನ್ ಗಾಯಕ್ವಾಡ್ ನುಡಿದಿದ್ದಾರೆ.ಬರ್ಡ್ 66 ಟೆಸ್ಟ್ ಹಾಗೂ ಮೂರು ವಿಶ್ವಕಪ್ ಫೈನಲ್‌ಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.

ಡಿಕಿ ಬರ್ಡ್ ಅವರ  ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಇಲೆವೆನ್
1) ಸುನಿಲ್ ಗಾವಸ್ಕರ್ (ಭಾರತ),
2) ಬ್ಯಾರಿ ರಿಚರ್ಡ್ಸನ್ (ದಕ್ಷಿಣ ಆಫ್ರಿಕಾ),
3) ವಿವಿಯನ್ ರಿಚರ್ಡ್ಸ್ (ವೆಸ್ಟ್‌ಇಂಡೀಸ್),
4) ಗ್ರೇಗ್ ಚಾಪೆಲ್ (ಆಸ್ಟ್ರೇಲಿಯಾ),
5) ಗ್ಯಾರಿಫೀಲ್ಡ್ ಸೋಬರ್ಸ್ (ವೆಸ್ಟ್‌ಇಂಡೀಸ್),
6) ಗ್ರೇಮ್ ಪೊಲಾಕ್ (ದಕ್ಷಿಣ ಆಫ್ರಿಕಾ),
7) ಅಲನ್ ನಾಟ್ (ವಿಕೆಟ್ ಕೀಪರ್; ಇಂಗ್ಲೆಂಡ್),
8) ಇಮ್ರಾನ್ ಖಾನ್ (ನಾಯಕ; ಪಾಕಿಸ್ತಾನ),
9) ಡೆನಿಸ್ ಲಿಲ್ಲಿ (ಆಸ್ಟ್ರೇಲಿಯಾ),
10) ಶೇನ್ ವಾರ್ನ್ (ಆಸ್ಟ್ರೇಲಿಯಾ),
11) ಲ್ಯಾನ್ಸ್ ಗಿಬ್ಸ್  (ವೆಸ್ಟ್‌ಇಂಡೀಸ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT