ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಮಾಧ್ಯಮದತ್ತ ಸೆಳೆಯುವ ಸವಾಲು

ಏಷ್ಯಾದಲ್ಲಿ ವೃತ್ತಪತ್ರಿಕೆ ಪ್ರಸಾರ ಹೆಚ್ಚಳ: ವ್ಯಾನ್ -ಇಫ್ರಾ ಸಮೀಕ್ಷೆ
Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಬ್ಯಾಂಕಾಕ್: ಏಷ್ಯಾದಲ್ಲಿ ವೃತ್ತಪತ್ರಿಕೆಗಳ ಪ್ರಸಾರ ಹೆಚ್ಚಾಗುತ್ತಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇಳಿಮುಖವಾಗುತ್ತಿದೆ. ಆದರೆ, ಡಿಜಿಟಲ್ ಕ್ರಾಂತಿಯಿಂದಾಗಿ ವೃತ್ತಪತ್ರಿಕೆಯ ಮಾಹಿತಿಗಳ ಕುರಿತಂತಹ ಆಸಕ್ತಿ ಹಿಂದೆಂದಿಗಿಂತಲೂ ಈಗ ತೀವ್ರವಾಗುತ್ತಿದೆ.

ವೃತ್ತಪತ್ರಿಕೆಗಳ ದಿಕ್ಕುದೆಸೆ ಕುರಿತಂತೆ ವಿಶ್ವವೃತ್ತಪತ್ರಿಕೆಗಳು ಹಾಗೂ ವೃತ್ತಪತ್ರಿಕೆ ಪ್ರಕಾಶಕರ  ಸಂಘ (ವ್ಯಾನ್ - ಇಫ್ರಾ) ನಡೆಸಿರುವ ವಾರ್ಷಿಕ ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಅಂಶಗಳು ಇವು.

ಸೋಮವಾರ ಇಲ್ಲಿ ಆರಂಭವಾದ ವಿಶ್ವ ವೃತ್ತಪತ್ರಿಕೆಗಳ ಕಾಂಗ್ರೆಸ್, ವಿಶ್ವ ಸಂಪಾದಕರ ವೇದಿಕೆ ಹಾಗೂ ವಿಶ್ವ ಜಾಹೀರಾತು ವೇದಿಕೆಗಳ ಜಂಟಿ ಸಮ್ಮೇಳನದಲ್ಲಿ ಈ ವಾರ್ಷಿಕ ಸಮೀಕ್ಷೆಯ ವಿವರಗಳನ್ನು ವ್ಯಾನ್ - ಇಫ್ರಾ ಸಿಇಓ ವಿನ್ಸೆಂಟ್ ಪೈರೇನ್ ಪ್ರಸ್ತುತ ಪಡಿಸಿದರು. 

ಮಾಧ್ಯಮ ಪ್ರಪಂಚದ 1500ಕ್ಕೂ ಹೆಚ್ಚಿನ ಪ್ರಕಾಶಕರು, ಸಂಪಾದಕರು ಹಾಗೂ ಇತರ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.

`ಸುದ್ದಿ ಜಾಲತಾಣಗಳಿಗೆ ಅಪಾರ ಓದುಗರಿದ್ದಾರೆ. ಆದರೆ, ಆ ಓದುಗರ ಗಮನವನ್ನು ದೀರ್ಘಕಾಲ ಹಿಡಿದಿರಿಸಿಕೊಳ್ಳುವ ಪ್ರಮಾಣ ಕಡಿಮೆ ಇದೆ. ಡಿಜಿಟಲ್ ಮಾಧ್ಯಮದ ಬೆಳವಣಿಗೆಗೆ ಅನುಗುಣವಾಗಿ ಜಾಹೀರಾತು ಆದಾಯ ಬೆಳವಣಿಗೆಯಾಗಿಲ್ಲ' ಎಂದು ಪೈರೇನ್ ಅಭಿಪ್ರಾಯಪಟ್ಟರು.

`ಸಮಾಜದ ಬೆಳವಣಿಗೆಯಲ್ಲಿ ನಾಗರಿಕರು ಹೇಗೆ ತೊಡಗಿಕೊಳ್ಳುತ್ತಾರೆ ಹಾಗೂ ಭಾಗಿಗಳಾಗುತ್ತಾರೆ ಎಂಬುದು ಸುದ್ದಿ ಉದ್ಯಮದ ಭವಿಷ್ಯವನ್ನು ನಿರ್ಧರಿಸಲಿದೆ. ಹಣ ನೀಡಿ ಪತ್ರಿಕೆ ಖರೀದಿಸುವವರ ಸಂಖ್ಯೆ ಇಳಿಮುಖವಾದರೂ, ಅಂತರ್ಜಾಲ ಹಾಗೂ ಮೊಬೈಲ್ ಮೂಲಕ ವೃತ್ತಪತ್ರಿಕೆಗಳು ಅಪಾರ ಓದುಗರನ್ನು ತಲುಪಲಿವೆ. ಹಾಗೆಯೇ, ಇತ್ತೀಚಿನ ಪ್ರವೃತ್ತಿಗಳ ಪ್ರಕಾರ, ಮುದ್ರಣ ಮಾಧ್ಯಮದಲ್ಲಿ ಜಾಹೀರಾತಿನ ಪ್ರಮಾಣ ಅನೇಕ ದೇಶಗಳಲ್ಲಿ ಹೆಚ್ಚಾಗುತ್ತಿದೆ' ಎಂದೂ ಪೈರೇನ್ ಹೇಳಿದರು.  

`ಸಮುದಾಯದೊಂದಿಗೆ ಸಂವಾದದ ಗುಣಮಟ್ಟ ಸುಧಾರಣೆಗೆ ಡಿಜಿಟಲ್ ಪ್ರಪಂಚ ನೀಡುವಂತಹ ಅನುಕೂಲಗಳನ್ನು ವೃತ್ತಪತ್ರಿಕೆ ವೃತ್ತಿಪರರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಓದುಗರೊಂದಿಗೆ ವಿಶ್ವಾಸ ವೃದ್ಧಿಯ ಜೊತೆಗೆ, ತಮ್ಮ ಪಾತ್ರದ ವಿಸ್ತರಣೆಗೆ ಹೊಸ ವಲಯಗಳ ಶೋಧದಲ್ಲೂ ತೊಡಗಿಕೊಂಡಿದ್ದಾರೆ' ಎಂದರು.

`ಮಾರುಕಟ್ಟೆ ಛಿದ್ರೀಕರಣವು ಸದ್ಯದ ಪಾರಂಪರಿಕ ವೃತ್ತಪತ್ರಿಕೆ ಉದ್ಯಮ ಮಾದರಿಗೆ ಸವಾಲಾಗಿದೆ. ಆದರೆ ಇದು, ಅಗತ್ಯ ಸುದ್ದಿ ಹಾಗೂ ಮಾಹಿತಿ ಒದಗಿಸಿ ನಾಗರಿಕರನ್ನು ಸಶಕ್ತಗೊಳಿಸುವ ಮೂಲ ಗುರಿ ಹಾಗೂ ಮೌಲ್ಯಗಳಿಗೆ ಹಿಂದಿರುಗಲು ಸೃಷ್ಟಿಯಾದ ಅವಕಾಶವೂ ಆಗಿದೆ' ಎಂದು ಪ್ರತಿಪಾದಿಸಿದರು.

`ಜಾಗತಿಕ  ಪತ್ರಿಕಾ ದಿಕ್ಕು ದೆಸೆ' ಸಮೀಕ್ಷೆ, 70ಕ್ಕೂ ಹೆಚ್ಚು ದೇಶಗಳಲ್ಲಿನ ಮುದ್ರಣ ಮಾಧ್ಯಮ ವಹಿವಾಟಿನ ಅಂಕಿಅಂಶಗಳನ್ನು ಒಳಗೊಂಡಿದೆ. ವಿವಿಧ ದೇಶಗಳ ದಿನ ಪತ್ರಿಕೆಗಳು ಮತ್ತು ಮಾಧ್ಯಮ ಸಂಸ್ಥೆಗಳ ಸಹಯೋಗದಲ್ಲಿ ಈ ಸಮೀಕ್ಷೆ ಸಿದ್ಧಪಡಿಸಲಾಗಿದೆ.
ವಿಶ್ವದ ಅರ್ಧಕ್ಕೂ ಹೆಚ್ಚು ವಯಸ್ಕರು ದಿನನಿತ್ಯ ಪತ್ರಿಕೆಗಳನ್ನು ಓದುತ್ತಾರೆ. ಅದರಲ್ಲಿ 250  ಕೋಟಿಗೂ ಹೆಚ್ಚು ಜನರು ಮುದ್ರಣ ಮಾಧ್ಯಮ ಮತ್ತು 60 ಕೋಟಿ ಜನರು ಡಿಜಿಟಲ್ ರೂಪದಲ್ಲಿ ಪತ್ರಿಕೆಗಳನ್ನು ಓದುತ್ತಾರೆ.

ಜಾಗತಿಕ ವೃತ್ತ ಪತ್ರಿಕೆ ಉದ್ಯಮವು ವಾರ್ಷಿಕ  200 ಶತಕೋಟಿ ಡಾಲರ್‌ಗಳಿಗಿಂತ (ರೂ. 11,00,000 ಕೋಟಿ) ಹೆಚ್ಚಿನ ವರಮಾನ ತಂದುಕೊಡುತ್ತಿದೆ. ಏಷ್ಯಾ ವಲಯದಲ್ಲಿ ವೃತ್ತಪತ್ರಿಕೆಗಳ ಪ್ರಸಾರ ಮತ್ತು ಜಾಹೀರಾತಿನಿಂದ ಬರುವ ವರಮಾನವು ವಿಶ್ವದ ಇತರ ಪ್ರದೇಶಗಳಿಗಿಂತ ಭಿನ್ನವಾಗಿದೆ. ಜಾಗತಿಕ ಮಟ್ಟದಲ್ಲಿ 2012ರಲ್ಲಿ ದಿನಪತ್ರಿಕೆಗಳ ಪ್ರಸಾರ ಸಂಖ್ಯೆ ಕೇವಲ ಶೇ 0.9ರಷ್ಟು ಮಾತ್ರ ಕಡಿಮೆಯಾಗಿದೆ. ಏಷ್ಯಾ ವಲಯದಲ್ಲಿ ಪ್ರಸಾರ ಸಂಖ್ಯೆ ಹೆಚ್ಚಿರುವುದೇ ಇದಕ್ಕೆ ಕಾರಣ.

2008 ರಿಂದ 2012ರ ಅವಧಿಯಲ್ಲಿ ಜಾಗತಿಕವಾಗಿ ವೃತ್ತ ಪತ್ರಿಕೆಗಳ ಪ್ರಸಾರ ಸಂಖ್ಯೆಯು ಶೇ 2.2ರಷ್ಟು ಕುಸಿತ ದಾಖಲಿಸಿದೆ. ಅದರಲ್ಲೂ ಯೂರೋಪ್‌ದಲ್ಲಿ ಈ ಕುಸಿತ ಗಮನಾರ್ಹ ಪ್ರಮಾಣದಲ್ಲಿ ಇದೆ. ಏಷ್ಯಾದಲ್ಲಿ ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ ಇದೆ.  ಏಷ್ಯಾದಲ್ಲಿ ಶೇ 1.2, ಆಸ್ಟ್ರೇಲಿಯಾದಲ್ಲಿ ಶೇ 0.3.5 ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಶೇ 0.1 ರಷ್ಟು ಏರಿಕೆ ದಾಖಲಾಗಿದೆ.

ಜಾಗತಿಕ ಮಟ್ಟದಲ್ಲಿ ವೃತ್ತ ಪತ್ರಿಕೆಗಳ ಜಾಹೀರಾತು ವರಮಾನವು 2012ರಲ್ಲಿ ಶೇ 2ರಷ್ಟು ಕಡಿಮೆಯಾಗಿದೆ. ವಿಶ್ವದ ಅತಿದೊಡ್ಡ ಜಾಹೀರಾತು ಮಾರುಕಟ್ಟೆಯಾಗಿರುವ ಅಮೆರಿಕದಲ್ಲಿನ ಗರಿಷ್ಠ ಪ್ರಮಾಣದ ಕುಸಿತವೇ ಇದಕ್ಕೆ ಮುಖ್ಯ ಕಾರಣ.

ಸವಾಲು: ಓದುಗರನ್ನು ಡಿಜಿಟಲ್ ಮಾಧ್ಯಮಗಳತ್ತ ಗರಿಷ್ಠ ಪ್ರಮಾಣದಲ್ಲಿ ಸೆಳೆಯುವುದೇ ಸದ್ಯಕ್ಕೆ ವೃತ್ತ ಪತ್ರಿಕೆ ಪ್ರಕಾಶಕರ ಎದುರಿಗೆ ಇರುವ ಪ್ರಮುಖ ಸವಾಲಾಗಿದೆ.  ಅಂತರ್ಜಾಲ ಶೋಧಿಸುವ ಅರ್ಧಕ್ಕೂ ಹೆಚ್ಚು ಜನರು ವೃತ್ತಪತ್ರಿಕೆಗಳ ಜಾಲತಾಣಗಳಿಗೆ ಭೇಟಿ ನೀಡುತ್ತಾರೆ. ಆದರೆ, ಒಟ್ಟು ಅಂತರ್ಜಾಲದ ಬಳಕೆಯಲ್ಲಿ ಇದು ಕೇವಲ ಶೇ 7ರಷ್ಟು ಪ್ರಮಾಣವನ್ನಷ್ಟೇ  ಪ್ರತಿನಿಧಿಸುತ್ತದೆ.

ವಿಶ್ವದ ಅನೇಕ ಭಾಗಗಳ  ಹೊಸ ಓದುಗರಿಗೆ ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳು ವೃತ್ತಪತ್ರಿಕೆ ಓದಿಗೆ ಜನಪ್ರಿಯ ಸಾಧನಗಳಾಗುತ್ತಿರುವುದು ಇತ್ತೀಚಿನ ಬೆಳವಣಿಗೆ ಎಂಬುದನ್ನೂ ಈ ಸಮೀಕ್ಷೆ ಎತ್ತಿ ಹೇಳಿದೆ.

ದಿನ ಪತ್ರಿಕೆಗಳು ಈಗ ವರಮಾನ ಗಳಿಕೆಯ ಹೊಸ ಹೊಸ ಮಾರ್ಗೋಪಾಯಗಳ ಶೋಧದಲ್ಲಿ ಇವೆ. ಮುದ್ರಣ ಹಾಗೂ ಡಿಜಿಟಲ್ ಆವೃತ್ತಿಗಳೆರಡಕ್ಕೂ ಒಟ್ಟಾಗಿ ಚಂದಾ ಸಂಗ್ರಹಿಸುವ ಪದ್ಧತಿ ಯಶಸ್ವಿಯಾಗುತ್ತಿದೆ.

ಮಧ್ಯ ಪ್ರಾಚ್ಯದಲ್ಲಿನ ಓದುಗರ ಪ್ರವೃತ್ತಿ ಕುರಿತಂತಹ ಮಾಹಿತಿಯನ್ನು ಇದೇ ಮೊದಲ ಬಾರಿಗೆ ಸೇರಿಸಿರುವುದು ಈ ಸಮೀಕ್ಷೆಯ ವಿಶೇಷವಾಗಿದೆ.  ಇರಾಕ್‌ನಲ್ಲಿ ಕೇವಲ ಶೇ 5ರಷ್ಟು ವೃತ್ತಪತ್ರಿಕೆ  ಓದುಗರಿದ್ದರೆ, ಸಂಯುಕ್ತ ಅರಬ್ ಒಕ್ಕೂಟ ಹಾಗೂ ಕುವೈತ್‌ನಲ್ಲಿ ಓದುಗರ ಪ್ರಮಾಣ ಶೇ 70ರಷ್ಟಿದೆ. ಮಹಿಳಾ ಓದುಗರನ್ನು ಸೆಳೆಯುವುದು ವೃತ್ತಪತ್ರಿಕೆಗಳ ಯಶಸ್ಸಿಗೆ ನೇರ ಕೊಡುಗೆ ಸಲ್ಲಿಸುತ್ತದೆ ಎಂಬುದನ್ನೂ ಮಧ್ಯಪ್ರಾಚ್ಯದ ಅಂಕಿ ಅಂಶಗಳು ತೋರಿಸಿ ಕೊಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT